ಮಂಗಳವಾರ, ಆಗಸ್ಟ್ 11, 2020
27 °C

ರೇಸ್‌ನ ಪ್ರೀತಿಯ ತೆಕ್ಕೆಯಲ್ಲಿ ದಂಪತಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೇಸ್‌ನ ಪ್ರೀತಿಯ ತೆಕ್ಕೆಯಲ್ಲಿ ದಂಪತಿ...

ರೇಸ್‌ನ ಪ್ರೀತಿಯ ತೆಕ್ಕೆಯಲ್ಲಿ ಬಿದ್ದವರಲ್ಲಿ ಸತೀಶ್ ಗೋಪಾಲಕೃಷ್ಣನ್ ಹಾಗೂ ಅವರ ಪತ್ನಿ ಸವೇರಾ ಡಿಸೋಜಾ ಪ್ರಮುಖರು. ಬೆಂಗಳೂರಿನಲ್ಲಿ ನೆಲೆಸಿರುವ ಈ ದಂಪತಿ 2011ರಲ್ಲಿ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ರ್ಯಾಲಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಬೆಳಕಿಗೆ ಬಂದರು. ಸಾಮರ್ಥ್ಯ ಪರೀಕ್ಷೆಯ (ಎಂಡ್ಯೂರೆನ್ಸ್) ರೇಸ್ ವಿಭಾಗದಲ್ಲಿ ಇವರು ಸ್ಪರ್ಧಿಸುತ್ತಾರೆ. ರೇಸ್ ವೇಳೆ ಸವೇರಾ ನೇವಿಗೇಟರ್ ಆಗಿ ಕಾರ್ಯನಿರ್ವಹಿಸುತ್ತಾರೆ.

`ನಾನು ಕೇವಲ ಹವ್ಯಾಸಕ್ಕಾಗಿ ರೇಸ್ ಶುರು ಮಾಡ್ದ್ದಿದೆ. ಆದರೆ ಅದರಲ್ಲೇ ಚಾಂಪಿಯನ್ ಆಗಿದ್ದು ನನ್ನನ್ನು ಅಚ್ಚರಿಯಲ್ಲಿ ಮುಳುಗಿಸಿದೆ~ ಎನ್ನುತ್ತಾರೆ ಸಾಫ್ಟ್‌ವೇರ್ ಎಂಜಿನಿಯರ್ ಸತೀಶ್. ಮಂಗಳೂರಿನ ಮೂಲದ ಸವೇರಾ ಸಂಪರ್ಕ ಸಲಹೆಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ರೇಸಿಂಗ್ ಸಾಹಸದಲ್ಲಿ ಮುಳುಗಿರುವ ಪತಿ ಜೊತೆ ಕೈಜೋಡಿಸಿದ್ದಾರೆ.

ಇವರಿಬ್ಬರೂ ಜಮ್ಮು ಮತ್ತು ಕಾಶ್ಮೀರದ ಮೊಘಲ್ ಕಾರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ; ಎಂಡ್ಯುರೊ ವಿಭಾಗದಲ್ಲಿ ಸ್ಪರ್ಧಿಸಿ 3ನೇ ಸ್ಥಾನ ಗಳಿಸಿದರು. 

`ರೇಸ್‌ನಲ್ಲಿ ಹಲವು ಸವಾಲು ಎದುರಿಸಿ ನಿಲ್ಲಬೇಕಾಗುತ್ತದೆ. ಆದರೆ ನಾವು ಇದುವರೆಗೆ ಅಂತಹ ಯಾವುದೇ ಅಪಾಯಕ್ಕೆ ಸಿಲುಕಿಲ್ಲ. ಈ ರ್ಯಾಲಿಯಲ್ಲಿ ಬೆಂಗಳೂರಿನ ಚಾಲಕರೊಬ್ಬರು ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿದು ತುಂಬಾ ದುಃಖವಾಯಿತು. ನಾವೂ ಈ ರೇಸ್‌ನಲ್ಲಿ ಪಾಲ್ಗೊಂಡಿದ್ದೆವು. ಆದರೆ ಈ ದುರಂತ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ನಮಗೆ ಸರಿಯಾದ ಮಾಹಿತಿ ಇಲ್ಲ~ ಎಂದು ಸತೀಶ್ `ಪ್ರಜಾವಾಣಿ~ಗೆ ತಿಳಿಸಿದರು.

`ಸಾಹಸಮಯ ಕೆಲಸವೆಂದರೆ ನನಗೆ ಖುಷಿ. ಚಿಕ್ಕವನಿದ್ದಾಗಿನಿಂದ ರೇಸ್‌ನಲ್ಲಿ ಆಸಕ್ತಿ ಇತ್ತು. ವಾಹನ ಚಾಲನೆ ಮಾಡುವುದು ಎಂದರೆ ತುಂಬಾ ಇಷ್ಟ. ದಿನಪತ್ರಿಕೆ ಕೈಗೆತ್ತಿಕೊಂಡಾಗ ಮೊದಲ ನನ್ನ ದೃಷ್ಟಿ ಹರಿಯುತ್ತಿದ್ದು ರೇಸ್‌ನತ್ತ. ಈಗ ಪ್ರಮುಖ ಚಾಲಕರನ್ನು ಹಿಂದಿಕ್ಕಿ ನಾವು ಗೆಲ್ಲುತ್ತಿದ್ದೇವೆ~ ಎಂದು ಖುಷಿ ವ್ಯಕ್ತಪಡಿಸುತ್ತಾರೆ.

ಇವರು ಪಾಲ್ಗೊಂಡ ಮೊದಲ ಡೆಸರ್ಟ್ ಸ್ಟಾರ್ಮ್ ರ್ಯಾಲಿಯಲ್ಲಿ ಕಾರು ಕೈಕೊಟ್ಟ ಕಾರಣ ಸ್ಪರ್ಧೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷದ ಆರಂಭದಲ್ಲಿ ನಡೆದ ಡೆಸರ್ಟ್ ಸ್ಟಾರ್ಮ್ ರ್ಯಾಲಿಯಲ್ಲಿ ಚಾಂಪಿಯನ್ ಆದರು.

ರೇಸ್‌ನ ಲೆಕ್ಕಾಚಾರ ಮಾಡುವುದು ನೇವಿಗೇಟರ್ ಕೆಲಸ. ಇನ್ನು ಎಷ್ಟು ಕಿ.ಮೀ.ಸ್ಪರ್ಧೆ ಇದೆ... ಯಾವ ಹಾದಿಯಲ್ಲಿ ಕ್ರಮಿಸಬೇಕು... ಎದುರಾಳಿಗಳು ಯಾವ ಸ್ಥಾನದಲ್ಲಿದ್ದಾರೆ... ಎಷ್ಟು ಗಂಟೆಯೊಳಗೆ ನಿಗದಿತ ಸ್ಥಳ ತಲುಪಬೇಕು ಎಂದು ಲೆಕ್ಕ ಇಡಬೇಕಾಗುತ್ತದೆ. ಇದರಲ್ಲಿ ತಾಂತ್ರಿಕ ವಿಚಾರವೂ ಇದೆ. ಜೋರಾಗಿ ಕೂಗುವ ಮೂಲಕ ಚಾಲಕರಿಗೆ ಸೂಚನೆ ಕೊಡಬೇಕಾಗುತ್ತದೆ.

`ರ್ಯಾಲಿ ವೇಳೆ ನಾವು ದಂಪತಿ ಎಂಬುದನ್ನು ಮರೆತುಬಿಡುತ್ತೇವೆ. ನಾನೇನಿದ್ದರೂ ಚಾಲಕ. ಆಕೆ ನೇವಿಗೇಟರ್ ಅಷ್ಟೆ. ವೃತ್ತಿಪರ ವ್ಯವಹಾರ ನಮ್ಮದು. ಗಂಡ ಹೆಂಡತಿ ಎಂಬುದು ಕಾರಿನಿಂದ ಇಳಿದ ಮೇಲಷ್ಟೆ. ಸ್ಪರ್ಧೆ ವೇಳೆ ಅಲ್ಲ. ಆದರೆ ಕಾರಿನಲ್ಲಿನ ಭಿನ್ನಾಭಿಪ್ರಾಯಗಳನ್ನು ಮನೆಗೆ ತರುವುದಿಲ್ಲ~ ಎಂದು ಖಡಕ್ಕಾಗಿ ಹೇಳುತ್ತಾರೆ ಕೊಚ್ಚಿ ಮೂಲದ ಸತೀಶ್.

`ಆದರೆ ಇದೊಂದು ಸವಾಲಿನ ವಿಷಯ. ಜೀವಕ್ಕೆ ಕುತ್ತು ಬರುವ ಅಪಾಯವಿರುತ್ತದೆ. ಎಷ್ಟೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೂ ಎಡವಟ್ಟು ಸಂಭವಿಸುತ್ತದೆ. ಹಾಗಂತ ನಾವು ರೇಸ್‌ನಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಲು ಸಾಧ್ಯವೇ~ ಎಂದು ಪ್ರಶ್ನಿಸುತ್ತಾರೆ 37 ವರ್ಷ ವಯಸ್ಸಿನ ಸತೀಶ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.