ಬುಧವಾರ, ಮೇ 12, 2021
26 °C

ರೈತನಿಂದ ಗ್ರಾಮಕ್ಕೆ ಉಚಿತ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ಅಧಿಕಾರಿಗಳು ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲು ವಿಫಲರಾದಾಗ ಈ ರೈತ ಧೃತಿಗೆಡಲಿಲ್ಲ. ತನ್ನ ಜಮೀನಿನಲ್ಲಿರುವ ಕೊಳವೆ ಬಾವಿ ಮೂಲಕ ಇಡೀ ಗ್ರಾಮಕ್ಕೆ ಉಚಿತವಾಗಿ ಕುಡಿಯುವ ನೀರು ಒದಗಿಸುವ ಮೂಲಕ ಫಕೀರಪ್ಪ ಸುಣಗಾರ ಅವರು ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ.ಬತ್ತ ಬೆಳೆವ ಜಮೀನು ಬೀಳು ಬಿಟ್ಟು, ಅಲ್ಲಿ ಕೊಳವೆ ಬಾವಿ ಕೊರೆಯಿಸಿ, ಜನರ ದಾಹ ತಣಿಸುತ್ತಿರುವ ಕೃಷಿಕ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡ್ಲಬಾಳು ಗ್ರಾಮದ ರೈತ ಸುಣಗಾರ ಫಕೀರಪ್ಪ ಇತರರಿಗೆ ಮಾದರಿಯಾಗಿದ್ದಾರೆ. ತೀವ್ರ ಬರಗಾಲ, ಪದೇ ಪದೇ ಕೈಕೊಡುವ ವಿದ್ಯುತ್, ಬತ್ತಿ ಹೋಗಿರುವ ಊರಿನ ಪಕ್ಕದ ಹಳ್ಳ, ಕುಸಿದ ಅಂತರ್ಜಲದ ಸಮಸ್ಯೆಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಕುಡಿಯುವ ನೀರಿಗೆ ಪರದಾಡುತ್ತಿರುವ ಜನರ ಪಾಲಿಗೆ ಫಕೀರಪ್ಪನವರ ಕೊಳವೆ ಬಾವಿ ನೀರಿನ ಏಕ ಮಾತ್ರ ಆಸರೆಯಾಗಿದೆ.ಫಕೀರಪ್ಪನವರಿಗೆ ಗ್ರಾಮದ ಪಕ್ಕಕ್ಕೆ ಹೊಂದಿಕೊಂಡಂತೆ 12 ಎಕರೆ ಜಮೀನಿದೆ. ಜಮೀನಿನಲ್ಲಿ ಎರಡು ಕೊಳವೆ ಬಾವಿ ಕೊರೆಸಿದ್ದು ಎರಡರಲ್ಲೂ ಸಮೃದ್ಧ ನೀರಿದೆ. ಒಂದು ಬಾವಿಯಿಂದ ಮಾತ್ರ 9 ಎಕರೆಯಲ್ಲಿ ಕೃಷಿ ಚಟುವಟಿಕೆ ಕೈಗೊಂಡಿರುವ ಅವರು ಉಳಿದ ಮೂರು ಎಕರೆ ಜಮೀನನ್ನು ಹಾಗೆ ಪಾಳು ಬಿಟ್ಟಿದ್ದಾರೆ. ಇನ್ನೊಂದು ಕೊಳವೆ ಬಾವಿ ಗ್ರಾಮದ ಕುಡಿಯುವ ನೀರಿಗೆ ಮೀಸಲಿರಿಸಿದ್ದಾರೆ.ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಇವರ ಬದ್ಧತೆ ಎಂತಹುದೆಂದರೆ, ತಮ್ಮ ಜಮೀನಿನ ಕೊಳವೆ ಬಾವಿಗೆ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್ ಸಂಪರ್ಕ ಕಲ್ಪಿಸಿದ್ದಾರೆ. ಹಾಗಾಗಿ ಕಡ್ಲಬಾಳು ಗ್ರಾಮದಲ್ಲಿ ವಿದ್ಯುತ್ ಸರಬರಾಜು ಇದ್ದಾಗಲೆಲ್ಲ ಕುಡಿಯುವ ನೀರು ಸಾರ್ವಜನಿಕರ ನಲ್ಲಿಗಳಲ್ಲಿ ಹರಿಯುತ್ತಿರುತ್ತದೆ.ಹಬ್ಬ, ಜಾತ್ರೆಗಳ ಸಂದರ್ಭದಲ್ಲಿ ಇವರ ಜಮೀನಿನಲ್ಲಿ ಜನಜಾತ್ರೆ. ಸ್ನಾನ ಸೇರಿದಂತೆ ದಿನನಿತ್ಯದ ಎಲ್ಲ ಕರ್ಮಗಳು ಇಲ್ಲಿ ನಡೆಯುತ್ತವೆ. `ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾ.ಪಂ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು 3-4 ಕೊಳವೆ ಬಾವಿ ಕೊರೆಯಿಸಿದರೂ ನೀರು ಬರಲಿಲ್ಲ ಎಂದು ಕೈಚೆಲ್ಲಿ ಕುಳಿತಾಗ ತನ್ನ ಬಾವಿಯ ನೀರನ್ನು ಗ್ರಾಮಕ್ಕೆ ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.