ರೈತರಿಗೆ ಮಾಹಿತಿ, ಮಾರ್ಗದರ್ಶನದ ಕಣಜ

7
ಶಿಡ್ಲಘಟ್ಟದಲ್ಲಿ ಕೃಷಿ ಮಾಹಿತಿ ಆಂದೋಲನ

ರೈತರಿಗೆ ಮಾಹಿತಿ, ಮಾರ್ಗದರ್ಶನದ ಕಣಜ

Published:
Updated:

ಶಿಡ್ಲಘಟ್ಟ:  ಕೃಷಿ, ರೇಷ್ಮೆ, ತೋಟಗಾರಿಕೆ ಮುಂತಾದ ಇಲಾಖೆಗಳ ಮಳಿಗೆಗಳಲ್ಲಿ ಪ್ರಾತ್ಯಕ್ಷಿಕೆಗಳೊಂದಿಗೆ ಮಾಹಿತಿಯನ್ನು ರೈತರಿಗೆ ನೀಡಲು ಒಂದೆಡೆ ವ್ಯವಸ್ಥೆ ಮಾಡಿದ್ದರೆ, ಮತ್ತೊಂದೆಡೆ ವಿಜ್ಞಾನಿಗಳು ಮತ್ತು ವಿಶ್ವವಿದ್ಯಾಲಯದ ತಜ್ಞರಿಂದ ರೈತರಿಗೆ ಮಾಹಿತಿ ಮತ್ತು ಮಾರ್ಗದರ್ಶನ ದೊರೆಯುತ್ತಿತ್ತು. ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಸೋಮವಾರ ರೈತರ ದಿನಾಚರಣೆ ಅಂಗವಾಗಿ ನಡೆದ ಕೃಷಿ ಮಾಹಿತಿ ಆಂದೋಲನ ಕಾರ್ಯಕ್ರಮದಲ್ಲಿ ಕಂಡ ದೃಶ್ಯಗಳಿವು.ಸ್ತ್ರೀ ಶಕ್ತಿ ಸಂಘಗಳ ಸದಸ್ಯೆಯರು, ರೈತರು ಸಾಲಾಗಿ ಬಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುತ್ತಾ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ತಮಗೆ ಅಗತ್ಯವಿರುವ ವಿಷಯದ ಬಗ್ಗೆ ಮಾಹಿತಿ ಪಡೆದರು. ಸಾವಯವ ಪದ್ಧತಿಯಲ್ಲಿ ಬೆಳೆದ ರೈತರ ಉತ್ಪನ್ನಗಳು ಎಲ್ಲರನ್ನೂ ಆಕರ್ಷಿಸಿದವು. ಹೈಬ್ರಿಡ್ ತರಕಾರಿ ಗಳೂ ತಮ್ಮ ಆಕಾರದಿಂದ ಜನರನ್ನು ಸೆಳೆದವು. ರೇಷ್ಮೆ ಬೆಳೆ ಉತ್ತಮಪಡಿಸಲು ವಿವಿಧ ಯಂತ್ರಗಳು, ರೋಗ ನಿವಾರಣಾ ಔಷಧಿಗಳು ಮತ್ತು ಚಂದ್ರಂಕಿಗಳ ಬಗ್ಗೆಯೂ ಚರ್ಚೆ ಯಾಯಿತು.ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಂದ ರೈತರಿಗೆ ಸಹಾಯಧನ ಮತ್ತು ಯಂತ್ರೋಪಕರಣ ವಿತರಿಸಲಾಯಿತು. ಸಾವಯವ ಪದ್ಧತಿಯಲ್ಲಿ ಬೆಳೆದ ಬೃಹತ್ ಬಾಳೆಗೊನೆ, ಒಂದೇ ಕಾಂಡದಲ್ಲಿ 150 ತೆನೆಗಳಿರುವ ರಾಗಿ, ಜೈವಿಕ ಇಂಧನ ತಯಾರಿಕೆ, ಸೋಲಾರ್‌ಶಕ್ತಿ ಬಳಸಿ ನೀರು ಶುದ್ಧೀಕರಣ, ಕೃಷಿ ಔಷಧಿ ಮಳಿಗೆಗಳು ಅಲ್ಲಿದ್ದವು.ಶಾಸಕ ವಿ.ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸತೀಶ್, ಶಿವಲೀಲಾ ರಾಜಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಯರ‌್ರಬಚ್ಚಪ್ಪ, ಉಪಾಧ್ಯಕ್ಷೆ  ಸರಸ್ವತಮ್ಮ ತಮ್ಮಣ್ಣ, ಸದಸ್ಯರಾದ ರಾಜು, ವೇಣುಗೋಪಾಲ್, ನಾರಾಯಣಸ್ವಾಮಿ, ಚನ್ನಕೃಷ್ಣಪ್ಪ,  ಕೃಷಿ ಇಲಾಖೆ ಜಂಟಿನಿರ್ದೇಶಕ ಎಸ್.ವೆಂಕಟರಾಮ್, ಉಪನಿರ್ದೇಶಕರಾದ ಎಸ್.ಎಸ್.ಅಬೀದ್, ರಾಘವೇಂದ್ರ,  ರೇಷ್ಮೆ ಇಲಾಖೆ ಉಪನಿರ್ದೇಶಕ ಶಂಕರಪ್ಪ, ಕೃಷಿ ವಿಶ್ವವಿದ್ಯಾಲಯದ ಮಂಜುನಾಥಗೌಡ, ವಿಜಯೇಂದ್ರ, ಜಹೀರ್‌ಪಾಷ, ಅಮರ ನಂಜುಂಡೇಶ್ವರ, ಕೃಷಿಕ ಸಮಾಜದ ಮುತ್ತೂರು ಕೆಂಪೇಗೌಡ, ಪಾಪಣ್ಣ, ಮಂಜುನಾಥರೆಡ್ಡಿ, ಮುನಿವೆಂಕಟಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.48 ರೂಪಾಯಿಗೆ ಡೀಸೆಲ್

`ಹೊಂಗೆ ಬೀಜ, ಬೇವಿನ ಬೀಜ, ಸೀಮಾರೂಬ ಬೀಜ, ಜತ್ರೋಪ ಬೀಜಗಳಿಂದ ತಯಾರಿಸಿರುವ ಡೀಸಲ್ ಬೆಲೆ ಕೇವಲ 48 ರೂಪಾಯಿ' -ಹೀಗೆ ಹೇಳಿ ಅಚ್ಚರಿ ಮೂಡಿಸಿದವರು ಚಿಂತಾಮಣಿಯ ರೇಷ್ಮೆ ಕೃಷಿ ಕಾಲೇಜಿನ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ತಾಂತ್ರಿಕ ಸಹಾಯಕ ಸೋಮಶೇಖರ್.ಕೃಷಿ ಮಾಹಿತಿ ಆಂದೋಲನದಲ್ಲಿ ಮಾತನಾಡಿದ ಅವರು, `ರೈತರಿಂದ ವಿವಿಧ ಬೀಜಗಳನ್ನು ಕೊಂಡು ಅದರಿಂದ ಎಣ್ಣೆ ತಯಾರಿಸಲಾಗುತ್ತದೆ. ನಂತರ ಅವುಗಳಿಂದ ಡೀಸೆಲ್ ತಯಾರಿಸಲಾಗುತ್ತದೆ. ತಯಾರಿಕೆ ಸಂದರ್ಭದಲ್ಲಿ ಉಪ ಉತ್ಪನ್ನವಾಗಿ ಹೊರಬರುವ ಹಿಂಡಿ ಬೆಳೆಗಳಿಗೆ ಉಪಯುಕ್ತ. ಮತ್ತೊಂದು ಉಪ ಉತ್ಪನ್ನ ಗ್ಲಿಸರಿನ್ ಸೋಪ್, ಶಾಂಪೂ ತಯಾರಿಕೆಗೆ ಬಳಕೆಯಾಗುತ್ತದೆ. ವಿವಿಧ ಬೀಜಗಳಿಂದ ತಯಾರಿಸಲಾಗುವ ಡೀಸೆಲ್ 48 ರೂಪಾಯಿಗೆ  ಮಾರಾಟ ಮಾಡಲಾಗುತ್ತಿದೆ. ವಿದೇಶದಿಂದ ಆಮದು ಮಾಡಿಕೊಳ್ಳುವ ಡೀಸೆಲ್‌ಗೆ ಪರ್ಯಾಯವಾಗಿ ನಾವೇ ತಯಾರಿಸಬಹುದು' ಎಂದರು.ರೈತರಿಗೆ ಸಹಾಯಧನ

ತಾಲ್ಲೂಕಿನಲ್ಲಿ 2012-13ನೇ ಸಾಲಿನಲ್ಲಿ 1,968 ರೇಷ್ಮೆ ಬೆಳೆಗಾರರು ಬೆಳೆದ ಮಿಶ್ರತಳಿ ಗೂಡಿಗೆ ಒಟ್ಟು 35.14 ಲಕ್ಷ ರೂಪಾಯಿ ವಿತರಿಸಿರುವುದಾಗಿ ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಚಂದ್ರಪ್ಪ ತಿಳಿಸಿದರು. ರೇಷ್ಮೆ ಇಲಾಖೆ ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಫಲಾನುಭವಿಗಳಿಗೆ ಪವರ್ ಟಿಲ್ಲರ್, ಟ್ರ್ಯಾಕ್ಟರ್ ಮತ್ತು ಮಿನಿಟ್ರ್ಯಾಕ್ಟರನ್ನು ಶಾಸಕ ವಿ.ಮುನಿಯಪ್ಪ ವಿತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry