ರೈತನ ಮೊಗದಲ್ಲಿ ನಗು ತಂದ ರಾಗಿ

7

ರೈತನ ಮೊಗದಲ್ಲಿ ನಗು ತಂದ ರಾಗಿ

Published:
Updated:

ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಸತತವಾಗಿ ಬಿದ್ದ ಮಳೆಯಿಂದ ವಾಣಿಜ್ಯ ಬೆಳೆಗಳಾದ ಹತ್ತಿ ಮತ್ತು ತಂಬಾಕು ಬೆಳೆ ಸಂಪೂರ್ಣ ಕೊಳೆತು ಹೋಗಿದ್ದರೆ, ರಾಗಿ ಬೆಳೆ ಮಾತ್ರ ಉತ್ತಮ ಫಸಲು ಬಂದಿದೆ.ತಾಲ್ಲೂಕಿನ ಬೆಳಗನಹಳ್ಳಿ ಗ್ರಾಮದ ರೈತ ಸಿದ್ದರಾಜು ಕಬಿನಿ ಜಲಾಶಯದಿಂದ ಮುಳುಗಡೆಯಾಗಿ ಬೆಳಗನಹಳ್ಳಿಗೆ ವಲಸೆ ಬಂದವರು.  2 ಎಕರೆ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆಸಲು ಯತ್ನಿಸಿದರಾದರೂ ನೀರು ದೊರೆಯದೇ ಇದ್ದಾಗ ಹತಾಶರಾಗದ ಅವರು, 1 ಎಕರೆ ಪ್ರದೇಶದಲ್ಲಿ ಸಾವಯವ ರಾಗಿಯನ್ನು ಬೆಳೆದು ಸಂತೃಪ್ತ ಜೀವನ ನಡೆಸುತ್ತಿದ್ದಾರೆ.ಈ ಹಿಂದೆ ಕಬ್ಬು ಕಟಾವು ಮಾಡಿಸುವ ಮೇಸ್ತ್ರಿಯಾಗಿ ದುಡಿದು ಅದರಲ್ಲಿ ಬಂದ ಅಷ್ಟು ಇಷ್ಟು ಹಣವನ್ನು ತಮ್ಮ ಮಳೆಯಾಶ್ರಿತ ಜಮೀನಿನಲ್ಲಿ ಹತ್ತಿ ಹಾಗೂ ಇನ್ನಿತರ ಆಹಾರ ಬೆಳೆಗಳನ್ನು ಬಿತ್ತನೆಗಾಗಿ ಉಪಯೋಗಿಸಲಾಗುತ್ತಿತ್ತು. ಆದರೆ, ಸೂಕ್ತ ಮಳೆ ಇಲ್ಲದೇ ಬೆಳೆಗಳು ಒಣಗಿ ತುತ್ತು ಅನ್ನಕ್ಕೂ ಪರದಾಡುವಂತಾಗುತ್ತಿತ್ತು.ನೀರಿನ ಬವಣೆ ನೀಗಿಸಲು ಕಳೆದ ಬಾರಿ ಮೂರು ಕೊಳವೆ ಬಾವಿ ತೆಗೆಸಿದರೂ ನೀರು ಬಾರದಿದ್ದಾಗ ಪ್ರಯತ್ನ ಬಿಡದ ಇವರು ಈ ಬಾರಿ ತಮಗಿರುವ ಭೂ ಪ್ರದೇಶದಲ್ಲಿ ರಾಗಿಯನ್ನು ಬಿತ್ತನೆ ಮಾಡಿದರು. ನಂತರ ಸತತವಾಗಿ ಸುರಿದ ಮಳೆಗೆ ರಾಗಿ ಅತ್ಯುತ್ತಮವಾಗಿ ಬೆಳೆದು, ಸಿದ್ದರಾಜುರವರ ಮೊಗದಲ್ಲಿ ಹರ್ಷವನ್ನು ಉಂಟು ಮಾಡಿದೆ.ನಮ್ಮ ಮನೆ ಮಂದಿಯೇ ರಾಗಿಯೊಳಗೆ ಬೆಳೆದಿರುವ ಕಳೆಯನ್ನು ತೆಗೆಯುವುದರಿಂದ ಹೆಚ್ಚು ಖರ್ಚು ತಗಲುವುದಿಲ್ಲ. ಅಲ್ಲದೇ ಹೊರಗಿನ ರೈತರ ನಂಬಿ ಕೆಲಸ ಮಾಡುವುದು ತಪ್ಪುತ್ತದೆ ಎಂಬುದು ಸಿದ್ದರಾಜು ವಾದ.ಅಲ್ಲದೆ ರಾಗಿಯ ಜೊತೆ ಮಧ್ಯೆ ಮಧ್ಯೆ ಮೇವಿನ ಜೋಳವನ್ನು ಬಿತ್ತನೆ ಮಾಡಿದ್ದು ಆ ಜೋಳವನ್ನು ಹಸು ಹಾಗೂ ಎತ್ತುಗಳಿಗೆ ನೀಡಲಾಗುತ್ತದೆ.ತಾಲ್ಲೂಕಿನಾದ್ಯಂತ ರೈತರು ಹೆಚ್ಚು ಹೆಚ್ಚು ವಾಣಿಜ್ಯ ಬೆಳೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ವಾಣಿಜ್ಯ ಬೆಳೆಗಳು ಆದಾಯಕ್ಕಿಂದ ನಷ್ಟವನ್ನೇ ಅನುಭವಿಸುತ್ತಿದ್ದಾರೆ. ಹೆಚ್ಚು ಮಳೆಯಾದರೆ ಬೆಳೆ ಕೊಳೆಯುತ್ತವೆ, ಮಳೆ ಇಲ್ಲದಿದ್ದರೆ ಒಣಗುತ್ತವೆ. ಆದರೆ, ರಾಗಿ ಎಷ್ಟೇ ಮಳೆ ಬಂದರೂ ಏನಾಗುವುದಿಲ್ಲ, ಮಳೆ ಕೊಂಚ ಕಡಿಮೆಯಾದರೂ ರಾಗಿ ಬೆಳೆ ತಡೆದುಕೊಳ್ಳುತ್ತದೆ. ಅಲ್ಲದೇ ರಾಗಿಗೆ ಉತ್ತಮ ಬೇಡಿಕೆ ಜೊತೆಗೆ ಬೆಲೆಯೂ ಇದೆ. ಇನ್ನಾದರೂ ರೈತರು ಹೆಚ್ಚು ಹೆಚ್ಚು ರಾಗಿ ಬೆಳೆಯುವುದರತ್ತ ಗಮನ ಹರಿಸಬೇಕು ಎನ್ನುತ್ತಾರೆ ಸಿದ್ದರಾಜು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry