ರೈತರು, ಪೊಲೀಸರ ನಡುವೆ ಘರ್ಷಣೆ

7
ಎಮ್ಮೆದೊಡ್ಡಿ: ಮೂವರು ಪೊಲೀಸರಿಗೆ ಗಾಯ, 23 ರೈತರ ಬಂಧನ

ರೈತರು, ಪೊಲೀಸರ ನಡುವೆ ಘರ್ಷಣೆ

Published:
Updated:

ಕಡೂರು: ತಾಲ್ಲೂಕಿನ ಬೀರೂರು ಹೋಬಳಿ ಎಮ್ಮೆದೊಡ್ಡಿ ಪ್ರದೇಶದ ಸರ್ವೆ ನಂ.70ರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸ್‌ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನೆಡುತೋಪು ಕಾರ್ಯದಲ್ಲಿ ತೊಡಗಿದ್ದ ವೇಳೆ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿ ಮೂವರು ಪೊಲೀಸರು ಗಾಯಗೊಂಡಿದ್ದು, ಘರ್ಷಣೆ ಸಂಬಂಧ 23 ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಳೆದ ತಿಂಗಳ ಅಂತ್ಯದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಮತ್ತು ರೈತರ ನಡುವೆ ವಾದ–ವಿವಾದ ನಡೆದು ಘರ್ಷಣೆಯೂ ನಡೆದಿತ್ತು. ನಂತರ ತರೀಕೆರೆ ಉಪವಿಭಾಗಾಧಿಕಾರಿ ಮತ್ತು ಕಡೂರು ತಹಶೀಲ್ದಾರರ ನಿರ್ದೇಶನದಂತೆ ಪೊಲೀಸರ ಸಹಕಾರದೊಂದಿಗೆ ಗುರುವಾರ ಸಸಿ ನೆಡಲು ಅರಣ್ಯ ಇಲಾಖೆ ಸಿಬ್ಬಂದಿ ತೆರಳಿದ್ದರು. ಕಡೂರು ತಹಶೀಲ್ದಾರ್‌ ಶಾರದಾಂಬಾ ಮತ್ತು ಡಿಎಫ್‌ಒ ಸತ್ಯನಾರಾಯಣ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯೂ ಸ್ಥಳದಲ್ಲಿ ಇದ್ದರು. ಈ ಹಂತದಲ್ಲಿ ರೈತರೆಂದು ಹೇಳಿಕೊಂಡು ದಿಢೀರ್‌ ದಾಳಿ ನಡೆಸಿದ ಶಿವಪುರ, ಚಿಕ್ಕೇನಹಳ್ಳಿ ಮತ್ತು ಸಗಣೀಪುರದ ಸುಮಾರು 50ಕ್ಕೂ ಹೆಚ್ಚು ಮಹಿಳೆ ಮತ್ತು ಪುರುಷರು ಅರಣ್ಯ ಸಿಬ್ಬಂದಿ ಮತ್ತು ಪೊಲೀಸರ ಮೇಲೆ ದಾಳಿ ನಡೆಸಿ ಸೀಮೆಎಣ್ಣೆ ಎರಚಿದರು.ಸ್ಥಳದಲ್ಲಿ ಇದ್ದ ಪೊಲೀಸರು ಲಾಠಿ ಬೀಸಬೇಕಾಯಿತು, ರೈತರು ದಿಕ್ಕಾಪಾಲಾಗಿ ಓಡಿದರು, ಈ ಗೊಂದಲದಲ್ಲಿ ಪೊಲೀಸ್‌ ಪೇದೆಗಳಾದ ಎ.ಪ್ರಕಾಶ, ಗೋವಿಂದಪ್ಪ ಮತ್ತು ಶಿವಕುಮಾರ್‌ ಎಂಬುವರಿಗೆ ಗಾಯಗಳಾಗಿ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಬೇಕಾಯಿತು.‘ಅರಣ್ಯ ಇಲಾಖೆ ಹೇಳುವಂತೆ 1942ರಲ್ಲಿಯೇ ಸರ್ವೆ ನಂ.70ರ ಜಮೀನು ಹುಲಿ ರಕ್ಷಿತಾರಣ್ಯ ವಲಯ ಎಂದು ಗೆಜೆಟ್‌ನಲ್ಲಿ ಘೋಷಿತವಾಗಿದೆ. ಅರಣ್ಯ ಇಲಾಖೆ ಈ ವಲಯದಲ್ಲಿ ಸಸಿಗಳನ್ನು ನೆಟ್ಟು ನೆಡುತೋಪುಗಳಾಗಿ ಪರಿವರ್ತಿಸಿ ಸಸಿ ಮಾರಾಟ ನಡೆಸುತ್ತಿತ್ತು. ಆದರೆ ರೈತರು ನಾವು ಇಲ್ಲಿ ಹಲವು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದು ಅರಣ್ಯ ಇಲಾಖೆ ವಿನಾಕಾರಣ ನಮ್ಮನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದೆ. ಇಲ್ಲಿಂದ ನಾವು ಹೋಗುವುದು ಎಲ್ಲಿಗೆ? ನಮ್ಮ ಜೀವನ ಹೇಗೆ?’ ಎಂದು ಪ್ರಶ್ನಿಸುತ್ತಾರೆ.ಒಟ್ಟಾರೆ ಘಟನೆ ಗುರುವಾರ ತಿರುವು ಪಡೆದು ಪೊಲೀಸ್‌–ಅರಣ್ಯ ಮತ್ತು ರೈತರ ನಡುವೆ ಘರ್ಷಣೆ ನಡೆಯುವ ಮೂಲಕ ವಿಕೋಪ ತಲುಪಿದೆ. ಪೊಲೀಸರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ 23 ರೈತರನ್ನು ವಶಕ್ಕೆ ಪಡೆದಿರುವ ಪೊಲಿಸರು ರೈತರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ ಎಂದು ತರೀಕೆರೆ ಡಿವೈಎಸ್‌ಪಿ  ಸದಾನಂದ.ಬಿ ನಾಯಕ್‌ ತಿಳಿಸಿದ್ದು, ಕಾರ್ಯಾಚರಣೆಯಲ್ಲಿ ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಬಾಲಚಂದ್ರೇಗೌಡ, ಪಿಎಸ್‌ಐ ಸಂತೋಷ ಶೆಟ್ಟಿ ಮತ್ತು ಸಿಬ್ಬಂದಿ ಪಾಲ್ಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry