ರೈತರಿಗೆ ಉರುಳಾದ ದಾಬೋಲ್ ಅನಿಲ ಮಾರ್ಗ!

7

ರೈತರಿಗೆ ಉರುಳಾದ ದಾಬೋಲ್ ಅನಿಲ ಮಾರ್ಗ!

Published:
Updated:

ತುಮಕೂರು: ಜಿಲ್ಲೆಯ ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಬೆನ್ನೆಲುಬು ಆಗಬೇಕಿದ್ದ ದಾಬೋಲ್- ಬೆಂಗಳೂರು ನಡುವಿನ ಅನಿಲ ಕೊಳವೆ ಮಾರ್ಗ ಈಗ ರೈತರಿಗೆ ಉರುಳಾಗುವ ಹಾದಿಯಲ್ಲಿ ಸಾಗಿದ್ದು, ರೈತರ ವಿರೋಧದಿಂದಾಗಿ ಕಾಮಗಾರಿಗೆ ತಾತ್ಕಾಲಿಕ ತಡೆ ಬಿದ್ದಿದೆ.ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ದಾಬೋಲ್ ಗ್ಯಾಸ್ ಆಧರಿತ ವಿದ್ಯುತ್ ಉತ್ಪಾದನಾ ಘಟಕ ಜಿಲ್ಲೆಯಲ್ಲಿ ಆರಂಭವಾಗಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಬೇಕಿದೆ.ಕೊಳವೆ ಮಾರ್ಗದಲ್ಲಿ ಪೂರೈಕೆಯಾಗುವ ನೈಸರ್ಗಿಕ ಅನಿಲ ಬಳಸಿಕೊಂಡು ಸುಮಾರು 2 ಸಾವಿರ ಮೆಗಾ ವಾಟ್ ವಿದ್ಯುತ್ ಉತ್ಪಾದಿಸುವ ಘಟಕವನ್ನು ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್ ಅಥವಾ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸುವ ಕೇಂದ್ರ ಸರ್ಕಾರದ ಯೋಜನೆಗೆ ಅಗತ್ಯ ನೀರು ಒದಗಿಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿತ್ತು. ಈ ಯೋಜನೆಯಿಂದ ಜಿಲ್ಲೆಯ ಕೃಷಿ, ಕೈಗಾರಿಕಾ ರಂಗದಲ್ಲಿ ಮಹತ್ವದ ಬದಲಾವಣೆ ನಿರೀಕ್ಷೆ ಮಾಡಲಾಗಿದೆ.ಅನಿಲ ಕೊಳವೆ ಹಾದು ಬರುವ ಮಾರ್ಗದಲ್ಲಿ ಭೂಮಿ ಕಳೆದುಕೊಳ್ಳುವ ರೈತರು ನ್ಯಾಯಯುತ ಪರಿಹಾರದ ನಿರೀಕ್ಷೆಯಲ್ಲಿ ಇದ್ದರು. ನಿರೀಕ್ಷೆಯ ಆಧಾರದ ಮೇಲೆಯೇ ತಮ್ಮ ಭೂಮಿಯಲ್ಲಿ ಅನಿಲ ಮಾರ್ಗ ಹಾದು ಹೋಗಲು ಸಮ್ಮತಿಸಿದ್ದರು. ಆದರೆ, ಈ ಅನಿಲ ಕೊಳವೆ ಮಾರ್ಗ ನಿರ್ಮಿಸುತ್ತಿರುವ ಗೇಲ್ ಇಂಡಿಯಾ ಸಂಸ್ಥೆ ರೈತರಿಗೆ ಸೂಕ್ತ ಪರಿಹಾರ ನೀಡದೆ, ತೆಂಗು, ಅಡಿಕೆ ಇನ್ನಿತರ ಬೆಳೆಗಳ ಬುಡಕ್ಕೆ ಕೊಡಲಿಪೆಟ್ಟು ನೀಡಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.ಪರಿಹಾರ ಸಿಗದೆ ಯೋಜನೆಗೆ ತಡೆಯೊಡ್ಡಿರುವ ಘಟನೆ ನಗರ ಸಮೀಪದ ರಂಗಯ್ಯನಪಾಳ್ಯ, ಕಮಂಜಿಪಾಳ್ಯ, ಕಂಬತ್ತನಹಳ್ಳಿಯಲ್ಲಿ ನಡೆದಿದೆ. ಸುಮಾರು 100 ಅಡಿ ಅಗಲ ಹಾದು ಹೋಗುವ ಮಾರ್ಗದಿಂದಾಗಿ ಈ ಗ್ರಾಮಗಳ ಸುತ್ತಮುತ್ತ ಈಗಾಗಲೇ ಸಾವಿರಕ್ಕೂ ಹೆಚ್ಚು ತೆಂಗಿನ ಮರಗಳು, ನೂರಾರು ಅಡಿಕೆ ಮರಗಳು ಧರೆಗುರುಳಿವೆ.2010ರಲ್ಲಿ ಭೂಸ್ವಾಧೀನಪಡಿಸಿಕೊಳ್ಳಲು ನೋಟಿಸ್ ನೀಡಿದ್ದ ಗೇಲ್ ಇಂಡಿಯಾ ಸಂಸ್ಥೆ, ನಾಲ್ಕು ತಿಂಗಳ ಹಿಂದೆ ಮತ್ತೊಂದು ನೋಟಿಸ್ ನೀಡಿತ್ತು.ಭೂಮಿ ಕೊಡುವ ಮೊದಲು ಪರಿಹಾರ ಘೋಷಣೆ ಮಾಡಬೇಕು ಎಂದು ಷರತ್ತು ಹಾಕಿದ್ದಾಗ, ರೈತರಿಗೆ ಸೂಕ್ತ ಪರಿಹಾರ ನೀಡಿಯೇ ಭೂಮಿ ಸ್ವಾಧೀನಪಡಿಸಿಕೊಳ್ಳುವುದಾಗಿ ಗೇಲ್ ಇಂಡಿಯಾ ಸಂಸ್ಥೆ ಆಯುಕ್ತರು ಭರವಸೆ ನೀಡಿದ್ದರು. ಆದರೆ, ಪರಿಹಾರದ ಮೊತ್ತ ರೈತರ ಕೈಸೇರುವ ಮೊದಲೇ ಕಾಮಗಾರಿಯ ಗುತ್ತಿಗೆ ಹಿಡಿದಿರುವವರು ತೆಂಗು, ಅಡಿಕೆ ಮರಗಳನ್ನು ಕತ್ತರಿಸಿ ಹಾಕಿದ್ದಾರೆ ಎಂದು ಕೊಳವೆ ಮಾರ್ಗ ಹಾದುಹೋಗಲಿರುವ ಗ್ರಾಮಗಳ ರೈತರು ಅಳಲು ತೋಡಿಕೊಂಡಿದ್ದಾರೆ.ಸಂಸ್ಥೆಯು ಅತ್ಯಂತ ಕಡಿಮೆ ಮೊತ್ತದ ಪರಿಹಾರ ವಿತರಿಸಬಹುದೆಂಬ ಆತಂಕ ವ್ಯಕ್ತಪಡಿಸಿರುವ ರೈತರು, ಮೊದಲು ನ್ಯಾಯಯುತ ಪರಿಹಾರ ಘೋಷಣೆ ಮಾಡಿ, ಭೂಮಿ ಬಳಸಿಕೊಳ್ಳಲಿ.

ಹತ್ತಾರು ವರ್ಷಗಳಿಂದ ಬೆಳೆಸಿರುವ ಅಡಿಕೆ, ತೆಂಗು ತೋಟಗಳನ್ನು ಅಗ್ಗದ ಬೆಲೆಗೆ ಬಲಿ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿ, ಕಾಮಗಾರಿ ತಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry