ರೈತರಿಂದ ಟ್ರ್ಯಾಕ್ಟರ್ ಮರುಜಪ್ತಿ ಕಾರ್ಯಾಚರಣೆ

7

ರೈತರಿಂದ ಟ್ರ್ಯಾಕ್ಟರ್ ಮರುಜಪ್ತಿ ಕಾರ್ಯಾಚರಣೆ

Published:
Updated:

ಶಿವಮೊಗ್ಗ: ಅಲ್ಲಿ ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ಪ್ರಪ್ರಥಮ ಬಾರಿಗೆ ಕೃಷಿ ಬಜೆಟ್ ಮಂಡಿಸುತ್ತಿದ್ದರೆ, ಅದೇ ಸಮಯದಲ್ಲಿ ಅವರ ತವರು ಜಿಲ್ಲೆಯಲ್ಲಿ ರೈತ ಮುಖಂಡರು, ರೈತರಿಂದ ಬ್ಯಾಂಕ್‌ನವರು ಜಪ್ತಿ ಮಾಡಿ ತಂದಿಟ್ಟಿದ್ದ ವಸ್ತುಗಳನ್ನು ಮರುಜಪ್ತಿ ಮಾಡಿಕೊಂಡ ಘಟನೆ ನಡೆಯಿತು.ಗುರುವಾರ ಬೆಳಿಗ್ಗೆ ಶಿವಮೊಗ್ಗ ಸಮೀಪದ ಸೂಳೆಬೈಲಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಲಗ್ಗೆ ಇಟ್ಟ ರೈತರು, ಟ್ರ್ಯಾಕ್ಟರ್‌ನ್ನು ಮರುಜಪ್ತಿ ಮಾಡಿಕೊಂಡರು.ಸೊರಬ ತಾಲ್ಲೂಕಿನ ತಲ್ಲೂರಿನ ರೈತ ಶಿವಪ್ಪನಾಯ್ಕ ಅವರ ಮನೆಯಿಂದ ಟ್ರ್ಯಾಕ್ಟರ್ ಜಪ್ತಿ ಮಾಡಲಾಗಿತ್ತು. 2007ರಲ್ಲಿ ತತ್ತೂರಿನ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ` 6 ಲಕ್ಷ  ಸಾಲ ಮಾಡಿ ಶಿವಪ್ಪನಾಯ್ಕ ಅವರು, ಟ್ರ್ಯಾಕ್ಟರ್ ಖರೀದಿಸಿದ್ದರು. ಇದರಲ್ಲಿ ಒಂದು ಕಂತನ್ನು ಮರುಪಾವತಿಯೂ ಮಾಡಿದ್ದರು. ಆದರೆ, ಉಳಿದ ಸಾಲವನ್ನು ನಿರೀಕ್ಷೆಯಂತೆ ಬೆಳೆ ಮತ್ತು ಬೆಳೆಗೆ ಬೆಲೆ ಸಿಗದಿದ್ದರಿಂದ ಸಾಲ ಪಾವತಿಸಲು ಆಗಿರಲಿಲ್ಲ. ಆದ್ದರಿಂದ ಬ್ಯಾಂಕ್, ಖಾಸಗಿ ಏಜೆನ್ಸಿ ಮೂಲಕ ಟ್ರ್ಯಾಕ್ಟರ್ ಜಪ್ತಿ ಮಾಡಿ, ಸೂಳೆಬೈಲಿನ ಅಜ್ಞಾತ ಸ್ಥಳದಲ್ಲಿ ಇಟ್ಟಿತ್ತು.ಈ ಬಗ್ಗೆ ರೈತ ಸಂಘದ ಗಮನಕ್ಕೆ ತರಲಾಯಿತು. ಜಪ್ತಿ ಮಾಡಿಕೊಂಡ ಟ್ರ್ಯಾಕ್ಟರ್‌ನ್ನು ರೈತರು ಮರುಜಪ್ತಿ ಮಾಡಿಕೊಂಡು, ಶಿವಪ್ಪನಾಯ್ಕ ಅವರಿಗೆ ಒಪ್ಪಿಸಿದರು.ರೈತ ಇಂದು ಸಾಲ ಮರುಪಾವತಿಸಲು ಆಗದಿದ್ದರೆ ಅದಕ್ಕೆ ಸರ್ಕಾರವೇ ನೇರ ಹೊಣೆ. ಸರಿಯಾದ ಬೆಲೆ ಕೊಡದ ಹೊರತು ಯಾವ ರೀತಿಯ ಸಾಲ ಕೊಟ್ಟರೂ ಅದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸುಪ್ರೀಂಕೋರ್ಟಿನ ಆದೇಶವನ್ನು ಧಿಕ್ಕರಿಸಿ ರೈತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಆರೋಪಿಸಿದರು.

ಮಂಜುನಾಥಗೌಡ, ವೈ.ಜಿ. ಮಲ್ಲಿಕಾರ್ಜುನ್, ಡಿ.ಎಲ್. ಚಂದ್ರಪ್ಪ, ವಸಂತ್‌ಕುಮಾರ್, ಸತೀಶ್, ರೇಣುಕಮ್ಮ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry