ರೈತರು ಬದುಕುವುದು ಕಷ್ಟವಾಗುತ್ತಿದೆ...

7

ರೈತರು ಬದುಕುವುದು ಕಷ್ಟವಾಗುತ್ತಿದೆ...

Published:
Updated:

ಉಡುಪಿ: ಇತ್ತೀಚಿನ ಕೆಲ ದಶಕಗಳಲ್ಲಿ ಇತರೆ ಎಲ್ಲ ಕ್ಷೇತ್ರಗಳು ಸಾಕಷ್ಟು ಪ್ರಗತಿ ಸಾಧಿಸಿದರೂ ಕೂಡ ಕೃಷಿಕ್ಷೇತ್ರ ಮಾತ್ರ ದಿನೇ ದಿನೇ ಇಳಿಮುಖವಾಗುತ್ತಿದೆ. ಅದನ್ನೇ ನಂಬಿಕೊಂಡ ಕೃಷಿಕರು ಆತ್ಮವಿಶ್ವಾಸದಿಂದ, ಸ್ವಾಭಿಮಾನದಿಂದ ಬದುಕಲು ಆಗುತ್ತಿಲ್ಲ ಎನ್ನುವ ವಿಚಾರ ಆತಂಕ ಮೂಡಿಸುತ್ತಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಇಲ್ಲಿ ಹೇಳಿದರು.ಉಡುಪಿ ಜಿಲ್ಲಾ ಕೃಷಿಕ ಸಂಘ ಶನಿವಾರ ಆಯೋಜಿಸಿದ್ದ ರೈತ ಸಮಾವೇಶ-2011 ಉದ್ಘಾಟಿಸಿ ಅವರು ಮಾತನಾಡಿದರು.ಕೃಷಿಕ್ಷೇತ್ರಕ್ಕೆ ಸರ್ಕಾರದಿಂದ ಸಾಕಷ್ಟು ನೆರವು ದೊರಕಿದರೂ ಕೂಡ ಯಾವುದೇ ಕೃಷಿಕ ಉಲ್ಲಾಸದಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಕೃಷಿಯ ಬಗ್ಗೆ ಎಲ್ಲೆಡೆ ಅನಾದರ ಮೂಡುತ್ತಿದೆ. 2012ರ ಬಳಿಕ ನಮ್ಮ ದೇಶದಲ್ಲಿ ಆಹಾರ ಸಮಸ್ಯೆ ತಲೆದೋರಲಿದೆ. ಈಗಿರುವ ಆಹಾರ ಕೇವಲ ನಮಗೆ 76 ದಿನಗಳು ಮಾತ್ರವೇ ಸಾಕಾಗುವಷ್ಟು ಇದೆ ಎಂದು ವಿಶ್ವಸಂಸ್ಥೆ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ನಮ್ಮ ಕೃಷಿ ಮೂಲಕ ಆಹಾರ ಉತ್ಪಾದನೆ ಮಾಡದ ಹೊರತೂ ಭವಿಷ್ಯವಿಲ್ಲ ಎಂದರು.ನಮ್ಮ ದೇಶದಲ್ಲಿ ಕೃಷಿ ಸಾಕಷ್ಟು ಅವನತಿಯತ್ತ ಸಾಗಲು ಇನ್ನೊಂದು ಕಾರಣ, ಕೃಷಿ ಬಗ್ಗೆ ನಾವು ಋಣಾತ್ಮಕ ಭಾವನೆ ಬೆಳೆಸಿಕೊಂಡಿದ್ದೇವೆ. ಹೀಗಾಗಿ ಯುವ ಜನರನ್ನು ಕೃಷಿಯಿಂದ ದೂರ ಮಾಡಿದ್ದೇವೆ. ಐಷಾರಾಮಿ ಬದುಕಿನ ಕನಸನ್ನು ಅವರಲ್ಲಿ ಬಿತ್ತಿದ್ದೇವೆ. ಹೀಗಾಗಿ ನಮ್ಮ ಮಕ್ಕಳು ಕೂಡ ಕೃಷಿಯಿಂದ ವಿಮುಖರಾಗಿದ್ದಾರೆ. ಊರಿನಲ್ಲಿ ಕೃಷಿ ಭೂಮಿಗಳು ಪಾಳುಬೀಳುವಂತಾಗಿವೆ ಎಂದರು.ಎಲ್ಲ ಕ್ಷೇತ್ರದಂತೆ ಕೃಷಿ ಕ್ಷೇತ್ರದಲ್ಲಿ ಕೂಡ ಬೆಳೆಗಳ ವಿಚಾರದಲ್ಲಿ ಸಾಕಷ್ಟು ಮೋಸಗಳಾಗುತ್ತಿವೆ. ಇದು ಕೂಡ ರೈತರನ್ನು ಕಂಗಾಲು ಮಾಡುತ್ತವೆ. ಕೆಲವು ವರ್ಷಗಳಿಂದ ಈಚೆಗೆ ಎಷ್ಟೊಂದು ಬೆಳೆಗಳಲ್ಲಿ ಬದಲಾವಣೆ ಆಗುತ್ತ ಬಂತು. ಒಂದು ಕಾಲದಲ್ಲಿ ಅಡಿಕೆ ಉತ್ತಂಗದಲ್ಲಿತ್ತು, ನಂತರ ಕೊಕೋ, ಕಾಳು ಮೆಣಸು, ವೆನಿಲ್ಲಾ, ಮ್ಯಾಂಜಿಯಂ, ಅಕೇಶಿಯಾ...ಹೀಗೆ ಹಲವು ವೈವಿಧ್ಯಮಯ ಬೆಳೆಗಳು ನಮ್ಮ ಭೂಮಿಯನ್ನು ಆಕ್ರಮಿಸಿ ಅಷ್ಟೇ ಬೇಗ ಬೆಳೆಗಳು ಮಾರುಕಟ್ಟೆಯಲ್ಲಿ ದರ ಕುಸಿತ ಕಂಡು ರೈತರು ಕಂಗಾಲಾಗುವಂತೆ ಮಾಡಿವೆ ಎಂದರು.‘ಮರಳಿ ಕೃಷಿಗೆ ಬರುವವರಿಗೆ ಪ್ಯಾಕೇಜ್ ಸಿಗಲಿ’: ದಿಕ್ಸೂಚಿ ಭಾಷಣ ಮಾಡಿದ ನಾ.ಕಾರಂತ ಪೆರಾಜೆ, ಒಂದು ಕಾಲದಲ್ಲಿ ಕೃಷಿಯನ್ನು ಬಿಟ್ಟು ಉದ್ಯೋಗ ನಿಮಿ–ತ್ತ ಪೇಟೆಗೆ ತೆರಳಿದ್ದ ವಿದ್ಯಾವಂತರು ಈಗ ಮರಳಿ ಊರಿಗೆ ಬಂದು ಕೃಷಿ ಮಾಡಬೇಕು ಎನ್ನುವ ಹಂಬಲ ಹೊಂದಿದ್ದಾರೆ. ಹಾಗೆ ಮರಳಿ ಹಳ್ಳಿಗೆ ಬಂದು ಕೃಷಿ ಮಾಡುವವರಿಗೆ ಸರ್ಕಾರ ಪ್ರತ್ಯೇಕ ಪ್ಯಾಕೇಜ್ ಪ್ರಕಟಿಸುವ ಮೂಲಕ ಉತ್ತೇಜನ ನೀಡಬೇಕು ಎಂದು ಈ ವೇದಿಕೆ ಮೂಲಕ ಸರ್ಕಾರಕ್ಕೆ ಆಗ್ರಹಿಸಬೇಕು ಎಂಬ ಸಲಹೆ ನೀಡಿದರು.ಕೃಷಿಯನ್ನು ಋಣಾತ್ಮಕವಾಗಿ ನೋಡುವುದನ್ನು ಕಡಿಮೆ ಮಾಡಬೇಕು. ಕೃಷಿಗೆ ಭಾವನಾತ್ಮಕವಾದ ಸ್ಪರ್ಶವಿದೆ. ಆದರೆ ನಮ್ಮಲ್ಲಿ ಕೃಷಿಕನೆಂದರೆ ಅನಾದರವನ್ನು ಎಲ್ಲ ಕಡೆಗಳಲ್ಲಿ ಕಾಣುತ್ತೇವೆ. ಕೃಷಿ ಲಾಭದಾಯಕವಲ್ಲ ನಿಜ. ಆದರೆ ಕೃಷಿಯನ್ನು ಗೌರವದಾಯಕವಾಗಿ ಮಾಡಿಕೊಂಡು ಹೋಗಬಹುದು ಎಂದರು.ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಕೃಷಿಕ ಸಂಘದ ವರದಿ ಮಂಡಿಸಿದರು. ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿದ್ದರು.

ಕೃಷಿಕರಿಗೆ ಸನ್ಮಾನ: ಉದ್ಯಾವರ ಜಯಲಕ್ಷ್ಮಿ, ಅಲೆವೂರು ಸುರೇಶ್ ನಾಯಕ್, ಕರ್ವಾಲು ನರಸಿಂಹ ಕಾಮತ್, ಶಂಕರಪುರದ ಆ್ಯಂಡ್ರ್ಯೂ ಲೋಬೋ ಹಾಗೂ ಹಿರೇಬೆಟ್ಟು ಪಾಂಡುರಂಗ ನಾಯಕ್ ಅವರನ್ನು ಸನ್ಮಾನಿಸಲಾಯಿತು.ದಿನವಿಡಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಕುರಿತು ಮೂರು ವಿಚಾರಗೋಷ್ಠಿಗಳನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ಕೃಷಿ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.

ಕೃಷಿ ಇಲಾಖೆಯ ಜಂಟಿ ನಿರ್ದೆಶಕ ವೈ.ಶ್ರೀನಿವಾಸ್, ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ ಬಲ್ಲಾಳ್, ಎಂ. ಭಾಸ್ಕರ ಶೆಟ್ಟಿ, ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು, ಕೋಶಾಧಿಕಾರಿ ಪಾಂಡುರಂಗ ನಾಯಕ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry