ರೈತರಿಂದ ಬೆಸ್ಕಾಂ ಲೋಪ ಬಹಿರಂಗ

7

ರೈತರಿಂದ ಬೆಸ್ಕಾಂ ಲೋಪ ಬಹಿರಂಗ

Published:
Updated:

ತಿಪಟೂರು: ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಮಲ್ಲಿಪಟ್ಟಣ ಗ್ರಾಮದ ಕುಡಿಯುವ ನೀರು ಮತ್ತು ಕೆಲ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸುವ ಪರಿವರ್ತಕ ಬದಲಿಸುವಲ್ಲಿ ಅಧಿಕಾರಿಗಳು ತೋರಿರುವ ಅಜ್ಞಾನ ಮತ್ತು ಅವ್ಯವಹಾರವನ್ನು ರೈತರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಪಡೆದು ಬಹಿರಂಗ ಪಡಿಸಿದ್ದಾರೆ.ಮಲ್ಲಿಪಟ್ಟಣ ಗ್ರಾಮದ ಕುಡಿಯುವ ನೀರಿನ ಮತ್ತು ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸುವ ಟ್ರಾನ್ಸ್‌ಫಾರ್ಮರ್ ಮೂರು ತಿಂಗಳ ಹಿಂದೆ ಕೆಟ್ಟಿತ್ತು. ಕುಡಿಯುವ ನೀರಿಗೆ ಮತ್ತು ರೈತರ ಕೃಷಿ ಕೆಲಸಕ್ಕೆ ತೊಂದರೆಯಾಗಿತ್ತು. ಆ ವ್ಯಾಪ್ತಿಯ ಲೈನ್‌ಮೆನ್ ರವೀಶ್ ಆ ಪರಿವರ್ತಕ ಸುಟ್ಟಿರುವುದರಿಂದ ಹೊಸದನ್ನು ತಂದಿಡಬೇಕು ಎಂದು ಹೇಳಿ ದಿನ ಕಳೆದರು. ಕಡೆಗೆ 29.08.2011ರಂದು ಆ ಸ್ಥಳಕ್ಕೆ ಹೊಸ ಟ್ರಾನ್ಸ್‌ಫಾರ್ಮರ್ ತರಲಾಯಿತು.ಮಾಮೂಲಿಯಂತೆ ವಿದ್ಯುತ್ ಪೂರೈಕೆ ದೊರೆಯಿತು. ಆದರೆ ಕಾರ್ಯನಿರ್ವಹಣೆಯಲ್ಲಿದ್ದ ಆ ಟ್ರಾನ್ಸ್‌ಫಾರ್ಮರ್ ನೋಡಿದ ಆ ಗ್ರಾಮದ ರೈತ ಎಂ.ಬಿ.ಲೋಕೇಶ್ ಅವರಿಗೆ ಆಶ್ಚರ್ಯ ಕಾಯ್ದಿತ್ತು. ಹಳೆ ಪೆಟ್ಟಿಗೆಯಿಂದಲೇ (ಸಂಖ್ಯೆ 3518) ಸಂಪರ್ಕ ಕೊಟ್ಟು, ಹೊಸದಾಗಿ ತಂದಿದ್ದನ್ನು ಅಲ್ಲಿಯೇ ಕೆಳಗಿಡಲಾಗಿತ್ತು. ಹಾಗಿದ್ದರೆ ಹಳೆಯದು ಕೆಟ್ಟಿರಲಿಲ್ಲವೇ? ಲೈನ್‌ಮೆನ್ ಸರಿಯಾಗಿ ಪರೀಕ್ಷಿಸದೆ ಇಲಾಖೆಗೆ ತಪ್ಪು ವರದಿ ನೀಡಿದ್ದಲ್ಲದೆ ಗ್ರಾಮಸ್ಥರು ಸುಮ್ಮನೆ ಎರಡು ತಿಂಗಳು ತೊಂದರೆ ಅನುಭವಿಸುವಂತೆ ಮಾಡಿದ್ದಾರೆ ಎಂಬ ಅನುಮಾನದಿಂದ ಅವರು ಬೆಸ್ಕಾಂಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರು.ಮಾಹಿತಿ ನೀಡಿರುವ ಅಧಿಕಾರಿಗಳು, ಪೆಟ್ಟಿಗೆ ಸುಟ್ಟಿರುವ ವಿಷಯವನ್ನು ಲೈನ್‌ಮೆನ್ 18.08.2011ರಂದು ಕಚೇರಿಗೆ ದೂರವಾಣಿ ಮೂಲಕ (ಲಿಖಿತವಾಗಿ ಮಾಹಿತಿ ನೀಡಿಲ್ಲ ಎಂದೂ ನಮೂದಿಸಲಾಗಿದೆ) ಹೇಳಿದ್ದರು. ಸರ್ಕಾರಿ ಪ್ರಕ್ರಿಯೆ ಪೂರೈಸಿ 67 ಸಾವಿರ ರೂಪಾಯಿ ವೆಚ್ಚದ 63 ಕೆ.ವಿ ಸಾಮರ್ಥ್ಯದ ಹೊಸ  ಪರಿವರ್ತಕವನ್ನು (ಸಂಖ್ಯೆ 0219402887) 29.08.2011ರಂದು ಕೊಡಲಾಗಿದೆ ಎಂದು ತಿಳಿಸಿದ್ದಾರೆ. ಆ ಮಾಹಿತಿ ತಿಳಿದ ಲೋಕೇಶ್ ವಸ್ತುಸ್ಥಿತಿ ತೆರೆದಿಟ್ಟಿದ್ದಾರೆ. ಹೊಸದೆಂದು ತಂದಿದ್ದ ಪರಿವರ್ತಕ ಹಾಕದೆ ಹಳೆಯದ್ದರಿಂದಲೇ ಸಂಪರ್ಕ ಕೊಡಲಾಗಿದೆ ಮತ್ತು ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹಾಗಿದ್ದರೆ ಸುಮಾರು 67 ಸಾವಿರ ರೂಪಾಯಿ ವೆಚ್ಚದ ಹೊಸ ಪೆಟ್ಟಿಗೆ ತಂದಿದ್ದಾದರೂ ಏಕೆ ಮತ್ತು ಅದನ್ನೇಕೆ ವ್ಯರ್ಥ ಸಾಮಗ್ರಿಯಂತೆ ಅಲ್ಲಿಯೇ ನೆಲದಲ್ಲಿ ಇಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಲ್ಲದೆ ಸರ್ಕಾರದ ಬೊಕ್ಕಸಕ್ಕೆ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿ ಗಳು ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಹೀಗೆ ಸುಳ್ಳು ಲೆಕ್ಕ ತೋರಿಸಿ ಪೆಟ್ಟಿಗೆ ಮಾರಿಕೊಳ್ಳುವ ಹುನ್ನಾರ ಅಡಗಿದೆಯೇ ಎಂದು ಅನುಮಾನಿಸುತ್ತಾರೆ. ಈ ಬಗ್ಗೆ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೇಲಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry