ಶನಿವಾರ, ಮೇ 28, 2022
26 °C

ರೈತರಲ್ಲಿ ಮೊಗದಲ್ಲಿ ಮೂಡಿದ ಮಂದಹಾಸ

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ರೈತರಲ್ಲಿ ಮೊಗದಲ್ಲಿ ಮೂಡಿದ ಮಂದಹಾಸ

ಗುಲ್ಬರ್ಗ: ಇನ್ನೇನು... ಮಳೆ ಕಣ್ಮರೆಯಾಗೇ ಹೋಯ್ತು ಎಂಬ ಚಿಂತೆಯಲ್ಲಿ ಮುಳುಗಿದ್ದ ರೈತರಲ್ಲಿ ಕಳೆದೆರಡು ದಿನದಿಂದ ಮಂದಹಾಸ ಮೂಡಿದೆ. ಜಿಲ್ಲೆಯ ವಿವಿಧೆಡೆ ಅಬ್ಬರ ಹಾಗೂ ಮಧ್ಯಮ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದು ಬಿತ್ತನೆ ಕಾರ್ಯಕ್ಕೆ ಮುಂದಾಗಲು ಪ್ರೇರೇಪಿಸಿದೆ.ಚಿತ್ತಾಪುರ, ಸೇಡಂ ಹಾಗೂ ಚಿಂಚೋಳಿ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ರೈತರ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ, ಅಫಜಲಪುರ, ಜೇವರ್ಗಿ ಇತರ ಕಡೆಗಳಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಒಂದೆರಡು ದಿನದೊಳಗೆ ಮಳೆ ಸುರಿಯುವ ಸಾಧ್ಯತೆಯಿದೆ. ಕೊಂಚಾವರಂ ಅರಣ್ಯವನ್ನು ಒಳಗೊಂಡ ಚಿಂಚೋಳಿ ತಾಲ್ಲೂಕಿನಲ್ಲಿ ವರುಣನ ಆರ್ಭಟ ತುಸು ಹೆಚ್ಚಾಗಿಯೇ ಕಂಡುಬಂದಿದೆ.ಜೂನ್ 19ರವರೆಗೆ ಸರಾಸರಿ 854 ಮಿ.ಮೀ. ಮಳೆಯಾಗಬೇಕಿದ್ದರೂ ಸುರಿದಿದ್ದು 362 ಮಿ.ಮೀ. ಮಾತ್ರ. ಕಳೆದ ಶನಿವಾರದಿಂದ ಆರಂಭವಾದ ಮಳೆಯು ಕೆಲವೆಡೆ ಇನ್ನೂ ಮುಂದುವರಿದಿದೆ. `ಮಳೆ ಕೈಕೊಟ್ಟಿತು~ ಎಂದು ಭಾವಿಸಿದ್ದ ರೈತರು, ಈಗ ಲಗುಬಗೆಯಿಂದ ಬಿತ್ತನೆ ಬೀಜ, ಗೊಬ್ಬರ ಹಿಡಿದು ಬಿತ್ತನೆಗೆ ಧಾವಿಸುತ್ತಿದ್ದಾರೆ.ಅಲ್ಪಾವಧಿ ಬೆಳೆಗಳಾದ ಹೆಸರು ಹಾಗೂ ಉದ್ದು ಬೆಳೆ ತೆಗೆದು, ಆದಾಯ ಪಡೆಯುವುದು ರೈತರ ರೂಢಿ. ಈ ಸಲ ಮಾತ್ರ ಮಳೆ ಇದಕ್ಕೆ ಅವಕಾಶ ಕೊಟ್ಟಿಲ್ಲ. ಮುಂಗಾರು ಹಂಗಾಮಿನಲ್ಲಿ ಹೆಸರು ಮತ್ತು ಉದ್ದು ಬಿತ್ತನೆಯನ್ನು ಕ್ರಮವಾಗಿ 30 ಹಾಗೂ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೈಗೊಳ್ಳುವ ಗುರಿ ಇತ್ತಾದರೂ ಈವರೆಗೆ ಬಿತ್ತನೆಯಾಗಿದ್ದು ತಲಾ 1,000 ಎಕರೆಗೂ ಕಡಿಮೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ಬಿತ್ತನೆಗೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಒಟ್ಟು 3.65 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ ಬಿತ್ತನೆಯಾಗಿದ್ದು ತೀರಾ ಅಲ್ಪ. ಕೆಲವೆಡೆ ವಾರದ ಹಿಂದೆ ಮಳೆಯಾಗಿರುವುದರಿಂದ ಬಿತ್ತನೆ ಆರಂಭವಾಗಿದೆ. ಉಳಿದ ಕಡೆ ರೈತರು ಇನ್ನೂ ಮಳೆಗಾಗಿ ನೆಲ ನೋಡುತ್ತಿದ್ದಾರೆ. “ಒಂದೆರಡು ಜೋರ್ ಮಳಿ ಬಂದ್ರ ಬಿತ್ಲಿಕ್ಕೆ ಛಲೋ ಆಗ್ತದ. ಆದ್ರ ಇನ್ನೂ ಮಳಿರಾಯ ನಮ್ ಕಡೆ ನೋಡವಲ್ಲ” ಎಂದು ಗುಲ್ಬರ್ಗ ತಾಲ್ಲೂಕಿನ ಹುಣಸಿಹಡಗಿಲ ರೈತ ಸಣ್ಣಪ್ಪ ಅಳಲು ತೋಡಿಕೊಂಡರು.ಇನ್ನೂ ಸಿದ್ಧತೆಯಲ್ಲಿ...

ಆಳಂದ ಹಾಗೂ ಜೇವರ್ಗಿ ತಾಲ್ಲೂಕುಗಳಲ್ಲಿ ಮಳೆ ಕೊರತೆ ತೀವ್ರವಾಗಿದೆ. ಗುಲ್ಬರ್ಗ ಹಾಗೂ ಅಫಜಲಪುರ ತಾಲ್ಲೂಕಿನ ಬಹುತೇಕ ಕಡೆ ಬಿತ್ತನೆಗೆ ಹದವಾಗುವಷ್ಟು ಪ್ರಮಾಣದ ಮಳೆ ಸುರಿದಿಲ್ಲ. ನೆಲ ಹಸಿಯಾಗದೇ ಬಿತ್ತನೆ ಮಾಡುವುದು ಹೇಗೆ? ಎಂಬ ಚಿಂತೆ ರೈತರದು. ಹೊಲದಲ್ಲಿ ಮೇವಿನ ಬಣವೆ ಒಟ್ಟಿದ್ದ ರೈತರು, ಈಗ ಬಿತ್ತನೆಗೆಂದು ಅವುಗಳನ್ನು ತೆರವು ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. `ಮಿರ್ಗಾ (ಮೃಗಶಿರಾ) ಹೋಯ್ತು. ಇನ್ನೇನಿದ್ರೂ ಆರ್ದ್ರ (ಆರಿದ್ರಾ) ಗತಿ ಎನ್ನುತ್ತಾರೆ ರೈತರು.ಕಾಣದ `ಕ್ಯೂ~

ಬಿತ್ತನೆ ಕಾರ್ಯ ವಿಳಂಬವಾದ ಹಿನ್ನೆಲೆಯಲ್ಲಿ ಬೀಜ- ರಸಗೊಬ್ಬರ ಮಾರಾಟದ ಮಳಿಗೆಗಳಲ್ಲಿ ರೈತರೇ ಕಾಣುತ್ತಿಲ್ಲ. ಇನ್ನು ರೈತ ಸಂಪರ್ಕ ಕೇಂದ್ರಗಳ ಮುಂದೆಯೂ ರೈತರ ಉದ್ದನೆಯ ಸಾಲು ಇಲ್ಲ. “ಈಗಿನ ಸ್ಥಿತಿ ಗಮನಿಸಿದರೆ, ಮುಂದಿನ ನಾಲ್ಕಾರು ದಿನಗಳಲ್ಲಿ ಎಲ್ಲೆಡೆ ಮಳೆ ಸುರಿಯುವ ಸಾಧ್ಯತೆ ಇದೆ. ನಂತರದ ದಿನಗಳಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿ ಚುರುಕುಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಅಗತ್ಯ ದಾಸ್ತಾನು ಮಾಡಲಾಗಿದೆ” ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.