ಶನಿವಾರ, ಜನವರಿ 18, 2020
19 °C

ರೈತರ ಅರ್ಜಿ ತಿರಸ್ಕರಿಸಿದ ಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಪೋಸ್ಕೊ-ಇಂಡಿಯಾ ಕಂಪೆನಿ ಗದಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಘಟಕವನ್ನು ಕೈಬಿಡಲು ಸರ್ಕಾರ ನಿರ್ಧರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾ ಮಾಡಿದೆ.32 ಸಾವಿರ ಕೋಟಿ ರೂಪಾಯಿ ಮೊತ್ತದ ಈ ಯೋಜನೆಗೆ ತಮ್ಮ ಜಮೀನು ನೀಡಲು ಸಿದ್ಧರಿದ್ದು, ಯೋಜನೆ ಮುಂದುವರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮುಂಡರಗಿ ತಾಲ್ಲೂಕಿನ ವಿವಿಧ ಗ್ರಾಮಗಳ 117 ರೈತರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಈ ಘಟಕ ಆರಂಭಗೊಂಡರೆ ಲಕ್ಷಾಂತರ ಮಂದಿಗೆ ಉದ್ಯೋಗ ದೊರಕಲಿದೆ, ತಮ್ಮ ಮಕ್ಕಳ ಬದುಕು ಉಜ್ವಲ ಆಗಲಿದೆ ಎನ್ನುವುದು ಅವರ ವಾದವಾಗಿತ್ತು.ಆದರೆ ಅರ್ಜಿದಾರರ ವಾದವನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಮಾನ್ಯ ಮಾಡಲಿಲ್ಲ. `ಈ ಯೋಜನೆಯನ್ನು ಪ್ರಾರಂಭಿಸಿ ಅಥವಾ ಪುನರ್‌ಪರಿಶೀಲಿಸಿ ಎಂದು ಸರ್ಕಾರವನ್ನು ನಾವು ನಿರ್ದೇಶಿಸಲು ಸಾಧ್ಯವಿಲ್ಲ. ಒಂದು ವೇಳೆ ಘಟಕ ಆರಂಭಗೊಳ್ಳಬೇಕು ಎಂದು ನಿಮಗೆ ಅನಿಸಿದರೆ ನೀವು ಸರ್ಕಾರಕ್ಕೆ ಮನವಿ ಸಲ್ಲಿಸಬಹುದು~ ಎಂದು ಪೀಠ ಅರ್ಜಿದಾರರಿಗೆ ತಿಳಿಸಿತು.ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ಹಿಂದಕ್ಕೆ ಪಡೆದು ಸರ್ಕಾರಕ್ಕೆ ಮನವಿ ಸಲ್ಲಿಸಲು ಪೀಠ ಅನುಮತಿ ನೀಡಿತು.ಮನವಿ ತಿರಸ್ಕೃತ: ಈ ಅರ್ಜಿಯು ಕಳೆದ ಬಾರಿ ವಿಚಾರಣೆಗೆ ಬಂದಿದ್ದಾಗ ಪೀಠವು, ಸರ್ಕಾರ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಘಟಕ ವಿರೋಧಿ ಕೆಲವು ರೈತರು ಇದೇ ಅರ್ಜಿಯಲ್ಲಿ ತಮ್ಮನ್ನು ಪ್ರತಿವಾದಿಯನ್ನಾಗಿಸುವಂತೆ ಕೋರಿ ಮಧ್ಯಂತರ ಮನವಿ (ಐಎ) ಸಲ್ಲಿಸಿದ್ದರು.ತಾವು ಈ ಘಟಕದ ಆರಂಭಕ್ಕೆ ವಿರೋಧಿಗಳು. ಕೋರ್ಟ್ ನೋಟಿಸ್ ಜಾರಿ ಮಾಡಿರುವುದು ಸರಿಯಲ್ಲ ಎನ್ನುವುದು ಅವರ ವಾದವಾಗಿತ್ತು. ತಮ್ಮ ವಾದವನ್ನು ಆಲಿಸದೆ ಅರ್ಜಿದಾರರ ಮನವಿಯನ್ನು ಪುರಸ್ಕರಿಸಬಾರದು ಎನ್ನುವುದು ಅವರ ಕೋರಿಕೆಯಾಗಿತ್ತು. ಆದರೆ ಈ ಮನವಿಯನ್ನು ಮಾನ್ಯ ಮಾಡಲೂ ನ್ಯಾಯಮೂರ್ತಿಗಳು ನಿರಾಕರಿಸಿದರು.ಸ್ಥಳೀಯರು ಹಾಗೂ ಕೆಲವು ಧಾರ್ಮಿಕ ಮುಖಂಡರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕಳೆದ ಜುಲೈನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಯೋಜನೆ ಕೈಬಿಡಲು ನಿರ್ಧರಿಸಿದ್ದರು. ಈ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು `ಪೋಸ್ಕೊ~ ಕಂಪೆನಿ ಈಗಾಗಲೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ 130 ಕೋಟಿ ರೂಪಾಯಿ ನೀಡಿದೆ.ತೀರ್ಪಿಗೆ ವ್ಯಾಪಕ ಸ್ವಾಗತ

ಗದಗ: 
ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿ ಪೋಸ್ಕೊ ಕೈಗಾರಿಕಾ ಘಟಕ ಆರಂಭಿಸಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಲು ನಿರಾಕರಿಸಿರುವ ಹೈಕೋರ್ಟ್ ತೀರ್ಪನ್ನು ಈ ಭಾಗದ ಮಠಾಧೀಶರು ಹಾಗೂ ಮುಖಂಡರು ಸ್ವಾಗತಿಸಿದ್ದಾರೆ.ಪೋಸ್ಕೊ ವಿರುದ್ಧದ ರೈತರ ಹೋರಾಟದ ನೇತೃತ್ವ ವಹಿಸಿದ್ದ ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಅವರು, `ಈ ತೀರ್ಪು ಈ ಭಾಗದ ಜನರು, ಇಲ್ಲಿನ ಪರಿಸರ ಸಂರಕ್ಷಣೆಯ ಪರವಾಗಿ ಬಂದುದಾಗಿದೆ. ಇದರಿಂದಾಗಿ ಇಲ್ಲಿನ ರೈತ ಸಮುದಾಯ ನಿಟ್ಟುಸಿರು ಬಿಡುವಂತಾಗಿದೆ~ ಎಂದಿದ್ದಾರೆ.ನಮ್ಮ ರೈತರು ಮಣ್ಣಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಭೂಮಿಯೇ ಅವರಿಗೆ ಸ್ವರ್ಗ. ಇಂತಹ ಜಮೀನು ತಮ್ಮ ಮುಂದಿನ ಪೀಳಿಗೆಗೆ ಉಳಿಯಿತು ಎನ್ನುವ ಸಮಾಧಾನ ಅವರದು. ಅನ್ನ ಕೊಡುವ ಫಲವತ್ತಾದ ಭೂಮಿಯನ್ನು ಕೈಗಾರಿಕೆಗಳಿಗೆ ಕೊಡುವುದು ತರವಲ್ಲ. ಈಗಲೂ ಖಾಸಗಿ ಕಂಪೆನಿಗಳಿಗೆ ರೈತರ ಜಮೀನು ಕೊಡಿಸುವಂತಹ ಮಧ್ಯವರ್ತಿ ಕೆಲಸವನ್ನು ಸರ್ಕಾರ ಮಾಡಬಾರದು ಎಂದುಸಲಹೆ ನೀಡಿದ್ದಾರೆ.ಪೋಸ್ಕೊ ಭೂಸ್ವಾಧೀನ ವಿರೋಧಿ ಸಮಿತಿಯ ಮುಖಂಡರಲ್ಲಿ ಒಬ್ಬರಾದ ಮುಂಡರಗಿಯ ವೈ.ಎನ್. ಗೌಡರ ಈ ಕುರಿತು ಪ್ರತಿಕ್ರಿಯಿಸಿ, ಈ ಹೋರಾಟವು ರೈತರು ಹಾಗೂ ಹಾಗೂ ಭೂಮಿತಾಯಿಗೆ ಸಿಕ್ಕ ಜಯ ಎಂದು ಬಣ್ಣಿಸಿದ್ದಾರೆ.ಈಗಾಗಲೇ ವರದಿಯಾಗಿರುವಂತೆ ಪೋಸ್ಕೊ ವಿರೋಧಿಸಿ ಸ್ವಾಮೀಜಿ ನೇತೃತ್ವದಲ್ಲಿ ಒಂದೆಡೆ ಹೋರಾಟ ನಡೆಯುತ್ತಿದ್ದರೆ, ಕೆಲವು ರೈತರು ಪೋಸ್ಕೊ ಘಟಕಕ್ಕೆ ಜಮೀನು ನೀಡಲು ಮುಂದಾಗಿದ್ದರು. ಜಮೀನು ನೀಡಲು ಮುಂದಾಗಿದ್ದ ರೈತರು ಹೈಕೋರ್ಟಿನ ಮೊರೆ ಹೋಗಿ, `ಘಟಕ ಸ್ಥಾಪಿಸಲು ನಿರ್ದೇಶನ ನೀಡಬೇಕೆಂದು~ ಮನವಿ ಮಾಡಿದ್ದರು.

ಪ್ರತಿಕ್ರಿಯಿಸಿ (+)