ರೈತರು, ಕೃಷಿ ಕಾರ್ಮಿಕರಿಗೆ ಅನ್ಯಾಯ:ಇಂದಿನಿಂದ ಪ್ರಚಾರ ಜಾಥಾ

7

ರೈತರು, ಕೃಷಿ ಕಾರ್ಮಿಕರಿಗೆ ಅನ್ಯಾಯ:ಇಂದಿನಿಂದ ಪ್ರಚಾರ ಜಾಥಾ

Published:
Updated:

ಮಡಿಕೇರಿ: ಜಿಲ್ಲೆಯಲ್ಲಿನ ಕೃಷಿ ರಂಗದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೇ 23 ರಿಂದ 30 ವರೆಗೆ ಜಿಲ್ಲೆಯಾದ್ಯಂತ ಪ್ರಚಾರ ಜಾಥಾ ನಡೆಸುವುದಾಗಿ ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ತಿಳಿಸಿದರು.



ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರಿಗೆ ಉಂಟಾಗಿರುವ ಅನ್ಯಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿರಾಜಪೇಟೆಯಿಂದ ಈ ಅರಿವು ಜಾಥಾ ಆರಂಭಿಸುವುದಾಗಿ ಅವರು ತಿಳಿಸಿದರು.



ಜಾಥಾದ ಕೊನೆಯ ದಿನ ಮೇ 30 ರಂದು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಜಿಲ್ಲೆಯ ಕಾಫಿ ಬೆಳೆಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆ ದೊರೆಯುತ್ತಿಲ್ಲ. ಭತ್ತದ ಬೆಳೆಗೂ ಸೂಕ್ತ ಬೆಲೆ ದೊರಕುತ್ತಿಲ್ಲ. ಆದರೆ ನಿತ್ಯ ಬಳಕೆಯ ಸಾಮಗ್ರಿಗಳ ಬೆಲೆ ದುಬಾರಿಯಾಗಿದ್ದು ಇದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದರು.



ಸರ್ಕಾರವು ಅರಣ್ಯೀಕರಣದ ಹೆಸರಿನಲ್ಲಿ ಜನರ ಖಾಸಗಿ ಜಮೀನನ್ನು ವಶಪಡಿಸಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದೆ. ಜಿಲ್ಲೆಯಲ್ಲಿ ಕೆಲವು ಖಾಸಗಿ ಕಂಪೆನಿಗಳ ಹಾವಳಿ ಮತ್ತು ಸರ್ಕಾರದ ತಪ್ಪಾದ ಧೋರಣೆಯಿಂದಾಗಿ ಇಲ್ಲಿನ ರೈತಾಪಿ ವರ್ಗವು ಕೃಷಿ ತ್ಯಜಿಸಿ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗುವಂತಾಗಿದೆ ಎಂದು ಅವರು ಆರೋಪಿಸಿದರು.



ಖಾಸಗಿ ಕಂಪೆನಿಗಳು ಅಕ್ರಮವಾಗಿ ವಶಪಡಿಸಿಕೊಂಡಿರುವ ಭೂಮಿಯನ್ನು ತೆರವುಗೊಳಿಸಿ ಇದನ್ನು ಭೂ ಹೀನ ರೈತರಿಗೆ ನೀಡುವಂತೆ ಒತ್ತಾಯಿಸುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಅಕ್ರಮವಾಗಿ ಖಾಸಗಿ ಕಂಪೆನಿಗಳು ವಶಪಡಿಸಿಕೊಂಡಿರುವ ಪೈಸಾರಿ ಜಾಗವನ್ನು ಮಾಜಿ ಸೈನಿಕರಿಗೆ ನೀಡಬೇಕು ಎಂದರು.



ಜಿಲ್ಲೆಯ ಅಭಿವೃದ್ಧಿ ಕಾರ್ಯದಲ್ಲಿ ತೊಡಕುಂಟು ಮಾಡುತ್ತಿರುವ ಸಿಇಸಿ ವರದಿ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸುವಂತೆ ಒತ್ತಾಯಿಸುವುದಾಗಿ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry