`ರೈತನ ಆತ್ಮಹತ್ಯೆಗೆ ಸರ್ಕಾರವೇ ಹೊಣೆ'

7

`ರೈತನ ಆತ್ಮಹತ್ಯೆಗೆ ಸರ್ಕಾರವೇ ಹೊಣೆ'

Published:
Updated:

ಕೆಂಭಾವಿ: ಪರಸನಹಳ್ಳಿ ಗ್ರಾಮದ ರೈತನ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ ಎಂದು ಶಾಸಕ ಶರಣಬಸಪ್ಪ ದರ್ಶನಾಪೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪರಸನಹಳ್ಳಿ ಗ್ರಾಮದಲ್ಲಿ ಮಂಗಳವಾರ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರ ರೈತರ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಕಳೆದ ವರ್ಷ ಒಂದು ಬೆಳೆ ಕಳೆದುಕೊಂಡು ರೈತರು ಕಂಗಲಾಗಿದ್ದು, ಈ ಬಾರಿಯೂ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಫೆ. 20 ರ ವರೆಗೆ ನೀರು ಬಿಡುವುದಾಗಿ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ರೈತರು ಆತಂಕದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.ಆತ್ಯಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸರ್ಕಾರದಿಂದ ಕೂಡಲೇ ಪರಿಹಾರ ಒದಗಿಸಬೇಕು. ಸರ್ಕಾರಕ್ಕೆ ಕಿಂಚಿತ್ತಾದರೂ ರೈತರ ಬಗ್ಗೆ ಕಾಳಜಿ ಇದ್ದರೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಏಪ್ರಿಲ್ 15 ರವರೆಗೆ ಕಡ್ಡಾಯವಾಗಿ ನೀರು ಹರಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಸಂಭವಿಸಿದರೆ ಇದಕ್ಕೆ ಸರ್ಕಾರವೇ ಜವಾಬ್ದಾರಿ ಆಗಲಿದೆ ಎಂದು ಎಚ್ಚರಿಸಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಈ ಭಾಗದ ರೈತರು ಲಕ್ಷಾಂತರ ಸಾಲ ಮಾಡಿ ಇರುವ ಜಮೀನಿನಲ್ಲಿ ಬೆಳೆ ಬೆಳೆಯಲು ಮುಂದಾಗಿದ್ದರು. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು ಕಾಲುವೆ ನೀರನ್ನೇ ಅವಲಂಬಿಸಿ ಬೇಸಾಯ ಮಾಡುತ್ತಾರೆ. ಸಮರ್ಪಕವಾಗಿ ನೀರು ಹರಿಸದಿದ್ದರೆ ಕೃಷಿಕರು ದಿಕ್ಕು ತೋಚದಂತಾಗಿದ್ದಾರೆ. ಪರಸನಹಳ್ಳಿಯಲ್ಲಿ ಮಂಗಳವಾರ ರೈತನ ಆತ್ಮಹತ್ಯೆಗೆ ಇದೇ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದ್ದಾರೆ.ರೈತ ದೇಶದ ಬೆನ್ನೆಲುಬು ಎಂದು ಮಾತಿನಲ್ಲಿ ಹೇಳಿದರೆ ಸಾಲದು. ರೈತರು ನೀರಿಲ್ಲದೇ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಏಪ್ರಿಲ್ 15 ರವರೆಗೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ಸುರಪುರದಿಂದ ನಾರಾಯಣಪುರದವರೆಗೆ ಪಾದಯಾತ್ರೆ ಕೈಗೊಳ್ಳಲಾಗಿದೆ.ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೂ ರಾಜಕೀಯ ಬಣ್ಣ ಬಳೆಯುತ್ತಿದ್ದಾರೆ. ರೈತರ ಪರವಾಗಿ ಹೋರಾಟ ಮಾಡುತ್ತಿರುವುದು ತಪ್ಪೇ ಎಂದು ಪ್ರಶ್ನಿಸಿದ ಅವರು, ಮೊದಲು ಸಚಿವರು ಸುಳ್ಳು ಹೇಳಿಕೆ ಕೊಡುವುದನ್ನು ಬಿಟ್ಟು ಏಪ್ರಿಲ್ 15 ರವರೆಗೆ ಕಾಲುವೆಗೆ ನೀರು ಹರಿಸುವ ಕೆಲಸ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry