ರೈತರ ಅನ್ನದ ತಟ್ಟೆಗೆ ಕೈ ಹಾಕಿದರೆ ಗತಿ ಏನು?

ಗುರುವಾರ , ಜೂಲೈ 18, 2019
28 °C

ರೈತರ ಅನ್ನದ ತಟ್ಟೆಗೆ ಕೈ ಹಾಕಿದರೆ ಗತಿ ಏನು?

Published:
Updated:

ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿಯನ್ನು ಬೆಂಬಲಿಸುತ್ತಿರುವವರು ವಿರೋಧಿಸುತ್ತಿರುವುದು ಯಾವುದನ್ನು? ಭಾರತದ ಈಗಿನ ಕೃಷಿ ಪದ್ಧತಿಯನ್ನೋ ಅಥವಾ ಬಳಕೆಯಾಗುತ್ತಿರುವ ಕೀಟನಾಶಕಗಳ ಪ್ರಮಾಣದ ಬಗೆಯನ್ನೋ?ಪಾರಂಪರಿಕವಾಗಿ ಕಲಿತ ಅನುಭವದಿಂದ ತಾನೇ ಉತ್ಪಾದಿಸಿದ ಬೀಜಗಳನ್ನೇ ಬಳಸಿ ತನ್ನ ಮನೆಯ ಗೊಬ್ಬರಗಳನ್ನೇ ಹಾಕಿ ಬೆಳೆ ಬೆಳೆಯುತ್ತಾ ನೆಮ್ಮದಿಯಾಗಿದ್ದ ರೈತನನ್ನು `ಹಸಿರು ಕ್ರಾಂತಿ~ಯ ಹೆಸರಿನಲ್ಲಿ ರಾಸಾಯನಿಕ ಗೊಬ್ಬರ, ಹೈಬ್ರಿಡ್ ಬಿತ್ತನೆ ಬೀಜ ಉಪಯೋಗಿಸಿ ಕೀಟನಾಶಕ ಸಿಂಪಡಿಸಿ ಹೆಚ್ಚು ಆಹಾರ ಧಾನ್ಯ ಉತ್ಪಾದಿಸಲು ಪ್ರಚೋದಿಸಿದವರು ಯಾರು? ಈಗಿನ ಸಾವಯವ ಕೃಷಿಯ ಪ್ರಚಾರಕರು ಹೇಳುವುದನ್ನು ನಂಬುವುದಾದರೆ ಭಾರತದ ಕೃಷಿಗೆ ಉತ್ತಮ ಮಾರ್ಗವನ್ನು ತೋರಿಸಿದ ವಿಜ್ಞಾನಿಗಳು ಹೇಳಿದುದು ಅಸತ್ಯವೇ?ಹೆಚ್ಚಿನ ಬೆಳೆಯ ಆಸೆಯಿಂದ ರಾಸಾಯನಿಕ ಕೃಷಿ ಪದ್ಧತಿಗೆ ಹೊಂದಿಕೊಳ್ಳಲು ಸುಮಾರು ದಶಕಗಳ ಕಾಲ ಒದ್ದಾಡಿ ಇಂದಿನ ಹೆಚ್ಚಿನ ಆಹಾರ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸಿ ದೇಶದಲ್ಲಿ ಆಹಾರ ಪದಾರ್ಥ ದಾಸ್ತಾನು ಮಾಡಲು ಉಗ್ರಾಣಗಳೇ ಸಾಲುತ್ತಿಲ್ಲ ಎನ್ನುವಷ್ಟರ ಮಟ್ಟಿಗೆ ಉತ್ಪಾದಿಸಿ ತಾನೇ ಬೆಳೆದ ಪದಾರ್ಥಗಳಿಗೆ ಸರಿಯಾದ ಬೆಲೆ ಇಲ್ಲದೆ ಮಾಡಿದ ಸಾಲ ತೀರಿಸಲಾಗದೆ ಹೆಣಗಾಡುತ್ತಿರುವ ರೈತನ ತಪ್ಪೇನು?ಕೀಟ ನಾಶಕಗಳನ್ನಾಗಲೀ ರಾಸಾಯನಿಕ ಗೊಬ್ಬರಗಳನ್ನಾಗಲೀ ಯಾವ ಬೆಳೆಗೆ ಯಾವ ಪ್ರಮಾಣದಲ್ಲಿ, ಯಾವ ಹಂತದಲ್ಲಿ ಉಪಯೋಗಿಸಬೇಕು ಎಂಬ ತಿಳುವಳಿಕೆ ಉಂಟುಮಾಡಲು ಇಂದಿನ ವ್ಯವಸ್ಥೆಯಲ್ಲಿ ಯಾವ ಏರ್ಪಾಟಿದೆ?  ಹಾಗಾದರೆ ಕೃಷಿ ವಿಸ್ತರಣೆಯಲ್ಲಿ ಅಂದರೆ `ಲ್ಯಾಬ್ ಟು ಲ್ಯಾಂಡ್~ನಲ್ಲಿ ವಿಜ್ಞಾನಿಗಳು ಎಡವಿದ್ದೆಲ್ಲಿ?ರೈತನಿಗೆ ಅರಿವು ಉಂಟುಮಾಡುವಲ್ಲೋ ಅಥವಾ ಯಾವ ಪ್ರಮಾಣದಲ್ಲಿ ಬಳಸಿದ್ದು ವಿಷವಲ್ಲ ಎಂದು ಗ್ರಾಹಕರಿಗೆ ಮನದಟ್ಟು ಮಾಡುವಲ್ಲೋ? ಇಂದಿನ ಸಾವಯವ ಕೃಷಿಯ ಆಂದೋಲನದ ಲಾಭ ಪಡೆಯುತ್ತಿರುವವರು ಯಾರು? ತಾನೇ ಬೆಳೆದ ಬೆಳೆಯಲ್ಲಿ ತನ್ನ ಜೀವನ ಸಾಗಿಸಬೇಕಾದ ಕೃಷಿಕನೇ? ಅಥವಾ ಬೇರೆ ಆದಾಯ ಮೂಲಗಳಿದ್ದು ಕೃಷಿಯನ್ನು ಒಂದು `ಫ್ಯಾನ್ಸಿ~ಯನ್ನಾಗಿ ಮಾಡಿಕೊಂಡಿರುವ ಅನುಕೂಲವಂತರೇ? ಅಥವಾ ಪ್ರತಿ ಅಭಿವೃದ್ಧಿಗೂ ಅಡ್ಡಗಾಲು ಹಾಕುವ ಪ್ರಗತಿ ವಿರೋಧಿಗಳೇ?ನಿಜವಾದ ರೈತನಿಗೆ ತಾನೇ ಬೆಳೆದ ಪದಾರ್ಥಗಳನ್ನು ತನ್ನದೇ ಸಾವಯವ ಮಳಿಗೆಗಳಲ್ಲಿ ಮಾರಲು ಸಮಯ ಎಲ್ಲಿದೆ? ಅವನಿಗೆ ವಾರದ ರಜೆ ಇಲ್ಲ ಕೆಲಸದ ಸಮಯ ಇಲ್ಲ. ಮನೆಯಲ್ಲಿ ಅವನ ಉಪ ಉತ್ಪನ್ನಗಳಿಗಾಗಿ ಹಸು, ಎಮ್ಮೆ, ಕುರಿ, ಕೋಳಿ ಸಾಕಿಕೊಂಡಿರುತ್ತಾನೆ.

 

ಅದಕ್ಕೆಲ್ಲಾ ಹೊತ್ತು ಹೊತ್ತಿಗೆ ಆಹಾರ ನೀರು ನೋಡಬೇಕು. ಈಗ ರೈತರ ಮನೆಯಲ್ಲೂ ಕುಟುಂಬ ಯೋಜನೆಯಿಂದ ಇರುವುದು ಒಬ್ಬಿಬ್ಬರು ಮಕ್ಕಳು, ಕಡ್ಡಾಯ ಶಿಕ್ಷಣದಿಂದ ಅವರು ಶಾಲೆಗೆ ಹೋಗಿರುತ್ತಾರೆ. ಖಂಡಿತ ಅವನು ತಾನು ಬೆಳೆದ ಬೆಳೆಯನ್ನು ನಗರಕ್ಕೆ ತಂದು ಮಾರಲಾರ. ಅವನು ತನ್ನ ಹಳ್ಳಿಯಲ್ಲೇ ಬೆಳೆ ಮಾರಾಟ ಮಾಡಿರುತ್ತಾನೆ. ಹಾಗಾದರೆ ಇಂದಿನ ಸಾವಯವ ಸಂತೆ, ಮಳಿಗೆಗಳಲ್ಲಿ ಮಾರಾಟ ಮಾಡುವವರು ರೈತಪರ ಮಧ್ಯವರ್ತಿಗಳೇ.ಈಗಿನ ಸಾವಯವ ಕೃಷಿಯ ಪ್ರಚಾರಕರು ಹೇಳುವಷ್ಟು ಭಾರತದ ಕೃಷಿ ಉತ್ಪಾದನೆ ವಿಷಪೂರಿತವಾಗಿದೆಯೇ? ಹಾಗಿದ್ದರೆ ಅದಕ್ಕೆ ಕಾರಣ ಯಾರು? ವಿಷವನ್ನು ಬೆಳೆಯಲು ರೈತನಿಗೆ ಯಾಕೆ ಪ್ರೋತ್ಸಾಹಿಸಿದರು? ಸಂಶೋಧಕರು, ಕೃಷಿ ವಿಜ್ಞಾನಿಗಳು, ಕೃಷಿ ಇಲಾಖೆ, ಕೃಷಿ ವಿಸ್ತರಣೆಯವರು `ಸತ್ಯಮೇವ ಜಯತೆ~ಯಲ್ಲಿ ಅಥವಾ ರಾಸಾಯನಿಕ ಕೃಷಿಯ ಪರ ಏಕೆ ಭಾಗವಹಿಸಲಿಲ್ಲ? ಇದು ಸಾವಯವದಲ್ಲಿ ಬೆಳೆದ ಬೆಳೆ ಅಂತ ಸರ್ಟಿಫೈ ಮಾಡುವವರು ಯಾರು? ಅಲ್ಲಿ ತೆಗೆದುಕೊಂಡ ಪದಾರ್ಥಗಳು ರಾಸಾಯನಿಕ ಮುಕ್ತ ಅಂತ ಪರೀಕ್ಷಿಸುವುದು ಹೇಗೆ?ರೈತರ ಜಮೀನುಗಳು ಪಕ್ಕಪಕ್ಕದಲ್ಲೇ ಇರುತ್ತದೆ. ಒಬ್ಬರು ಸಹಜ ಕೃಷಿ, ಒಬ್ಬರು ಸಾವಯವ ಕೃಷಿ, ಒಬ್ಬರು ರಾಸಾಯನಿಕ ಕೃಷಿ ಮಾಡಿದ್ದರೆ ಆ ರಾಸಾಯನಿಕಗಳ ಬಳಕೆ ಪರಿಣಾಮ ಈ ಬೆಳೆಗಳ ಮೇಲೆ ಉಂಟಾಗುತ್ತದೆಯೇ? ಇನ್ನು ಭತ್ತದ ಬೆಳೆ ಬಗ್ಗೆ ಬಂದರೆ ಕಡಗಲಿಂದ ಬಂದ ನೀರು ಮಡುವೆಗಳಿಂದ ಗದ್ದೆಗಳಿಗೆ ಹೋಗುತ್ತದೆ.

ಹಾಗೆ ಒಂದು ಗದ್ದೆ ಇಂದ ಒಂದು ಗದ್ದೆ ನೀರು, ಗಾಳಿ ಹೋಗುವಾಗ ನಾವು ಏನೂ ಗೊಬ್ಬರ, ಕೀಟನಾಶಕ ಬಳಕೆ ಮಾಡಿಲ್ಲ .ಇದು ಸಾವಯವ ಅಂತ ಹೇಗೆ ಸಾಬೀತು ಮಾಡೋದು? ಈಗ ಅತಿ ಮುಖ್ಯವಾಗಿ ಕೃಷಿ ವಿಸ್ತರಣಾ ಅಧಿಕಾರಿಗಳು, ಮೀಡಿಯಾದವರು, ಸಂಶೋಧಕರು ಎಲ್ಲರೂ ರೈತರನ್ನು ಹಾಗೇ ಮುಖ್ಯವಾಗಿ ಗ್ರಾಹಕರನ್ನು ಒಳಗೊಂಡ ಒಂದು ನಂಬಿಕೆ ಬರುವ ಕಾರ‌್ಯಕ್ರಮ ನಡೆಸಬೇಕು. ಅವರಿಂದ ಯಾರೂ ಸತ್ತಿಲ್ಲ.ಯಾರಿಗೂ ಅಂಗನ್ಯೂನತೆ ಉಂಟಾಗಿಲ್ಲ. ಈಗಾಗಲೇ ಈ ಪದ್ಧತಿಯಲ್ಲಿ ಬೆಳೆ ಬೆಳೆದು, ತಿಂದು ಸದೃಢ ಭಾರತ ನಿರ್ಮಾಣವಾಗಿದೆ. ಈಗ `ಭಾರತ ಪ್ರಕಾಶಿಸುತ್ತಿದೆ~. ಎಲ್ಲಾ ವಿಭಾಗದಲ್ಲೂ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ, ವಿದ್ಯೆ, ಸಂಶೋಧನೆ, ಮಾಹಿತಿ ತಂತ್ರಜ್ಞಾನ, ಇತ್ಯಾದಿ ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದು ಜನರ ಸರಾಸರಿ ಆಯಸ್ಸಿನ ಮಟ್ಟ ಏರಿದೆ.ಈಗ 60 ವರ್ಷ ವಯಸ್ಸಿನವರೂ ಆರಾಮವಾಗಿ, ಸ್ವತಂತ್ರವಾಗಿ ಚಿಕ್ಕ ವಯಸ್ಸಿನವರಂತೆ ಓಡಾಡಿಕೊಂಡಿರುತ್ತಾರೆ. 58 ವರ್ಷಕ್ಕೆ ಇದ್ದ ನಿವೃತ್ತಿ ಈಗ 60 ಆಗಿ 65 ವರ್ಷಗಳಿಗೂ ಮುಂದುವರೆಯುವ ಬಗ್ಗೆ ಚಿಂತನೆ ಇದೆ. ಇಷ್ಟೆಲ್ಲಾ ಸಾಧ್ಯವಾದದ್ದು ರೈತರು ಬೆಳೆದ ಸಮೃದ್ಧ ಫಸಲು ತಿಂದು, ಆದರೂ ಯಾಕೆ ಜನಗಳಿಗೆ ಬೆಳೆದ ಆಹಾರ ಪದಾರ್ಥಗಳ ಬಗ್ಗೆ ಹೆದರಿಸುತ್ತಿದ್ದಾರೆ.ನಾವು ತಿನ್ನುವ ದವಸ ಧಾನ್ಯಗಳಿಗೆ ಹೊರಕವಚ ಇರುತ್ತದೆ. ಅದು `ಫೈನಲ್ ಪ್ರಾಡಕ್ಟ್~ ಆಗಿ ಬರುವಾಗ ಅದರ ಹೊಟ್ಟು, ಸಿಪ್ಪೆ ಹೋಗಿರುತ್ತದೆ. ಆದರೂ ಅದು ವಿಷಪೂರಿತವಾ? ಅದಕ್ಕೆ ಸಾಕ್ಷಿ ಏನು? ಹಣ್ಣು, ತರಕಾರಿ ಚನ್ನಾಗಿ ತೊಳೆದು ಬಳಸಬೇಕು. ಸಾಧ್ಯವಾದರೆ ಒಮ್ಮೆ ಬಿಸಿನೀರಿನಲ್ಲೂ, ಉಪ್ಪು ನೀರಿನಲ್ಲೂ ತೊಳೆಯಿರಿ. ಗ್ರಾಹಕರಿಗೆ ತಿಳುವಳಿಕೆ ಕೊಡಿ. ರೈತರಿಗೆ ಸೂಕ್ತ ಮಾರ್ಗದರ್ಶನ ಕೊಡಿ. ಅವರಿಗೆ ಕಕ್ಕಾಬಿಕ್ಕಿಯಾಗಿ ತಲೆಮಾರು ಪೂರ್ತಿ ಕೊರಗುವಂತೆ ಮಾಡಬೇಡಿ. ಇದು ಎಲ್ಲರ ಜವಾಬ್ದಾರಿ ಆಗಿದೆ.ಮತ್ತೆ ಮತ್ತೆ ರೈತರಲ್ಲೇ ಪಂಗಡ ಮಾಡಬೇಡಿ. ಲಾಬಿ ಮಾಡಬೇಡಿ. ಅಚ್ಚುಕಟ್ಟಾದ ಬೆಳೆ ಬೆಳೆಯಲು ಬೇಕಾದ ಸೂಕ್ತ ವ್ಯವಸ್ಥೆ ಕೊಡಿ. ಆಹಾರ ಅತಿಮುಖ್ಯ. ಹಾಗಂತ ಅದರ ಎಲ್ಲಾ ಹೊಣೆ ನೇರವಾಗಿ ರೈತರದ್ದೇ ಅಲ್ಲ, ರೈತರಿಗೂ ಗ್ರಾಹಕರಿಗೂ ಮಧ್ಯೆ  ವ್ಯಾಪಾರಿಗಳಿದ್ದಾರೆ.ವ್ಯಾಪಾರಸ್ಥರು ರೈತರಿಂದ ಪಡೆದದ್ದನ್ನು ದಾಸ್ತಾನು ಮಾಡಲು ರಾಸಾಯನಿಕ ಉಪಯೋಗಿಸಿ ಅದರಿಂದ ಆಹಾರ ಪದಾರ್ಥ ವಿಷಪೂರಿತವಾದರೆ ಅದರ ಹೊಣೆ ಯಾರದು? ನಮ್ಮ ರೈತರಿಗೆ ಬಾಯಿಂದ ಬಾಯಿಗೆ ಬಂದು ಹೊಸ ಕೀಟ, ರೋಗನಾಶಕಗಳ ಹೆಸರು ಗೊತ್ತಿದೆ.ಅವುಗಳ ಸುರಕ್ಷತೆ ಬಗ್ಗೆ ಏನೂ ತಿಳಿದಿಲ್ಲ. ತಿಳಿಸಿಕೊಡಲು ಯಾರಿಗೂ ವ್ಯವಧಾನವಿಲ್ಲ. ಸುತ್ತಾಡಿ ವಿಷಯ ತಿಳಿದುಕೊಳ್ಳಲು ರೈತನಿಗೆ ಪುರುಸೊತ್ತಿಲ್ಲ. ಕೀಟನಾಶಕ ಡಬ್ಬದ ಮೇಲೆ ಬರೆದಿರುವುದನ್ನು ಓದಲು ಅಕ್ಷರಸ್ಥರಿಗೇ ಆಗುವುದಿಲ್ಲ. ಆ ಸಣ್ಣ ಅಕ್ಷರ ಅರ್ಥವಾಗದೆ ಭಾಷೆ ಇವನೇನು ಮಾಡ್ತಾನೆ ಜನಪದ ಸಾಹಿತ್ಯ ಬಾಯಿಂದ ಬಾಯಿಗೆ  ಹರಡಿದಂತೆ ಕೀಟನಾಶಕಗಳೂ ಬಾಯಿಂದ ಬಾಯಿಗೆ ಹರಡಿದೆ.ಕೀಟನಾಶಕ ಕೀಟಗಳಿಗೆ ಮಾತ್ರವಲ್ಲ ಇತರ ಜೀವಿಗಳಿಗೂ ತೊಂದರೆ ಉಂಟುಮಾಡುವಂಥಹದ್ದೇ, ಅದನ್ನು ಅನಿವಾರ್ಯ ಪ್ರಸಂಗಗಳಲ್ಲಿ ಸುರಕ್ಷಿತವಾಗಿ ಬಳಕೆ ಮಾಡಬೇಕು. ಜನ ಉಪಯೋಗಿಸುವ ಫ್ಲೋರ್ ಕ್ಲೀನರ್, ಟಾಯ್‌ಲೆಟ್ ಕ್ಲೀನರ್, ಸೋಪ್, ಟೂತ್‌ಪೆಸ್ಟ್, ಜಿರಳೆನಾಶಕ, ಸೊಳ್ಳೆನಾಶಕಗಳು, ಇನ್ನಿತರ ಗೃಹೋಪಯೋಗಿ ರಾಸಾಯನಿಕ ಪದಾರ್ಥಗಳು ಮನುಷ್ಯನಿಗೆ ವಿಷಯುಕ್ತವಲ್ಲದೆ ಇದ್ದರೆ ರೈತರಿಗೂ ಅದೇ ಬಗೆಯ ಕೀಟನಾಶಕ ತಯಾರಿಸಿಕೊಡಬಹುದಲ್ಲವೇ?`ಆಹಾರದ ಬಟ್ಟಲಲ್ಲಿ ವಿಷ~ ಅಂತ ಹೇಳಿ ಹೇಳಿ ರೈತನ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟು ರೈತನ ಅನ್ನದ ತಟ್ಟೆಗೇ ಕೈ ಹಾಕಿದರೆ ರೈತನಗತಿ ಏನು? ಅವನ ಜೀವನ ಹೇಗೆ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry