ಸೋಮವಾರ, ಮೇ 16, 2022
28 °C

ರೈತರಿಂದ ಧರಣಿ: ತಟಸ್ಥ ಮತದಾನ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಜಿಂಕೆಗಳ ಹಾವಳಿ ತಪ್ಪಿಸಿ, ಫಸಲನ್ನು ಉಳಿಸುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಜಿಂಕೆ ವನ ನಿರ್ಮಾಣಕ್ಕೆ ಮುಂಬರುವ ಮುಂಗಡಪತ್ರದಲ್ಲಿ ಅಗತ್ಯ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿ ರೈತರು ಶುಕ್ರವಾರ ಇಲ್ಲಿನ ಜಿಲ್ಲಾಡಳಿತ ಭವನದ ಮುಂದೆ ಧರಣಿ ನಡೆಸಿದರು.ಜಿಂಕೆ ಹಾವಳಿ ತಡೆಗಟ್ಟುವ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಿದ ಜಿಲ್ಲೆಯ ಕೊಪ್ಪಳ, ಯಲಬುರ್ಗಾ ತಾಲ್ಲೂಕುಗಳ ಹಾಗೂ ನೆರೆಯ ಗದಗ ತಾಲ್ಲೂಕಿನ ರೈತರು, ಜಿಂಕೆ ವನ ನಿರ್ಮಾಣಕ್ಕಾಗಿ ಅಗತ್ಯ ಅನುದಾನ ನೀಡದೇ ಇದ್ದ ಪಕ್ಷದಲ್ಲಿ ಮುಂಬರುವ ಚುನವಾಣೆ ಸಂದರ್ಭದಲ್ಲಿ ತಟಸ್ಥ ಮತದಾನಕ್ಕೆ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ಕೊಪ್ಪಳ ಮತ್ತು ಯಲಬುರ್ಗಾ ತಾಲ್ಲೂಕುಗಳ ಸುಮಾರು 20ಕ್ಕೂ ಅಧಿಕ ಗ್ರಾಮಗಳಲ್ಲಿ ಜಿಂಕೆಗಳ ಹಾವಳಿ ವಿಪರೀತವಾಗಿದ್ದು, ಪ್ರತಿವರ್ಷ ಜಿಂಕೆಗಳ ದಾಳಿಗೆ ಬೆಳೆ ತುತ್ತಾಗುತ್ತಿದ್ದು ರೈತರು ನಷ್ಟ ಅನುಭವಿಸಬೇಕಾಗಿದೆ ಎಂದು ದೂರಿದರು.ಈ ಹಿನ್ನೆಲೆಯ್ಲಲ್ಲಿ ಜಿಂಕೆ ವನ ನಿರ್ಮಿಸಬೇಕು. ಇದರಿಂದ ಒಂದೆಡೆ ಬೆಳೆಗಳ ರಕ್ಷಣೆಯಾದರೆ, ಮತ್ತೊಂದೆಡೆ ಪ್ರವಾಸೋದ್ಯಮಕ್ಕೆ ಇಂಬು ನೀಡಿದಂತಾಗುತ್ತದೆ ಎಂಬ ದೃಷ್ಟಿಯಿಂದ ಹೋರಾಟ ಮಾಡಲಾಯಿತು. ಈ ಹೋರಾಟಕ್ಕೆ ಸ್ಪಂದಿಸಿ ಸರ್ಕಾರ 2010-11ನೇ ಸಾಲಿನಲ್ಲಿ ಕೇವಲ 50 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿ ಕೈತೊಳೆದುಕೊಂಡಿತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಈಗ ಏಕಾಏಕಿ ಜಿಂಕೆ ವನ ಪ್ರಸ್ತಾವನೆಯನ್ನೇ ಕೈಬಿಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ ಅವರು ಮಾತನಾಡಿ, ಈ ಭಾಗದ ರೈತರ ಹಿತದೃಷ್ಟಿಯಿಂದ ಜಿಂಕೆ ವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದರು. ತಪ್ಪಿದಲ್ಲಿ ಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.ಸಮಿತಿಯ ಅಧ್ಯಕ್ಷ ಜಗದೀಶಗೌಡ ತೆಗ್ಗಿನಮನಿ ಮಾತನಾಡಿ, ಯಲಬುರ್ಗಾ ತಾಲ್ಲೂಕಿನಲ್ಲಿ ಶೀಘ್ರವೇ ಜಿಂಕೆ ವನ ನಿರ್ಮಾಣ ಮಾಡುವ ಮೂಲಕ ಜಿಂಕೆಗಳ ಹಾವಳಿಗೆ ಕಡಿವಾಣ ಹಾಕಬೇಕು. ಇದಕ್ಕಾಗಿ ಪ್ರಸಕ್ತ ಮುಂಗಡಪತ್ರದಲ್ಲಿ ಪೂರ್ಣಪ್ರಮಾಣದ ಹಣ ಬಿಡುಗಡೆಗೆ ಕ್ರಮಕೈಗೊಳ್ಳಬೇಕು. ಜಿಂಕೆವನ ನಿರ್ಮಾಣ ಕುರಿತಂತೆ ಕೇವಲ ಅಧಿಕಾರಿಗಳೊಂದಿಗೆ ಚರ್ಚೆ ಮಾಡದೇ, ಸಂತ್ರಸ್ತ ರೈತರೊಂದಿಗೂ ಚರ್ಚಿಸಬೇಕು ಎಂದೂ ಅವರು ಒತ್ತಾಯಿಸಿದರು.ಒಂದು ವೇಳೆ ಈ ಕಾರ್ಯಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಫಂದಿಸದಿದ್ದರೆ, ಭವಿಷ್ಯದಲ್ಲಿ ಬರುವ ಎಲ್ಲಾ ಚುನಾವಣೆಗಳಲ್ಲಿ ಈ ಭಾಗದ ರೈತರು ತಟಸ್ಥ ಮತದಾನ ಮಾಡುವ ಮೂಲಕ ತಮಗೆ ಸ್ಫಂದಿಸದ ಮುಖಂಡರಿಗೆ ಉತ್ತರ ನೀಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.ರೈತ ಮುಖಂಡರಾದ ಮಲ್ಲಿಕಾರ್ಜುನ ಗಡಗಿ, ಮದ್ದಾನಯ್ಯ ಹಿರೇಮಠ, ವಿರೂಪಾಕ್ಷಗೌಡ ಮರಿಗೌಡರ, ಜಿ.ಎಸ್.ಕಮತರ, ಯಮನೂರಪ್ಪ ಬಾರಕೇರ ಹಾಗೂ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.