ಸೋಮವಾರ, ಮೇ 17, 2021
22 °C
ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಭೂಮಿ

`ರೈತರಿಗೆ ಇನ್ನೂ ಸಿಗದ ಪರಿಹಾರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ:  `ರಾಜ್ಯ ಸರ್ಕಾರ 1994ರಲ್ಲಿ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರೈತರ ಫಲವತ್ತಾದ ಭೂಮಿಯನ್ನು ವಶಕ್ಕೆ ಪಡೆದಿದ್ದು, ಆ ಪೈಕಿ 1,200 ರೈತರಿಗೆ ಇದುವರೆಗೂ ಪರಿಹಾರ ನೀಡಿಲ್ಲ' ಎಂದು ಪ್ರಾಂತ ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ದೂರಿದರು.ತಾಲ್ಲೂಕಿನ ಲಕ್ಷ್ಮೀಪುರದ ಕೋದಂಡರಾಯ ಸ್ವಾಮಿ ದೇವಾಲಯದ ಆವರಣದಲ್ಲಿ ತಾಲ್ಲೂಕು ಪ್ರಾಂತ ರೈತ ಸಂಘದ ಹಮ್ಮಿಕೊಂಡಿದ್ದ ರೈತ ಸಮ್ಮೇಳನದಲ್ಲಿ ಅವರು ಮಾತನಾಡಿದರು.ಈ ಹಿಂದಿನ ಬಿ.ಜೆ.ಪಿ ಸರ್ಕಾರದ ಹಾದಿಯಲ್ಲಿಯೇ ಈಗಿನ ಕಾಂಗ್ರೆಸ್ ಸರ್ಕಾರ ಮುಂದುವರಿಸಿದೆ ಎಂದು ಅವರು ಆರೋಪಿಸಿದರು.ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟ ರೈತರ ಮಕ್ಕಳು ನಿಲ್ದಾಣದಲ್ಲಿರುವ ಶೌಚಾಲಯ ಶುಚಿತ್ವದಲ್ಲಿ ತೊಡಗಿಕೊಂಡಿದ್ದಾರೆ. ಭೂಮಿ ವಶದ ಸಂದರ್ಭದಲ್ಲಿ ನೀಡಿದ್ದ ವಾಗ್ದಾನದಂತೆ ರೈತ ಕುಟುಂಬದ ಸದಸ್ಯರಿಗೆ ಸೂಕ್ತ ಉದ್ಯೋಗ ಮತ್ತು ನಿವೇಶನ ನೀಡಿಲ್ಲ.  ಸರ್ಕಾರ ತಾಲ್ಲೂಕಿನ 28 ಗ್ರಾಮಗಳ ವ್ಯಾಪ್ತಿಯ 12 ಸಾವಿರ ಎಕರೆ ಭೂಮಿಯನ್ನು ರೈತರಿಂದ ವಶಕ್ಕೆ ಪಡೆಯಲು ಮುಂದಾಗಿದೆ. ಈಗಾಗಲೆ ಎರಡು ಸಾವಿರ ಎಕರೆಯನ್ನು ಮೊದಲ ಹಂತದಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ ಎಂದರು.  ಶ್ರಿಮಂತರಿಗೆ ಬಿ.ಪಿ.ಎಲ್ ಬಡವರಿಗೆ ಎ.ಪಿ.ಎಲ್ ಪಡಿತರ ಚೀಟಿ ನೀಡಲಾಗಿದೆ. ಈ ಗೊಂದಲಗಳಿಗೆ ಬಿ.ಜೆ.ಪಿ ಸರ್ಕಾರ ಕಾರಣ. ಎಲ್ಲಾ ರೀತಿಯ ಪಡಿತರ ಚೀಟಿಗಳನ್ನು ರದ್ದುಗೊಳಿಸಿ ಎಲ್ಲರಿಗೂ ಆಹಾರಧಾನ್ಯ ವಿತರಿಸುವ ವ್ಯವಸ್ಥೆಯಾಗಬೇಕು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದಂತೆ ಜೂನ್ ನಿಂದ ಒಂದು ರೂಪಾಯಿ ಕೆ.ಜಿ ದರದಲ್ಲಿ ಅಕ್ಕಿ ವಿತರಣೆಯಾಗಿಲ್ಲ ಎಂದು ಅವರು ಹೇಳಿದರು.ಪ್ರಾಂತ ರೈತ ಸಂಘ ರಾಜ್ಯ ಜಂಟಿ ಕಾರ್ಯದರ್ಶಿ ವೆಂಕಟಾಚಲಯ್ಯ ಮಾತನಾಡಿ, ರೈತರ ಭೂಮಿ ಉಳಿಯಬೇಕಾಗಿದ್ದು ಹೋರಾಟ ಅನಿವಾರ್ಯ.  ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿದ್ದೆ ಆದಲ್ಲಿ ಸ್ಥಳಿಯ ಜನಜಾನುವಾರುಗಳ ಗತಿಯೇನು? ಸರ್ಕಾರ ನೀಡುವ ಹಣ ಎಷ್ಟು ವರ್ಷ ವೆಚ್ಚಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.ಪ್ರಾಂತ ರೈತ ಸಂಘ ಅಧ್ಯಕ್ಷ ವೀರಣ್ಣ ಮಾತನಾಡಿ, ತಾಲ್ಲೂಕಿನ ರೈತರ ಕಂದಾಯ ದಾಖಲೆಗಳ ತಿದ್ದುಪಡಿಗಳನ್ನು ಸರಿಪಡಿಸುವ ಅಧಿಕಾರ ಉಪವಿಭಾಗಾಧಿಕಾರಿಯಿಂದ ತಹಶೀಲ್ದಾರ್‌ಗೆ ವರ್ಗಾವಣೆ ಮಾಡಬೇಕು. ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆಯಾದ ಡಾ.ಪರಮಶಿವಯ್ಯ ಯೋಜನೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.ಪ್ರಾಂತ ರೈತ ಸಂಘ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ತಾಲ್ಲೂಕು ಪ್ರಾಂತ ರೈತ ಸಂಘ ಗೌರವಾಧ್ಯಕ್ಷ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಮೋಹನ್ ಬಾಬು, ಸಂಪಂಗಿರಾಮಯ್ಯ, ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಹನುಮಂತರಾಯಪ್ಪ, ಕೃಷ್ಣವೇಣಿ, ಸುಮಿತ್ರಾ ಹಾಗೂ ರೈತರು ಮುಂತಾದವರು ಸಮ್ಮೇಳಮದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.