ರೇಸಿನಲ್ಲಿ ಗೆದ್ದು ಬೀಗಿದವರು

7

ರೇಸಿನಲ್ಲಿ ಗೆದ್ದು ಬೀಗಿದವರು

Published:
Updated:
ರೇಸಿನಲ್ಲಿ ಗೆದ್ದು ಬೀಗಿದವರು

ಫುಟ್‌ಬಾಲ್, ಕ್ರಿಕೆಟ್ ಹೊರತುಪಡಿಸಿದರೆ ಯುವಜನತೆಯನ್ನು ಹೆಚ್ಚಾಗಿ ಸೆಳೆಯುವ ಕ್ರೀಡೆ ರೇಸಿಂಗ್. ಪ್ರಾಣವನ್ನು ಪಣಕ್ಕಿಟ್ಟು ದೂಳೆಬ್ಬಿಸುತ್ತಾ ಮುನ್ನುಗ್ಗುವ ಬೈಕ್ ಹಾಗೂ ಕಾರ್ ರೇಸ್‌ಗಳನ್ನು ಜನ ಉಸಿರು ಬಿಗಿಹಿಡಿದು ನೋಡುತ್ತಾರೆ. ತನ್ನ ನೆಚ್ಚಿನ ಕ್ರೀಡಾಪಟು ರೇಸ್‌ನಲ್ಲಿ ಗೆಲ್ಲಬೇಕು ಎಂದು ಮನಸ್ಸಿನಲ್ಲೇ ಹಾರೈಸುವ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಯುವಜನತೆಯನ್ನು ಈ ಪರಿ ಆಕರ್ಷಿಸಿರುವ ರೇಸಿಂಗ್ ಕುರಿತು ಅನೇಕ ಹಾಲಿವುಡ್ ಹಾಗೂ ಬಾಲಿವುಡ್ ಚಿತ್ರಗಳು ಕೂಡ ನಿರ್ಮಾಣಗೊಂಡಿವೆ. ಈಚೆಗೆ ನಗರದಲ್ಲಿ ನಡೆದ ಆಟೊಕ್ರಾಸ್ ಆಫ್ ಬೆಂಗಳೂರು ಕೂಡ ಇಂತಹ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ಎಓಎಂ ಆಟೊಕ್ರಾಸ್ ಆಫ್ ಬೆಂಗಳೂರು ಎಫ್‌ಎಂಎಸ್‌ಸಿಐ ಭಾರತೀಯ ರಾಷ್ಟ್ರೀಯ ಆಟೊಕ್ರಾಸ್ ಚಾಂಪಿಯನ್‌ಷಿಪ್ ಪ್ರಥಮ ಅವೃತ್ತಿಯ ಪ್ರಥಮ ಸುತ್ತಿನ ಸ್ಪರ್ಧೆಯಲ್ಲಿ ಆರು ಮಹಿಳಾ ಚಾಲಕಿಯರು ಸೇರಿದಂತೆ 80ಕ್ಕೂ ಹೆಚ್ಚು ಉತ್ಸಾಹಿ ಚಾಲಕರು ಪಾಲ್ಗೊಂಡಿದ್ದರು.ಮಹಿಳೆಯರು ಆಟೊಕ್ರಾಸ್‌ನಲ್ಲಿ ಪಾಲ್ಗೊಂಡಿದ್ದರಿಂದ ರೇಸ್‌ಗೆ ಗ್ಲಾಮರ್ ಕೂಡ ಬಂದಿತ್ತು. ಜತೆಗೆ ಐಎನ್‌ಎಸಿ ರಾಕ್ ಹ್ಯಾಮರ್ ಬ್ಯಾಂಡ್ ತಮ್ಮ ಅದ್ಬುತ ಸಂಗೀತದೊಂದಿಗೆ ಮೋಟಾರ್ ಸ್ಫೋರ್ಟ್ಸ್‌ಗೆ ಇನ್ನಷ್ಟು ಶಕ್ತಿ ತುಂಬಿದರು. ಅಂದಹಾಗೆ, ಮೋಟಾರ್ ಸ್ಪೋರ್ಟ್ಸ್ ಉತ್ಸಾಹಿಗಳಿಗಾಗಿ ಆಯೋಜಿಸಿದ್ದ ಪ್ರಥಮ ಅವೃತ್ತಿಯ ಚಾಂಪಿಯನ್‌ಷಿಪ್‌ಗೆ ಆನ್ ಓಪನ್ ಮೈಂಡ್ (ಎಓಎಂ) ಹಾಗೂ ವಿನ್‌ಸ್ಪೋರ್ಟ್ಸ್ ಸಹಯೋಗ ನೀಡಿತ್ತು.ಹಲವು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಎಲ್ಲ ಕ್ರೀಡಾಳುಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮೈನವಿರೇಳಿಸುವ ರೀತಿಯಲ್ಲಿ ವಾಹನಗಳನ್ನು ಚಾಲನೆ ಮಾಡಿದರು. ಆಟೊಕ್ರಾಸ್‌ನ ಕ್ಲಾಸ್ 2 ಮತ್ತು 6ನೇ ವಿಭಾಗದಲ್ಲಿ ರಂಜಿತ್ ಬಲ್ಲಾಳ್ ಪ್ರಥಮ ಸ್ಥಾನ ಪಡೆದರೆ, ಮಹಿಳೆಯರ 1400 ಸಿಸಿ ಮುಕ್ತ ವಿಭಾಗದಲ್ಲಿ ಆಶಿಕಾ ಮೆನೆಜಸ್ಸ್ ವಿಜೇತರಾದರು.ಇನ್ನುಳಿದಂತೆ ಬಿ.ಎಸ್.ರುದ್ರೇಶ್ ಕ್ಲಾಸ್ 1 ವಿಭಾಗದಲ್ಲಿ 2 ನಿಮಿಷ 41 ಸೆಕೆಂಡ್‌ಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರೆ, ರಂಜಿತ್ ಬಲ್ಲಾಳ್ (46 ವರ್ಷ) ಕ್ಲಾಸ್ 2 ಮತ್ತು ಕ್ಲಾಸ್ 6 (ಜಿಪ್ಸಿ) ವಿಭಾಗದಲ್ಲಿ ಅನುಕ್ರಮವಾಗಿ 2 ನಿಮಿಷ 42 ಸೆಕೆಂಡ್ ಮತ್ತು 2 ನಿಮಿಷ 37 ಸೆಕೆಂಡ್‌ಗಳ ಸಮಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು.ಕ್ಲಾಸ್ 3 ವಿಭಾಗ (1150 ರಿಂದ 1400 ಸಿಸಿ ಓಪನ್), ಬಿ.ಜಿ.ಡೆನ್ ತಿಮ್ಮಯ್ಯ ಅವರು 2 ನಿಮಿಷ 35 ಸೆಕೆಂಡ್‌ಗಳಲ್ಲಿ ಪ್ರಥಮ ಸ್ಥಾನ ಗಳಿಸಿದರೆ ಚೇತನ್ ಶಿವರಾಂ ಅವರು ಕ್ಲಾಸ್ 4 ವಿಭಾಗದ (1400 ರಿಂದ 1600 ಸಿಸಿ ಓಪನ್ ಕ್ಲಾಸ್)ನಲ್ಲಿ 2 ನಿಮಿಷ 32 ಸೆಕೆಂಡ್‌ಗಳಲ್ಲಿ ಪ್ರಥಮ ಸ್ಥಾನ ಪಡೆದರು. ಕ್ಲಾಸ್ 5 ವಿಭಾಗದಲ್ಲಿ (3000 ಸಿಸಿ ವರೆಗಿನ ಓಪನ್) 2 ನಿಮಿಷ 31 ಸೆಕೆಂಡ್‌ನಲ್ಲಿ ಲೋಹಿತ್ ಅರಸ್ ಪ್ರಥಮ ಸ್ಥಾನ ಪಡೆದರು.ಎಫ್‌ಎಂಎಸ್‌ಸಿಐ ಐಎನ್‌ಎಸಿ 2012 ರ ಪ್ರಥಮ ಅವೃತ್ತಿಯ ಸುತ್ತಿನ ಆಟೊಕ್ರಾಸ್‌ನಲ್ಲಿ ಆಟೊಕ್ರಾಸ್ ಚಾಂಪಿಯನ್ ಎ.ಆರ್.ಶಬ್ಬೀರ್, ಬಾಬನ್ ಖಾನ್ ಮತ್ತು ಅತ್ಯಂತ ಹಿರಿಯ ಕಾರ್ ಸರ್ಕೂಟ್ ರೇಸಿಂಗ್ ಚಾಂಪಿಯನ್ ದೀಪಕ್ ಪಾಲ್ ಚಿನ್ನಪ್ಪ, ಕಾರ್ ರೇಸಿಂಗ್ ಚಾಂಪಿಯನ್ ರಾಹುಲ್ ಕಾಂತರಾಜ್, ಆಟೊಕ್ರಾಸ್ ಮತ್ತು ರ‌್ಯಾಲಿ ಚಾಂಪಿಯನ್ ಲೋಹಿತ್ ಅರಸ್ ಮತ್ತು 1400 ಸಿಸಿ ಐಎನ್‌ಆರ್‌ಸಿ ಚಾಂಪಿಯನ್ ಕರಣ್ ಎ.ಎಂ. ಸೇರಿದಂತೆ ದೇಶದ ಅತ್ಯುತ್ತಮ ಚಾಲಕರು ರೇಸ್‌ನಲ್ಲಿ ಪಾಲ್ಗೊಂಡಿದ್ದರು.ಮಹಿಳೆಯರ ವಿಭಾಗದಲ್ಲಿ, ಆಶಿಕಾ ಮೆನೆಜಸ್ ಅವರು 2 ನಿಮಿಷ 47 ಸೆಕೆಂಡ್‌ನಲ್ಲಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರೆ 3 ನಿಮಿಷ ತೆಗೆದುಕೊಂಡ ಅನಿತಾ ಕೋಲೆ ಅವರು ಎರಡನೇ ಸ್ಥಾನ ಗಳಿಸಿದರು.ಹಲವು ಆಟೊಕ್ರಾಸ್ ಚಾಂಪಿಯನ್‌ಷಿಪ್ ಪಡೆದಿರುವ ರಂಜಿತ್ ಬಲ್ಲಾಳ್ ಕ್ಲಾಸ್ 2 ಮತ್ತು ಕ್ಲಾಸ್ 6 (ಜಿಪ್ಸಿ ವಿಭಾಗ)ದ ವಿಜೇತ ಪದವಿ ಸ್ವೀಕರಿಸಿ ಮಾತನಾಡಿದರು.`ಇಂದಿನ ಈ ಭಾನುವಾರ ನನಗೆ ಅತ್ಯಂತ ಉತ್ಸಾಹಭರಿತ ದಿನ. ಬೆಂಗಳೂರು ರೇಸಿಂಗ್ ಪ್ರಿಯರ ಸ್ಥಳವಾಗುತ್ತಿದೆ. ಇವತ್ತಿನ ನನ್ನ ಪ್ರದರ್ಶನ ನನಗೆ ಅತ್ಯಂತ ಸಂತಸ ತಂದಿದೆ. ನಾನು ನೂರಾರು ವರ್ಷಕ್ಕೆ ಹಲವು ರೇಸ್‌ಗಳಲ್ಲಿ ಭಾಗವಹಿಸುತ್ತೇನೆ. ಪ್ರತಿ ರೇಸ್ ಕೂಡ ನನಗೆ ಹೊಸದಾಗಿರುತ್ತದೆ. ಹೆಲ್ಮೇಟ್ ಧರಿಸಿದ ತಕ್ಷಣ ರೇಸಿಂಗ್ ಮಾತ್ರ ನನ್ನ ಕಣ್ಣಮುಂದೆ ಇರುತ್ತದೆ~ ಎಂದರು.ಮಹಿಳಾ ವಿಭಾಗದ ವಿಜೇತೆ ಆಶಿಕಾ ಮೆನೆಜಸ್‌ಗೆ ಇದೊಂದು ರೋಚಕ ಹಾಗೂ ಅಷ್ಟೇ ಭಯಾನಕ ಅನುಭವವಂತೆ. ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆ ತೀವ್ರವಾಗಿತ್ತು.ಆದರೂ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದರಿಂದ ನನಗೆ ಅತ್ಯಂತ ರೋಮಾಂಚನವಾಯಿತು. ರಾಷ್ಟ್ರೀಯ ಆಟೊಕ್ರಾಸ್ ಚಾಂಪಿಯನ್‌ಷಿಪ್‌ನ ನನ್ನ ಪ್ರಥಮ ಗೆಲುವು ಇದು ಎಂದು ಖುಷಿ ಹಂಚಿಕೊಂಡರು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry