ರೈತರಿಗೆ ಸಿಗಲಿ ಉತ್ತಮ ರೇಡಿಯೊ

7

ರೈತರಿಗೆ ಸಿಗಲಿ ಉತ್ತಮ ರೇಡಿಯೊ

Published:
Updated:

ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಕೃಷಿಗೆಂದೇ ವಿಶೇಷ ಬಜೆಟ್ ಮಂಡನೆ ಮಾಡಲು ಹೊರಟಿದೆಯಷ್ಟೆ? ನನ್ನದೊಂದು ಸಲಹೆ ಇದೆ: ಗ್ರಾಮೀಣ ಜನರ ಕೈಗೆ ಮತ್ತೆ ರೇಡಿಯೊ ಸಿಗುವಂತೆ ಮಾಡಬೇಕು. ಸರ್ಕಾರದ ಯಾವುದೇ ಕಾರ್ಯಕ್ರಮ ಕುರಿತು ಹಳ್ಳಿಯ ಜನರಿಗೆ ಮಾಹಿತಿ ತಲುಪುವುದೇ ಈಗೀಗ ಅಪರೂಪವಾಗುತ್ತಿದೆ. ಹಿಂದೆ ರೇಡಿಯೊ ಜನಪ್ರಿಯವಾಗಿದ್ದಾಗ ಅಷ್ಟಿಷ್ಟು ಕೃಷಿಪರ ವಿಚಾರಗಳು ಹಳ್ಳಿಗಳಿಗೆ ಹೋಗುತ್ತಿದ್ದವು. ನೇಗಿಲು ಉಳುವ ರೈತನೂ ಎತ್ತಿನ ಕೋಡಿಗೆ ಪುಟ್ಟ ರೇಡಿಯೊ ಸಿಕ್ಕಿಸಿಕೊಂಡು ಹಾಡು ಗುನುಗುತ್ತಿದ್ದ. ಈಗ ಟಿವಿ ಬಂದಮೇಲೆ ಕೃಷಿಮಾಹಿತಿ ಅಲಭ್ಯವಾಗಿದೆ. ನಗರದಲ್ಲಿ ಎಫ್ ಎಮ್ ರೇಡಿಯೊ ಕ್ರಾಂತಿ ಆಗುತ್ತಿದ್ದರೆ ಹಳ್ಳಿಗರಿಗೆ ಬೇಕಿದ್ದ ಎಎಮ್ ರೇಡಿಯೊ ತಯಾರಕರೇ ಇಲ್ಲದಂತಾಗಿದ್ದಾರೆ.ಆಫ್ರಿಕದ ಬಡದೇಶಗಳಲ್ಲಿ ಗ್ರಾಮೀಣ ಜನರಿಗೆಂದೇ ವಿಶ್ವಸಂಸ್ಥೆಯ ನೆರವಿನಿಂದ ವಿಶೇಷ ಬಗೆಯ ರೇಡಿಯೊ ಮತ್ತು ಬಾನುಲಿ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಬ್ಯಾಟರಿ ಕೂಡ ಅಗತ್ಯವಿಲ್ಲದ, ಕೀಲಿ ತಿರುಗಿಸಿದರೆ ಧ್ವನಿ ಹೊಮ್ಮಿಸುವ ಅಲ್ಪವೆಚ್ಚದ ರೇಡಿಯೊಗಳು ಅಲ್ಲಿ ಮಾಹಿತಿ ಕ್ರಾಂತಿಯನ್ನು ಕುಗ್ರಾಮಗಳಿಗೂ ಒಯ್ಯುತ್ತಿವೆ. ತಮಿಳು ನಾಡಿನಲ್ಲೂ  ಅಂಥ ವ್ಯವಸ್ಥೆ ಇರುವುದಾಗಿ ಕೇಳಿದ್ದೇನೆ.ರೇಡಿಯೊಗಳಷ್ಟೇ ಅದರಲ್ಲಿ ಮೂಡುವ ಕಾರ್ಯಕ್ರಮಗಳೂ ಆಕರ್ಷಕ ಇರಬೇಕು. ಈಗಿನ ನೀರಸ ಸರ್ಕಾರಿ ಭಾಷಣಗಳ ರದ್ದಿಸುದ್ದಿಗಳ ಬದಲು ಚುರುಕಿನ, ಲವಲವಿಕೆಯ, ಸ್ಪಂದನಶೀಲ ಕಾರ್ಯಕ್ರಮಗಳು ಮೂಡಿಬರಬೇಕು. ಸಮುದಾಯ ರೇಡಿಯೊ ಕೇಂದ್ರಗಳನ್ನು ಆರಂಭಿಸಲು ಕಾನೂನಿನ ಅವಕಾಶವಿದೆ. ಅಷ್ಟು ಸಾಲದು; ಅಂಥ ಕೇಂದ್ರಗಳನ್ನು ನಡೆಸುವವರಿಗೆ ಪ್ರೋತ್ಸಾಹ, ತರಬೇತಿಗಳೂ ವಾರ್ತಾ ಇಲಾಖೆಯ ಮೂಲಕ ಸಿಗುವಂತಾಗಬೇಕು. ರೈತಸಮುದಾಯದಲ್ಲಿ ಹಾಡುವ ಉತ್ಸಾಹವೇ ಬತ್ತಿ ಹೋಗುತ್ತಿದೆ. ಮತ್ತೆ ಅಲ್ಲಿ ಚಲನಶೀಲತೆ ಮೂಡಬೇಕು. 2012ರ ಕೃಷಿ ಮುಂಗಡಪತ್ರವನ್ನು ರೈತರು (ಹೊಲ ಗದ್ದೆಗಳಲ್ಲಿರಲಿ, ಮನೆಗಳಲ್ಲಿರಲಿ, ಮಂಡಿಯಲ್ಲಿರಲಿ, ಬಸ್ ಛಾವಣಿಯ ಮೇಲಿರಲಿ) ರೇಡಿಯೊದಲ್ಲೇ ಕೇಳುವಂತಾಗಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry