ರೈತರ ಅನ್ನ ಕಸಿದ ಪುಡಿಮಣ್ಣು

7

ರೈತರ ಅನ್ನ ಕಸಿದ ಪುಡಿಮಣ್ಣು

Published:
Updated:

ಸಂಡೂರು:  ‘ಎನ್.ಎಂ.ಡಿ.ಸಿ ಕಂಪೆನಿಯ ಚೆಕ್‌ಡ್ಯಾಮಿನ ಕಬ್ಬಿಣದ ಪುಡಿ ಹೊಲದಾಗ ಸೇರಿ, ನಮ್ಮ ದುಡಿಮೆಯ ಆದಾಯದ ಕಣ್ಣುಗಳನ್ನು ಕಿತ್ತುಕೊಂಡಿದೆ’ ಎನ್ನುತ್ತಾರೆ ಭುಜಂಗ ನಗರ ಗ್ರಾಮದ ಮಾಗಣಿ ಹೊಲಗಳ ರೈತರು. ಕಳೆದ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಗೆ ಎನ್.ಎಂ.ಡಿ.ಸಿ. ಯವರು ಹಳ್ಳಕ್ಕೆ ನಿರ್ಮಿಸಿದ್ದ ಚೆಕ್ ಡ್ಯಾಂ ಒಡೆದು ಅದರಲ್ಲಿ ತುಂಬಿಕೊಂಡಿದ್ದ ಹೂಳು  ಚೆಕ್‌ಡ್ಯಾಂ ಮುಂಭಾಗದ 500 ಎಕರೆ ಪ್ರದೇಶದ ಜಮೀನಿಗೆ ನುಗ್ಗಿದೆ. ಬೆಳೆಗಳು ನಾಶವಾಗಿ ಜಮೀನಿನಲ್ಲಿ ಕಪ್ಪನೆಯ ಪುಡಿಮಣ್ಣು ಪ್ರವಾಹದ ಜೊತೆಗೆ ಹರಿದು ಬಂದು ಹೊಲಗಳಲ್ಲಿ ಸೇರಿಕೊಂಡಿದೆ. ಇದರಿಂದ ಬೆಳೆ ಹಾನಿಯಾಗಿ ಕೋಟ್ಯಂತರ ರೂಪಾಯಿ ಹಾನಿ ಅನುಭವಿಸಬೇಕಾಗಿದೆ ಎನ್ನುತ್ತಾರೆ ಇಲ್ಲಿನ ರೈತರು.ಚೆಕ್‌ಡ್ಯಾಂ ನೀರು ಹರಿದ ರಭಸಕ್ಕೆ ಈ ಭಾಗದ ಹೊಲಗದ್ದೆಗಳಲ್ಲಿನ 50 ಬಾವಿಗಳು, 59ಕ್ಕೂ ಹೆಚ್ಚು ನೀರಾವರಿ ಪಂಪ್‌ಸೆಟ್‌ಗಳು ಕೊಚ್ಚಿಕೊಂಡು ಹೋಗಿವೆ. ಬಾವಿಗಳಲ್ಲಿ  ಮಣ್ಣು ತುಂಬಿದೆ. ಬೆಲೆಬಾಳುವ ನೀರೆತ್ತುವ ಮೋಟರ್‌ಗಳು ಭೂಮಿಯಲ್ಲೇ ಹೂತುಹೋಗಿವೆ. ‘ಫಲವತ್ತಾದ ಭೂಮಿಗಳು ನಮ್ಮದಾಗಿದ್ದರೂ, ಇಲ್ಲಿ ಶೇಂಗಾ, ಈರುಳ್ಳಿ, ಮೆಕ್ಕೆಜೋಳದಂಥ ಬೆಳೆಗಳನ್ನು ಇನ್ನು ಮೂರ್ನಾಲ್ಕು ವರ್ಷಗಳ ಕಾಲ ಬೆಳೆಯುವುದೇ ಕಷ್ಟವಾಗಿದೆ’  ಎನ್ನುತ್ತಾರೆ ರೈತ ಮುಖಂಡ ಶಿವಪ್ಪ.‘ಈ ಸಂಬಂಧ ಹಲವು ಮುಷ್ಕರಗಳನ್ನು ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಅವರು ಚುನಾವಣೆ ಮುಗಿಯಲಿ ಎಂದಿದ್ದರು. ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಅಧಿಕಾರಿಗಳನ್ನು ಕೇಳಿದರೆ  ಅವರು ಜಿಲ್ಲಾಧಿಕಾರಿಗಳೇ ಆದೇಶ ನೀಡಬೇಕು ಎನ್ನುತ್ತಾರೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಸ್ಥಿತಿ ನಮ್ಮದು’  ಎನ್ನುತ್ತಾರೆ ಮೂಡೆ ಕುಮಾರಸ್ವಾಮಿ, ಕೊತ್ತಲ್ ಕುಮಾರಸ್ವಾಮಿ, ನಾಗರಾಜ್, ಶ್ರೀನಿವಾಸ್, ಮಲ್ಲಿಕಾರ್ಜುನ ಮುಂತಾದ ರೈತರು.“ಹಾಳಾದ ಬೆಳೆಗೆ ನ್ಯಾಯಯುತ ಪರಿಹಾರ ಕೊಡಬೇಕು.  ಕೊಳವೆ ಬಾವಿ, ನೀರೆತ್ತುವ ಮೋಟರ್ಗಳ ದುರಸ್ತಿಯ ಹೊಣೆ, ಹೊಲಗಳಲ್ಲಿ ತುಂಬಿಕೊಂಡಿರುವ ಮೊಳಕಾಲೆತ್ತರದ ಅದಿರನ್ನು ಬೇರೆಡೆ ಸಾಗಿಸುವ ವ್ಯವಸ್ಥೆಯನ್ನು ಎನ್.ಎಂ.ಡಿ.ಸಿ ಮಾಡಿಕೊಡಬೇಕು. ಇದು ಸಾವಿರಾರು ರೈತರ ಬದುಕಿನ ಪ್ರಶ್ನೆಯಾಗಿದೆ ಎನ್ನುತ್ತಾರೆ’ ಸ್ಥಳೀಯ ವ್ಯವಸಾಯ ಸೇವಾ ಸಹಕಾರ ಸಂಘದ ಕಣ್ಣಿ ತಿಪ್ಪೇಸ್ವಾಮಿ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry