ಭಾನುವಾರ, ನವೆಂಬರ್ 17, 2019
29 °C

ರೈತರಿಗೆ ಸೂಕ್ತ ಪರಿಹಾರ: ಡಿಸಿ ಭರವಸೆ

Published:
Updated:

ಚಿಕ್ಕಮಗಳೂರು: ಹೊಸಕೋಟೆಯಲ್ಲಿ ನಡೆಯು ತ್ತಿರುವ ರೈಲ್ವೆ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ, ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಹರಿಹರದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆಯ ರೈತರ ಮನವಿ ಮೇರೆಗೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದರು.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕನಕರಾಜ್, ಕಳೆದ ಹತ್ತು ವರ್ಷಗಳಿಂದ ರೈಲ್ವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಗ್ರಾಮದ ರೈತರಿಗೆ ತೊಂದರೆಯಾಗಿದೆ. ರೈಲ್ವೆ ಅಧಿಕಾರಿಗಳು ಸ್ಥಳ ಪರಿಶೀಲಿಸದೆ ವರದಿ ನೀಡಿದ್ದಾರೆ.

 

ಗ್ರಾಮಕ್ಕೆ ಎರಡು ಸೇತುವೆ ಅಗತ್ಯವಿದ್ದು, ಒಂದನ್ನು ಮಾತ್ರ ನಿರ್ಮಿಸುತ್ತಿದ್ದು, ಇನ್ನೊಂದನ್ನು ಇನ್ನೂ ಕೈಗೆತ್ತಿಕೊಂಡಿಲ್ಲ. ಇದರಿಂದಾಗಿ ಗ್ರಾಮದ 150 ಎಕರೆ ಫಲವತ್ತಾದ ಜಮೀನು ಹಾಳಾಗಿದೆ. ಹಿಂದಿದ್ದ ಜಿಲ್ಲಾಧಿಕಾರಿಗೆ ರೈಲ್ವೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಒಂದು ಕುಂಟೆ ಜಮೀನಿಗೆ 800 ರೂ. ನೀಡಿ, ಜಮೀನು ವಶಪಡಿಸಿಕೊಂಡಿದ್ದರು. ಆದರೆ, ಆ ಪರಿಹಾರ ರೈತರಿಗೆ ಸಾಕಾಗಿಲ್ಲ. ರೈತರ ಜಮೀನಿಗೆ ಸೂಕ್ತ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.ರೈಲ್ವೆ ಕಾಮಗಾರಿಯನ್ನು ಅದಷ್ಟು ಬೇಗ ಪೂರ್ಣಗೊಳಿಸಿ, ನಮ್ಮ ಗ್ರಾಮದ ರೈತರಿಗೆ ಅನುಕೂಲ ಮಾಡಿಕೊಡಬೇಕು. ಹೊಸಕೋಟೆಯ ಸುತ್ತಮುತ್ತ ಗ್ರಾಮಸ್ಥರು ಕೃಷಿ ಕೆಲಸದ ಮೇಲೆ ತಮ್ಮ ಜೀವನ ನಡೆಸುತ್ತಿದ್ದಾರೆ. ಅಧಿಕಾರಿಗಳು ರೈತರ ಸಮಸ್ಯೆ ಸ್ಪಂದಿಸಬೇಕು ಎಂದು ಮನವಿ ಮಾಡಿಕೊಂಡರು.

 ಉಪವಿಭಾಗಾಧಿಕಾರಿ ದಯಾನಂದ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)