ರೈತರಿಗೆ `ಟೋಪಿ' ಹಾಕುತ್ತಿರುವ ವ್ಯಾಪಾರಸ್ಥರು

7
ಕಳಪೆ ಗುಣಮಟ್ಟದ ಮಾವಿನ ಸಸಿ ಮಾರಾಟ

ರೈತರಿಗೆ `ಟೋಪಿ' ಹಾಕುತ್ತಿರುವ ವ್ಯಾಪಾರಸ್ಥರು

Published:
Updated:

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಳೆ ಆರಂಭವಾಗಿದೆ. ಮಾವಿನ ಸಸಿಗಳ ಮಾರಾಟ ಭರದಿಂದ ನಡೆಯುತ್ತಿದೆ. ತಾಲ್ಲೂಕಿನ ಉತ್ತರದ ಗಡಿ ಪ್ರದೇಶ ಮತ್ತು ಸುತ್ತಲಿನ ಇತರ ತಾಲ್ಲೂಕುಗಳ ರೈತರು ಮಾವಿನ ಸಸಿ ನಾಟಿಗೆ ಮುಂದಾಗಿರುವುದರಿಂದ ಬೇಡಿಕೆ ಹೆಚ್ಚಿದೆ.ಮಳೆಗಾಲ ಆರಂಭ ಆಯಿತೆಂದರೆ ಪಟ್ಟಣದಲ್ಲಿ ಮಾವಿನ ಸಸಿಗಳನ್ನು ಮಾರಾಟ ಮಾಡುವ ಮಳಿಗೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತವೆ. ಬಹುತೇಕ ಆಂಧ್ರಪ್ರದೇಶದಿಂದ ತರಿಸುವ ವಿವಿಧ ಜಾತಿಯ ಸಸಿಗಳನ್ನು ಮಾರಾಟ ಮಾಡಲಾಗುತ್ತದೆ. ಸಸಿಯೊಂದರ ಬೆಲೆ ಅದರ ಜಾತಿಯನ್ನು ಆಧರಿಸಿ ರೂ.40ರಿಂದ 150 ವರೆಗೆ ಇರುತ್ತದೆ.ತಾಲ್ಲೂಕಿನಲ್ಲಿ ಮಾವಿನ ತೋಟಗಳನ್ನು ಬೆಳೆಸುವ ಮನೋಭಾವ ಹೆಚ್ಚಿರುವುದರಿಂದ ಇಲ್ಲಿ ಪ್ರತಿ ವರ್ಷ ಸಾವಿರಾರು ಮಾವಿನ ಸಸಿಗಳ ಮಾರಾಟವಾಗುತ್ತದೆ. ಶ್ರೀನಿವಾಸಪುರ ಮಾವಿಗೆ ಪ್ರಸಿದ್ಧಿ ಪಡೆದಿರುವುದರಿಂದ ಜಿಲ್ಲೆ ಹಾಗೂ ರಾಜ್ಯದ ವಿವಿಧ ಪ್ರದೇಶಗಳಿಂದ ಮಾವಿನ ಸಸಿಗಳನ್ನು ಖರೀದಿಸಿ ಕೊಂಡೊಯ್ದು ನಾಟಿ ಮಾಡುತ್ತಾರೆ.ಕಳಪೆ ಗುಣಮಟ್ಟದ ಸಸಿಗಳಿಂದ ಮಾವು ಬೆಳೆಗಾರರ ಶ್ರಮ ಹಾಗೂ ಬಂಡವಾಳಕ್ಕೆ ಸಂಚಕಾರ ಬರುತ್ತಿದೆ. ವ್ಯಾಪಾರಿಗಳು ಮಾರುವ ಸಸಿಗಳು ಪ್ರಮಾಣೀಕೃತ ಸಸಿಗಳಲ್ಲ. ಅವರು ಹೇಳಿದಷ್ಟು ಹಣ ಕೊಟ್ಟು ಸಸಿಗಳನ್ನು ಖರೀದಿಸಬೇಕಾಗುತ್ತದೆ. ಆದರೆ ಸಸಿಗಳ ಗುಣಮಟ್ಟದ ಬಗ್ಗೆ ಯಾವುದೇ ಖಾತ್ರಿ ನೀಡುವುದಿಲ್ಲ. ಸಸಿಯ ಗುಣಮಟ್ಟ ತಿಳಿಯಲು ಕನಿಷ್ಠ ಮೂರು ನಾಲ್ಕು ವರ್ಷಗಳು ಬೇಕಾಗುತ್ತದೆ.ಮಾವಿನ ಸಸಿಗಳ ವ್ಯಾಪಾರ ವಹಿವಾಟು ತೋಟಗಾರಿಕೆ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ, ಸಸಿ ವ್ಯಾಪಾರಿಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲದಾಗಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಕಳಪೆ ಸಸಿಗಳನ್ನು ಮಾರಾಟ ಮಾಡಲು ಪ್ರೇರೇಪಿಸಿದೆ.ನಾಟಿ ಸಮಯದಲ್ಲಿ ಮೋಸಹೋದ ಬೆಳೆಗಾರರು ಗಿಡಗಳು ಫಸಲಿಗೆ ಬಂದನಂತರ ಕಳಪೆಯೆಂದು ಕಂಡುಬಂದ ಗಿಡಗಳ ಕೊಂಬೆಗಳನ್ನು ಕತ್ತರಿಸಿ ಮತ್ತೆ ಚಿಗುರು ಬಂದಮೇಲೆ ಉತ್ತಮ ಗುಣಮಟ್ಟದ ಗಿಣ್ಣು ಕಸಿ ಮಾಡಬೇಕಾಗುತ್ತದೆ. ಅದಕ್ಕೆ ಸಾಕಷ್ಟು ಹಣ ಖರ್ಚಾಗುತ್ತದೆ. ಜೊತೆಗೆ ಮತ್ತೆ ಫಸಲನ್ನು ಕಾಣಬೇಕಾದರೆ ಮತ್ತೆ ಎರಡರಿಂದ ಮೂರು ವರ್ಷಗಳು ಕಾಯಬೇಕಾಗುತ್ತದೆ.ಈ ಕಳಪೆ ಸಸಿಗಳ ಹಾವಳಿಯಿಂದ ಪಾರಾಗಲು ಕೆಲವು ರೈತರು ನಾಟಿ ಮಾವಿನ ಸಸಿಗಳನ್ನು ಖರೀದಿಸಿ ನಾಟಿ ಮಾಡುತ್ತಿದ್ದಾರೆ. ಅವು ಬೆಳೆದಮೇಲೆ ಕೊಂಬೆಗಳನ್ನು ಕತ್ತರಿಸಿ ತಮಗೆ ಬೇಕಾದ ಜಾತಿಯ ಮಾವಿನ ಗಿಡದ ಗಿಣ್ಣನ್ನು ತಂದು ಕಸಿಮಾಡಿಸುತ್ತಾರೆ. ಹೀಗೆ ಮಾಡುವುದರಿಂದ ಉತ್ತಮ ದರ್ಜೆಯ ಫಸಲನ್ನು ಪಡೆದುಕೊಳ್ಳಬಹುದಾಗಿದೆ.ಮಾವಿನ ಸಸಿಗಳನ್ನು ಖರೀದಿ ಮಾಡುವ ರೈತರು ಅನುಭವಿ ರೈತರ ಮಾರ್ಗದರ್ಶನ ಪಡೆಯುವುದು ಹೆಚ್ಚು ಕ್ಷೇಮಕರ. ಇಲ್ಲವಾದರೆ ದೀರ್ಘ ಕಾಲದ ಶ್ರಮ ವ್ಯರ್ಥವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry