ಶನಿವಾರ, ಮೇ 28, 2022
26 °C

ರೈತರಿಗೆ ಸಾಲ ನೀಡದ ಬ್ಯಾಂಕ್ ಠೇವಣಿ ವಾಪಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ವಿವಿಧ ಯೋಜನೆಗಳಡಿ ಸಾಲ ಪಡೆಯಲು ಅರ್ಜಿ ಸಲ್ಲಿಸಿದ ರೈತರಿಗೆ ಸಕಾರಾತ್ಮಕವಾಗಿ ಸ್ಪಂದಿಸದ ಬ್ಯಾಂಕ್‌ಗಳಲ್ಲಿ ಇರುವ ಜಿಲ್ಲಾ ಪಂಚಾಯಿತಿಯ ಠೇವಣಿ ವಾಪಸು ಪಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಿ.ವಿ.ಹರೀಶ್ ಆಗ್ರಹಿಸಿದರು. ಅಧ್ಯಕ್ಷೆ ಮಂಜುಳಾ, ಸದಸ್ಯರಾದ ಎಸ್.ಬಿ.ಮುನಿವೆಂಕಟಪ್ಪ, ಕಿಟ್ಟಪ್ಪ, ಅ.ಮು.ಲಕ್ಷ್ಮಿನಾರಾಯಣ ಈ ಮಾತಿಗೆ ದನಿಗೂಡಿಸಿದರು.ರೈತರಿಗೆ ಸಾಲ ನೀಡುವಲ್ಲಿ ಬ್ಯಾಂಕ್‌ಗಳ ವ್ಯವಸ್ಥಾಪಕರು ಕಾರಣವಿಲ್ಲದೆ ಹಿಂಜರಿಯುತ್ತಿದ್ದಾರೆ. ರೈತರನ್ನು ಅಮಾನವೀಯವಾಗಿ ನಡೆಸುಕೊಳ್ಳುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರ ಶಿಫಾರಸಿಗೂ ಬೆಲೆಯೇ ಇಲ್ಲದಂತಾಗಿದೆ. ಇನ್ನು ಸಾಮಾನ್ಯ ರೈತರ ಪಾಡೇನು? ರೈತರನ್ನು ನಿರ್ಲಕ್ಷ್ಯಿಸುವ ಬ್ಯಾಂಕ್‌ಗಳಲ್ಲಿ ಜಿಲ್ಲಾ ಪಂಚಾಯಿತಿ ತನ್ನ ಹಣಕಾಸು ವ್ಯವಹಾರ ಹಿಂತೆಗೆದುಕೊಳ್ಳುವುದು ಉಚಿತ ಎಂದು ಹರೀಶ್ ಸಲಹೆ ನೀಡಿದರು.

ಸಾಲ ನೀಡದ ಬ್ಯಾಂಕ್‌ಗಳ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳುವಲ್ಲಿ ಲೀಡ್ ಬ್ಯಾಂಕ್ ವಿಫಲವಾಗಿದೆ.ಬಹಳಷ್ಟು ಬ್ಯಾಂಕ್‌ಗಳಲ್ಲಿ ಲೀಡ್ ಬ್ಯಾಂಕ್ ಯೋಜನೆಗಳ ಬಗ್ಗೆ ಮಾಹಿತಿಯನ್ನೇ ಪ್ರಕಟಿಸಿಲ್ಲ ಎಂದು ಅವರು ಬ್ಯಾಂಕ್ ವ್ಯವಸ್ಥಾಪಕ ರೆಡ್ಡಯ್ಯ ರಾಜು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಬ್ಯಾಂಕ್‌ಗಳಲ್ಲಿ ಸಾಲ ಪಡೆಯಬೇಕೆಂದರೆ ಮಧ್ಯವರ್ತಿಗಳನ್ನು ಸಂಪರ್ಕಿಸಲೇಬೇಕು ಎಂಬ ಸನ್ನಿವೇಶ ನಿರ್ಮಾಣವಾಗುತ್ತದೆ. ಮಧ್ಯವರ್ತಿಗಳ ಮೂಲಕ ಅರ್ಜಿ ಸಲ್ಲಿಸಿದರೆ ಬ್ಯಾಂಕ್‌ನವರು ಕಮೀಷನ್ ಪಡೆದು ಸಾಲ ಮಂಜೂರು ಮಾಡುತ್ತಾರೆ ಎಂದುಆರೋಪಿಸಿದರು.ಅಂಥ ಪ್ರಕರಣಗಳ ಬಗ್ಗೆ ನಿರ್ದಿಷ್ಟ ದೂರು ನೀಡಿದರೆ ಕ್ರಮ ವಹಿಸಲಾಗುವುದು ಎಂಬ ರಾಜು ಅವರ ಪ್ರತಿಕ್ರಿಯೆ ಒಪ್ಪದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಬಿ.ಮುನಿವೆಂಕಟಪ್ಪ, ಗದ್ದೆಕಣ್ಣೂರು ರೈತರೊಬ್ಬರ ಪ್ರಕರಣವನ್ನು ನಿಮ್ಮ ಗಮನಕ್ಕೆ ತರಲಾಗಿತ್ತು. ಆದರೆ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಮಸ್ಯೆ ನಿವಾರಣೆ ಸಲುವಾಗಿ ಬ್ಯಾಂಕ್ ವ್ಯವಸ್ಥಾಪಕರ ಸಭೆ ಆಯೋಜಿಸಿ ಎಂದು ಹರೀಶ್ ಸೂಚಿಸಿದರು.ಪಂಪ್-ಮೋಟರ್: ಹಳ್ಳಿಗಳಲ್ಲಿ ಕೆಲವು ತಿಂಗಳ ಹಿಂದೆ ಕೊರೆಯಲಾಗಿರುವ ಕೊಳವೆಬಾವಿಗಳಿಗೆ ಪಂಪ್-ಮೋಟರ್ ಇನ್ನೂ ಅಳವಡಿಸಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಬರಗಾಲ ಹೋಗಿಲ್ಲ. ಮಳೆ ಬಿದ್ದಿಲ್ಲ. ಅಂತರ್ಜಲ ಮಟ್ಟವೂ ಹೆಚ್ಚಿಲ್ಲ. ಇಂಥ ಸಂದರ್ಭದಲ್ಲಿ ಕೊರೆದಿರುವ ಕೊಳವೆಬಾವಿಗಳಿಗೆ ಪಂಪ್-ಮೋಟರ್ ಅಳವಡಿಸದಿದ್ದರೆ ಪ್ರಯೋಜನವಾಗುವುದಿಲ್ಲ ಎಂದು ನುಡಿದರು.ಜನಸಂಖ್ಯೆ ಆಧರಿಸಿ 2.5 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಅವರಿಗೆ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿ 5 ಕೋಟಿ ಬಿಡುಗಡೆ ಮಾಡಿದೆ. ಆ ಹಣ ಮಂಜೂರಾದ ಕೂಡಲೇ ಪಂಪ್-ಮೋಟರ್ ಅಳವಡಿಸಲಾಗುವುದು ಎಂದು ಜಿ.ಪಂ. ಕಾರ್ಯಪಾಲಕ ಎಂಜಿನಿಯರ್ ದೇವರಾಜ್ ಸ್ಪಷ್ಟಪಡಿಸಿದರು.32 ಡೆಂಗೆ ಪ್ರಕರಣ


ಜಿಲ್ಲೆಯಲ್ಲಿ 262 ಶಂಕಿತ ಡೆಂಗೆ ಪ್ರಕರಣ ಪತ್ತೆಯಾಗಿದ್ದು, 70 ಮಂದಿಯನ್ನು ತಪಾಸಣೆಗೊಳಪಡಿಸಿದಾಗ 32 ಮಂದಿಗೆ  (ಕೋಲಾರ ತಾಲ್ಲೂಕಿನಲ್ಲಿ 5, ಬಂಗಾರಪೇಟೆಯಲ್ಲಿ 22, ಮಾಲೂರಿನಲ್ಲಿ 2 ಮತ್ತು ಶ್ರೀನಿವಾಸಪುರದಲ್ಲಿ 3) ಡೆಂಗೆ ಇರುವುದು ಖಚಿತಪಟ್ಟಿದೆ. ಅವರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪ್ರಕಾಶ್ ಕುಮಾರ್ ಮಾಹಿತಿ ನೀಡಿದರು.ಬಂಗಾರಪೇಟೆಯ 12 ಹಳ್ಳಿಗಳಲ್ಲಿ ಡೆಂಗೆ ಪ್ರಕರಣ ಪತ್ತೆಯಾಗಿವೆ. ಎಲ್ಲ ತಾಲ್ಲೂಕುಗಳಲ್ಲೂ ಮುನ್ನೆಚ್ಚರಿಕೆ ಸಲುವಾಗಿ ತಂಡ ರಚಿಸಲಾಗಿದೆ. ಇದುವರೆಗೆ ಬಂಗಾರಪೇಟೆ ಮತ್ತು ಕೆಜಿಎಫ್‌ನಲ್ಲಿ 87,390 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. 3583 ಮನೆಗಳಲ್ಲಿ ಲಾರ್ವಾ ಸೊಳ್ಳೆ ಪತ್ತೆಯಾಗಿವೆ. ಆ ಮನೆಗಳಲ್ಲಿರುವ ನೀರನ್ನು ಹೊರಚೆಲ್ಲಲು ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸಿದರು.ಡೆಂಗೆ ನಿಯಂತ್ರಣದ ಸಲುವಾಗಿ ಪ್ರತಿ ಹಳ್ಳಿಯಲ್ಲೂ ಕಾರ್ಯಪಡೆ ಸಭೆ ನಡೆಸಲಾಗುತ್ತಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಲಾಗುತ್ತಿದೆ. ಆದರೆ ಹಳ್ಳಿಗಳಲ್ಲಿ ರೇಷ್ಮೆ ಬೆಳೆಗೆ ಹಾನಿಯಾಗುವುದರಿಂದ ಅಲ್ಲಿ ಫಾಗಿಂಗ್‌ಗೆ ಶಿಫಾರಸು ಮಾಡಿಲ್ಲ ಎಂದು ತಿಳಿಸಿದರು.ಸಿಇಒ ಕಾರ್ಯವೈಖರಿ: ಹರೀಶ್ ಅಸಮಾಧಾನ, ಸಭಾತ್ಯಾಗ

ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್ ಮತ್ತು ಉಪಾಧ್ಯಕ್ಷ ಡಿ.ವಿ.ಹರೀಶ್ ನಡುವೆ ವಾಗ್ವಾದವೂ ಸಭೆಯ ಹೈಲೈಟ್. ಇಬ್ಬರ ನಡುವಿನ ವಾಗ್ವದ ಮೇರೆ ಮೀರಿ ಹರೀಶ್ ಸಭಾತ್ಯಾಗ ಮಾಡುವುದರೊಂದಿಗೆ ಕೊನೆಗೊಂಡಿತು.ಶಿಕ್ಷಕರ ವರ್ಗಾವಣೆ ವಿಷಯದಲ್ಲಿ ಅವ್ಯವಹಾರ ಮಾಡಿದ ಆರೋಪ ಹೊತ್ತಿರುವ ಹಿಂದಿನ ಡಿಡಿಪಿಐ    ಎಚ್.ಡಿ.ಗೋವಿಂದಯ್ಯ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಚೋಳನ್ ನಿರ್ಲಕ್ಷ್ಯ ವಹಿಸಿದ್ದಾರೆ. ಕ್ರಮ ಕೈಗೊಳ್ಳಿ ಎಂದರೆ, `ಅವರು ವರ್ಗಾವಣೆಯಾಗಿದ್ದಾರಲ್ಲ ಬಿಡಿ~ ಎಂಬ ಉತ್ತರ ನೀಡುತ್ತಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯಲ್ಲೂ ಇದೇ ರೀತಿಯಾಗಿದೆ. ಯಾರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಉದ್ಯೋಗ ಖಾತ್ರಿ ಯೋಜನೆಯ ಒಂಬುಡ್ಸ್‌ಮನ್ ಆಗಿದ್ದ, ನಿವೃತ್ತ ಐಪಿಎಸ್ ಅಧಿಕಾರಿ ತಮಗೆ ಜಿಲ್ಲಾ ಪಂಚಾಯಿತಿ ವಾಹನ ಸೌಕರ್ಯ ನೀಡಲಿಲ್ಲ ಎಂಬ ಅಸಮಾಧಾನದಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಉಪಾಧ್ಯಕ್ಷನಾಗಿ ನನಗೆ ಎರಡು ತಿಂಗಳಾದರೂ ವಾಹನ ಸೌಕರ್ಯ ಒದಗಿಸುವಲ್ಲಿಯೂ ಚೋಳನ್ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹರೀಶ್ ಅಸಮಾಧಾನ ವ್ಯಕ್ತಪಡಿಸಿದರು.ಶಾಸಕರ ಒತ್ತಡವಿದೆ ಎಂದು ಕೆಲ ಕೆಲಸಗಳನ್ನು ತಪ್ಪದೇ ಮಾಡುತ್ತೀರಿ. ನಾವು ಹೇಳಿದರೆ ಸರ್ಕಾರ, ಕಾನೂನು ಎಂದು ಸಬೂಬು ಹೇಳುತ್ತೀರಿ. ಅನವಶ್ಯವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ಮಾಡುವ ಅಗತ್ಯವೇನಿತ್ತು? ಅಧಿಕಾರ ವಿಕೇಂದ್ರೀಕರಣಕ್ಕೆ ಬೆಲೆಯೇ ಇಲ್ಲದಂತಾಗಿದೆ. ಯಾಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಿಲ್ಲ ಎಂದು ನೇರವಾಗಿ ಚೋಳನ್ ಅವರನ್ನು ಪ್ರಶ್ನಿಸಿದರು. ನಿಮಗೆ ಇಲ್ಲಿ ಕೆಲಸ ಮಾಡಲಾಗುವುದಿಲ್ಲ ಎಂದರೆ ಬೇರೆ ಜಿಲ್ಲೆಗೆ ಹೋಗಿ ಎಂದೂ ನುಡಿದರು. ಅದಕ್ಕೆ ಅಧ್ಯಕ್ಷೆ ಮಂಜುಳಾ ದನಿಗೂಡಿಸಿದರು.ನಿಯಮ ಮೀರಿ ಯಾವುದೇ ಕೆಲಸ ಮಾಡಿರುವ ಒಂದೇ ಒಂದು ಉದಾಹರಣೆ ನೀಡಿದರೂ ನಾನೂ ಬೇರೆ ಜಿಲ್ಲೆಗೆ ಹೋಗುವೆ ಎಂದು ಚೋಳನ್ ಕೂಡ ಸವಾಲೆಸೆದರು.ಈ ವಾಗ್ವಾದ ತಾರಕಕ್ಕೇರಿದ ಕ್ಷಣದಲ್ಲಿ ಭಾವಾವೇಶಕ್ಕೆ ಒಳಗಾದ ಹರೀಶ್, ಜಿಲ್ಲಾ ಪಂಚಾಯಿತಿ ಎಂದರೆ ಬೆಲೆಯೇ ಇಲ್ಲದಂತಾಗಿದೆ. ಆಡಳಿತ ನಿಯಂತ್ರಣದಲ್ಲಿಲ್ಲ. ನಿಮ್ಮ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ. ನೀವೇ ಸಭೆ ನಡೆಸಿಕೊಳ್ಳಿ ಎಂದು ಚೋಳನ್ ಅವರಿಗೆ ಹೇಳಿ ದೀಢೀರನೆ ಸಭೆಯಿಂದ ಎದ್ದುಹೋದರು. ನಂತರ ಅವರನ್ನು ಹಿರಿಯ ಸದಸ್ಯರಾದ  ಎಸ್.ಬಿ.ಮುನಿವೆಂಕಟಪ್ಪ, ಕಿಟ್ಟಪ್ಪ, ಅ.ಮು. ಲಕ್ಷ್ಮಿನಾರಾಯಣ ಸಂತೈಸಿ ಸಭೆಗೆ ಕರೆತಂದರು.ನೀರು: 50 ಕೋಟಿ ಕ್ರಿಯಾ ಯೋಜನೆ

ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲಾ ಪಂಚಾಯಿತಿ ತಾಂತ್ರಿಕ ವಿಭಾಗದಿಂದ ರೂ.50 ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್ ತಿಳಿಸಿದರು.ರೂ.50 ಕೋಟಿ  ಕ್ರಿಯಾ ಯೋಜನೆಯಲ್ಲಿ ಪ್ರತಿ ತಾಲ್ಲೂಕಿಗೆ ತಲಾ ಹತ್ತು ಕೋಟಿ ನೀರು ಪೂರೈಕೆಗಾಗಿ ನೀಡಲಾಗುವುದು. ಕುಡಿಯುವ ನೀರು ಪೂರೈಕೆಗಾಗಿ ಈಗಾಗಲೇ ಸರ್ಕಾರದಿಂದ 5 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.