ರೈತಭವನ ಕಾಲೇಜಿಗೆ: ರೈತರ ವಿರೋಧ

7

ರೈತಭವನ ಕಾಲೇಜಿಗೆ: ರೈತರ ವಿರೋಧ

Published:
Updated:

ಹರಿಹರ: ರೈತ ಭವನವನ್ನು ರೈತರ ಸಂಘದ ಪದಾಧಿಕಾರಿಗಳಿಗೂ ತಿಳಿಸಿದೇ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಬಳಸಿಕೊಳ್ಳಲು ನೀಡಿದ ಕ್ರಮ ಖಂಡಿಸಿ ಸೋಮವಾರ ರೈತ ಸಂಘದ ಕಾರ್ಯಕರ್ತರು, ಎಪಿಎಂಸಿ ಕಾರ್ಯದರ್ಶಿ ಹಾಗೂ ನಿದೇರ್ಶಕರ ಜತೆ ವಾಗ್ವಾದ ನಡೆಯಿತು. ಎಪಿಎಂಸಿ ಆವರಣದಲ್ಲಿರುವ ರೈತ ಭವನವನ್ನು ಎಪಿಎಂಸಿ, ಪಾಲಿಟೆಕ್ನಿಕ್ ಕಾಲೇಜಿಗೆ ಬಳಸಿಕೊಳ್ಳಲು ನೀಡಿದ್ದರು. ಸೋಮವಾರ ರೈತ ಸಂಘದವರು ಪ್ರತಿಭಟನೆ ನಡೆಸಲು ಅಲ್ಲಿ ಸೇರಿದರು. ರೈತ ಭವನ ಕಾಲೇಜಿಗೆ ನೀಡಿದ ವಿಷಯ ತಿಳಿದು, ಎಪಿಎಂಸಿ ಸಭಾಂಗಣದಲ್ಲೇ ಸಭೆ ನಡೆಸುತ್ತಿದ್ದರು.ಅಲ್ಲಿಗೆ ಬಂದ ಎಪಿಎಂಸಿ ಕಾರ್ಯದರ್ಶಿ ಬಿ.ವೈ. ಗೌಡನಾಯ್ಕರ್, ಇಲ್ಲಿ ಸಭೆ ನಡೆಸಬಾರದು ಎಂದು ನಿರ್ದೇಶಕರು ಹೇಳಿದ್ದಾರೆ. ಕೂಡಲೇ ಖಾಲಿ ಮಾಡಿ ಎಂದರು. ಇದರಿಂದ ರೋಷಗೊಂಡ ರೈತ ಸಂಘದ ಪದಾಧಿಕಾರಿಗಳು ಹಲವು ವರ್ಷಗಳಿಂದ ಸಣ್ಣಪುಟ್ಟ ಸಭೆಗಳನ್ನು ಎಪಿಎಂಸಿ ಸಭಾಂಗಣದಲ್ಲೇ ನಡೆಸುತ್ತಾ ಬಂದಿದ್ದೇವೆ. ಸರ್ಕಾರಿ ಶಾಲೆಗಳಿಗೆ ಸೈಕಲ್ ವಿತರಣೆ ಸಂದರ್ಭದಲ್ಲಿ ಸೈಕಲ್‌ಗಳನ್ನು ಜೋಡಿಸಿಕೊಳ್ಳಲು 2-3 ತಿಂಗಳು ಬೈಸಿಕಲ್ ಕಂಪೆನಿಯವರಿಗೆ ಬಾಡಿಗೆ ನೀಡಿದ್ದರು. ನಂತರ, ಕಾಲೇಜಿಗೆ ಬಾಡಿಗೆ ನೀಡಿದ್ದಾರೆ.

ರೈತ ಭವನ ಇರುವುದು ರೈತರ ಬಳಕೆಗೋ ಅಥವಾ ಇತರರಿಗೋ ಎಂಬುದನ್ನು ಎಂಪಿಎಂಸಿ ನಿರ್ದೇಶಕರು ಸ್ಪಷ್ಟಪಡಿಸಬೇಕು. ರೈತರ ಹೋರಾಟ ಹತ್ತಿಕ್ಕುವ ಹಿನ್ನೆಲೆಯಲ್ಲಿ ಈ ಕಾರ್ಯಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತ ಭವನ ಖಾಲಿ ಮಾಡಿಸಿಕೊಡುವಂತೆ ಪಟ್ಟು ಹಿಡಿದರು. ಸಂಘದ ಕಾರ್ಯಕರ್ತರು ಮತ್ತು ಕಾರ್ಯದರ್ಶಿ ನಡುವೆ ವಾಗ್ವಾದ ನಡೆಯುವಾಗ ನಿದೇರ್ಶಕರಾದ ಶಿವರಾಮ್ ಹಾಗೂ ಎ. ಬಸಪ್ಪ ಅಲ್ಲಿಗೆ ಬಂದು, ಎಪಿಎಂಸಿ ಸಭಾಂಗಣದಲ್ಲಿ ಇಂದು ರೈತರು ಸಭೆ ನಡೆಸಿದರೆ, ನಾಳೆ ಇನ್ನೊಂದು ಸಂಘಟನೆಯವರು ಸಭೆ ನಡೆಸಲು ಕೇಳುತ್ತಾರೆ. ಎಪಿಎಂಸಿ ಸಮಿತಿಯ ಹೊರತು ಬೇರೆಯವರಿಗೆ ಸಭೆ ನಡೆಸಲು ಅನುಮತಿ ನೀಡಬಾರದು ಎಂದು ಕಾರ್ಯದರ್ಶಿಗೆ ತಾಕೀತು ಮಾಡಿದರು.ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಯಿತು. ಎಪಿಎಂಸಿ ಇರುವುದೇ ರೈತರಿಗಾಗಿ. ರೈತರೇ ಇಲ್ಲದಿದ್ದರೆ, ಎಪಿಎಂಸಿ ಸಮಿತಿ ಹೇಗೆ ರಚನೆಯಾಗುತ್ತದೆ? ಎಪಿಎಂಸಿಯಲ್ಲಿ ರೈತರಿಗೆ ಬೆಲೆ ಇಲ್ಲದಂತಾಗಿದೆ ಎಂದು ಸಂಘದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. 2-3 ದಿನಗಳಲ್ಲಿ ರೈತ ಭವನವನ್ನು ಖಾಲಿ ಮಾಡಿಸಿಕೊಡಲಾಗುವುದು ಎಂದು ಕಾರ್ಯದರ್ಶಿ ಬಿ.ವೈ. ಗೌಡನಾಯ್ಕರ್ ಹಾಗೂ ಸಿಬ್ಬಂದಿ ಭರವಸೆ ನೀಡಿ ವಾತಾವರಣ ತಿಳಿಗೊಳಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಾಳೂರು ನಾಗರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವಿ. ರುದ್ರಮುನಿ, ಶೇಖರಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry