ಮಂಗಳವಾರ, ನವೆಂಬರ್ 12, 2019
28 °C

ರೈಡರ್ಸ್‌ಗೆ ಕಿಂಗ್ಸ್ ಇಲೆವೆನ್ ಸವಾಲು

Published:
Updated:

ಮೊಹಾಲಿ (ಪಿಟಿಐ): ಸತತ ಎರಡು ಸೋಲುಗಳ ಕಾರಣ ಆತ್ಮವಿಶ್ವಾಸ ಕಳೆದುಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಪರಸ್ಪರ ಎದುರಾಗಲಿವೆ.ಆ್ಯಡಮ್ ಗಿಲ್‌ಕ್ರಿಸ್ಟ್ ನೇತೃತ್ವದ ತಂಡ ಮೊದಲ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಎದುರು ಜಯ ಪಡೆದಿತ್ತು. ಆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ಎದುರು ಮುಗ್ಗರಿಸಿದೆ. ಆದ್ದರಿಂದ ಪಿಸಿಎ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಮತ್ತೆ ಗೆಲುವಿನ ಹಾದಿಗೆ ಮರಳುವ ಪ್ರಯತ್ನವನ್ನು ಈ ತಂಡ ಮಾಡಲಿದೆ.

ಗೌತಮ್ ಗಂಭೀರ್ ನೇತೃತ್ವದ ರೈಡರ್ಸ್ ಈ ಹಿಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು 48 ರನ್‌ಗಳ ಜಯ ಪಡೆದಿದ್ದು, ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.ಬ್ಯಾಟ್ಸ್‌ಮನ್‌ಗಳ ವೈಫಲ್ಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ. ಪೂರ್ಣ 20 ಓವರ್ ಆಡಲು ಸಾಧ್ಯವಾಗದೇ ಇರುವುದು ತಂಡದ ಬ್ಯಾಟ್ಸ್‌ಮನ್‌ಗಳ ವೈಫಲ್ಯವನ್ನು ತೋರಿಸುತ್ತದೆ. ಸೂಪರ್ ಕಿಂಗ್ಸ್ ಎದುರು ಅಂತಿಮ ಓವರ್‌ನಲ್ಲಿ ಆಲೌಟ್ ಆಗಿದ್ದ ತಂಡ ರಾಯಲ್ಸ್ ವಿರುದ್ಧ 19ನೇ ಓವರ್‌ನಲ್ಲೇ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.ಆದ್ದರಿಂದ ನೈಟ್ ರೈಡರ್ಸ್ ಎದುರು ಗೆಲುವಿನ ಕನಸು ಕಾಣಬೇಕಾದರೆ ತಂಡದ ಬ್ಯಾಟ್ಸ್‌ಮನ್‌ಗಳು ಅಬ್ಬರದ ಆಟವಾಡುವುದು ಅಗತ್ಯ.

ಕೆಕೆಆರ್ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಕಾರಣ ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರ್‌ಗಳಿಗೆ ಅಗ್ನಿಪರೀಕ್ಷೆ ಎದುರಾಗುವುದು ಖಚಿತ. 

ಪಂದ್ಯ: ನೈಟ್ ರೈಡರ್ಸ್- ಕಿಂಗ್ಸ್ ಇಲೆವೆನ್. ಸ್ಥಳ: ಮೊಹಾಲಿ, ಆರಂಭ: ಸಂಜೆ 4.00ಕ್ಕೆ

ಪ್ರತಿಕ್ರಿಯಿಸಿ (+)