ರೈತರಿಂದ ಸಂಚಾರ ತಡೆ

ಭಾನುವಾರ, ಜೂಲೈ 21, 2019
22 °C
ವನ್ಯಜೀವಿಗಳಿಂದ ಆಗುತ್ತಿರುವ ಹಾನಿ ತಡೆಗಟ್ಟಲು ಒತ್ತಾಯ

ರೈತರಿಂದ ಸಂಚಾರ ತಡೆ

Published:
Updated:

ರಾಣೆಬೆನ್ನೂರು: ವನ್ಯಜೀವಿಗಳಿಂದ ಆಗುತ್ತಿರುವ ಹಾನಿಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸೋಮವಾರ ಜಾನುವಾರುಗಳ ಸಮೇತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆ ನಡೆಸಿದರು.



ಜಿಲ್ಲಾ ರೈತಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಜಿಂಕೆ, ಕಾಡುಹಂದಿ ಮುಂತಾದ ವನ್ಯಜೀವಿಗಳ ಹಾವಳಿ ಹೆಚ್ಚಾಗಿದ್ದು ರೈತರು ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಕಳೆದ ಎರಡ್ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗದೆ ಬರಗಾಲದ ಬವಣೆಯಲ್ಲಿ ನಲುಗಿರುವ ರೈತರು ಈ ಸಲವಾದರೂ ಉತ್ತಮ ಫಸಲು ಬೆಳೆಯುವ ಆಶಾಭಾವನೆ ಹೊಂದಿದ್ದರು. ಆದರೆ ಬಿತ್ತನೆ ಮಾಡಿದ ಕೆಲವೇ ದಿನಗಳಲ್ಲಿ ಬೀಜ ಮೊಳಕೆಯೊಡುವ ಪೂರ್ವದಲ್ಲಿಯೇ ಜಿಂಕೆಗಳು ಹೊಲಗಳಿಗೆ ದಾಂಗುಡಿಯಿಟ್ಟು ಬೀಜಗಳನ್ನು ಕಿತ್ತು ತಿನ್ನುತ್ತಿವೆ ಎಂದು ದೂರಿದರು.



ಇನ್ನು ಪ್ರಯಾಸಪಟ್ಟು ಜಿಂಕೆಗಳು ಬಾರದಂತೆ ಜಾಗೃತಿ ವಹಿಸಿದರೂ ಫಸಲು ಬಂದ ಸಮಯದಲ್ಲಿ ಪುನಾ ದಾಳಿ ಮಾಡುವ ಜಿಂಕೆ ಹಾಗೂ ಕಾಡುಹಂದಿಗಳು ರೈತರ ಫಸಲನ್ನು ಸಂಪೂರ್ಣ ಹಾಳು ಮಾಡುತ್ತಿವೆ. ಹಾಗೊಂದು ವೇಳೆ ಅರಣ್ಯಾಧಿಕಾರಿಗಳಿಗೆ ಫಸಲು ನಾಶವಾದ ಕುರಿತು ದೂರು ನೀಡಿದರೂ ಪರಿಹಾರ ರೂಪದಲ್ಲಿ 500 ರೂಪಾಯಿ ನೀಡಲಾಗುತ್ತದೆ ಎಂದು ಖೇದ ವ್ಯಕ್ತಪಡಿಸಿದರು.



ನಮಗೆ ಯಾವುದೇ ಕಾರಣಕ್ಕೂ ಪರಿಹಾರ ಬೇಡ ಅದರ ಬದಲು ಅರಣ್ಯ ಇಲಾಖೆ ವನ್ಯಜೀವಿಗಳನ್ನು  ತಮ್ಮ ವಶಕ್ಕೆ ಪಡೆದುಕೊಳ್ಳಬೇಕು ಎಂದು ಕಳೆದ ಮೂರು ವರ್ಷಗಳಿಂದ ಆಗ್ರಹಿಸಲಾಗುತ್ತಿದ್ದರೂ ಇಂದಿನವರೆಗೂ ಯಾವುದೇ ಪ್ರಯೋಜನಾಗಿಲ್ಲ ಎಂದರು.



ನಗರಸಭಾ ಸದಸ್ಯರಾದ ಶೇಖಪ್ಪ ಹೊಸಗೌಡ್ರ, ವೀರಪ್ಪ ಮಾಕನೂರ, ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ, ಮಂಜು ಹೊನ್ನಳ್ಳಿ, ಬಸವರಾಜ ಮಜ್ಜಗಿ, ಅರುಣ ಗೂಳಣ್ಣಣವರ, ಎಂ.ಬಿ.ಮಾಳಗಿ, ಬಿ.ಎಸ್. ಬಣಕಾರ, ಮಲ್ಲೆೀಶ ಕಿಚಡಿ, ಕೆ.ಎಸ್. ಗೂಳಣ್ಣಣವರ, ಜಿ.ಬಿ.ಮಜ್ಜಗಿ, ಗಜೇಂದ್ರ ಗೂಳಣ್ಣನವರ, ಪ್ರಕಾಶ ಬುರಡಿಕಟ್ಟಿ, ಎಸ್.ಸಿ.ಕೊಪ್ಪದ,ಹನುಮಂತಪ್ಪ ಕಂಬಳಿ, ಹೇಮಣ್ಣ ಮಾಕನೂರ, ಪ್ರಭು ಗೂಳಣ್ಣನವರ, ಪಿ.ಎನ್. ಕೊಪ್ಪದ, ರಾಮಪ್ಪ ಕಾಟಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



ರೈತರ ಪ್ರತಿಭಟನೆಯ ತೀವ್ರತೆಯ ಅರಿತು ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯ ರಕ್ಷಣಾಧಿಕಾರಿಗಳು ವನ್ಯಜೀವಿಗಳ ಹಾವಳಿ ತಡೆಗಟ್ಟುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಕ್ಕೆ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry