`ರೈತರಿಗೆ ಮಾರ್ಗದರ್ಶನದಿಂದ ಆತ್ಮವಿಶ್ವಾಸ ಬೆಳೆಸಿ'

7

`ರೈತರಿಗೆ ಮಾರ್ಗದರ್ಶನದಿಂದ ಆತ್ಮವಿಶ್ವಾಸ ಬೆಳೆಸಿ'

Published:
Updated:

ಶಿರಸಿ: ಕೃಷಿ ಸಂಬಂಧಿತ ಎಲ್ಲ ಇಲಾಖೆಗಳು ಪರಸ್ಪರ ಹೊಂದಾಣಿಕೆಯ ಮೂಲಕ ರೈತರಿಗೆ ಮಾರ್ಗದರ್ಶನ ನೀಡಿ ರೈತರಲ್ಲಿ ಆತ್ಮವಿಶ್ವಾಸ ಬೆಳೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಅವರು ಇಲ್ಲಿನ ತೋಟಗಾರಿಕಾ ಇಲಾಖೆ ಆವಾರದಲ್ಲಿ ಸೋಮವಾರ ವಿವಿಧ ಇಲಾಖೆಗಳು ಜಂಟಿಯಾಗಿ ಆಯೋಜಿಸಿದ್ದ ಕೃಷಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಬಹುತೇಕ ಸಂದರ್ಭಗಳಲ್ಲಿ ಸರ್ಕಾರಿ ಇಲಾಖೆಗಳಿಂದ ಸುತ್ತೋಲೆ ಅನುಷ್ಠಾನವಾಗುತ್ತದೆಯೇ ವಿನಃ ಕೃಷಿಕರ ಸಮಸ್ಯೆಗೆ ಸ್ಪಂದನೆ ಸಿಗುವುದಿಲ್ಲ.

ಸರ್ಕಾರ ಸಾಕಷ್ಟು ಯೋಜನೆ ಅನುಷ್ಠಾನಗೊಳಿಸಿದ್ದರೂ, ಸಂವಹನದ ಕೊರತೆಯಿಂದ ವಿವಿಧ ಇಲಾಖೆಗಳ ಯೋಜನೆಗಳು ರೈತರ ಬಳಿ ತಲುಪುವದಿಲ್ಲ. ಹೀಗಾಗಿ ಕೃಷಿ ಮಾಹಿತಿ ಕಾರ್ಯಾಗಾರಗಳು ರೈತರು, ಪ್ರಗತಿಪರ ಕೃಷಿಕರು, ತಜ್ಞರ ನಡುವಿನ ಸಂವಾದವಾಗಬೇಕು. ರೈತರಿಗೆ ಯೋಜನೆಗಳನ್ನು ತಿಳಿಸುವ ಕಾರ್ಯ ಆಗಬೇಕು ಎಂದರು.ಕೃಷಿ ಯಾಂತ್ರೀಕರಣ, ರಾಷ್ಟ್ರೀಯ ತೋಟಗಾರಿಕಾ ಮಿಷನ್, ಹನಿ ನೀರಾವರಿ ಸೇರಿದಂತೆ ತೋಟಗಾರಿಕಾ ಇಲಾಖೆಯಿಂದ ಜಿಲ್ಲೆಯಲ್ಲಿ ರೂ.5ಕೋಟಿಗೂ ಅಧಿಕ ಹಣ ವಿನಿಯೋಗಿಸಲಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ.ಎಸ್.ಪಾಟೀಲ, ಅನಾವೃಷ್ಠಿಯಿಂದ ತೊಂದರೆಗೆ ಒಳಗಾಗಿರುವ ಬನವಾಸಿ ಹೋಬಳಿ ರೈತರಿಗೆ ಬೆಳೆ ವಿಮೆ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದರು. ಜಿ.ಪಂ. ಸದಸ್ಯೆ ಶೋಭಾ ನಾಯ್ಕ, ತಾ.ಪಂ. ಉಪಾಧ್ಯಕ್ಷ ಸಂತೋಷ ಗೌಡರ, ಸದಸ್ಯೆಯರಾದ ಶೈಲಜಾ ನಾಯ್ಕ, ನೇತ್ರಾವತಿ ಹೆಗಡೆ, ಎಪಿಎಂಸಿ ಅಧ್ಯಕ್ಷ ನರೇಶ ಭಟ್ಟ, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎನ್.ಭಟ್ಟ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಜಂಟಿ ಕೃಷಿ ನಿರ್ದೇಶಕ ಎಸ್.ಕೆ.ಕೆಂಪರಾಜು ಸ್ವಾಗತಿಸಿದರು.ಪ್ರದರ್ಶನ: ಕೃಷಿ ಇಲಾಖೆಯವರು ವಲ್ಟಗ್ಯಾ, ಹೆಗ್ಗೆ, ಸಣ್ಣ ಮುಳ್ಳಾರೆ, ರತ್ನಚೂಡ, ಹೊನ್ನೆಕಟ್ಟು, ಮಾರ‌್ನಮಿ ಗಿಡ್ಡ, ಮಲ್ಲಿಗೆ ಸಣ್ಣ ಸೇರಿದಂತೆ 40ಕ್ಕೂ ವಿವಿಧ ತಳಿಯ ಬತ್ತ, ಜೈವಿಕ ಗೊಬ್ಬರ ಪ್ರದರ್ಶಿಸಿದರು.ಕೃಷಿ ವಿಜ್ಞಾನ ಕೇಂದ್ರದವರು ಸೋಲಾರ್ ತಂತಿಬೇಲಿ ಸಂಪರ್ಕ ನೀಡಿ ಮಂಗಗಳಿಂದ ಬಾಳೆಗೊನೆ ರಕ್ಷಿಸುವ ಪುಟ್ಟ ಮಾದರಿ, ಮನೆ ಬಳಕೆ ಸೋಲಾರ್ ಡ್ರೈಯರ್‌ಗಳನ್ನು ಪರಿಚಯಿಸಿದರು. ಕದಂಬ ಮಾರ್ಕೆಟಿಂಗ್ ಸಹಕಾರಿ ವಿವಿಧ ತಳಿಯ ಅಕ್ಕಿ, ಹೊಸದಾಗಿ ಸಿದ್ಧಪಡಿಸಿರುವ ಸ್ಥಳೀಯ ಸಾಂಬಾರ ಬೆಳೆ ಒಳಗೊಂಡ `ಗಿಫ್ಟ್‌ಪ್ಯಾಕ್' ಪ್ರದರ್ಶನಕ್ಕೆ ತಂದಿತ್ತು.

ಸಂಜೀವಿನಿ ಸಾವಯವ ಕೃಷಿಕರ ಬಳಗ 40ಕ್ಕೂ ಅಧಿಕ ಜಾತಿಯ ಬತ್ತದ ಮಾದರಿ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕಾ ಇಲಾಖೆ, ಜಲಾನಯನ ಇಲಾಖೆಗಳ ಯೋಜನೆಗಳ ಮಾಹಿತಿಯನ್ನು ರೈತರು ಪಡೆದರು. ಪವರ್ ಟಿಲ್ಲರ್ ವೀಡರ್, ಸ್ಪ್ರೇಯರ್ ಸೇರಿದಂತೆ ಕೃಷಿ ಯಂತ್ರಗಳ ಮಳಿಗೆಗಳನ್ನು ಜನರು ಕುತೂಹಲದಿಂದ ವೀಕ್ಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry