ಭಾನುವಾರ, ನವೆಂಬರ್ 17, 2019
20 °C
ಅಭಿಮಾನಿಗಳಿಗೆ ಯುಗಾದಿ ಕೊಡುಗೆ ನೀಡಲು ರಾಯಲ್ ಚಾಲೆಂಜರ್ಸ್ ಹೆಬ್ಬಯಕೆ

ರೈಡರ್ಸ್ ಮೇಲೂ ಆರ್‌ಸಿಬಿ ಸವಾರಿ?

Published:
Updated:
ರೈಡರ್ಸ್ ಮೇಲೂ ಆರ್‌ಸಿಬಿ ಸವಾರಿ?

ಬೆಂಗಳೂರು: ಅಜೇಯ 92 ಹಾಗೂ ಅಜೇಯ 93.... ಪ್ರಸಕ್ತ ಐಪಿಎಲ್ ಋತುವಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ ಗಳಿಸಿದ ರನ್ ಇದು.ಉದ್ಯಾನಗರಿಯಲ್ಲಿ ಐಪಿಎಲ್‌ನ ಮೂರನೇ ಪಂದ್ಯ ಗುರುವಾರ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಎದುರಾಗಲಿವೆ. ಕ್ರಿಕೆಟ್ ಪ್ರೇಮಿಗಳ ಗಮನ ಮಾತ್ರ ಗೇಲ್ ಹಾಗೂ ಆರ್‌ಸಿಬಿ ತಂಡದ ನಾಯಕ ಕೊಹ್ಲಿ ಮೇಲೆ ನೆಟ್ಟಿದೆ. ಇವರಲ್ಲೊಬ್ಬರು ಮತ್ತೆ ಮಿಂಚುವರು ಎಂಬ ನಿರೀಕ್ಷೆ ಎಲ್ಲರದ್ದು.ಮಂಗಳವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ್ದ ಆರ್‌ಸಿಬಿ ಈಗ ಆತ್ಮವಿಶ್ವಾಸದ ಖನಿ. ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ಭರ್ಜರಿ ಗೆಲುವು ತಂದಿತ್ತಿದ್ದರು. ಅವರು ಗಳಿಸಿದ 93 ರನ್‌ಗಳು ಪಂದ್ಯದ ಚಿತ್ರಣವನ್ನೇ ಬದಲಿಸಿತ್ತು.ಈ ಪಂದ್ಯದಲ್ಲಿ ಗೇಲ್ ವೈಫಲ್ಯದ ನಡುವೆಯೂ ಗೆಲುವು ದೊರೆತದ್ದು ಸಕಾರಾತ್ಮಕ ಅಂಶ ಎನ್ನಬಹುದು. ತಂಡದ ಬ್ಯಾಟಿಂಗ್ ಗೇಲ್ ಅವರನ್ನೇ ಅವಲಂಬಿಸಿದೆ ಎಂಬ ಟೀಕೆ ಸಾಮಾನ್ಯವಾಗಿ ಕೇಳಿಬರುತ್ತಿದೆ. ಅದು ಅಲ್ಪ ಮಟ್ಟಿಗೆ ಹುಸಿಯಾಗಿದೆ. ಆದರೆ ತಂಡ ಅವರನ್ನೇ ನೆಚ್ಚಿಕೊಂಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ವೆಸ್ಟ್‌ಇಂಡೀಸ್‌ನ ಈ `ದೈತ್ಯ' ಬ್ಯಾಟ್ಸ್‌ಮನ್ ಮುಂಬೈ ಇಂಡಿಯನ್ಸ್ ವಿರುದ್ಧ ಅಜೇಯ 92 ರನ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಮರೆಯುವಂತಿಲ್ಲ.ಆರ್‌ಸಿಬಿ ಇದುವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಒಟ್ಟು 448 ರನ್ ಕಲೆಹಾಕಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು (269) ರನ್‌ಗಳು ಗೇಲ್ ಮತ್ತು ಕೊಹ್ಲಿ ಬ್ಯಾಟ್‌ನಿಂದ ಬಂದಿವೆ. ತಂಡದಲ್ಲಿ ಇವರಿಬ್ಬರ ಮಹತ್ವ ಏನೆಂಬುದು ಇದರಿಂದ ತಿಳಿಯಬಹುದು.ಇಬ್ಬರೂ ವೈಫಲ್ಯ ಅನುಭವಿಸಿದರೆ, ತಂಡಕ್ಕೆ ಆಸರೆಯಾಗುವುದು ಯಾರು ಎಂಬ ಸಣ್ಣ ಆತಂಕವೂ ಅಭಿಮಾನಿಗಳನ್ನು ಕಾಡುತ್ತಿದೆ. ಮಯಂಕ್ ಅಗರ್‌ವಾಲ್, ಮೊಸೆಸ್ ಹೆನ್ರಿಕ್ಸ್, ಡಿವಿಲಿಯರ್ಸ್ ಮತ್ತು ತಿಲಕರತ್ನೆ ದಿಲ್ಶಾನ್ ಕೂಡಾ ಟಿ-20 ಪಂದ್ಯದ ಬೇಡಿಕೆಗೆ ತಕ್ಕಂತ ಬ್ಯಾಟ್ ಬೀಸಬಲ್ಲರು. ಇವರಿಂದ ಇನ್ನೂ ದೊಡ್ಡ ಮೊತ್ತ ಮೂಡಿಬಂದಿಲ್ಲ.ಜಹೀರ್ ಖಾನ್ ಅನುಪಸ್ಥಿತಿಯಲ್ಲೂ ಆರ್‌ಸಿಬಿ ಬೌಲಿಂಗ್ ವಿಭಾಗ ಬಲಿಷ್ಠವಾಗಿ ಕಾಣುತ್ತಿದೆ. ಸನ್‌ರೈಸರ್ಸ್ ವಿರುದ್ಧ ಮಿಂಚಿದ್ದ ಆರ್.ಪಿ. ಸಿಂಗ್ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. ಸ್ಪಿನ್ ವಿಭಾಗದಲ್ಲಿ ಮುತ್ತಯ್ಯ ಮುರಳೀಧರನ್ ಮತ್ತು ಮುರಳಿ ಕಾರ್ತಿಕ್ ಅಷ್ಟೇನೂ ನಿರಾಸೆ ಉಂಟುಮಾಡಿಲ್ಲ.ಗೆಲುವಿನ ಹಾದಿಗೆ ಮರಳುವ ವಿಶ್ವಾಸ: ಮೊದಲ ಪಂದ್ಯದಲ್ಲಿ ಗೆದ್ದು ಎರಡನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಕೈಯಲ್ಲಿ 19 ರನ್‌ಗಳ ಸೋಲು ಅನುಭವಿಸಿರುವ ಕೆಕೆಆರ್ ಮತ್ತೆ ಜಯದ ಹಾದಿಗೆ ಮರಳುವ ವಿಶ್ವಾಸ ಹೊಂದಿದೆ. ಆದರೆ ಅದು ನಿರೀಕ್ಷಿಸಿದಷ್ಟು ಸುಲಭವಲ್ಲ. ತನ್ನದೇ ಅಂಗಳದಲ್ಲಿ ಆರ್‌ಸಿಬಿ ತಂಡವನ್ನು ಕಟ್ಟಿಹಾಕುವುದು ಕಷ್ಟ ಎಂಬುದು ಗಂಭೀರ್‌ಗೆ ತಿಳಿದಿದೆ.ಈ ಕಾರಣ ಕೆಲವೊಂದು ವಿಶೇಷ ಯೋಜನೆಗಳನ್ನು ರೂಪಿಸಿಕೊಂಡು ಕಣಕ್ಕಿಳಿಯಬೇಕಿದೆ. ಗೇಲ್ ಮತ್ತು ಕೊಹ್ಲಿ ಅಬ್ಬರಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಈ ತಂಡದ ಬೌಲರ್‌ಗಳ ಮೇಲಿದೆ. ಗಂಭೀರ್ ತನ್ನ ಬತ್ತಳಿಕೆಯಲ್ಲಿರುವ ಪ್ರಮುಖ `ಅಸ್ತ್ರ' ಎನಿಸಿರುವ ಸ್ಪಿನ್ನರ್ ಸುನಿಲ್ ನಾರಾಯಣ್ ಅವರನ್ನು ಹೇಗೆ ಬಳಸಿಕೊಳ್ಳುವರು ಎಂಬುದನ್ನು ನೋಡಬೇಕು. ಬ್ರೆಟ್ ಲೀ, ಶಮಿ ಅಹ್ಮದ್ ಮತ್ತು ಲಕ್ಷ್ಮಿಪತಿ ಬಾಲಾಜಿ ಮೇಲೂ ಅತಿಯಾದ ಹೊರೆ ಇದೆ.ಇದರ ಜೊತೆಗೆ ಬ್ಯಾಟ್ಸ್‌ಮನ್‌ಗಳೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಗಂಭೀರ್, ಜಾಕ್ ಕಾಲಿಸ್, ಮನೋಜ್ ತಿವಾರಿ, ಎಯೊನ್ ಮಾರ್ಗನ್ ಮತ್ತು ಯೂಸುಫ್ ಪಠಾಣ್ ಆರ್‌ಸಿಬಿ ಬೌಲಿಂಗ್‌ಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ.ಪಠಾಣ್‌ಗೆ ಇನ್ನೂ ತಮ್ಮ ನೈಜ ಆಟ ತೋರಲು ಆಗಿಲ್ಲ. ಆದರೆ ನಾಯಕ ಗಂಭೀರ್ ಬರೋಡದ ಈ ಬ್ಯಾಟ್ಸ್‌ಮನ್ ಮೇಲೆ ವಿಶ್ವಾಸವನ್ನಿರಿಸಿಕೊಂಡಿದ್ದಾರೆ. `ಪಠಾಣ್ ಒಬ್ಬ ಮ್ಯಾಚ್ ವಿನ್ನರ್. ತಂಡದ ಎಲ್ಲ ಆಟಗಾರರು ಅವರ ಬೆಂಬಲಕ್ಕೆ ಇದ್ದಾರೆ' ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಗಂಭೀರ್ ತಿಳಿಸಿದರು. ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್  ಬುಧವಾರ ಕಣಕ್ಕಿಳಿಯುವರೇ ಎಂಬುದು ಖಚಿತವಾಗಿಲ್ಲ.ಈ ಪಂದ್ಯ ವೆಸ್ಟ್‌ಇಂಡೀಸ್‌ನ ಇಬ್ಬರು ಆಟಗಾರರಾದ ಗೇಲ್ ಮತ್ತು ಸುನಿಲ್ ನಡುವಿನ ಹೋರಾಟವಾಗಿ ಕಾಣುವವರೂ ಇದ್ದಾರೆ. ಯುಗಾದಿ ಹಬ್ಬದ ರಜೆಯ ಕಾರಣ ಇಂದು ಚಿನ್ನಸ್ವಾಮಿ ಕ್ರೀಡಾಂಗಣ ತುಂಬಿ ತುಳುಕುವುದು ಖಚಿತ. ಉದ್ಯಾನನಗರಿಯ ಪ್ರೇಕ್ಷಕರಿಗೆ ಹಬ್ಬದ ದಿನ ಗೆಲುವಿನ ಉಡುಗೊರೆ ನೀಡುವುದು ಕೊಹ್ಲಿ ಬಳಗದ ಲೆಕ್ಕಾಚಾರ.

                                        ತಂಡಗಳುರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಕ್ರಿಸ್ ಗೇಲ್, ಮೋಸೆಸ್ ಹೆನ್ರಿಕ್ಸ್, ತಿಲಕರತ್ನೆ ದಿಲ್ಶಾನ್, ಮಯಂಕ್ ಅಗರ್‌ವಾಲ್, ಡೇನಿಯಲ್ ಕ್ರಿಸ್ಟಿಯನ್, ಕರುಣ್ ನಾಯರ್, ಅರುಣ್ ಕಾರ್ತಿಕ್, ಎಬಿ ಡಿವಿಲಿಯರ್ಸ್, ಜೈದೇವ್ ಉನದ್ಕತ್, ವಿನಯ್ ಕುಮಾರ್, ಮುತ್ತಯ್ಯ ಮುರಳೀಧರನ್, ಆರ್.ಪಿ. ಸಿಂಗ್, ಮುರಳಿ ಕಾರ್ತಿಕ್, ಅಭಿಮನ್ಯು ಮಿಥುನ್, ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್, ಚೇತೇಶ್ವರ ಪೂಜಾರ, ಡೇನಿಯಲ್ ವೆಟೋರಿ

ಕೋಲ್ಕತ್ತ ನೈಟ್ ರೈಡರ್ಸ್: ಗೌತಮ್ ಗಂಭೀರ್ (ನಾಯಕ), ಬ್ರಾಡ್ ಹಡಿನ್, ಬ್ರೆಟ್ ಲೀ, ದೇವವ್ರತ ದಾಸ್, ಎಯೊನ್ ಮಾರ್ಗನ್, ಇಕ್ಬಾಲ್ ಅಬ್ದುಲ್ಲಾ, ಬ್ರೆಂಡನ್ ಮೆಕ್ಲಮ್, ಜಾಕ್ ಕಾಲಿಸ್, ಜೇಮ್ಸ ಪ್ಯಾಟಿನ್ಸನ್, ಲಕ್ಷ್ಮಿಪತಿ ಬಾಲಾಜಿ, ಲಕ್ಷ್ಮಿರತನ್ ಶುಕ್ಲಾ, ಮನೋಜ್ ತಿವಾರಿ, ಮನ್ವಿಂದರ್ ಬಿಸ್ಲಾ, ಶಮಿ ಅಹ್ಮದ್, ರಜತ್ ಭಾಟಿಯಾ, ಸುನಿಲ್ ನಾರಾಯಣ, ಯೂಸುಫ್ ಪಠಾಣ್, ರ‍್ಯಾನ್ ಮೆಕ್‌ಲಾರೆನ್, ರ‍್ಯಾನ್ ಟೆನ್ ಡಾಶ್ಕೆಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು; ಪಂದ್ಯದ ಆರಂಭ: ಸಂಜೆ 4.00ಕ್ಕೆಪ್ರತಿಕ್ರಿಯಿಸಿ (+)