ರೈತರನ್ನು ಎತ್ತಿಕಟ್ಟುವ ಹುನ್ನಾರ-ಆರೋಪ

7
ಉಪ್ಪಿನಂಗಡಿ: ಜಲವಿದ್ಯುತ್ ಸ್ಥಾವರ ಅಣೆಕಟ್ಟು ನಿರ್ಮಾಣ

ರೈತರನ್ನು ಎತ್ತಿಕಟ್ಟುವ ಹುನ್ನಾರ-ಆರೋಪ

Published:
Updated:

ಪುತ್ತೂರು: ಉಪ್ಪಿನಂಗಡಿಯ ನೆಕ್ಕಿಲಾಡಿಯ ಜಲ ವಿದ್ಯುತ್ ಸ್ಥಾವರ ಅಣೆಕಟ್ಟು ನಿರ್ಮಾಣಕ್ಕಾಗಿ ಭೂ ಸ್ವಾಧೀನ ವಿಚಾರದಲ್ಲಿ ಸ್ಥಾಪಿತ ಹಿತಾಸಕ್ತಿಗಳು ವಿನಾಕಾರಣ ರೈತರನ್ನು ಎತ್ತಿಕಟ್ಟುವ ಮೂಲಕ ಸಂತ್ರಸ್ತ ರೈತರಿಗೆ ಪರಿಹಾರ ಸಿಗದಂತಹ ಸ್ಥಿತಿಯನ್ನು ನಿರ್ಮಿಸುತ್ತಿದೆ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಂದ್ರನಾಥ ಆಳ್ವ ಮತ್ತು ತಾಲೂಕು ಅಧ್ಯಕ್ಷ ಪ್ರಕಾಶ್ಚಂದ್ರ ಆಳ್ವ ಆರೋಪಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಭೂಮಿ ಕಳೆದುಕೊಳ್ಳುತ್ತಿರುವ ಸಂತ್ರಸ್ತರಿಗೆ ಕಂಪೆನಿಯಿಂದ ಸಮರ್ಪಕವಾದ ಪರಿಹಾರ ಸಿಗಬೇಕು. ಅವರಿಗೆ ಯಾವುದೇ ರೀತಿಯಲ್ಲಿ ಅನ್ಯಾಯ ಆಗಬಾರದು. ಆದರೆ ವೈಯಕ್ತಿಕ ಹಿತಾಸಕ್ತಿಯ ಕೆಲವರು ರೈತ ಪರ ಹೋರಾಟದ ನೆಪದಲ್ಲಿ ಸಂತ್ರಸ್ತ ರೈತರಿಗೆ ಆಸೆ ಹುಟ್ಟಿಸಿ ಹೋರಾಟ ಅವರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ನಮ್ಮ ಸಂಘಟನೆಯು ಸಂತ್ರಸ್ತ ರೈತರಿಗೆ ಪರಿಹಾರವನ್ನು ಕೊಡಿಸಲು ಯತ್ನಿಸುತ್ತಿದೆ' ಎಂದರು.ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ನೀಡುವ ಸಲುವಾಗಿ ಹಿರೇ ಬಂಡಾಡಿ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗಿದೆ. ನೆಕ್ಕಿಲಾಡಿ ಪ್ರದೇಶದಲ್ಲಿ ಸಮೀಕ್ಷೆ ನಡೆಯದ ಕಾರಣ ಪರಿಹಾರ ವಿತರಣೆಗೆ ಅಡ್ಡಿ ಎದುರಾಗಿದೆ. ರೈತ ಸಂಘದ ಹೋರಾಟಗಾರರು ಸಮೀಕ್ಷೆಗೆ ಅವಕಾಶವೇ ನೀಡದ ಕಾರಣ ಸಂತ್ರಸ್ತ ರೈತರಿಗೆ ಅನ್ಯಾಯವಾಗುತ್ತಿದೆ' ಎಂದು ಆರೋಪಿಸಿದರು.ಅಣೆಕಟ್ಟಿನಿಂದ ಲಕ್ಷಾಂತರ ಮಂದಿಗೆ ಅನುಕೂಲವಾಗಲಿದೆ. ಹಾಗಾಗಿ ಇದಕ್ಕೆ ವಿರೋಧ ಸಲ್ಲ. ರೈತರು ತ್ಯಾಗಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.`ಸಮೀಕ್ಷೆ ನಡೆಸಲಾದ ಪ್ರದೇಶದ ಸಂತ್ರಸ್ತ ರೈತರ ಪೈಕಿ ಶೇ.70ರಷ್ಟು ಮಂದಿ ಪರಿಹಾರವನ್ನು ಪಡೆದಿದ್ದಾರೆ.ಕಂಪೆನಿಯು ರೈತರ ಜಮೀನಿಗೆ ಪ್ರತಿ ಎಕರೆಗೆ ರೂ.14 ಲಕ್ಷದಂತೆ ನ್ಯಾಯಯುತ ಪರಿಹಾರ ನೀಡಿದೆ. ಕೆಲವೇ ಮಂದಿ ಸಂತ್ರಸ್ತ ರೈತರು ರೈತ ಸಂಘದ ಮಾತು ಕೇಳಿ ಪ್ರತಿ ಎಕರೆಗೆ ರೂ. 40 ಲಕ್ಷ ನೀಡಬೇಕು ಎಂಬ ನ್ಯಾಯಯುತವಲ್ಲದ ಬೇಡಿಕೆ ಇಟ್ಟಿದ್ದಾರೆ.ಈ ಧೋರಣೆಯಿಂದ  ಸಂತ್ರಸ್ತರಿಗೆ ಮಾರಕವಾಗುವುದನ್ನು ತಡೆಯಲು ಜಯ ಕರ್ನಾಟಕ ಸಂಘಟನೆ ಸಂತ್ರಸ್ತರ ರೈತ ಮುಖಂಡರೊಂದಿಗೆ ಹಾಗೂ ಕಂಪೆನಿಯ ಜೊತೆ ಮಾತುಕತೆ ನಡೆಸಲಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry