ಶುಕ್ರವಾರ, ನವೆಂಬರ್ 22, 2019
27 °C
ಕೆಜೆಪಿ ಅಧಿಕಾರಕ್ಕೆ ಬಂದರೆ ಅನುಷ್ಠಾನದ ಭರವಸೆ

ರೈತರಿಗೆ ಮಾಸಾಶನ: ಬಿಎಸ್‌ವೈ

Published:
Updated:

ಹರಪನಹಳ್ಳಿ: ಕೆಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೂರೇ ತಿಂಗಳಲ್ಲಿ 65 ವರ್ಷ ಮೀರಿದ ನಾಡಿನ ಅನ್ನದಾತ ರೈತನಿಗೆ ಮಾಸಿಕ ಪಿಂಚಣಿ ಸೌಲಭ್ಯ ನೀಡುವ ಮಹತ್ತರ ಯೋಜನೆ ಜಾರಿಮಾಡುವ ಸಂಕಲ್ಪ ತೊಟ್ಟಿದ್ದೇನೆ ಎಂದು ಕೆಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಕ್ಷದ ಅಭ್ಯರ್ಥಿಪರ ಮತಯಾಚನೆ ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ನಾಡಿಗೆ ಅನ್ನ ನೀಡುವ ರೈತನ ಬದುಕಿನಲ್ಲಿ ನೆಮ್ಮದಿ ಮನೆ ಮಾಡಬೇಕು. ನಾಲ್ಕು ದಶಕದ ತಮ್ಮ ರಾಜಕೀಯ ಹೋರಾಟದಲ್ಲಿಯೂ ಇದನ್ನೇ ಪ್ರತಿಪಾದಿಸುತ್ತ ಬಂದಿದ್ದೇನೆ. ರಟ್ಟೆಯಲ್ಲಿ ಕಸುವು ಕಳೆದುಕೊಂಡು ಕೃಷಿಯಿಂದ ವಿಮುಖನಾಗುತ್ತಿರುವ ರೈತನಿಗೆ ಮಾಸಿಕ ಪಿಂಚಣಿ ನೀಡುವ ಯೋಜನೆ ಜಾರಿ ಮಾಡಿಯೇ ತೀರುತ್ತೇನೆ. ನಾನು ವಚನ ಭ್ರಷ್ಟನಲ್ಲ. ಹೇಳಿದ ಕೆಲಸ ಮಾಡಿ ತೋರಿಸುತ್ತೇನೆ.ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯಮಟ್ಟದಲ್ಲಿ ಮಹಿಳಾ ಬ್ಯಾಂಕ್ ಸ್ಥಾಪಿಸಿ ಹಾಗೂ ಎಲ್ಲಾ ಜಿಲ್ಲೆಗಳಲ್ಲಿಯೂ ಶಾಖೆ ವಿಸ್ತರಿಸುತ್ತೇನೆ. ಅದಕ್ಕೆ ರೂ2 ಸಾವಿರ ಕೋಟಿ ಮೀಸಲಿಡುತ್ತೇನೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರೂ2 ಸಾವಿರ ಕೋಟಿ, ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗಾಗಿ ರೂ5 ಸಾವಿರ ಕೋಟಿ ಮೀಸಲಿರಿಸುತ್ತೇನೆ. ಜತೆಗೆ ಅದೆಲ್ಲಕ್ಕಿಂತ ಮುಖ್ಯವಾಗಿ ನಾಡಿನ ರೈತಾಪಿ ಕುಟುಂಬದ ವಿದ್ಯಾರ್ಥಿಗಳ ಎಂಜಿನಿಯರಿಂಗ್, ಮೆಡಿಕಲ್‌ನಂತಹ ಉನ್ನತ ವ್ಯಾಸಂಗಕ್ಕೂ ಸರ್ಕಾರದಿಂದಲೇ ಹಣ ಭರಿಸಲು ಉದ್ದೇಶಿಸಿದ್ದೇನೆ ಎಂದು ತಿಳಿಸಿದರು.ಕ್ಷೇತ್ರದ ಶಾಸಕ ಸ್ಥಾನವನ್ನ ಯಾರು ಪ್ರತಿನಿಧಿಸಬೇಕು? ಬಳ್ಳಾರಿಯವರಾ?, ಹೂವಿನ ಹಡಗಲಿಯವರಾ?, ಸಂಡೂರಿನ ಜನ ನಿಮ್ಮ ಪ್ರತಿನಿಧಿಯಾಗಬೇಕಾ? ಅಥವಾ ನಿಮ್ಮ ಮನೆಯ ಮಗ ಕ್ಷೇತ್ರ ಪ್ರತಿನಿಧಿಸಬೇಕಾ? ಎಂಬುದನ್ನು ನೀವೇ ತೀರ್ಮಾನಿಸಿ ಎಂದು ಹೇಳಿದರು.ಪಕ್ಷ ಅಭ್ಯರ್ಥಿ ಎನ್. ಕೊಟ್ರೇಶ್, ಜಗಳೂರು ಕ್ಷೇತ್ರದ ಅಭ್ಯರ್ಥಿ ಎಸ್.ವಿ. ರಾಮಚಂದ್ರ, ಪಕ್ಷದ ರಾಜ್ಯಘಟಕದ ಉಪಾಧ್ಯಕ್ಷ ಬಾವಿ ಬೆಟ್ಟಪ್ಪ, ಜಿಲ್ಲಾ ಸಂಚಾಲಕ ಜಗದೀಶ್, ತಾಲ್ಲೂಕು ಸಂಚಾಲಕ ಎಚ್.ಎಂ. ಜಗದೀಶ್, ಮುಖಂಡರಾದ ಮಡಿವಾಳಪ್ಪ, ಬೇವಿನಹಳ್ಳಿ ನಿಂಗಪ್ಪ, ಕಂಚಿಕೆರೆ ಕೆಂಚಪ್ಪ, ಅರಸೀಕೆರೆ ತಿಮ್ಮಣ್ಣ ಉಪಸ್ಥಿತರಿದ್ದರು.

ಕುತಂತ್ರ ಮಾಡಿದರು...

ಜಗಳೂರು: ಕೆಲವರ ಕುತಂತ್ರದಿಂದಾಗಿ, ನಾನು ಯಾವುದೇ ತಪ್ಪು ಮಾಡದೇ ಇದ್ದರೂ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ  ನನ್ನನ್ನು ಕೆಳಕ್ಕಿಳಿಸಲಾಯಿತು ಎಂದು ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.ಪಟ್ಟಣದಲ್ಲಿ ಭಾನುವಾರ ನಡೆದ ಕೆಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಹಾಗೂ ಡಿ.ವಿ. ಸದಾನಂದ ಗೌಡ ಅವರು ನನ್ನ ಬೆನ್ನಿಗೆ ಚೂರಿ ಹಾಕಿದರು.ರಾಜ್ಯದಲ್ಲಿ ಮೊದಲ ಬಾರಿ ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ನನ್ನನ್ನು ವಿನಾಕಾರಣ ಅಧಿಕಾರದಿಂದ ಕೆಳಕ್ಕೆ ಇಳಿಸಲಾಯಿತು ಎಂದು ಅವರು ದೂರಿದರು.ಕಾಂಗ್ರೆಸ್ ಮುಸ್ಲಿಂ ಬಾಂಧವರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿದೆ. ಜಗಳೂರು ತಾಲ್ಲೂಕಿಗೆ ಶಾಸಕ ಎಸ್.ವಿ. ರಾಮಚಂದ್ರ ಅವರ ಒತ್ತಾಯದ ಮೇರೆಗೆ ನನ್ನ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಮಂಜೂರು ಮಾಡಿ 18,600 ಎಕರೆಗೆ ನೀರಾವರಿಗೆ ಆದೇಶಿಸಲಾಯಿತು. ಪ್ರಸ್ತುತ ಸಮೀಕ್ಷೆ ನಡೆಯುತ್ತಿದೆ ಎಂದರು.ಜಗಳೂರು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಮಾತನಾಡಿ, ಕ್ಷೇತ್ರಕ್ಕೆ ಅನುದಾನದ ಹೊಳೆ ಹರಿಸಿದ್ದು ಯಡಿಯೂರಪ್ಪ. ಹಿಂದೆ ನಾನು ಯಡಿಯೂರಪ್ಪ ಅವರ ಕಾರಣಕ್ಕೆ ಬಿಜೆಪಿಗೆ ಹೋಗಿದ್ದೆ. ಯಾವುದೇ ಪಕ್ಷ ನೋಡಿ ಅಲ್ಲ. ತಾಲ್ಲೂಕಿನ ಇತಿಹಾಸದಲ್ಲೇ ಪ್ರಥಮ ಬಾರಿ 18 ಸಾವಿರ ಮನೆ ಮಂಜೂರಾಗಿದ್ದು, 8 ಸಾವಿರ ಮನೆಗಳು ನೋಂದಣಿಯಾಗಿವೆ.  54 ಹೊಸರಸ್ತೆ ನಿರ್ಮಿಸಲಾಗಿದೆ. ಕನಸಿನ ಭದ್ರಾ ಮೇಲ್ದಂಡೆ ಜಾರಿಗೆ ಶ್ರಮಿಸಿದ್ದೇನೆ. ಅಭಿವೃದ್ಧಿ ಕಾರ್ಯ ನೋಡಿ ಜನತೆ ನನ್ನನ್ನು ಬೆಂಬಲಿಸಲಿದ್ದಾರೆ ಎಂದರು.ಜಿ.ಪಂ. ಮಾಜಿ ಅಧ್ಯಕ್ಷೆ ನಾಗರತ್ನಮ್ಮ ಹಾಗೂ ಮುಖಂಡ ಮಲ್ಲೇಶಪ್ಪ ಅವರು ಈ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಕೆಜೆಪಿಗೆ ಸೇರ್ಪಡೆಯಾದರು.ಹರಿಹರ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬಿ.ಪಿ. ಹರೀಶ್, ಉಮಾಪತಿ, ಹರಪನಹಳ್ಳಿ ಅಭ್ಯರ್ಥಿ ಕೊಟ್ರೇಶ್, ಪ್ರೊ.ಲಿಂಗಣ್ಣ, ತಾ.ಪಂ. ಸದಸ್ಯ ಶ್ರೀನಿವಾಸ್, ಕೆಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್, ನಾಗೇಂದ್ರರೆಡ್ಡಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)