ರೈತರಿಗೆ ವರದಾನ ಆನ್‌ಲೈನ್ ವಹಿವಾಟು ಕೇಂದ್ರ

6

ರೈತರಿಗೆ ವರದಾನ ಆನ್‌ಲೈನ್ ವಹಿವಾಟು ಕೇಂದ್ರ

Published:
Updated:
ರೈತರಿಗೆ ವರದಾನ ಆನ್‌ಲೈನ್ ವಹಿವಾಟು ಕೇಂದ್ರ

ವಿಜಾಪುರ: ಜಿಲ್ಲೆಯ ತೋಟಗಾರಿಕೆ ಉತ್ಪನ್ನಗಳಿಗೆ ಅಂತರ್‌ರಾಷ್ಟ್ರೀಯ ಮಟ್ಟದ ಮಾರುಕಟ್ಟೆ ದೊರಕಿಸಿಕೊಡಲು, ರೈತರು ಹಾಗೂ ಖರೀದಿದಾರರ ಮಧ್ಯೆ ನೇರ ಸಂಪರ್ಕ ಕಲ್ಪಿಸುವ ರಾಜ್ಯದ ಮೊಟ್ಟ ಮೊದಲ `ಆನ್‌ಲೈನ್ ಟ್ರೇಡಿಂಗ್ ಸೆಂಟರ್' ಸೇವೆಗೆ ಸಜ್ಜುಗೊಳ್ಳುತ್ತಿದೆ.ವಿಜಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಸಹಾಯಧನದ ಅಡಿಯಲ್ಲಿ ಅಂದಾಜು ರೂ.2.90 ಕೋಟಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಿದ್ದಾರೆ. ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣ ಹಿಂಭಾಗದಲ್ಲಿ, ಲೋಕಾಯುಕ್ತ ಪೊಲೀಸ್ ಕಚೇರಿ ಎದುರಿನ ಒಂದು ಎಕರೆ ಐದು ಗುಂಟೆ ಜಾಗೆಯಲ್ಲಿ ತಲೆ ಎತ್ತಿರುವ ಈ ಕಟ್ಟಡ ಇದೇ 26ರಂದು ಉದ್ಘಾಟನೆಗೊಳ್ಳಲಿದೆ.ವಹಿವಾಟು ನಡೆಸಲು 12 ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದ್ದು, ಇಲ್ಲಿಯ ವ್ಯವಹಾರ ಸಂಪೂರ್ಣ ಪಾರದರ್ಶಕವಾಗಿರಲಿದೆ.

ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ತೋಟಗಾರಿಕೆ ಉತ್ಪನ್ನಗಳಿಗೆ ಗುಣಮಟ್ಟಕ್ಕೆ ತಕ್ಕಂತೆ ದರ ದೊರೆಯಲಿದೆ. ಒಂದೊಮ್ಮೆ ತಮ್ಮ ಉತ್ಪನ್ನಗಳಿಗೆ ನಿಗದಿಯಾಗಿರುವ ದರ ಕಡಿಮೆ ಎಂದು ಅನಿಸಿದರೆ ಆ ವಹಿವಾಟನ್ನು ರದ್ದುಪಡಿಸುವ ಅವಕಾಶವೂ ಆ ರೈತರಿಗೆ ಇರುವುದು ಇಲ್ಲಿಯ ವಿಶೇಷತೆ.`ಈ ಕೇಂದ್ರದ ಆರಂಭದಿಂದ ಸ್ಥಳೀಯ ಉತ್ಪನ್ನಗಳಿಗೆ ರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಸೃಷ್ಟಿಯಾಗಲಿದೆ.  ಅತೀ ಹೆಚ್ಚು ವ್ಯಾಪಾರಸ್ಥರು ಭಾಗವಹಿಸುವ ನಿರೀಕ್ಷೆ ಇದೆ. ಸ್ಥಳೀಯ ಉದ್ಯಮಿಗಳಿಗೆ ಹಾಗೂ ಕೋಲ್ಡ್ ಸ್ಟೋರೇಜ್‌ನವರಿಗೂ ಅನುಕೂಲ ದೊರೆಯಲಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ಗುಣಮಟ್ಟಕ್ಕೆ ತಕ್ಕಷ್ಟು ಬೆಲೆ ಲಭ್ಯವಾಗುವುದರಿಂದ ರೈತರ ಆರ್ಥಿಕ ಪರಿಸ್ಥಿತಿಯೂ ಸುಧಾರಣೆ ಸಾಧ್ಯ' ಎನ್ನುತ್ತಾರೆ ವಿಜಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಆರ್.ಎಂ. ಕುಮಾರಸ್ವಾಮಿ.

`ಎನ್‌ಸಿಡಿಎಕ್ಸ್ ಸಹಾಯದೊಂದಿಗೆ ಈ ಕೇಂದ್ರ ವ್ಯವಹಾರ ನಡೆಸಲಿದೆ. ಪ್ರಾರಂಭದ ಹಂತದಲ್ಲಿ ಸ್ಥಳೀಯ ವರ್ತಕರಿಗೆ ಆನ್-ಲೈನ್ ವಹಿವಾಟಿನಲ್ಲಿ ಭಾಗವಹಿಸಲು ತರಬೇತಿ ಮತ್ತು ಅವಕಾಶ ಕಲ್ಪಿಸಲಾಗುತ್ತದೆ.ಈ ಆನ್-ಲೈನ್ ವ್ಯವಸ್ಥೆಗೆ ಬೇಕಾದ ಕಂಪ್ಯೂಟರ್, ಸಿಬ್ಬಂದಿ, ಇಂಟರ್‌ನೆಟ್ ಮತ್ತಿತರ ಸೌಲಭ್ಯವನ್ನು ಸಮಿತಿಯಿಂದ ಒದಗಿಸಲಾಗುತ್ತಿದೆ' ಎಂಬುದು ಅವರ ವಿವರಣೆ.ದೇಶದಾದ್ಯಂತ ವಿಶಾಲವಾದ ಮಾರುಕಟ್ಟೆ ವ್ಯವಸ್ಥೆ ಇದೆ. ರೈತರು ತಮ್ಮ ತೋಟಗಾರಿಕೆಯ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗಳಿಗೆ ತೆಗೆದುಕೊಂಡು ಹೋಗಬೇಕಾದ ಪ್ರಮೇಯ ಇಲ್ಲ.  ಈ ಕೇಂದ್ರದಲ್ಲಿ ಕುಳಿತುಕೊಂಡು ದೇಶದ ಇತರೆಡೆಯ ಸಾಕಷ್ಟು ಜನ ವರ್ತಕರೊಂದಿಗೆ ನೇರವಾಗಿ ವ್ಯವಹರಿಸಬಹುದು.ಹೀಗಾಗಿ ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ನಂತರ ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದೆ.ಈ ಕೇಂದ್ರದಲ್ಲಿ ಉತ್ಪನ್ನಗಳ ಗುಣಮಟ್ಟ ವಿಂಗಡಣೆ ವಿಭಾಗ. ಉತ್ಪನ್ನಗಳ ಮಾದರಿ ಪ್ರದರ್ಶನ ವ್ಯವಸ್ಥೆ. ಇ-ಟೆಂಡರ್ ಹಾಲ್, ರಾಷ್ಟ್ರೀಕೃತ ಬ್ಯಾಂಕ್ ಶಾಖೆ ತೆರೆಯಲು ಸ್ಥಳಾವಕಾಶ. ರೈತ ಮಾಹಿತಿ ಕೇಂದ್ರ.ವರ್ತಕರಿಗಾಗಿ ಸಭಾ ಭವನ. ಶುದ್ಧ ಕುಡಿಯುವ ನೀರು, ಶೌಚಾಲಯ ಹೀಗೆ ಸಕಲ ಸೌಲಭ್ಯ ಕಲ್ಪಿಸಲಾಗಿದೆ. ಸದ್ಯಕ್ಕೆ ಒಣದ್ರಾಕ್ಷಿ ಮಾರಾಟವನ್ನು ಈ ಕೇಂದ್ರಕ್ಕೆ ಸ್ಥಳಾಂತರಿಸ ಲಾಗುತ್ತಿದ್ದು, ಹಂತ ಹಂತವಾಗಿ ಉಳಿದೆಲ್ಲ ತೋಟಗಾರಿಕೆ ಉತ್ಪನ್ನಗಳ ಮಾರಾಟ ನಡೆಯಲಿದೆ ಎಂಬುದು ಸಮಿತಿಯವರ ವಿವರಣೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry