ಸೋಮವಾರ, ಮೇ 16, 2022
29 °C
ಉಕ್ಕು ಕಾರ್ಖಾನೆಗೆ ಭೂಸ್ವಾಧೀನ

ರೈತರಿಗೆ ಪರಿಹಾರ ನೀಡಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಗಣಿ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ)ದ ಉದ್ದೇಶಿತ ಉಕ್ಕಿನ ಕಾರ್ಖಾನೆ ಸ್ಥಾಪನೆಗಾಗಿ ತಾಲ್ಲೂಕಿನ ವೇಣಿವೀರಾಪುರ, ಹರಗಿನಡೋಣಿ ಹಾಗೂ ಜಾನೇಕುಂಟೆ ಗ್ರಾಮಗಳ 2874 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಎರಡು ವರ್ಷ ಗತಿಸಿದರೂ ರೈತರಿಗೆ ಪರಿಹಾರ ನೀಡದ್ದರಿಂದ ರೈತರು ಸಮಸ್ಯೆಗೆ ಸಿಲುಕುವಂತಾಗಿದೆಎಂದು ಕಾಂಗ್ರೆಸ್ ಮುಖಂಡ ಎನ್.ಪ್ರತಾಪ್‌ರೆಡ್ಡಿ ದೂರಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಗ್ರಾಮಗಳ 900 ರೈತರ ಭೂಮಿ ವಶಪಡಿಸಿಕೊಳ್ಳಲಾಗಿದೆ. ಉಕ್ಕಿನ ಕಾರ್ಖಾನೆ ಸ್ಥಾಪಿಸಲು ಸಂಡೂರು ತಾಲ್ಲೂಕಿನ ದೋಣಿಮಲೆಯಲ್ಲಿ ತನ್ನದೇ ಗಣಿ ಪ್ರದೇಶವನ್ನು ಹೊಂದಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ನಿಗಮ, ಭೂ-ಸ್ವಾಧೀನಕ್ಕಾಗಿ ಕೆಐಎಡಿಬಿಗೆ ರೂ 145 ಕೋಟಿ ಸಂದಾಯ ಮಾಡಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆಯ 28(4)ರ ಅಂತಿಮ ಅಧಿಸೂಚನೆ ಹೊರಡಿಸದ್ದರಿಂದ ರೈತರಿಗೆ ಜಮೀನು ಪರಭಾರೆ ಮಾಡಲು ಅವಕಾಶ ಇಲ್ಲದಂತಾಗಿದೆ. ಅತ್ತ ಕೆಐಎಡಿಬಿ ಪರಿಹಾರ ನೀಡದೆ ಮೀನ- ಮೇಷ ಎಣಿಸುತ್ತಿದೆ ಎಂದರು.ಪ್ರಾಥಮಿಕ ಭೂಸ್ವಾಧೀನ ಅಧಿಸೂಚನೆಯಲ್ಲಿದ್ದ ಮಹೇಶ್ ಅಗಿವಾಲ್ ಮತ್ತು ಡಾ.ರಮೇಶ್ ಗೋಪಾಲ್ ಸೇರಿದಂತೆ 68 ಜನ ತಮ್ಮ ಅಂದಾಜು 300 ಎಕರೆ ಜಮೀನು ಬಳ್ಳಾರಿ ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇದೆ. ಇಲ್ಲಿ ಕಾರ್ಖಾನೆ ಸ್ಥಾಪನೆಯಿಂದ ವಾಯು ಮಾಲಿನ್ಯ ಆಗುವ ಸಾಧ್ಯತೆ ಇದ್ದು, ತಮ್ಮ ಭೂಮಿಯ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಮನವಿ ಮಾಡಿ ಧಾರವಾಡದಲ್ಲಿನ ಹೈಕೋರ್ಟ್ ಸಂಚಾರಿ ಪೀಠದಲ್ಲಿ 2012ರ ಜುಲೈನಲ್ಲೇ ತಡೆಯಾಜ್ಞೆ ಪಡೆದಿದ್ದಾರೆ.

ಇನ್ನುಳಿದ 2,574 ಎಕರೆ ಜಮೀನನ್ನು ಕೆಐಎಡಿಬಿ ಅಧಿಕಾರಿಗಳು ಇದುವರೆಗೂ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡದೆ, ರೈತರು ತಮ್ಮ ಭೂಮಿಗೆ ಸಂಬಂಧಿಸಿದಂತೆ ಬೇರೆ ವ್ಯವಹಾರ ಮಾಡಲು ಅವಕಾಶವಿಲ್ಲದಂತೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಜೆ.ಎಸ್.ಬಸವರಾಜ್, ಜಾನೆಕುಂಟೆ ಸಣ್ಣಬಸವರಾಜ, ಡಿ.ಸುಬ್ರಹ್ಮಣ್ಯ, ಸಿ.ನಾಗಿರೆಡ್ಡಿ ಉಪಸ್ಥಿತರಿದ್ದರು.`ಎನ್‌ಎಂಡಿಸಿಯ ಉದ್ದೇಶಿತ ಉಕ್ಕು ಕಾರ್ಖಾನೆ ಸ್ಥಾಪಿಸಲು ಜಮೀನು ಕೊಡಲು ನಾವು ಸ್ದ್ದಿದರಿದ್ದೇವೆ. ಆದರೆ,  ಕೆಐಎಡಿಬಿ ಪರಿಹಾರ ನೀಡಬೇಕು. ಇಲ್ಲದಿದ್ದರೆ ನಮ್ಮ  ಜಮೀನನ್ನು ಬೇರೆಯವರಿಗೆ ಪರಭಾರೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ವೇಣಿವೀರಾಪುರ, ಜಾನೆಕುಂಟೆ, ಹರಗಿನಡೋಣಿ ಗ್ರಾಮಗಳ ರೈತರು ಮಾಜಿ ಸಂಸದ ಕೆ.ಸಿ.ಕೊಂಡಯ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರಿಗೆ ನಂತರ ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.