`ರೈತರಿಗೆ ಇನ್ನಷ್ಟು ಸಹಾಯ ಅಸಾಧ್ಯ'

7
ಮಾರುಕಟ್ಟೆ ಕಂಡುಕೊಳ್ಳುವಲ್ಲಿ ಕೆಎಂಎಫ್ ವಿಫಲ: ಯೋಗೇಶ್ವರ್

`ರೈತರಿಗೆ ಇನ್ನಷ್ಟು ಸಹಾಯ ಅಸಾಧ್ಯ'

Published:
Updated:

ಮಂಡ್ಯ: ಹೈನುಗಾರಿಕೆಗೆ ಸರ್ಕಾರ ನೀಡಬೇಕಾದಷ್ಟು ಪ್ರೋತ್ಸಾಹ ನೀಡಿಯಾಗಿದೆ. ಇನ್ನು ಮುಂದೆ ರೈತರು, ಸರ್ಕಾರದಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.ಹಾಲಿನ ದರ ಇಳಿಕೆಯಿಂದ ತೊಂದರೆಗೆ ಒಳಗಾಗಿರುವ ರೈತರಿಗಾಗಿ ಸರ್ಕಾರ ಏನು ಮಾಡಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಪ್ರೋತ್ಸಾಹ ಧನ ನೀಡುವುದು ಸೇರಿದಂತೆ ವಿವಿಧ ಕ್ರಮ ಕೈಗೊಂಡಿದೆ. ಇನ್ನೂ ಹೆಚ್ಚಿನ ನೆರವು ನೀಡಲು ಸಾಧ್ಯವಿಲ್ಲ ಎಂದರು.ಕರ್ನಾಟಕ ಹಾಲು ಮಹಾಮಂಡಳ ಹಾಗೂ ರಾಜ್ಯ ಸರ್ಕಾರವು, ಹಾಲಿನ ಉತ್ಪನ್ನಕ್ಕೆ ತಕ್ಕಂತೆ ಮಾರುಕಟ್ಟೆ ಕಂಡುಕೊಳ್ಳುವಲ್ಲಿ ವಿಫಲವಾಗಿವೆ. ಉತ್ಪಾದನೆಯ ಹೆಚ್ಚಳಕ್ಕೆ ನೀಡದಷ್ಟೇ ಒತ್ತನ್ನು ಮಾರುಕಟ್ಟೆ ಕಂಡುಕೊಳ್ಳಲು ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.ಅಂಗನವಾಡಿ ಹಾಗೂ ಬಿಸಿಯೂಟದ ಶಾಲಾ ಮಕ್ಕಳಿಗೆ ಹಾಲು ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಮಕ್ಕಳಲ್ಲಿ ಉಂಟಾಗಿರುವ ಪೌಷ್ಟಿಕಾಂಶದ ಕೊರತೆ ನೀಗಿಸಬಹುದು ಎಂದರು.ಹಾಲಿನ ಪುಡಿ ಆಮದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದನ್ನು ತಡೆಯಬೇಕು. ಆಗ ಮಾತ್ರ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಹಾಲಿನ ಪುಡಿ ಹಾಗೂ ಬೆಣ್ಣೆಗೆ ಮಾರುಕಟ್ಟೆ ಲಭಿಸಲಿದೆ ಎಂದು ಹೇಳಿದರು.

ಮನ್‌ಮುಲ್ ಅಧ್ಯಕ್ಷ ಎಂ.ಬಿ. ಹರೀಶ್ ಮಾತನಾಡಿ, ಇಲ್ಲಿಯವರೆಗಿನ ರೂ.30 ಕೋಟಿ ರೂಪಾಯಿಯಷ್ಟು ಹಣ ರೈತರಿಗೆ ಬಾಕಿ ನೀಡುವುದಿದೆ. ಸಾಲ ತೆಗೆದುಕೊಳ್ಳುವ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲಿ ಬಿಲ್ ಪಾವತಿ ಮಾಡಲಾಗುವುದು ಎಂದರು.ರಾಜ್ಯ ಸರ್ಕಾರವು ಒಕ್ಕೂಟಗಳ ನೆರವಿಗೆ ಬಂದಿದೆ. ಯಾವುದೇ ಲಾಭ-ನಷ್ಟವಿಲ್ಲದೇ ಒಕ್ಕೂಟ ನಡೆಸಲಾಗುತ್ತಿತ್ತು. ಶೀಘ್ರವೇ ಲಾಭದ ಹಾದಿ ಕಂಡುಕೊಳ್ಳಲಿದೆ. ಆ ಮೇಲೆ ಹಾಲಿನ ಬೆಲೆ ಹೆಚ್ಚಿಸುವ ಬಗೆಗೆ ಚಿಂತನೆ ನಡೆಸಲಾಗುವುದು ಎಂದರು.ಶಾಸಕ ಅಶ್ವತ್ಥ ನಾರಾಯಣ, ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಸ್ವಾಮಿ ಇದ್ದರು.

ಇದಕ್ಕೂ ಮೊದಲು ಸಿ.ಪಿ. ಯೋಗೇಶ್ವರ್ ಅವರು ಮಂಗಳವಾರ, ಗೆಜ್ಜಲಗೆರೆ ಗ್ರಾಮದಲ್ಲಿ ನಿರ್ಮಿಸಲಾಗಿರುವ ಭಾರತ ನಿರ್ಮಾಣ ರಾಜೀವಗಾಂಧಿ ಸೇವಾ ಕೇಂದ್ರ ಹಾಗೂ ಸಾಮೂಹಿಕ ಶೌಚಾಲಯಗಳನ್ನು ಉದ್ಘಾಟಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರಚಾರ್, ಉಪಾಧ್ಯಕ್ಷೆ ನಾಗರತ್ನ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ. ಮಹೇಶ್, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಸಿ. ಜಯಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry