ಮಂಗಳವಾರ, ಮೇ 11, 2021
19 °C

ರೇಸಿಮೆ ಹುಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುಮು ಚುಮು ಬೆಳಕಾಗುತ್ತಿತ್ತು. ವಿದಾಯ ಹೇಳುವಂತೆ ಚುಕ್ಕೆಗಳು ಮರೆಯಾಗುತ್ತಿದ್ದವು. ಕೋಳಿಗಳು ಸಂಭ್ರಮಿಸುತ್ತಿದ್ದವು. ಚಳಿಗಾಳಿಯು ಬಿಸಿಲಿಗೆ ಕಾತರಿಸುತ್ತಿತ್ತು. ಆಗ ತಾನೆ ಯಾವುದೋ ಸವಿಗನಸು ಕಾಣುತ್ತಿದ್ದ ಕೆಂಚ ಬೆಚ್ಚಿ ಮೇಲೆದ್ದಿದ್ದ. ಅವನ ಚಿಕ್ಕವ್ವ ಬೀದಿ ಕಸ ಗುಡಿಸಿ ಬಂದು ಇನ್ನೂ ಮಲಗಿಯೇ ಇದ್ದಾನಲ್ಲ ಎಂದು ತಣ್ಣೀರ ಎರಚಿದ್ದಳು. ಆ ರಾತ್ರಿಯೇ ಎಲ್ಲ ಮಾತಾಗಿತ್ತು.

 

ಕೈಕಾಲು ಮುಖ ತೊಳೆದುಕೊಂಡು ಕೆಂಚ ಲಗುಬಗೆಯಲ್ಲಿ ಹೊರಬಂದ. ಅವನ ಚಿಕ್ಕಪ್ಪ ಆಗಲೇ ಪಂಚೆ ಉಟ್ಟುಕೊಂಡು ರೆಡಿಯಾಗಿದ್ದ. ಕಸ ಸುರಿಯಲು ತಿಪ್ಪೆಯತ್ತ ಹೊರಟಿದ್ದ ಮಾಯವ್ವ `ಎಲ್ಲಪ್ಪಾ ವತಾರೆನೇ ಪಯ್ಣ~ ಎಂದು ಕೆಂಚನ ಚಿಕ್ಕಪ್ಪ ಮರಿಯಣ್ಣನನ್ನು ಕೇಳಿದಳು. `ಮುನೇಶ್ವರನ ಅರ‌್ಕೆ ಅದೆ ಅದ್ಕೇ ವೋಗಿದ್ಬತ್ತಿನಿ ಕನವ್ವಾ~ ಎಂದು ಕೆಂಚನ ಕೈ ಹಿಂಡಿದು; `ಬತ್ತಿನಿ ಕನಮ್ಮಿ~ ಎಂದು ಹೆಂಡತಿ ಸಾಕಿಗೊಂದು ಮಾತು ಎಸೆದು ಕೇರಿಯ ಕಲ್ಲು ಚಪ್ಪಡಿಗಳ ದಡಗಟ್ಟಿಸಿಕೊಂಡು ನಡೆದೇಬಿಟ್ಟ.

 

ಕೆಂಚನ ಹಿಂದೆ ಬಡಕಲು ನಾಯಿ ಒಂದಷ್ಟು ದೂರ ಬಂತು. ಮರಿಯಣ್ಣ ಅದನ್ನು ಹೊಡೆದು ಅಟ್ಟಿದ. ಮಚ್ಚಾದ ಮಂದ ಬೆಳಕು ಹಬ್ಬುತ್ತಿತ್ತು. ಕಾಲುದಾರಿಯಲ್ಲಿ ಸಾಗಿ ಅಡ್ಡ ರಸ್ತೆ ತಲುಪಲು ಸಾಕಷ್ಟು ಸಮಯ ಬೇಕಿತ್ತು. ಆ ಇಡೀ ಸೀಮೆಗೆ ಬೆಳಗ್ಗೆ ಅಷ್ಟೊತ್ತಿಗೆ ಹೊರಡುವ ಅದೊಂದೇ ಬಸ್ಸನ್ನು ಹಿಡಿದು ದೂರದ ಪಯಣ ಮಾಡಬೇಕಿತ್ತು. ಮರಿಯಣ್ಣ ಕೆಂಚನ ನಿಧಾನ ನಡೆಗೇ ರೇಗುತ್ತ `ಗುದ್ದಿ ಸಾಯಿಸಿ ಬಿಡುವೆ~ ಎಂದು ಬೆದರಿಸಿ ಬಿರಬಿರನೆ ಬಲಿಯನ್ನು ಎಳೆದುಕೊಂಡು ಹೋಗುವಂತೆ ನುಗ್ಗುತ್ತಿದ್ದ.ಕೆಂಚನ ಕಣ್ಣಲ್ಲಿ ನೀರು ಬಟ್ಟಾಡುತ್ತಿದ್ದವು. ತನ್ನ ಮಗನನ್ನು ಎಲ್ಲಿಗೆ ಹೀಗೆ ಹಿಡಿದೆಳೆದುಕೊಂಡು ಹೋಗುತ್ತಿರುವೆ ಎಂದು ಕೇಳಲು ಕೆಂಚನ ತಾಯಿ ಅಲ್ಲೆಲ್ಲೂ ಇರಲಿಲ್ಲ. ಅವಳು ಎರಡು ವರ್ಷಗಳ ಹಿಂದೆಯೇ ಬೆಂಗಳೂರಿನ ಕಾರ್ಖಾನೆ ಸೇರಿ ನಾಪತ್ತೆಯಾಗಿ ಕೊನೆಗೆ ಎಲ್ಲೊ ಒಂದು ಅನಾಥ ಶವವಾಗಿ; ತಕ್ಕ ಸಾಕ್ಷಿ ಪುರಾವೆ ಮಾಹಿತಿ ಇಲ್ಲದ ಒಂದು ಕೇಸಾಗಿ ಮುಗಿದುಹೋಗಿದ್ದಳು.ಇದಕ್ಕೂ ಮೊದಲು ಕೆಂಚನ ಅಪ್ಪ ಕುಡಿದು ಕುಡಿದು ಕೊನೆಯುಸಿರೆಳೆದಿದ್ದ ಈ ಸ್ಥಿತಿಯಲ್ಲಿ ಕೆಂಚನಿಗೆ ಚಿಕ್ಕಪ್ಪನಾದ ಮರಿಯಣ್ಣನೇ ಆಸರೆಯಾಗಿದ್ದುದು. ಆ ಮರಿಯಣ್ಣನಿಗೂ ನಾಲ್ಕು ಜನ ಮಕ್ಕಳಾದ ಮೇಲೆ ಇನ್ನೊಂದು ಮಗು ಹೆಂಡತಿ ಸಾಕಿಯ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ತಮಗೇ ತಿನ್ನಲು ಹಿಟ್ಟಿಲ್ಲ ಬಟ್ಟಿಲ್ಲ; ಅಂತಾದ್ದರಲ್ಲಿ ಈ ಇವನನ್ನು ಕಟ್ಟಿಕೊಂಡು ಹೆಣಬಾರದ ಈ ಸಂಸಾರ ಹೊರುವುದು ಸಾಧ್ಯವಿಲ್ಲ ಎಂದು ಕೆಂಚನನ್ನು ದೂರದ ದೊಡ್ಡವರ ಎಸ್ಟೇಟಿಗೆ ಸೇರಿಸಿ ಬಿಡಲು ಎಲ್ಲವೂ ಸಿದ್ಧವಾಗಿತ್ತು.ಕೆಂಚನಿಗೆ ಈ ಯಾವ ತಕ್ಕ ವಿವರವೂ ತಿಳಿದಿರಲಿಲ್ಲ. ಎಲ್ಲಿಗೆ ಚಿಕ್ಕಪ್ಪಾ ಎಂದು ಕೇಳುವ ಧೈರ್ಯವೂ ಇರಲಿಲ್ಲ. ಹೊತ್ತಾಯಿತು ಬೇಗ ಬೇಗ ಒದಗು ಎಂದು ಬಸ್ಸು ತಪ್ಪಿಹೋಗುವುದೆಂಬ ಕಾತರದಲ್ಲಿ ಮರಿಯಣ್ಣ ಕೆಂಚನ ಕೈ ಹಿಡಿದೆಳೆದು ಓಡತೊಡಗಿದ. ಕೆಂಚ ದಾಪುಗಾಲಾಕಲಾಗದೆ ಒಂದೆರಡು ಬಾರಿ ಎಡವಿದ. `ಥತ್ತೇರಿ~ ಎಂದು ಮರಿಯಣ್ಣ ಕೆಂಚನ ಬೆನ್ನ ಮೇಲೆ ಗುದ್ದಿ `ಓಡು~ ಎಂದು ಮುಂದೆ ತಳ್ಳಿದ.ಈ ಬಟಾಬಯಲು ಬೆಟ್ಟದ ದಾರಿ ಮರೆಯಲ್ಲಿ ಚಿಕ್ಕಪ್ಪ ಹೊಡೆದು ಸಾಯಿಸಿಯೇ ಬಿಡುವನೇನೊ ಎಂದು ಕೆಂಚ ಮೊಲದಂತೆ ಕುಪ್ಪಳಿಸುತ್ತಾ ದಮಗುಡವ ಎದೆಯ ಹಿಡಿದುಕೊಂಡು ಓಡಿದ. ಓಡಿ ಓಡಿ ಮುಂದೆ ಬಂದು ಅಲ್ಲೊಂದು ಕಟ್ಟೆಯಲ್ಲಿ ನೀರು ಕುಡಿದು ಬಸ್ಸು ಬಂದು ನಿಲ್ಲುವ ಅಡ್ಡರಸ್ತೆಗೆ ಇಬ್ಬರೂ ಬಂದರು. ಕೆಂಚನ ಕೈಕಾಲು ಮೈ ಎಲ್ಲವೂ ಕಂಪಿಸುತ್ತಿದ್ದವು. ಅವನ ಕಣ್ಣಲ್ಲಿ ಭಯ ತುಳುಕುತ್ತಿತ್ತು. ಅಲ್ಲಿ ಹತ್ತಾರು ಜನರಾಗಲೇ ಬಸ್ಸಿಗಾಗಿ ಕಾಯುತ್ತಿದ್ದರು.ಹತ್ತೇಳು ಹಳ್ಳಿಗಳ ಜನರನ್ನೆಲ್ಲ ತುಂಬಿಕೊಂಡು ತುಂಬಿದ ಬಸುರಿಯಂತೆ ಬಸ್ಸು ಬಂತು. ಒಂದೇ ಸಮನೆ ಎಲ್ಲರೂ ನುಗ್ಗಿದರು. ಕೆಂಚನನ್ನು ಮರಿಯಣ್ಣ ಬಲವಂತನಾಗಿ ಬಸ್ಸಿನೊಳಕ್ಕೆ ತುರುಕಿದ. ಆನರ್ ಗದ್ದಲ ವಿಪರೀತವಾಗಿತ್ತು. ಉಸಿರಾಡಲೂ ಕಷ್ಟವಾಗುತ್ತಿತ್ತು. ಧೂಳೆಬ್ಬಿಸಿಕೊಂಡು ಬಸ್ಸು ವಾಲಾಡುತ್ತ ಅಸಾಧ್ಯ ಸದ್ದು ಮಾಡುತ್ತಾ ಮುನ್ನಡೆಯಿತು.ಬಹಳ ದೂರದ ಆ ಊರಿನ ದೊಡ್ಡಗೌಡರ ಎಸ್ಟೇಟಿಗೆ ಮರಿಯಣ್ಣ ಬೆಟ್ಟಿಕೊಟ್ಟು ಸಾಕಷ್ಟು ಸಮಯವಾಗಿತ್ತು. ಮರಿಯಣ್ಣ ಒಂದು ಕಾಲಕ್ಕೆ ಆ ಎಸ್ಟೇಟಿನಲ್ಲಿ ದುಡಿದವನಾಗಿದ್ದ. ಆ ಎಸ್ಟೇಟ್ ಒಂದು ಕೋಟೆ. ಅದೇ ಒಂದು ಲೋಕ. ಅದರೊಳಗೆ ಒಮ್ಮೆ ಹೋದವರು ಹಿಂತಿರುಗುವುದು ಅಷ್ಟು ಸುಲಭವಿರಲಿಲ್ಲ. ಅಲ್ಲಿ ಹತ್ತಾರು ಆಳುಕಾಳುಗಳಿದ್ದರು.ದೊಡ್ಡಗೌಡರ ಆ ಎಸ್ಟೇಟಿನ ಸುತ್ತಲಿನ ತಂತಿ ಬೇಲಿಯನ್ನು ಒಮ್ಮೆ ಸುತ್ತಿಬರಲು ಇಡೀ ದಿನವಾದರೂ ಸಾಕಾಗುತ್ತಿರಲಿಲ್ಲ. ಅಂತಹ ಎಸ್ಟೇಟಿಗೆ ಯಾರೂ ಸಲೀಸಾಗಿ ನುಸುಳುವಂತಿರಲಿಲ್ಲ. ಗಡಿಕಾಯುವಂತೆ ಬಂದೂಕು ಹಿಡಿದು ಕಾಯುವ ಜನ ಅಲ್ಲಿದ್ದರು. ಅಲ್ಲಿ ಏನೂನೊ ತರಾವರಿ ಕೆಲಸಗಳಿದ್ದವು. ಸಾವಿರಾರು ಎಕರೆಯ ಆ ಎಸ್ಟೇಟಿನಲ್ಲಿ ತರಾವರಿ ಬೆಳೆಗಳ ಬೆಳೆದು ಲಾರಿಗಳಲ್ಲಿ ಎಲ್ಲೆಲ್ಲಿಗೋ ಕಳುಹಿಸುತ್ತಿದ್ದರು.

 

ರೇಷ್ಮೆ ತೋಟಗಾರಿಕೆಯೂ ಅಲ್ಲಿತ್ತು. ಅದೇ ಒಂದು ದೊಡ್ಡ ಕಸುಬು. ರೇಷ್ಮೆ ಹುಳ ಸಾಕಲು ವಿಶಾಲವಾದ ಹತ್ತು ದಡೇವುಗಳ ಒಂದು ಪ್ರತ್ಯೇಕ ಮನೆಯೇ ಇತ್ತು. ಈಗಲೂ ರಾತ್ರಿ ರೇಷ್ಮೆ ಹುಳುಗಳಿಗೆ ಮೇವು ಹಾಕಿಕೊಂಡು ಆರೈಕೆ ಮಾಡಿ ಕಾಯಲೆಂದೇ ಹತ್ತಾರು ಆಳುಗಳಿದ್ದರು. ಆಳು ಕಾಳುಗೆಲ್ಲ ಅಲ್ಲೇ ಮರೆಯಲ್ಲಿ ಗುಡಿಸಲುಗಳಿದ್ದವು. ಹೊರಜಗತ್ತು ಆ ಎಸ್ಟೇಟಿಗೆ ಮುಚ್ಚಿದ ಬಾಗಿಲಾಗಿತ್ತು.ಬಸ್ಸು ಯಾವುದೊ ಎತ್ತಿನ ಬಂಡಿಗೆ ಇನ್ನೇನೊ ಗುದ್ದುವುದಿದ್ದು ಹೇಗೋ ಎಲ್ಲ ಬಲ ಹಾಕಿ ಬ್ರೇಕು ಒತ್ತಿದ ಮೇಲೆ ಇಡೀ ಬಸ್ಸೇ ಕಿರುಗರೆದುಕೊಂಡು ಮುಗ್ಗರಿಸಿ ಗಕ್ ಎಂದು ನಿಂತ ಪರಿಗೆ ನಿಂತಿದ್ದವರು ಕುಂತಿದ್ದವರು ದಡಬಡನೆ ಬಿದ್ದ ಕೂಡಲೇ ಕೆಂಚನಿಗೆ ಎಚ್ಚರವಾಗಿತ್ತು. ಕತ್ತಲು ಮುಸುಕುತ್ತಿತ್ತು. ಮರಿಯಣ್ಣನನ್ನೇ ಕೆಂಚ ಮರೆಗಣ್ಣಿನಿಂದ ನೋಡುತ್ತಿದ್ದ. ಹೇಗೊ ಕಿಟಕಿ ಬಳಿ ಸೀಟು ಗಿಟ್ಟಿಸಿಕೊಂಡು ಹೊರಗೆ ನೋಡುತ್ತ ಆತ ಬೀಡಿ ಸೇದುತ್ತಲೇ ಇದ್ದ.`ಗಿರಿಮಲೆ ಎಸ್ಟೇಟ್ ಇನ್ನೂ ಎಷ್ಟು ದೂರ ಇದ್ದದ್ದು~ ಎಂದು ಪಕ್ಕದವರನ್ನು ಮರಿಯಣ್ಣ ಕೇಳುತ್ತಿದ್ದ. `ಇನ್ನು ಮೂರು ಸ್ಟಾಪಾದ್ಮೇಲೆ ಬತ್ತದೆ~ ಎಂದರು. ಇನ್ನೇನೊ ತಾನಿಲ್ಲಿ ಚಿಕ್ಕಪ್ಪನ ಜೊತೆ ಇಳಿಯಬೇಕೆಂದು ತಿಳಿದು ಕೆಂಚನಿಗೆ ಭಯವಾಯಿತು. ಎಲ್ಲಿಯಾದರೂ ತಪ್ಪಿಸಿಕೊಳ್ಳುವಾ ಎಂದರೆ; ಈಗ ಈ ಬಸ್ಸಲ್ಲಿ, ಈ ಕತ್ತಲ ದಾರಿಯ ಬೆಟ್ಟ ಗುಡ್ಡಗಳ ಮರೆಯ ನಿರ್ಜನ ಬಯಲಲ್ಲಿ ಹೇಗೆ ತಾನೆ ತಪ್ಪಿಸಿಕೊಳ್ಳುವುದು ಎಂದು ಕೆಂಚನ ಸಂಕಟ ಒಳಗೊಳಗೇ ಕುದಿಯಿತು.ಬೊಸ್ಸೆಂದು ಉಸಿರು ಬಿಡುವಂತೆ ಬಸ್ಸು ಏಳುಕೋಟೆಗಳ ಬೆಟ್ಟಗಳ ದಾಟಿ ಬಂದು ಅಲ್ಲೊಂದೆಡೆ ಕಗ್ಗತ್ತಲಲ್ಲಿ ಕೆಂಚನನ್ನೂ ಮರಿಯಣ್ಣನ್ನು ಇಳಿಸಿತು.ಬೆಂಕಿ ಕಡ್ಡಿ ಗೀರಿ ಗೀರಿ ಗಿರಿಮಲೆ ಎಸ್ಟೇಟಿನ ದಾರಿಯ ಕುರುಹು ಹಿಡಿದು ಮರಿಯಣ್ಣ ಕೆಂಚನ ಕೈ ಹಿಡಿದು ದಾಪುಗಾಲಾಕಿದ. `ಎಲ್ಲಿಗೆ ಚಿಕ್ಕಪ್ಪಾ~ ಎಂದು ಒಣಗಿದ ಗಂಟಲಲ್ಲಿ ಕೇಳಿದ. `ಅಲ್ಲೊಂದರ‌್ಮನೆಯದೆ~. `ನಾ ನಿಮ್ಮತೆಲೆ ನೀವೇಳಿದ್ನೆಲ್ಲ ಮಾಡ್ಕಂದು ಇರ‌್ತೀನಿ; ಚಿಕ್ಕಪ್ಪಾ ನಿಂದಮ್ಮಯ್ಯ... ಬ್ಯಾಡ.. ವೊರ‌್ಗೆ ವೊಂಟೋಗ್ವ~ ಎಂದು ಬೇಡಿದ. ಸಿಟ್ಟಿನಿಂದಲೇ ಮರಿಯಣ್ಣ ಗದರಿ ಕೈಯನ್ನು ನುಲುಚುವಂತೆ ಎಳೆದ. ಕೆಂಚ ಗಪ್‌ಚುಪ್ಪಾಗಿ ಆ ಕಗ್ಗತ್ತಲಲ್ಲಿ ಚಿಕ್ಕಪ್ಪ ಎಳೆದುಕೊಂಡು ನಡೆದಂತೆ ಹೆಜ್ಜೆ ಹಾಕಿದ.

 

ಆಕಾಶದಲ್ಲಿ ಮಲ್ಲಿಗೆ ಹೂ ಬಿರಿದಂತೆ ತಾರೆಗಳು ಹೊಳೆಯುತ್ತಿದ್ದವು. ದಟ್ಟವಾದ ಕಾಡೇ ಆವರಿಸಿರುವಂತೆ ಮರಗಿಡಗಳ ದೈತ್ಯ ಆಕೃತಿಗಳು ಕೆಂಚನ ಹೆದರಿಸುತ್ತಿದ್ದವು. ಅಂತೂ ಗಿರಿಮಲೆ ಎಸ್ಟೇಟಿನ ಕಬ್ಬಿಣದ ಎತ್ತರದ ಗೇಟಿನ ಮುಂದೆ ನಿಂತಾಗಲೇ ಬೇಟೆ ನಾಯಿಗಳು ಸೀಳಿ ಹಾಕುವಂತೆ ಬೊಗಳಿದವು. ಕಾವಲುಗಾರರು ಯಾರೆಂದು ಕೇಳಿದರು. ಮರಿಯಣ್ಣ ಪರಿಚಯಿಸಿಕೊಂಡ. ಒಳಕ್ಕೆ ಕರೆದುಕೊಂಡರು. ಕಬ್ಬಿಣದ ಗೇಟಿನ ಕೀರಲು ದನಿ ವಿಷಾದದಲಿ ಮುಚ್ಚಿಕೊಂಡಿತು.ಎಸ್ಟೇಟಿನ ಅಲ್ಲಲ್ಲಿ ಮಿಣುಕು ಲೈಟ್‌ಗಳು ಉರಿಯುತ್ತಿದ್ದವು. ಮರಿಯಣ್ಣ ದೊಡ್ಡವರ ಆ ವಿಶಾಲ ಬಂಗಲೆಯ ಅಂಗಳಕ್ಕೆ ಹೋಗಿ ನಿಲ್ಲುವ ವೇಳೆಗೆ ಆ ದೊಡ್ಡ ಗೌಡರು ದಿನದ ಎಲ್ಲ ಚಾಕರಿಗಳ ವಿಚಾರಣೆ ಮುಗಿಸಿ ತನಗೆ ಬೇಕಾದವರ ಜೊತೆ ಏನೊ ಹರಟೆ ಹೊಡೆಯುತ್ತಿದ್ದರು. ಅಂಗಳದ ಅಲ್ಲಲ್ಲಿ ಆಳುಕಾಳುಗಳು ಊಟ ಮುಗಿಸಿ ಕೂತಿದ್ದರು. ಮರಿಯಣ್ಣನ ಗುರುತು ಹಿಡಿದ ಸುಬ್ಬಯ್ಯ ತಗ್ಗಿದ ದನಿಯಲ್ಲಿ; `ಏನಯ್ಯಾ, ಆಗ ಹೋದೋನು ಯೀಗ್ ಬರ‌್ತಾಯಿದ್ದಿಯಲ್ಲಾ... ನಿನ್ಮಗನ್ನ ಜೀತಕ್ಕೆ ಕರೆತಂದೀ ಏನು~ ಎಂದು ವಿಚಾರಿಸಿದ.ಸುಬ್ಬಯ್ಯ ಆಳುಗಳ ಮೇಲುಸ್ತುವಾರಿ ಮೇಸ್ತ್ರೀ. `ವೂಂ ಸ್ವಾಮಿ. ಇವನು ನನ್ಮಗ್ನಿಯೇ... ಇವ್ನ ನಿಮ್ಕೈಗೆ ಆಕ್ತೀನಿ. ನಿಮ್ಮ ಕೃಪೆ ಆಗ್ಬೇಕು~ ಎಂದು ದೈನ್ಯವಾಗಿ ಮೈ ಕೊಕ್ಕರಿಸಿದ. ದೊಡ್ಡವರು ದೊಡ್ಡ ಪ್ರಾಂಗಣದಲ್ಲಿ ಏನನ್ನೋ ಹೇಳಿ ಜೋರಾಗಿ ನಗುತ್ತಿದ್ದರು. ಮತ್ತೆ ಅಲ್ಲಿದ್ದ ಕೆಲ ಹಳೆಯ ಆಳುಗಳು ಮರಿಯಣ್ಣನ ಮಾತನಾಡಿಸಿ ಊಟಕ್ಕೆ ಎಲೆ ಹಾಕಿಸಿದರು. ಕೆಂಚನಿಗೆ ಕಣ್ಣು ಕಟ್ಟಿದಂತಾಗಿತ್ತು.ಅವರ ಊರು, ಕೇರಿ, ಅವ್ವ, ಅಪ್ಪ, ಆ ನಾಯಿ, ಆ ಕುರಿಕೋಳಿ, ಆ ಹಿತ್ತಲ ಚಿಟ್ಟೆಗಳು, ಅಡ್ಡಾಡುವ ಕತ್ತೆಗಳು, ಕೇರಿಯ ಆ ಅಮಾಯಕ ಹೆಂಗಸರು, ಮುದುಕಿಯರು, ಸದಾ ತತ್ವಪದಗಳನ್ನೇ ಹಾಡಿ ಅವನ್ನೇ ಅನ್ನಾಹಾರ ಎಂದು ಮಾರಿ ಗುಡಿಯ ಮೂಲೆಯಲ್ಲಿ ಬಿದ್ದುಕೊಳ್ಳುವ ಚಾಮಯ್ಯ; ಆ ಅದೇ ದೊಂಬಿದಾಸರ ಪದಗಳು, ಮುಂಗೋಳಿಯ ಸರಸಕ್ಕನ ಸಕ್ಕರೆ ದನಿಯ ಬೀಸುಕಲ್ಲಿನ ಪದ; ಕೆರೆಯ ದಂಡೆಯ ಬೆಸ್ತರ ನೀರಲೆಗಳ ಹಾಡು ಎಲ್ಲವೂ ಒಮ್ಮಗೆ ಅಲೆಅಲೆಯಾಗಿ ತೇಲಿ ಬಂದು ಗಟ್ಟಿಯಾಗಿ ಕೆಂಚ ರೋಧಿಸತೊಡಗಿದ.

 

ಆಳುಕಾಳುಗಳ ಮಧ್ಯೆ ಮರಿಯಣ್ಣ ಕೆಂಚನ ತಲೆ ಮೇಲೆ ಹೊಡೆದು ಗದರಿಸುವಂತಿರಲಿಲ್ಲ. ಉಪಾಯವಾಗಿ ತಲೆ ಸವರುತ್ತ ಮೆಲ್ಲಗೆ ಕೊರಳ ಹಿಚುಕುತ್ತ; ಕಿವಿಯಲ್ಲಿ; `ನಿನ್ನ ಕೊಂದು ನಾಯಿಗಳಿಗೆ ಎಸೆದು ಹೋಗುವೆ. ಸದ್ದಡಗಿ ಸುಮ್ಮನೆ ಹೇಳಿದಂತೆ ಕೇಳಿ ತೆಪ್ಪಗೆ ಬಿದ್ದುಕೊ~ ಎಂದು ಉಸಿರುಗಟ್ಟಿಸಿದ ಕೂಡಲೇ ಕೆಂಚ ತನ್ನ ತಾಯ ನೆನೆದು ಮೆತ್ತಗಾಗಿಬಿಟ್ಟ.ಸುಬ್ಬಯ್ಯ ದೊಡ್ಡವರ ಬಳಿ ಹೋಗಿ ಮರಿಯಣ್ಣ ಹೊಸ ಆಳನ್ನು ಜೀತಕ್ಕೆ ತಂದಿದ್ದಾನೆಂದು ಹೇಳಿ ಅವನಿಗೆ ಕೊಡಿಸಬಹುದಾದ ಹಣಕಾಸಿನ ವ್ಯವಹಾರಕ್ಕೆ ಏರ್ಪಾಟು ಮಾಡಿ ತನ್ನ ಕಮೀಷನನ್ನು ಸೇರಿಸಿಕೊಂಡ. ಹಣ್ಣು ಹಣ್ಣು ಮುದುಕನಾಗಿ ಜೀತದ ಕೊನೆ ದಿನಗಳ ಎಣಿಸುತ್ತಿದ್ದ ಮಾರಯ್ಯ ಎಂದೊ ಎಷ್ಟೊ ಕಾಲದಲ್ಲಿ ಯಾರಿಂದಲೊ ಮಾರಲ್ಪಟ್ಟವನು ಈಗ ಕೆಂಚನ ತಲೆ ಸವರಿ ಸಂತೈಸಿ ಮಗ್ಗುಲಿಗೆ ಮಲಗಿಸಿಕೊಂಡು ಗತಕಾಲದ ಜೀತ ಪುರಾಣದ ಸುಃಖ ದುಃಖವನ್ನೆಲ್ಲ ಅಲ್ಲಲ್ಲೇ ಉರುಳಿದ್ದ ಜೀತದಾರರಿಗೆ ದಣಿದ ದನಿಯಲ್ಲಿ ಹೇಳಿಕೊಳ್ಳುತ್ತಿದ್ದ.ಸುಬ್ಬಯ್ಯನ ಜೊತೆ ವ್ಯವಹಾರ ಮುಗಿಸಿ ತಡವಾಗಿ ಬಂದ ಮರಿಯಣ್ಣ ಅತ್ತ ಒಂದು ಮೂಲೆಯಲ್ಲಿ ಮಲಗಿ; ದೂರದಿಂದಲೇ ಕೆಂಚನಿಗೆ ಕೈ ಬೀಸಿ ನಿದ್ದೆಗೆ ಹೊರಳಿದ್ದ. ಆ ದೊಡ್ಡ ಜೀತದ ಕೊಟಿಗೆ ಹಜಾರದಲ್ಲಿ ಎಷ್ಟೋ ಜನ ಮಾರಯ್ಯನ ಜೀತ ಪುರಾಣವ ಯಾವತ್ತಿನ ಉಪೇಕ್ಷೆಯಲಿ ಕೇಳುತ್ತಾ ನಿದ್ದೆಗೆ ಜಾರಿದ್ದರು. ಕೆಂಚನಿಗೆ ಮಾರಯ್ಯನ ಆ ಮಾತುಗಳು ಒಂದಷ್ಟು ತಂಪೆನಿಸಿದ್ದವು.ಬೆಳಿಗ್ಗೆ ಎದ್ದಾಗ ಆಗಲೇ ಅಂಗಳದಲ್ಲಿ ಬಿಸಲು ಚೆಲ್ಲಾಡುತ್ತಿತ್ತು. ಆಳುಗಳು ಅವರವರ ಕರ್ಮದಲ್ಲಿ ತೊಡಗಿದ್ದರು. ಸುಬ್ಬಯ್ಯ ಅಬ್ಬರಿಸಿ ಒಬ್ಬೊಬ್ಬರ ಚಾಕರಿಯ ಮತ್ತೂ ಆದೇಶಿಸುತ್ತಿದ್ದ. ಆ ದೊಡ್ಡ ಎಸ್ಟೇಟಿನ ಅಷ್ಟೊಂದೆಲ್ಲ ಆಳುಗಳೆಲ್ಲ ಆಗಲೇ ಅವರವರ ಕೆಲಸಕ್ಕೆ ಹೊರಟಿದ್ದರು. ಲಗುಬಗೆಯಿಂದ ಎದ್ದ ಕೆಂಚ ಆ ವಿಶಾಲ ಕೊಟಿಗೆ, ಅಂಗಳ, ಆಚೀಚೆಯ ಸಂದುಗೊಂದುಗಳಲ್ಲ್ಲೆಲ ತನ್ನ ಚಿಕ್ಕಪ್ಪ ಮರಿಯಣ್ಣನಿಗಾಗಿ ಗಾಬರಿಯಿಂದ, ಸಂಕಟದಿಂದ ಹುಡುಕಾಡಿದ.ಮುಂಗೋಳಿ ಕೂಗುವ ಕ್ಷಣದಲ್ಲೇ ಮರಿಯನ್ಣ ತನಗೆ ಬರಬೇಕಾಗಿದ್ದಲ್ಲವನ್ನು ಸುಬ್ಬಯ್ಯನಿಂದ ಪಡೆದು ಊರ ದಾರಿ ಹಿಡಿದು ಹೊರಟು ಹೋಗಿದ್ದ. `ಚಿಕಪ್ಪೋ~ ಎಂದು ಇಡೀ ದೊಡ್ಡವರ ಅಂಗಳವೇ ಆರ್ದ್ರತೆಯಲ್ಲಿ ಮೊಳಗುವಂತೆ ಕೆಂಚ ಕೂಗಿದ. ಯಾವ ಪ್ರತಿಧ್ವನಿಯೂ ಅಲ್ಲಿ ಮೊಳಗಲಿಲ್ಲ. ಯಾರು ಕೂಡ ಅವನ ಕರೆಗೆ ಮರುಗಲಿಲ್ಲ. ಕೊನೆಗೆ ಆ ಮುದುಕ ಮಾರಯ್ಯನೇ ಬಂದು ಸಂತೈಸಬೇಕಾಯಿತು.`ಅವುನಾಗ್ಲೇ ಗೇಟ್ದಾಟಿ, ಅಡ್ರೋಡ್ಗೋಗಿ ಬಸ್ಸತ್ತಿ ಯೆಷ್ಟೊ ವೊತ್ತಾಯ್ತು ಕನಾ ರೊಟ್ಟಿ ತಿನ್ನಡಿ~ ಎಂದು ಮಾರಯ್ಯ ತಲೆ ಸವರಿದ. ತನಗೆ ಇಂತಹ ಮೋಸ ಮಾಡಬಹುದೇ ಎಂದು ಹೇಳಲು ಬಾರದೆ ಕೆಂಚನ ಮನಸ್ಸು ವಿಲವಿಲನೆ ವದ್ದಾಡಿತು. ದುಃಖದುಕ್ಕಳಿಕೆಯಲ್ಲಿ ಎಷ್ಟೋ ಹೊತ್ತಿಂದ ಕೆಂಚ ಅಂಗಳದಲ್ಲಿ ಒಬ್ಬನೇ ಆಕಾಶ ನೋಡುತ್ತ ಕಣ್ಣೀರು ಹೊರೆಸಿಕೊಳ್ಳುತ್ತ ಕೂತೇ ಇದ್ದ.ಸುಬ್ಬಯ್ಯನ ಚಾವಟಿಯ ದನಿ ಅಬ್ಬರಿಸಿ ಎಚ್ಚರಿಸಿತು. ರೇಸಿಮೆ ಹುಳುಗಳ ಮನೆಯ ಚಾಕರಿಗೆ ಇವನನ್ನು ಕಳಿಸು ಮಾರಯ್ಯ ಎಂದು ಕೆಂಚನತ್ತ ಕೈ ತೋರಿ ಸುಬ್ಬಯ್ಯ ಆದೇಶಿಸಿ ಉಳಿದ ಆಳುಗಳಿಗೆ ಗಟ್ಟ ದನಿಯಲ್ಲಿ ಏನೇನೋ ಹೇಳುತ್ತಾ ಅತ್ತ ನಡೆದ. ಮಾರಯ್ಯ ಕೆಂಚನನ್ನು ರೇಸಿಮೆ ಹುಳುಗಳ ಆ ದೊಡ್ಡ ಮನೆಗೆ ಕರೆದೊಯ್ದು ಅಲ್ಲಿದ್ದವರಿಗೆ ಪರಿಚಯಿಸಿ ತನ್ನ ಕೆಲಸದತ್ತ ಹೊರಟ.ಹತ್ತು ದಡೇವುಗಳ ಹುಳುಗಳಿಗೆಲ್ಲ ಆಗ ತಾನೆ ಇಪ್ಪ ನೇರಲೇ ಸೊಪ್ಪು ಹಾಕಿ ಆಳುಗಳು ಕೂತಿದ್ದರು. ಮನೆಯ ಒಳಗೆ ಏನೋ ಮೊರಮೊರ ಸದ್ದು ಹಬ್ಬುತ್ತಿತ್ತು. ಆ ಹತ್ತು ದಡೇವುಗಳ ಬಿದಿರು ತಟ್ಟೆಗಳ ತುಂಬ ರೇಸಿಮೆಯ ಹುಳುಗಳು ಸೊಪ್ಪು ಮೇಯುವುದೇ ಆ ಸದ್ದಾಗಿತ್ತು. ಎಲೆಯ ಒಂದೊಂದು ತುದಿಯಿಂದ ಬರಬರನೆ ಕೊರೆಯುತ್ತ ಮೇಯುವ ಪರಿಯೇ ಕೆಂಚನಿಗೆ ವಿಸ್ಮಯ ಎನಿಸಿತು. ಆ ರೇಸಿಮೆಯ ಹುಳುಗಳ ಮುಟ್ಟಿದ.

 

ಏನೋ ದಿವ್ಯವಾದ ಸ್ಪರ್ಶವಾದಂತಾಗಿ ಉರಿಯುತ್ತಿದ್ದ ಅವನ ಎದೆ ತಂಪಾಯಿತು. ಕೆಲವೇ ದಿನಗಳಲ್ಲಿ ಆ ರೇಸಿಮೆಯ ಹುಳುಗಳ ಸುಂದರ ಲೋಕದಲ್ಲಿ ಕೆಂಚ ಕರಗಿ ತಾನೂ ಕೂಡ ಇಂಥದೇ ಒಂದು ರೇಸಿಮೆಯ ಹುಳ ಎಂದು ಭಾವಿಸಿಕೊಂಡ. ಹುಳು ಉಪ್ಪಟ್ಟೆ ಚಿಟ್ಟೆಗಳ ಹಿಡಿದಾಡಿಸಿ ನಲಿಯುತ್ತಿದ್ದ. ಅವನಿಗೆ ಆ ದಡೇವುಗಳ ತುಂಬ ಇದ್ದ ರೇಸಿಮೆ ಹುಳುಗಳೇ ಕಿನ್ನರ ಲೋಕವಾಗಿ ಕಂಡಿತು.

 

ಹಣ್ಣಾಗಿ ಗೂಡು ಕಟ್ಟಲು ತೊಡಗುವ ರೇಸಿಮೆಯ ಹುಳಗಳೋ ಕೆಂಚನ ಪಾಲಿಗೆ ಸುಖದುಃಖ ಎರಡೂ ಆಗಿ ಅವನ್ನು ಖರೀದಿಸಲು ಟೆಂಪೋದಲ್ಲಿ ಬರುವ ಖಲಂದರ್‌ಸಾಬ್ ಬಗ್ಗೆ ಏನೋ ಸಿಟ್ಟು ಏನೊ ಅಸಹಾಯಕ ಸ್ಥಿತಿ.ಒಂದು ದಿನ ಮಾರಯ್ಯನ ಬಳಿ ಕೆಂಚ ಕೇಳಿದ. `ರೇಷ್ಮೆ ಗೂಡೆಲ್ಲನೂ ತಕಂದೋಗಿಯೇನ್ಮಾಡರು ತಾತಾ~. `ಅಯ್ಯೋ ಮೊಗಾ, ಆ ನರುಕುವೆಲ್ಲ ನಿನುಗ್ಯಾಕೋ... ಅದ್ನೆಲ್ಲ ನೋಡುಕಾಗುದಿಲ್ಲ; ಯೇಳುಕಾ ಆಗುದಿಲ್ಲ... ಮಲಿಕೊ~ ಎಂದು ನಿದ್ದೆಗೆ ವಾಲಿದ್ದ. ಬೇರೆಯವರನ್ನು ಕೇಳಿದರೆ ಏನೇನೊ ಹೇಳಿದರು. ಅದನ್ನೆಲ್ಲ ಕೇಳುತ್ತಾ ಆ ರೇಸಿಮೆಯ ಹುಳುಗಳ ಬಗ್ಗೆ ಕೆಂಚನಿಗೆ ಮತ್ತೂ ಕನಿಕರವೂ ಪ್ರೀತಿಯೂ ಹೆಚ್ಚಾಗಿ ಆ ಹುಳುಗಳಲ್ಲೇ ಲೀನವಾಗಿ ಹೋದ.

 

ಹಣ್ಣಾದ ಹುಳುಗಳ ಚಂದ್ರಿಕೆಗೆ ಬಿಟ್ಟು ಅವು ಗೂಡು ಕಟ್ಟಿಕೊಳ್ಳುತ್ತಾ ಬಾಯಿಂದ ಎಳೆ ಎಳೆಯ ನೂಲು ನೂಲುತ್ತಾ ನೂಲುತ್ತಾ ಹಾಗೇ ನೂಲಿನಲ್ಲೇ ಮರೆಯಾಗಿಬಿಡುವಾಗ ಏನೋ ಸಂಕಟ ಉಂಟಾಗುತ್ತಿತ್ತು. ಮತ್ತೇ ಈ ಹಣ್ಣುಳಗಳ ಮುಟ್ಟಿ ಮುದ್ದು ಮಾಡಲಾರೆನಲ್ಲಾ ಎಂಬ ಖಿನ್ನತೆಯಲ್ಲಿ ಈ ರೇಸಿಮೆಯ ಗೂಡುಗಳನ್ನೆಲ್ಲ ಏನೇನೋ ಮಾಡುವರೊ ಎಂಬುದನ್ನು ನೋಡಿಯೇ ತೀರಬೇಕೆಂದು ಕೆಂಚ ಚಡಪಡಿಸಿದ. ಎಷ್ಟೋ ದಿನ ಕಳೆದರೂ ಅವನ ಚಡಪಡಿಕೆ ಮುಂದುವರಿಯಿತು.ಚಿಕ್ಕಪ್ಪನನ್ನು ಕೆಂಚ ಮರೆತುಬಿಟ್ಟಿದ್ದ. ಆ ಹುಳುಗಳೇ ಅವನ ಸರ್ವಸ್ವವಾಗಿತ್ತು. ಆಗಾಗ ಮಾರಯ್ಯ ರೇಸಿಮೆ ಹುಳುಗಳು ಚಿಟ್ಟೆ ಆಗಿ ಹಾರಿಹೋಗಿ ದೇವಲೋಕ ಸೇರುತ್ತವೆ ಎಂದು ಕಥೆ ಹೇಳುತ್ತಿದ್ದ. ಆ ಚಿಟ್ಟೆಗಳು ಸ್ವರ್ಗದಲ್ಲಿ ಎಂದೆಂದೂ ನಂದನವನದಲ್ಲಿ ಹಾರುತ್ತಾ, ನಲಿಯುತ್ತಾ, ಆಕಾಶದ ತದಿ ತನಕ ತೇಲಿ ಹೋಗಿ ಅಲ್ಲಿ ನಕ್ಷತ್ರಗಳ ಜೊತೆ ಆಟವಾಡಿ; ಹಗಲು ರಾತ್ರಿಗಳ ಹಂಗಿಲ್ಲದೆ, ನೋವಿಲ್ಲದೆ, ಸಾವಿಲ್ಲದೆ, ಅನಂತತಾನಂತವಾಗಿ ಸಾಗುತ್ತಲೇ ಇರುತ್ತವೆ ಎಂದು ಮಾರಯ್ಯ ದಣಿದ ತನ್ನ ಯಾವತ್ತಿನ ಅನಾದಿ ದನಿಯಲ್ಲಿ ಕೆಂಚನಿಗೆ ಹೇಳುತ್ತಿದ್ದ.

 

ಆ ಎಸ್ಟೇಟಿನ ಆ ತರಾವರಿ ಕೆಲಸಗಳ ನಡುವೆ ಮಾರಯ್ಯನ ಮೋಡಿ ಕಥೆಗಳ ಮರೆಯಲ್ಲಿ ಕಾಲ ಹೇಗೆ ಕಳೆಯಿತು ಎಂಬುದೇ ಕೆಂಚನಿಗೆ ತಿಳಿದಿರಲಿಲ್ಲ. ಆದರೆ ಸತತವಾಗಿ ಆ ಹಣ್ಣುಳಗಳು ಗೂಡು ಕಟ್ಟಿ ಪೇಟೆಯ ದಾರಿಯಲ್ಲಿ ಕಳೆದು ಹೋಗುವಾಗಲೆಲ್ಲ ಕೆಂಚ ಒಳಗೊಳಗೇ ಅತ್ತುಬಿಡುತ್ತಿದ್ದ. ಮತ್ತೇ ದಡೇವುಗಳ ಬಿದಿರು ತಟ್ಟೆಗಳ ಬಳಿ ಹೋಗಿ ಮರಿಹುಳುಗಳ ಮೃದುವಾಗಿ ಮುಟ್ಟಿ ಆಟವಾಡಿಸಿ ದುಃಖ ಮರೆಯುತ್ತಿದ್ದ.ಹೀಗೆ ಪ್ರತಿ ತಿಂಗಳು ರೇಸಿಮೆ ಗೂಡಿನ ವ್ಯಾಪಾರಕ್ಕೆ ಟೆಂಪೋದಲ್ಲಿ ಬರುವ ಖಲಂದರ್ ಸಾಬ್ ಎಂದಿನಂತೆ ಬಂದ. `ಖಲಂದರಣ್ಣಾ ಯೀ ಗೂಡೆಲ್ಲನು ಯೇನ್ಮಾಡೀರಣ್ಣಾ~ ಎಂದ. `ನಮ್ಮೂರ‌್ಗೆ ಬರ‌್ತಿಯೇ ನೀನೂ... ನಮ್ದುಕೆ ಎಲ್ಲಾ ತೋರಿಸ್ತೀನೀ... ನಮ್ದೆನೇ ಪಿಲೇಚೆರೇ ಐಯ್ತೆ... ನಮ್ದು ಜೊತೆ ಬಂದ್ಬಿಡು... ರೇಸ್ಮೆ ರಾಜಾ ಮಾಡ್ಬಿಡ್ತಿನಿ ನಿನ್ಗೆ~ ಎಂದು ಕೆಂಚನಿಗೆ ಏನೇನೋ ರಂಗೆಲ್ಲ ಹೇಳಿ ರೇಸಿಮೆಯ ಚಿಟ್ಟೆಗಳ ಕಾಮನಬಿಲ್ಲನ್ನೇ ತಲೆಯೊಳಗೆ ತುಂಬಿದ.ಇಂದೇ ಈ ಖಲಂದರ್ ಸಾಬ್ ಜೊತೆ ಹೊರಟೇ ಬಿಡಬೇಕೆನಿಸಿತು ಕೆಂಚನಿಗೆ. ಮಾರಯ್ಯ ನೆನಪಾದ. ಹಣ್ಣಿಗೆ ಬಂದಿದ್ದ ಹುಳು ಕರೆದಂತಾಗಿ ಓಡಿ ಹೋಗಿ ರೇಸಿಮೆ ಹುಳುಗಳ ತಟ್ಟೆಯ ಸವರುತ್ತ ಹುಳುಗಳ ಎರಡೂ ಕೈಯಲ್ಲಿ ತುಂಬಿಕೊಂಡು ಮುಖಕ್ಕೆ ಕೋಮಲವಾಗಿ ಒತ್ತಿಕೊಂಡು ಬಿಕ್ಕಿದ. ಗೂಡಿನ ವ್ಯಾಪಾರ ಮುಗಿಸಿ ಸಂಜೆ ಹೊರಡುವಾಗ ಖಲಂದರ್ ಸಾಬ್ ಕಣ್ಸನ್ನೇ ಮಾಡಿ ಬರ‌್ತಿಯಾ ಎಂದು ಕರೆದ. ಬರಲಾರೆ ಎಂದು ಕೆಂಚ ತಲೆ ಅಲ್ಲಾಡಿಸಿ ಕೈ ಬೀಸಿದ. ಮತ್ತದೇ ದಿನಗಳು ಉರುಳಿದವು.

 

ಖಲಂದರ್‌ಸಾಬ್ ಜೊತೆ ಹೋಗಿ ಅಲ್ಲೇನು ನಡೆಯುವುದು ಎಂಬುದನ್ನು ಒಮ್ಮೆ ನೋಡಿಯೇ ಬಿಡಬೇಕು ಎಂದು ಹತ್ತಾರು ಬಾರಿ ನೆನೆದು ಲೆಕ್ಕಿಸಿದ. ಇನ್ನು ಕೆಲವೇ ದಿನಗಳಲ್ಲಿ ಆತ ಮತ್ತೆ ವ್ಯಾಪಾರಕ್ಕೆ ಬರುವುದಿತ್ತು. ಆ ಆಳುಗಳ ನಡುವೆ ಯಾರೊ ಸಂಬಂಧಿಕರು ತೀರಿಹೋದರು ಎಂದು ಕಡು ದುಃಖ ಮಾಡುತ್ತ ಊರಿಗೆ ಹೋದುದನ್ನು ಕಂಡು; ಸಂಕಟದಲ್ಲಿ ಕೆಂಚ ತನ್ನ ಊರುಕೇರಿ ಎಲ್ಲವನ್ನೂ ನೆನೆಯುತ್ತ ದುಃಖಳಿಸುತ್ತಿದ್ದ.ಅವನ ಮನವ ತಿಳಿದ ಮಾರಯ್ಯ `ದುಕ್ಕವ ದುಕ್ಕುದಿಂದ್ಲೇ ಮೀರ‌್ಬೇಬು ಮಗಾ. ಅದಾ ಗೆಲ್ಲುಕೆ ನಂಮ್ತಾವು ಬೇರೆ ಯೇನೊ ಇಲ್ಲ. ದುಕ್ಕ ದುಕ್ಕದಿಂದ್ಲೇ ಅಳುದೋಯ್ತದೇ. ಯೀ ಬಾಳು, ಯೀ ಕಣ್ಣೀರು, ಸೇರ‌್ಬೇಕಾದ ತಾವ ಅದ ಬಾಳಿ ಬದುಕ್ಬೇಕಾದೋನು~ ಎಂದು ಕೆಂಚನ ಮೈದಡವಿ ಮಲಗಿಸಿದ.ಅಂತೂ ಮತ್ತೆ ಖಲಂದರ್ ಸಾಬ್ ಬಂದ. ಆತ ಏನೋ ತರಾತುರಿಯಲ್ಲಿದ್ದ. ಮಾರಯ್ಯ ಎಲ್ಲೋ ಹೋಗಿದ್ದ. ಸಂಜೆ ಗತ್ತಲು ಮುಸುಕುತ್ತಿತ್ತು. `ಇವತ್ತು ನಿಂಜೊತೆಲೆ ಬತ್ತಿನಿ ಖಲಂದರಣ್ಣಾ~ ಎಂದು ಕೆಂಚ ಮೆಲ್ಲನೆ ಉಸುರಿದ. ಹೊತ್ತು ಮುಳುಗಿತ್ತು. ವ್ಯವಹಾರ ಮುಗಿದಿತ್ತು. ಕೆಂಚ ಮುಸುಕಿನಲಿ ಟೆಂಪೊ ಏರಿ ಚೀಲಗಳ ಮುಚ್ಚಿಕೊಡಿದ್ದ.

 

ಖಲಂದರ್ ಸಾಬ್ ಟೆಂಪೊವನ್ನು ಗೇಟು ದಾಟಿಸಿ ದಾರಿಗೆ ಬಂದು ವೇಗವಾಗಿ ಗಾಡಿ ಚಲಾಯಿಸಿದ. ತಾತನಿಗೆ ತಾನೊಂದು ಮಾತು ಹೇಳದೆ ಬಂದೆನಲ್ಲಾ ಎಂಬ ನೋವು ಕೆಂಚನಿಗೆ ಬಾದಿಸಿತಾದರೂ ಆ ರೇಸಿಮೆ ಗೂಡುಗಳ ನೂಲು ತೆಗೆದು ಏನೇನು ಮಾಡುವರು; ಆ ರೇಸಿಮೆ ಚಿಟ್ಟೆಗಳು ಹೇಗೆ ಹಾರಾಡುವವೊ... ಅಲ್ಲಿ ಆ ಪೇಟೆಯಲ್ಲಿ ಏನೇನು ಅಂದ ಚೆಂದವೊ ಎಂದು ಕಲ್ಪಿಸುತ್ತಾ ಬಹಳ ದೂರದ ಆ ದಾರಿಯನ್ನು ಸಾಗತೊಡಗಿದ. ಅಲ್ಲೆಲ್ಲೊ ದಾರಿ ಮಧ್ಯೆ ಟೆಂಪೊ ನಿಲ್ಲಿಸಿ ಖಲಂದರ್ ಕೆಂಚನಿಗೆ ಇಡ್ಲಿ ತಿನಿಸಿದ. ದೂರದ ಆ ಪೇಟೆ ತಲುಪುವಷ್ಟರಲ್ಲಿ ನಡುರಾತ್ರಿಯಾಗಿತ್ತು.ತನ್ನ ಪಿಲೇಚೇರಲ್ಲಿ- ರೇಸಿಮೆಯ ನೂಲು ತೆಗೆವ ಪುಟ್ಟ ಕಾರ್ಖಾನೆಯಲ್ಲಿ ಮಲಗಲು ಜಾಗ ತೋರಿಸಿ ನಾಳೆ ಬೆಳಗ್ಗೆ ಇಲ್ಲಿ ಏನೆಲ್ಲ ನಡೆಯುತ್ತೇ ಎಂಬುದನ್ನು ತೋರಿಸುವೆ ಎಂದು ಹೇಳಿ ತನ್ನ ಮನೆಯತ್ತ ನಡೆದ. ಅಲ್ಲೆಲ್ಲ ಸತ್ತ ರೇಸಿಮೆ ಹುಳುಗಳ ವಾಸನೆ ಅಡರಿತ್ತು, ಕೆಟ್ಟ ಗೂಡುಗಳು ಗಬ್ಬು ನಾರುತ್ತಿದ್ದವು. ಇದೇನಿದು ಎಂದು ಕೆಂಚನಿಗೆ ತಿಳಿಯಲಿಲ್ಲ.ಯಾಕಾದರೂ ಬಂದೆನೊ ಎನಿಸಿತು. ಬೆಳಕು ಹರಿಯಿತು. ಕೆಂಚನಿಗೆ ಆಘಾತವಾಗಿತ್ತು. ಆ ಪಿಲೆಚೇರಿಯ ಎಲ್ಲೆಂದರಲ್ಲಿ ಕೋಶಾವಸ್ಥೆಯಲ್ಲಿದ್ದ ರೇಸಿಮೆ ಹುಳುಗಳು ಚಿಟ್ಟೆಯಾಗುವ ಮೊದಲೇ ಸತ್ತು ರಾಶಿರಾಶಿಯಾಗಿ ಬಿದ್ದಿದ್ದವು. ಕೆಲ ಹುಡುಗರು ಚಿಟ್ಟೆಯಾಗದೆ ಹಾಗೆ ಕೋಶಾವಸ್ಥೆಯಲ್ಲೇ ಅಳಿದವನ್ನು ಬುಟ್ಟಿಯಲ್ಲಿ ತುಂಬಿಕೊಂಡು ಹೋಗಿ ಹೊರಗಿನ ಗುಂಡಿಗೆ ಸುರಿಯುತ್ತಿದ್ದರು.

 

ಅಲ್ಲಿ ಆ ನತದೃಷ್ಟ ಕೋಶಾವಸ್ಥೆಯ ಹುಳುಗಳನ್ನು ತಿನ್ನಲು ಕಾಗೆ, ಹದ್ದು, ನಾಯಿಗಳು ಪೈಪೋಟಿಯಲ್ಲಿ ಎರಗಿ ಬರುತ್ತಿದ್ದವು. ಗೂಡೊಳಗೇ ಹುಳುಗಳ ಬಿಟ್ಟರೆ ಅವು ಚಿಟ್ಟೆಯಾಗಿ ಗೂಡಲ್ಲಿ ರಂಧ್ರ ಕೊರೆದು ಹೊರಬಂದು ಬಿಡುವುದರಿಂದ ಮುಂಚಿತವಾಗಿಯೇ ಕುದಿವ ನೀರಲ್ಲಿ ಗೂಡುಗಳ ಬೇಯಿಸುತ್ತಿದ್ದರು. ಹಾಗೆ ಬೆಂದ ಗೂಡು ಸುಲಭವಾಗಿ ನೂಲು ಬಿಟ್ಟಿಕೊಂಡು ಮುಂದಿನ ಹಂತಕ್ಕೆ ಹದವಾಗುತ್ತದೆ.ನೂಲೆಲ್ಲ ಮುಗಿದ ಮೇಲೆ ಕೋಶಾವಸ್ಥೆಯ ಆ ಹುಳ ಕಸದ ಜೊತೆ ಕಸವಾಗಿ ಎಸೆಯಲ್ಪಡುತ್ತದೆ. ಸಣ್ಣ ಪುಟ್ಟ ಹುಡುಗ ಹುಡುಗಿಯರೇ ಆ ಪಿಲೇಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ನರಕವನ್ನು ನೋಡುತ್ತಿದ್ದಂತೆಯೇ ಕೆಂಚನಿಗೆ ತಲೆಸುತ್ತು ಬಂತು. ಅಂತಹ ಕೋಮಲ ಹಣ್ಣುಳಗಳ ಆ ಗತಿಯನ್ನು ಕಂಡು ಸ್ವತಃ ತಾನೇ ಆ ಕೋಶಾವಸ್ಥೆಯ ಹುಳುವಾದಂತೆ ಕುದಿನೀರಿನಲ್ಲಿ ಮಿಸುಕಾಡಿದಂತಾಯಿತು.

 

ಖಲಂದರ್ ಸಾಬ್ ತಡರಾತ್ರಿಗೆ ಮನೆ ಸೇರಿದ್ದರಿಂದ ಇನ್ನೂ ಪಿಲೇಚೇರಿಗೆ ಬಂದಿರಲಿಲ್ಲ. ಖಲಂದರ್ ಸಾಬ್ ಕಡೆಯವರು ಯಾಂತ್ರಿಕವಾಗಿ ತಮ್ಮ ಕೆಲಸದಲ್ಲಿ ತೊಡಗಿದ್ದರು. ಇಲ್ಲಿ ಇನ್ನೊಂದರಗಳಿಗೆಯೂ ಇರಬಾರದೆನಿಸಿತು. ಕೆಂಚ ಮೆಲ್ಲಗೆ ಹೊರಬಂದ. ಪೇಟೆಯ ಆ ಗಲೀಜು ಗಲ್ಲಿಗಳಿಂದ ನುಸುಳಿ ಹೆದ್ದಾರಿಗೆ ಬಂದ. ಎಲ್ಲಿಯಾದರೂ ದೂರ ಹೋಗಬೇಕೆನಿಸಿತು.ಮಾರಯ್ಯನ ಮಾತುಗಳು ಕೆಂಚನ ಮನದಲ್ಲಿ ಮಿಂಚಿದವು ಒತ್ತೊತ್ತಿ ಬಂದ ದುಃಖವ ಹಾಗೇ ನುಂಗಿಕೊಂಡು ರಸ್ತೆ ಬದಿ ಕೆಲ ಹೊತ್ತು ಯೋಚಿಸುತ್ತ ನಿಂತ. ಯಾರೋ ಹಾದಿ ಹೋಕರನ್ನು `ಯೀ ದಾರಿ ಯೆಲ್ಲಿಗೊಯದೆ~ ಎಂದ. ಅವರು `ನೋಡಪ್ಪಾ ನೀನು ಎಲ್ಲಿಗೆ ಹೋಗಬೇಕು ಎಂದುಕೊಂಡಿರುವೆಯೊ ಅಲ್ಲಿಗೆ ಯೀ ದಾರಿ ಹೋಗುತ್ತೇ~ ಎಂದು ಒಗಟಾಗಿ ನುಡಿದರು. `ನಿಜವಾಗ್ಲೂ~ ಎಂದು ದಿಟ್ಟವಾಗಿ ಕೆಂಚ ಮರುಪ್ರಶ್ನಿಸಿದ.`ನಿಸ್ಸಂಶಯವಾಗಿ~ ಎಂದು ಆ ವ್ಯಕ್ತಿ ಮಾಯವಾದರು. ಕೆಂಚ ಆ ಹಾದಿಯಲ್ಲಿ ಒಂದೊಂದೇ ಹೆಜ್ಜೆಯನ್ನು ಬಲವಾಗಿ ಊರುತ್ತಾ ಮುಂದೆ ಸಾಗಿದ. ದಿಗಂತವೇ ತನ್ನ ಹತ್ತಿರ ಬರುತ್ತಿದೆ ಎಂಬಂತೆ ಕೆಂಚನಿಗೆ ಭಾಸವಾಯಿತು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.