ರೈತರಿಗೆ ಇನ್ನೂ ತಲುಪದ ನೀರು

7

ರೈತರಿಗೆ ಇನ್ನೂ ತಲುಪದ ನೀರು

Published:
Updated:
ರೈತರಿಗೆ ಇನ್ನೂ ತಲುಪದ ನೀರು

ಯಾದಗಿರಿ: ಜಿಲ್ಲೆಯಲ್ಲಿ ಎರಡು ನದಿಗಳು ಹರಿದಿದ್ದರೂ, ಯಾದಗಿರಿ ಮತಕ್ಷೇತ್ರದ ರೈತರ ಬವಣೆ ಮಾತ್ರ ಮುಗಿಯುತ್ತಿಲ್ಲ. ಕಾಲುವೆಗಳಿದ್ದರೂ, ನೀರು ಹರಿಯುತ್ತಿಲ್ಲ. ರೈತರ ಕೂಗಿಗೆ ಯಾವ ಸ್ಪಂದನೆಯೂ ಸಿಗುತ್ತಿಲ್ಲ.ಬರಗಾಲದ ಛಾಯೆಯಲ್ಲಿರುವ ರೈತರಿಗೆ ಆಸರೆ ಆಗಬೇಕಿದ್ದ ನೀರಾವರಿ ಯೋಜನೆಯು ವ್ಯರ್ಥವಾಗಿ ನಿಂತಿದೆ. ಇದೀಗ ರೈತರ ಬವಣೆ ನಿವಾರಣೆಗೆ ಜಿಲ್ಲಾ ಪಂಚಾಯಿತಿ ಸದಸ್ಯರೇ ಹೋರಾಟಕ್ಕೆ ಇಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಕೃಷ್ಣಾ ಮೇಲ್ದಂಡೆ ಯೋಜನೆಯ ವಿತರಣಾ ಕಾಲುವೆಗಳಲ್ಲಿ ಹೂಳು ತುಂಬಿರುವುದು ಹಾಗೂ ಹದಗೆಟ್ಟು ಹೋಗಿರುವುದರಿಂದ ವಡಗೇರಾ ಹೋಬಳಿ ವ್ಯಾಪ್ತಿಯ ರೈತರಿಗೆ ಕಾಲುವೆಯ ನೀರು ಗಗನ ಕುಸುಮವಾಗಿದೆ. ಈ ಭಾಗದಲ್ಲಿ ಯಾವುದೇ ಕೆರೆಗಳೂ ಇಲ್ಲದಿರುವುದರಿಂದ ರೈತರು, ಕಾಲುವೆಯ ನೀರಿನ ಮೇಲೆಯೇ ಅವಲಂಬಿತರಾಗಬೇಕಾಗಿದೆ. ಆದರೆ ಬೀಜ ಬಿತ್ತಿ ತಿಂಗಳು ಕಳೆದರೂ, ಅತ್ತ ಮಳೆಯೂ ಇಲ್ಲ, ಇತ್ತ ಕಾಲುವೆಯ ನೀರು ಇಲ್ಲದಂತಾಗಿದೆ. ಕಾಲುವೆಯ ಕೊನೆ ಭಾಗದ ರೈತರು, ಬಿತ್ತನೆ ಮಾಡಿದ ಬೀಜದ ಹಣವಾದರೂ ಮರಳಿ ಬಂದರೆ ಸಾಕು ಎನ್ನುವ ಚಿಂತೆಯಲ್ಲಿ ಮುಳುಗುವಂತಾಗಿದೆ.ಈ ಬಗ್ಗೆ ಪ್ರತಿ ಬಾರಿಯೂ ಹೋರಾಟದ ಹಾದಿಯೇ ಅನಿವಾರ್ಯವಾಗುತ್ತಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಒಂದೆಡೆಯಾದರೆ, ರೈತರ ನೋವಿಗೆ ಸ್ಪಂದಿಸದ ಜನಪ್ರತಿನಿಧಿಗಳಿಂದಾಗಿ ಎಷ್ಟೇ ಹೋರಾಟ ಮಾಡಿದರೂ, ಶಾಶ್ವತ ಪರಿಹಾರ ಮಾತ್ರ ದೊರೆಯುತ್ತಿಲ್ಲ ಎಂದು ನೇತಾಜಿ ಯುವ ಸೇನೆಯ ಅಧ್ಯಕ್ಷ ನಿಂಗು ಜಡಿ ದೂರುತ್ತಾರೆ.ಬಳಕೆ ಆಗದ ನೀರು: ರಾಜ್ಯವು ತನ್ನ ಪಾಲಿನ ನೀರು ಬಳಕೆ ಮಾಡಿಕೊಳ್ಳಲು ಕಾನೂನು ಸಮರವನ್ನು ನಡೆಸುತ್ತಿದ್ದರೂ, ಇತ್ತ ನೀರು ದೊರೆಯದೇ ರೈತರು ಪರಿತಪಿಸುವಂತಾಗಿದೆ. ಬಚಾವತ್ ತೀರ್ಪಿನ ಪ್ರಕಾರ ರಾಜ್ಯದ ಪಾಲಿನ ನೀರು ಬಳಕೆ ಮಾಡಿಕೊಳ್ಳುವ ಉದ್ದೇಶದಿಂದಲೇ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದರೆ ಯೋಜನೆಯ ಕಾಮಗಾರಿ ಮುಗಿದು, ಎಲ್ಲೆಡೆಯೂ ಕಾಲುವೆಗಳನ್ನು ನಿರ್ಮಿಸಿದ್ದರೂ, ಅವುಗಳ ಪ್ರಯೋಜನ ಮಾತ್ರ ರೈತರಿಗೆ ದೊರಕದಂತಾಗಿದೆ.ಬಸವಸಾಗರ ಜಲಾಶಯದಿಂದ ಸುರಪುರ ಹಾಗೂ ಶಹಾಪುರ ತಾಲ್ಲೂಕಿನ ಬಹುತೇಕ ಪ್ರದೇಶ ನೀರಾವರಿ ಸೌಲಭ್ಯ ಸಿಕ್ಕಿದೆ. ಆದರೆ ಯಾದಗಿರಿ ಮತಕ್ಷೇತ್ರದಲ್ಲಿ ಬರುವ ಶಹಾಪುರ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ನಿರ್ಮಿಸಿದ ವಿತರಣಾ ಉಪ ಕಾಲುವೆಗಳು ಹೂಳು ತುಂಬಿ, ಜಾಲಿ ಮರಗಳು ಬೆಳೆದು ತಮ್ಮ ಸ್ವರೂಪವನ್ನು ಕಳೆದುಕೊಂಡಿವೆ. ಇನ್ನು ಕೆಲವೆಡೆ ಕಾಲುವೆಗಳಿದ್ದರೂ, ನೀರು ಹರಿಯದಂತಾಗಿದೆ.ವಿತರಣಾ ಕಾಲುವೆಯ 21, 22, 23, 23 ಹಾಗೂ 25 ನೇ ಉಪಕಾಲುವೆಗಳ ದುರಸ್ತಿ ಮಾಡಿಸಿ, ಕೊನೆಯಂಚಿನ ರೈತರಿಗೆ ನೀರು ಹರಿಸುವಂತೆ ಅನೇಕ ಬಾರಿ ಹೋರಾಟ ಮಾಡಿದರೂ, ಇದಕ್ಕೆ ಸ್ಪಂದನೆ ಮಾತ್ರ ಸಿಗುತ್ತಿಲ್ಲ. ಪ್ರತಿ ಬೇಸಿಗೆಯಲ್ಲಿ ದುರಸ್ತಿ ಮಾಡಲು ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದ್ದರೂ, ಅದು ಎಲ್ಲಿ ಖರ್ಚಾಗುತ್ತದೆ ಎಂಬುದು ಮಾತ್ರ ಈ ಭಾಗದ ರೈತರಿಗೆ ತಿಳಿಯುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ.ಉಪವಾಸ ಸತ್ಯಾಗ್ರಹ: ಕಾಲುವೆ ಅಂಚಿನ ರೈತರಿಗೆ ನೀರು ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಸದಸ್ಯರೇ ಇದೀಗ ಹೋರಾಟಕ್ಕೆ ಇಳಿದಿದ್ದು, ಶನಿವಾರ (ಅ.5)ದಿಂದ ಉಪವಾಸ ಸತ್ಯಾಗ್ರಹ ಆರಂಭಿಸಲು ಮುಂದಾಗಿದೆ.ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್, ಸದಸ್ಯರಾದ ಶಂಕರಗೌಡ, ಬಸವರಾಜ ಖಂಡ್ರೆ, ಮಲ್ಲಮ್ಮ ದೋರನಳ್ಳಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ರೈತರು, ಕೃಷ್ಣಾ ಭಾಗ್ಯ ಜಲ ನಿಗಮದ ಖಾನಾಪುರ ಕಚೇರಿ ಎದುರು ಉಪವಾಸ ಆರಂಭಿಸಲಿದ್ದಾರೆ.ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ಸಿಗುವವರೆ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೋರಾಟ ನೇತೃತ್ವ ವಹಿಸಿರುವ ದೇವರಾಜ ನಾಯಕ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ರೈತರಿಗೆ ವರದಾನವಾಗಬೇಕಿದ್ದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳು, ಶಾಪವಾಗಿ ಪರಿಣಮಿಸಿದ್ದು, ರೈತರು ಹೋರಾಟಕ್ಕೆ ಮುಂದಾಗುವಂತೆ ಮಾಡಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದು ರೈತರ ಮನವಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry