ರೈತರಿಗೆ ಸಹಾಯ, ನೀರಾವರಿಗೆ ಆದ್ಯತೆ

7

ರೈತರಿಗೆ ಸಹಾಯ, ನೀರಾವರಿಗೆ ಆದ್ಯತೆ

Published:
Updated:

ಬಸವಕಲ್ಯಾಣ: ‘ಮುಲ್ಲಾಮಾರಿ ನಾಲೆಯನ್ನು ಅಗಲಗೊಳಿಸುವ ಹಾಗೂ ದಂಡೆಗೆ ಅರಣಿ ಹಾಕುವ  ಕೆಲಸ ನಡೆಯದ ಕಾರಣ ಮಳೆಗಾಲದಲ್ಲಿ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾಳಾಗುತ್ತಿದೆ. ಸೇತುವೆಗಳು ಕಿರಿದಾಗಿದ್ದರಿಂದ ರಸ್ತೆ ಸಂಚಾರ ನಿಂತು ಹೋಗುತ್ತಿದೆ ಆದರೂ ಯಾರೂ ನೋಡುತ್ತಿಲ್ಲ. ನಾಲೆಗೆ ಬ್ಯಾರೇಜ್‌ಗಳನ್ನು ನಿರ್ಮಿಸಿ ಕುಡಿಯುವ ನೀರಿಗೆ ಮತ್ತು ನೀರಾವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರೂ ಪ್ರಯೋಜನ ಆಗಿಲ್ಲ’ಇದು ತಾಲ್ಲೂಕಿನ ಮಂಠಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಜನತೆಯ ಗೋಳು. ಈ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸುತ್ತೇನೆ ಎಂದು ಎರಡನೇ ಸಲ ಆಯ್ಕೆಯಾಗಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಸಂಜೀವ ಎಸ್.ಕಾಳೇಕರ್ ಭರವಸೆ ಕೊಡುತ್ತಾರೆ. ಈಗಾಗಲೇ ರೋಳಾ ಹತ್ತಿರ 2 ಕೋಟಿ ವೆಚ್ಚದ ಬಿಸಿಬಿ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಬೇರೆ ಸ್ಥಳದಲ್ಲಿಯೂ ಬಿಸಿಬಿ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎನ್ನುತ್ತಾರೆ.ಈ ಕ್ಷೇತ್ರದಲ್ಲಿನ ನಿರ್ಗುಡಿ, ಸಸ್ತಾಪುರ, ಮಂಠಾಳ ಮತ್ತು ಗುಂಡೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳು ಮುಲ್ಲಾಮಾರಿ ನಾಲೆಯ ಸುತ್ತಮುತ್ತಲೇ ಇವೆ. ಕೆಲ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ನೀರಿಗಾಗಿ ಪರದಾಡಬೇಕಾಗುತ್ತದೆ. ಮಿರ್ಜಾಪುರದಲ್ಲಿ 2 ಕಿ.ಮೀ. ದೂರದಿಂದ ನೀರು ತರುವ ಪರಿಸ್ಥಿತಿ ಇದ್ದರೆ ಸಸ್ತಾಪುರದಲ್ಲಿ ಸೇದುವ ಬಾವಿಯೇ ಆಸರೆಯಾಗಿದೆ. ಮಂಠಾಳದಲ್ಲಿ ಸಾಕಷ್ಟು ಯೋಜನೆಗಳು ಕಾರ್ಯಗತಗೊಂಡರೂ ಸಮಸ್ಯೆ ಬಗೆಹರಿದಿಲ್ಲ.ಇಲ್ಲಾಳ ಮತ್ತು ಮಂಠಾಳ ಹತ್ತಿರದ ಸೇತುವೆ ಎತ್ತರಿಸಬೇಕು. ಜಾಪೂರವಾಡಿ, ಕೌಡಿಯಾಳ, ಅತ್ಲಾಪುರ, ಉರ್ಕಿ, ಕಾಂಬಳೆವಾಡಿಗಳಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳು ದೊರೆಯುವಂತೆ ಮಾಡಬೇಕು. ಮಂಠಾಳದಲ್ಲಿ 10 ಸಾವಿರ ಜನಸಂಖ್ಯೆ ಇದ್ದರೂ ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಸರಿಯಿಲ್ಲ. ಇದಲ್ಲದೆ ತಾಲ್ಲೂಕಿನ ಅರ್ಧಭಾಗದಷ್ಟು ಜನತೆ ಈ ಕೇಂದ್ರವನ್ನು ಅವಲಂಬಿಸಿದ್ದಾರೆ ಆದರೂ ಹೆಚ್ಚಿನ ಸೌಲಭ್ಯ ಒದಗಿಸಲಾಗಿಲ್ಲ. ಇಲ್ಲಿನ ಪ್ರೌಢಶಾಲೆಗೆ ಆವರಣಗೋಡೆ ಇಲ್ಲದ್ದರಿಂದ ರಾತ್ರಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಕ್ಷೇತ್ರದ ಬಹಳಷ್ಟು ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಉದ್ಯೋಗ ಖಾತರಿ ಯೋಜನೆಯ ಪ್ರಯೋಜನ ಆಗಿಲ್ಲ ಎಂದು ಜನರು ಹೇಳುತ್ತಾರೆ.ಭರವಸೆ: ಗ್ರಾಮಗಳಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ. ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿ ಕೊಡಲು ಒತ್ತುಕೊಟ್ಟು ಕೆಲಸ ಮಾಡುತ್ತೇನೆ ಎನ್ನುತ್ತಾರೆ ಸದಸ್ಯ ಸಂಜೀವ ಕಾಳೇಕರ್ ಅವರು. 33 ವರ್ಷ ವಯಸ್ಸಿನ ಇವರು ಬಿ.ಎಸ್ಸಿ ಪದವೀಧರರು. ಗಣೇಶ ಯುವಕ ಸಂಘ ಮತ್ತು ಜೈಗುರುದೇವ ಟ್ರಸ್ಟ್‌ನ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯದಲ್ಲಿಯೂ ಭಾಗಿಯಾಗಿದ್ದಾರೆ.  ಮೂಲತಃ ಬೀದರನವರು. ಹಿಂದಿನ ಅವಧಿಯಲ್ಲಿ ತಾಲ್ಲೂಕಿನ ನಾರಾಯಣಪುರ ಜಿಪಂ ಕ್ಷೇತ್ರದ ಸದಸ್ಯರಾಗಿದ್ದರು. ಈ ಸಲ ಜೆಡಿಎಸ್ ಪಕ್ಷದ ಟಿಕೆಟ್ ದೊರೆಯದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದರು.‘ಜಿಪಂ ಮಾಜಿ ಅಧ್ಯಕ್ಷರಾಗಿದ್ದ ಭಾವನವರಾದ (ಅಕ್ಕನ ಗಂಡ) ದಿ.ಪ್ರಕಾಶ ಕಾಳೇಕರ್ ಅವರ ಅಕಾಲಿಕ ಮರಣದಿಂದಾಗಿ ತಾವು ಅವರ ವ್ಯಾಪಾರ, ವ್ಯವಹಾರ ನೋಡಿಕೊಳ್ಳುವ ಜೊತೆಗೆ ರಾಜಕೀಯದಲ್ಲಿಯೂ ಪ್ರವೇಶಿಸುವುದು ಅನಿವಾರ್ಯವಾಯಿತು. ಕೇವಲ 28 ವರ್ಷದವನಾಗಿ ಚುನಾವಣೆಗೆ ಸ್ಪರ್ಧಿಸಿದಾಗ ನಾರಾಯಣಪುರ ಜಿಪಂ ಕ್ಷೇತ್ರದವರು ನನ್ನನ್ನು ಬಹುಮತದಿಂದ ಗೆಲ್ಲಿಸಿದರು. ಮಂಠಾಳ ಕ್ಷೇತ್ರದವರು ನನಗೆ ಎರಡನೇ ಸಲ ಸದಸ್ಯನಾಗುವ ಅವಕಾಶ ಒದಗಿಸಿದ್ದಾರೆ. ಆದ್ದರಿಂದ ಹೆಚ್ಚಿನ ಕೆಲಸ ಮಾಡಲಿದ್ದೇನೆ’ ಎನ್ನುತ್ತಾರೆ.ಮಿರ್ಜಾಪುರದಲ್ಲಿ ನೀರಿನ ಪೈಪ್‌ಲೈನ್ ಕೈಗೊಳ್ಳಲು ರೂ. 10 ಲಕ್ಷ ಮಂಜೂರಾಗಿವೆ. ಇದಲ್ಲದೆ ಮಂಠಾಳ ಮತ್ತು ಇತರೆಡೆ ನೀರಿನ ವ್ಯವಸ್ಥೆಗೆ ಈಗಾಗಲೇ ಸಸ್ಟೆನೆಬಲಿಟಿ ಮತ್ತು ಇತರೆ ಯೋಜನೆಯಲ್ಲಿ ಒಟ್ಟು 90 ಲಕ್ಷ ರೂಪಾಯಿ ಮಂಜೂರಾಗಿವೆ. ಈ ಹಣ ಸರಿಯಾಗಿ ಖರ್ಚಾಗುವಂತೆ ನೋಡಿಕೊಳ್ಳುತ್ತೇನೆ. ರಸ್ತೆ, ಶಾಲಾ ಕೋಣೆ ಇಲ್ಲದ ಕಡೆಗಳಲ್ಲಿ ಅದರ ವ್ಯವಸ್ಥೆ ಮಾಡುತ್ತೇನೆ. ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲು ಸರ್ವಪ್ರಯತ್ನ ಮಾಡುತ್ತೇನೆ ಎಂದು ಭರವಸೆ ಕೊಡುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry