ಮಂಗಳವಾರ, ಮೇ 11, 2021
24 °C

ರೈತರ ಅಧ್ಯಯನ ಪ್ರವಾಸದ ಸುಳ್ಳು ದಾಖಲೆ ಸೃಷ್ಟಿ: ಅವ್ಯವಹಾರ ತನಿಖೆಗೆ ಸಮಿತಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ರೈತರನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸುವ ಮೂಲಕ ರಾಜ್ಯ ಸರ್ಕಾರದ ಹಣವನ್ನು ಲೂಟಿ ಮಾಡಿರುವ ಅವ್ಯವಹಾರ ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಹಿರಂಗಗೊಂಡಿತು.ಈ ಅವ್ಯವಹಾರದ ಬಗ್ಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಕೃಷಿ ಸ್ಥಾಯಿ ಸಮಿತಿಗೆ ವರದಿ ಸಲ್ಲಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.ಬೇರೆ ಬೇರೆ ರಾಜ್ಯಗಳ ತೋಟಗಾರಿಕೆ ಬೆಳೆಗಳ ಅಧ್ಯಯನ ನಡೆಸಲು ಜಿಲ್ಲೆಯ 989 ರೈತರ ಪ್ರವಾಸ ಕೈಗೊಂಡಿರುವ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದು ಸಭೆಯಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

 ಯಾವ ಯಾವ ರೈತರು ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಿದ್ಧಪಡಿಸಿರುವ ಪಟ್ಟಿಯಲ್ಲಿರುವ ಯಾವೊಬ್ಬ ರೈತರಿಗೂ ಅಧ್ಯಯನ ಪ್ರವಾಸದ ಬಗ್ಗೆ ಮಾಹಿತಿಯೇ ಇಲ್ಲ ಎಂದು ಸದಸ್ಯರು ಸಭೆಗೆ ತಿಳಿಸಿದರು.ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಐ.ಕೆ. ದೊಡ್ಡಮನಿ ಅವರು, ಆರಂಭದಲ್ಲಿ ರೈತರು ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ ಎಂದು ವಾದಿಸಿದರು. ಆದರೆ, ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಸದಸ್ಯರು ಕೆದಕಿದಾಗ, ತಪ್ಪು ಎಸಗಿರುವ ಬಗ್ಗೆ ಕ್ಷಮೆಯಾಚಿಸಿದರು.ಸಭೆಗೆ ತಪ್ಪು ಮಾಹಿತಿ ನೀಡಿದ ಉಪನಿರ್ದೇಶಕ ದೊಡ್ಡಮನಿ ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಈರಣ್ಣ ಕಡಾಡಿ ತರಾಟೆಗೆ ತೆಗೆದುಕೊಂಡರು.“ಅವ್ಯವಹಾರದ ಕುರಿತು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ನೇಮಿಸಲಾಗುವುದು.ತನಿಖಾ ಸಮಿತಿಯು ವರದಿಯನ್ನು ಕೃಷಿ ಸ್ಥಾಯಿ ಸಮಿತಿಗೆ ಸಲ್ಲಿಸಬೇಕು” ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅಜಯ ನಾಗಭೂಷಣ ತಿಳಿಸಿದರು.“ತನಿಖಾ ಸಮಿತಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಸೇರಿಸಿಕೊಳ್ಳುವುದು ಸೂಕ್ತವಲ್ಲ. ವರದಿ ಸಲ್ಲಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸದಸ್ಯರು ಸಲಹೆ ನೀಡಬಹುದು” ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.