ರೈತರಿಗೆ ಇಷ್ಟ-ಮನೆ ಖರೀದಿ ಕಷ್ಟ

7

ರೈತರಿಗೆ ಇಷ್ಟ-ಮನೆ ಖರೀದಿ ಕಷ್ಟ

Published:
Updated:
ರೈತರಿಗೆ ಇಷ್ಟ-ಮನೆ ಖರೀದಿ ಕಷ್ಟ

ಬರಲಿದೆ ಹೊಸ ಮಸೂದೆ

ಭೂಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಗುರುವಾರವಷ್ಟೆ ಒಪ್ಪಿಗೆ ಸೂಚಿಸಿದೆ. ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ರೈತರಿಗೆ ನೀಡಿದ ಭರವಸೆಗೋ ಅಥವಾ ರೈತರ ಮೇಲಿನ ನಿಜವಾದ ಕಾಳಜಿಯಿಂದಲೋ, 114 ವರ್ಷಗಳಷ್ಟು ಹಳೆಯದಾದ ಭೂ ಸ್ವಾಧೀನ ಕಾಯಿದೆಗೆ ಅಂತೂ ಇಂತೂ ತಿದ್ದುಪಡಿ ತರಲಾಗಿದೆ. `ಭೂಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ ಮಸೂದೆ'ಗೆ ಕೆಲವು ಸಚಿವರ ಬಲವಾದ ವಿರೋಧದ ನಡುವೆಯೂ ಸಂಪುಟದ ಒಪ್ಪಿಗೆ ಸಿಕ್ಕಿದೆ.ಹೆಸರೇ ಸೂಚಿಸುವಂತೆ ಇದರಲ್ಲಿ ಭೂಸ್ವಾಧೀನ ಜತೆಗೆ ಪರಿಹಾರ ಹಾಗೂ ಪುನರ್ವಸತಿಯೂ ಸೇರಿದೆ. ಹಾಗಾಗಿ ಸದ್ಯ ಪರಿಹಾರ ಹಾಗೂ ಪುನರ್ವಸತಿ ಕಡೆಗೆ ಹೆಚ್ಚು ಕೇಂದ್ರೀಕೃತವಾಗಿರುವುದರಿಂದ ಇದು ಸಹಜವಾಗಿಯೇ  ಭೂಮಾಲೀಕರಾದ ರೈತರ ಪಾಲಿಗೆ ಸಿಹಿ ನೀಡುವಂತಿದ್ದರೆ, ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಗೃಹ ನಿರ್ಮಾಣ ಸಹಕಾರಿ ಕ್ಷೇತ್ರಕ್ಕೆ ಕಹಿಯಾಗಿ ಪರಿಣಮಿಸಲಿದೆ ಎಂಬುದು ಪ್ರಸ್ತುತ ಎದ್ದಿರುವ ವಿವಾದ.ಸದ್ಯ ಮಸೂದೆಯಲ್ಲಿರುವ ಪ್ರಮುಖಾಂಶ ಎಂದರೆ ಖಾಸಗಿ ಕಂಪೆನಿಗಳು ಸ್ವಾಧೀನಪಡಿಸಿಕೊಳ್ಳಲು ಬಯಸುವ ಪ್ರದೇಶದಲ್ಲಿ ಶೇ 80ರಷ್ಟು ಜನರ ಒಪ್ಪಿಗೆ ಹಾಗೂ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಅಲ್ಲಿನ ಶೇ 70ರಷ್ಟು ಜನರ ಸಮ್ಮತಿ ಅತ್ಯಗತ್ಯ. ಜತೆಗೆ 5 ವರ್ಷಗಳಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಯೋಜನೆ ಅನುಷ್ಠಾನಗೊಳ್ಳದೆ ಹೋದಲ್ಲಿ ಸ್ವಾಧೀನ ಪ್ರಕ್ರಿಯೆ ರದ್ದುಗೊಳ್ಳುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಅತಿ ದೊಡ್ಡ ಅಂಶವೆಂದರೆ ಪರಿಹಾರ ಧನದ್ದು. ಹಾಲಿ ಇರುವುದಕ್ಕಿಂತ ಅಧಿಕ ಪ್ರಮಾಣದ ದರವನ್ನು ಹೊಸ ಮಸೂದೆಯಲ್ಲಿ ನಿಗದಿಪಡಿಸಿದ್ದು, ಇದು ರಿಯಲ್ ಎಸ್ಟೇಟ್ ವಲಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಗ್ರಾಮಾಂತರ ಪ್ರದೇಶದಲ್ಲಿ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಮಾರುಕಟ್ಟೆ ದರದ ನಾಲ್ಕು ಪಟ್ಟು ಹಾಗೂ ನಗರ ಪ್ರದೇಶವಾದರೆ ಎರಡು ಪಟ್ಟು ಪರಿಹಾರ ಹಣ ನೀಡಬೇಕು ಎಂಬುದು ಉದ್ದೇಶಿತ ಕರಡು ಮಸೂದೆಯಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಅಂಶ. ಅಲ್ಲದೆ, ಇನ್ನೂ ಹೆಚ್ಚುವರಿ ಹಣ ನೀಡಬೇಕೆಂದೂ ಹೇಳಲಾಗಿದೆ. ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಮತ್ತೆ ಬೇರಾರಿಗಾದರೂ ಯಥಾಸ್ಥಿತಿಯಲ್ಲಿ ಮಾರಾಟ ಮಾಡಿದರೆ ಅದರ ಶೇ 20ರಷ್ಟು ಹಣವನ್ನು ಮೂಲ ಭೂಮಾಲೀಕರಿಗೆ ನೀಡಲೇಬೇಕೆಂಬ ಅಂಶವೂ ಇದರಲ್ಲಿ ಸೇರಿದೆ.ಇದು ರೈತರ ಪಾಲಿಗೆ ವರದಾನವಾಗಿ ಅಧಿಕ ಮೊತ್ತದ ಪರಿಹಾರ ಧನವನ್ನು ಪಡೆಯುವಂತೆ ಮಾಡಿದರೆ ಅದೇ ಗೃಹನಿರ್ಮಾಣ ಕ್ಷೇತ್ರ ಸೇರಿದಂತೆ ಭೂಮಿ ಸ್ವಾಧೀನಪಡಿಸಿಕೊಳ್ಳುವವರು ಅಧಿಕ ಹಣ ವ್ಯಯಿಸಬೇಕಾಗುತ್ತದೆ.ಹಾಗೆ ನೋಡಿದರೆ ಈ ಹೊಸ ಮಸೂದೆಯ ಶೈಶವಾವಸ್ಥೆಯಲ್ಲೇ ಕೇಂದ್ರ ಸಚಿವರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಕೃಷಿ ಸಚಿವ ಶರದ್ ಪವಾರ್ ನೇತೃತ್ವದ ಸಚಿವರ ತಂಡ ಶೇ 67ರಷ್ಟು ಜನರ ಒಪ್ಪಿಗೆ ಮಾತ್ರ ಸಾಕೆಂದು ಸಲಹೆ ಮಾಡಿತ್ತು. ಆದರೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಇದನ್ನು ಒಪ್ಪಲಿಲ್ಲ.ಮನೆ ಬೆಲೆ ಹೆಚ್ಚುತ್ತದೆ?

ಸಹಜವಾಗಿಯೇ ಇದರಿಂದ ಭೂಮಿ ಬೆಲೆ ಹೆಚ್ಚಾಗುತ್ತದೆ. ಅಧಿಕ ಬೆಲೆ ನೀಡಿ ಭೂಮಿ ಖರೀದಿಸುವುದರಿಂದ ಅಲ್ಲಿ ಕಟ್ಟುವ ಮನೆಗಳ ಬೆಲೆಯೂ ಹೆಚ್ಚಾಗುತ್ತದೆ. ಇದರಿಂದ ಗ್ರಾಹಕರು ಹೆಚ್ಚಿನ ಹೊರೆ ಹೊರಬೇಕಾಗುತ್ತದೆ. ಬೇಡಿಕೆ ಕಡಿಮೆಯಾಗಿ ಮನೆಗಳ ಮಾರಾಟ ಸಾಧ್ಯವಾಗದೆ ರಿಯಲ್ ಎಸ್ಟೇಟ್ ಕ್ಷೇತ್ರ ಮಂಕಾಗುತ್ತದೆ ಎಂಬುದು ಸದ್ಯ ಮಸೂದೆ ಬಗ್ಗೆ  ಪ್ರಮುಖ ಆರೋಪ.ಉದ್ಯಮಿಗಳ ಅಭಿಪ್ರಾಯ

`ಹೊಸ ಮಸೂದೆಯಂತೆ ಭೂಮಿ ಹಾಗೂ ಅದರಲ್ಲಿ ನಿರ್ಮಾಣಗೊಳ್ಳುವ ಮನೆಗಳ ಬೆಲೆಗಳು ಗಗನಕ್ಕೇರಲಿವೆ. ಒಂದು ವೇಳೆ ಸಂಸತ್ತು ಇದಕ್ಕೆ ಅಂಗೀಕಾರ ನೀಡಿದರೆ ಹೂಡಿಕೆದಾರರು ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಹಿಂಜರಿಯುತ್ತಾರೆ'

ಲಲಿತ್ ಕುಮಾರ್ ಜೈನ್, ಅಧ್ಯಕ್ಷ,`ಭಾರತೀಯ ರಿಯಲ್ ಎಸ್ಟೇಟ್ ಅಭಿವೃದ್ಧಿದಾರರ ಸಂಘ

`ಇದು ಗೃಹ ನಿರ್ಮಾಣ ಕ್ಷೇತ್ರಕ್ಕೆ ಸ್ನೇಹಪರವಾಗಿಲ್ಲ. ರೈತರನ್ನಷ್ಟೇ ಗಮನದಲ್ಲಿಟ್ಟುಕೊಂಡು ಈ ಮಸೂದೆಯನ್ನು ಸಿದ್ಧಪಡಿಸಲಾಗಿದೆ. ಆದರೆ ಯಾವುದೇ ಮಸೂದೆ ಸಿದ್ಧಪಡಿಸುವಾಗ ಒಟ್ಟಾರೆ ರಾಷ್ಟ್ರೀಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ದುರದೃಷ್ಟವಶಾತ್ ಉದ್ದೇಶಿತ ಮಸೂದೆಯಲ್ಲಿ ಇದು ಸಾಧ್ಯವಾಗಿಲ್ಲ'.

ನವೀನ್ ಎಂ.ರಹೇಜಾ ಅಧ್ಯಕ್ಷ, ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿದಾರರ ಸಮಿತಿ

`ರೈತರಿಗೆ ನೀಡುವ ಪರಿಹಾರ ಧನದಲ್ಲಿ ಹೆಚ್ಚಳವಾಗಿರುವುದರಿಂದ ಭವಿಷ್ಯದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ತಗ್ಗುವ ಆತಂಕ ಇದೆ. ಉದ್ದೇಶಿತ ಮಸೂದೆಯಿಂದ ಭೂಮಿ ಬೆಲೆ ಗಗನಕ್ಕೇರಲಿರುವುದು ನಿಶ್ಚಿತ. ಅಗ್ಗದ ಬೆಲೆಯ ಮನೆಗಳು ಗ್ರಾಹಕರ ಪಾಲಿಗೆ ಇನ್ನು ಕನಸು ಮಾತ್ರ'

ನಿರಂಜನ ಹೀರಾನಂದಾನಿ.ವ್ಯವಸ್ಥಾಪಕ ನಿರ್ದೇಶಕ, ಹೀರಾನಂದಾನಿ ಸಮೂಹ

`ಸ್ವಂತಕ್ಕೊಂದು ಮನೆ' ಕನಸು ಕಟ್ಟಿಕೊಂಡಿರುವವರ ಮೇಲೆ ಈ ಮಸೂದೆಯಿಂದ ಆಗುವ ಪರಿಣಾಮಗಳನ್ನು ಮಸೂದೆ ಜಾರಿಗೆ ಬಂದ ನಂತರ ನೀವೇ ನೋಡಿರುವಂತೆ.

ರಾಜೀವ್ ತಲವಾರ್,ಕಾರ್ಯನಿರ್ವಾಹಕ ನಿರ್ದೇಶಕ `ಡಿಎಲ್‌ಎಫ್

`ಭೂಮಿ ಬೆಲೆ ಗಗನಕ್ಕೇರುವುದರಿಂದ ಸಹಜವಾಗಿಯೇ ಅದರಲ್ಲಿ ಕಟ್ಟುವ ಮನೆಗಳ ಖರೀದಿ ಬೆಲೆಯೂ ಹೆಚ್ಚುತ್ತದೆ. ಯಾವಾಗ ಗ್ರಾಹಕರ ಜೇಬಿನ ಗಾತ್ರಕ್ಕಿಂತ ಮನೆ ಖರೀದಿ ಬೆಲೆ ಹೆಚ್ಚುತ್ತದೋ ಆಗ  ಮನೆಗಳಿಗೂ ಬೇಡಿಕೆ ಕುಸಿಯಲಿದೆ'.

ಅಂಜು ಪುರಿ, ಮುಖ್ಯಸ್ಥರು,`ಜೋನ್ಸ್‌ಲ್ಯಾಂಗ್ ಲಾ ಸಲ್ಲೆ' '

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry