ಗುರುವಾರ , ಏಪ್ರಿಲ್ 15, 2021
23 °C

ರೈತರಿಗೆ ಸರ್ಕಾರದಿಂದ ಲಕ್ಷಾಂತರ ಹಣ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ:  ಸರ್ಕಾರದ ಮಹತ್ವಾಕಾಂಕ್ಷೆ `ಸುವರ್ಣ ಭೂಮಿ~ ಯೋಜನೆಗೆ ಸಂಬಂಧಿಸಿದಂತೆ ಪ್ರಸಕ್ತ ವರ್ಷದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ 2011-12 ವರ್ಷದ ಎರಡನೇ ಕಂತಿನ ಹಣ ಇನ್ನೂ ರೈತರ ಕೈಗೆ ಸೇರದಿರುವುದು ಗೊತ್ತಾಗಿದೆ.ಪ.ಜಾ/ಪ.ಪಂ ಮತ್ತು ಸಾಮಾನ್ಯ ವರ್ಗಗಳಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳ ಆರ್ಥಿಕ ಮಟ್ಟವನ್ನು ಸುಧಾರಿಸುವ ಯತ್ನ ಎಂಬಂತೆ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಇತರೆ ಕೃಷಿ ಪರಿಕರಗಳನ್ನು ಖರೀದಿಸಲು ಸಹಾಯವಾಗಲಿ ಎಂಬ ಆಶಯದೊಂದಿಗೆ ರಾಜ್ಯ ಬಿಜೆಪಿ ಸರ್ಕಾರ ಕಳೆದ ವರ್ಷದಿಂದ ಸದರಿ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದೆ.ಆದರೆ ಈ ವರ್ಷದ ಹಿಂಗಾರು ಹಂಗಾಮು ಬಂದರೂ ಹಿಂದಿನ ವರ್ಷದ ಫಲಾನುಭವಿಗಳಿಗೆ ಬರಬೇಕಿರುವ ಎರಡನೇ ಕಂತಿನ ಹಣ ಇನ್ನು ಬಿಡುಗಡೆಯಾಗಗಿಲ್ಲ. ಮೊದಲೇ ಭೀಕರ ಬರಗಾಲ ಆವರಿಸಿದೆ ಕಳೆದ ವರ್ಷದ ಹಣ ಬಂದಿದ್ದರೆ ಕಷ್ಟಕ್ಕೆ ಅನುಕೂಲವಾಗುತ್ತದೆ ಎಂಬ ನಿರೀಕ್ಷೆಯಲ್ಲೇ ರೈತರು ಸರ್ಕಾರದತ್ತ ದೃಷ್ಟಿ ನೆಟ್ಟಿದ್ದಾರೆ.ಸದರಿ ಯೋಜನೆಯಲ್ಲಿ ಅರ್ಹ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿ ಚಟುವಟಿಕೆಗಳಲ್ಲಿ ರೈತರಿಗೆ ಒಂದು ಬಾರಿ ಮಾತ್ರ ಅನುಕೂಲ ಕಲ್ಪಿಸಲಾಗುತ್ತದೆ. ಎಕರೆವಾರು ಮತ್ತು ಬೆಳೆ ಆಧಾರದ ಮೇಲೆ ಗರಿಷ್ಟ ರೂ 10 ಸಾವಿರ ಪ್ರೋತ್ಸಾಹಧನ ದೊರೆಯುತ್ತದೆ. ತಲಾ ರೂ 5 ಸಾವಿರದಂತೆ ಎರಡು ಸಮಾನ ಕಂತುಗಳಲ್ಲಿ ಹಣ ಸಂಬಂಧಿಸಿದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾಗಬೇಕು.ಕೃಷಿ ಇಲಾಖೆಗೆ 2011-12ನೇ ಹಣಕಾಸು ವರ್ಷದಲ್ಲಿ 2500 ಫಲಾನುಭವಿಗಳ ಗುರಿ ನಿಗದಿಪಡಿಸಲಾಗಿತ್ತು. ಅವರಲ್ಲಿ ಅಂದಾಜು 1226 ಫಲಾನುಭವಿಗಳಿಗೆ ತಲಾ ರೂ 5 ಸಾವಿರದಂತೆ ನೀಡಬೇಕಿದ್ದ ಸು

ಮಾರು ರೂ 57 ಲಕ್ಷ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದು ಕೇವಲ ಕೃಷಿ ಇಲಾಖೆಗೆ ಸಂಬಂಧಿಸಿದ ಬಾಕಿಯಾಗಿದ್ದು ಉಳಿದ ಮೂರು ಇಲಾಖೆಗಳಿಗೆ ಸೇರಿದ ಫಲಾನುಭವಿಗಳಿಗೆ ಬರಬೇಕಿರುವ ಒಟ್ಟು ಮೊತ್ತ ಇನ್ನೂ ಹೆಚ್ಚಾಗುತ್ತದೆ ಎಂದು ಮೂಲಗಳು ತಿಳಿಸಿವೆ.ಈ ಮಧ್ಯೆ ಕೃಷಿ ಇಲಾಖೆಗೆ 2012-13ನೇ ವರ್ಷಕ್ಕೆ ನೀಡಿರುವ ಗುರಿಯಂತೆ ಈಗಾಲೇ ಲಾಟರಿ ಮೂಲಕ 1392 ಫಲಾನುಭವಿಗಳನ್ನು ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅವರ ಬ್ಯಾಂಕ್ ಖಾತೆ ಇತರೆ ವಿವರಗಳನ್ನು ಪರಿಶೀಲಿಸುವ ಪ್ರಕ್ರಿಯೆ ಮುಂದುವರೆದಿದೆ.ಮುಂಗಾರು ಅವಧಿ ಮುಗಿದು ಇನ್ನೇನು ಹಿಂಗಾರು ಪ್ರವೇಶಿಸಲಿದೆ ಈ ವರ್ಷದ ಫಲಾನುಭವಿಗಳು ಮೊದಲ ಕಂತಿನ ಹಣಕ್ಕೆ ಎದಿರು ನೋಡುತ್ತಿದ್ದರೆ ಕಳೆದ ವರ್ಷದ ಫಲಾನುಭವಿಗಳು ತಮ್ಮ ಎರಡನೇ ಕಂತಿನ ಹಣಕ್ಕಾಗಿ ಬಕಪಕ್ಷಿಗಳಂತೆ ಕಾಯುತ್ತಿರುವುದು ರಾಜ್ಯ ಸರ್ಕಾರದ `ಜನಪ್ರಿಯ~ಯೋಜನೆಗೆ ಬಂದಿರುವ ಗತಿ ಎಂಥಹದ್ದು ಎಂಬುದರ ಅರಿವಾಗುತ್ತದೆ.ಸರ್ಕಾರದ ಆಶಯ ಮತ್ತು ಯೋಜನೆಯ ಉದ್ದೇಶ ಈಡೇರಬೇಕಾದರೆ ನಿಗದಿತ ಅವಧಿಯಲ್ಲಿ ಪ್ರೋತ್ಸಾಹಧನ ರೈತರ ಕೈಸೇರಬೇಕು. ಆದರೆ ಹೊಸ ಯೋಜನೆಗಳನ್ನು ಪ್ರಕಟಿಸುವ ರಾಜ್ಯ ಸರ್ಕಾರ ಹಳೆಯ ಯೋಜನೆಗಳಿಗೆ ಸೇರಿದ ಕೋಟ್ಯಂತರ ಹಣವನ್ನು ರೈತರಿಗೆ ನೀಡದಿರುವುದು ವಿಪರ್ಯಾಸವಾಗಿದೆ ಎಂದು ರೈತರಾದ ಹನುಮಗೌಡ ಪಾಟೀಲ, ನರಸಪ್ಪ ಗುರಿಕಾರ ಇತರರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.