ರೈತರ ಉಪ ಆದಾಯಕ್ಕೆ ಕೃಷಿ ಪ್ರವಾಸೋದ್ಯಮ

7

ರೈತರ ಉಪ ಆದಾಯಕ್ಕೆ ಕೃಷಿ ಪ್ರವಾಸೋದ್ಯಮ

Published:
Updated:
ರೈತರ ಉಪ ಆದಾಯಕ್ಕೆ ಕೃಷಿ ಪ್ರವಾಸೋದ್ಯಮ

ಗುರುಗುಡುತ್ತ ಕಾರು ಹಳ್ಳಿಯ ಹಾದಿಯಲ್ಲಿ ಸಾಗಿತ್ತು. ಅದರಲ್ಲಿದ್ದ ಯುವಕ-ಯುವತಿಯರು ವಾರಾಂತ್ಯದ ರಜೆ ಕಳೆಯಲು ಹೊರಟಿದ್ದರು. ಒಂದಾದ ಮೇಲೆ ಇನ್ನೊಂದು ಗ್ರಾಮದ ಚಿತ್ರ ಮನಕ್ಕೆ ಹತ್ತಿರವಾಗುತ್ತಿತ್ತು. ಕಾರು ಸಾಗಿದ್ದ ಏಕತಾನತೆಯ ನಡುವೆ ಮುಸುಕಿದ್ದ ಮೌನವನ್ನು ಮುರಿದಳು ಒಬ್ಬಳು.`ನನಗೂ ಈ ಹಳ್ಳಿಯಲ್ಲಿ ಒಂದೆರಡು ದಿನ ಇರಬೇಕು ಅನಿಸುತ್ತೆ. ಹೊಲ-ಗದ್ದೆ ಸುತ್ತಬೇಕು, ಇಲ್ಲಿಯ ಬದುಕನ್ನು ಬದುಕಿ ನೋಡಬೇಕು~ ಎಂದಳು.ಅವಳ ಹಾಗೆಯೇ ಅದೆಷ್ಟೊಂದು ಮಂದಿಗೆ ಹಳ್ಳಿಗಳ ಮಾರ್ಗವಾಗಿ ಸಾಗುವಾಗ ಹೀಗೆ ಅನಿಸಿರಬಹುದು? ಖಂಡಿತವಾಗಿ ಬಹಳಷ್ಟು ಜನರು ಹೀಗೆ ಎಂದಾದರೂ ಒಂದು ಬಾರಿ ಯೋಚನೆ ಮಾಡಿರುತ್ತಾರೆ.ತಂತ್ರಜ್ಞಾನದ ನಡುವೆ ಕೆಲಸ, ನಗರ ಜೀವನದ ಅವಸರ ಹಾಗೂ ವಾಹನಗಳ ಸದ್ದಿನಿಂದ ದೂರವಾಗಿದ್ದು ಒಂದಿಷ್ಟು ದಿನಗಳಾದರೂ ಹಳ್ಳಿಯಲ್ಲಿ ಇರಬೇಕೆಂದು ಬಯಸುವ ಹೃದಯಗಳು ಅಪಾರ.ಟ್ರೆಕ್ಕಿಂಗ್ ಎಂದು ನಡೆದಿದ್ದು, ಪಿಕ್‌ನಿಕ್ ಎಂದು ತಿಂಡಿ ತಿಂದು ಬಂದಿದ್ದು, ಜಲಪಾತ ನೋಡಿದ್ದು, ಮಲ್ಟಿಪ್ಲೆಕ್ಸ್‌ಗಳಲ್ಲಿ ಕಾಲಹರಣ ಮಾಡಿದ್ದು, ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ಕೇಕೆ ಹಾಕಿದ್ದು ಸಾಕಾಗಿ ಹೋದಾಗ ಅದಕ್ಕಿಂತ ವಿಭಿನ್ನವಾದ ವಾರಾಂತ್ಯ ಕಳೆಯಲು ಮನಸ್ಸು ತುಡಿಯುತ್ತದೆ.ಅಂಥದೊಂದು ವಿಶಿಷ್ಟ ಅನುಭವ ಪಡೆಯುವ ತುಡಿತಕ್ಕೆ ತಕ್ಕ ಸ್ಪಂದನೆ ಎಂದರೆ `ಕೃಷಿ ಪ್ರವಾಸೋದ್ಯಮ~. ದೊಡ್ಡ ಪಟ್ಟಣಗಳಿಂದ ಬರುವ ಜನರಿಗೆ ನಮ್ಮ ಹಳ್ಳಿಗಳ ಬದುಕನ್ನು ಪರಿಚಯಿಸುವ ಜೊತೆಗೆ ಗ್ರಾಮೀಣ ಜೀವನದ ಸುಂದರ ನೆನಪುಗಳನ್ನು ಕಟ್ಟಿಕೊಡುವಂಥ ಸತ್ವವುಳ್ಳ ಹೊಸ ಕ್ಷೇತ್ರವಿದು.

 

ಇರುವ ಹಳ್ಳಿಗಳು ಹಾಗೂ ಅಲ್ಲಿನ ಕೃಷಿ ಮತ್ತು ಕೃಷಿಕರೇ ಮೂಲ ಬಂಡವಾಳ ಇದಕ್ಕೆ. ರೈತರು ತಾವೇ ಒಂದು ಸಮೂಹ ಮಾಡಿಕೊಂಡು ಆ ಮೂಲಕ ಮಣ್ಣಿನ ಮಕ್ಕಳ ಅನುಭವದ ತುಣುಕನ್ನು ನಗರದವರಿಗೆ ನೀಡಬಹುದು. ಈ ಮೂಲಕವೇ ಬದುಕು ಸಾಗಿಸಲು ಕೃಷಿಯ ಜೊತೆಗೆ ಇನ್ನೊಂದು ಉಪ ಆದಾಯದ ಮಾರ್ಗ ರೂಪುಗೊಳ್ಳುತ್ತದೆ.ಮಹಾರಾಷ್ಟ್ರ, ಚೀನ ಮಾದರಿ: ಕೃಷಿಯನ್ನು ಜನರಿಗೆ ತೋರಿಸಿ ಒಂದಿಷ್ಟು ಹಣ ಗಳಿಸುವುದು ಹೇಗೆ ಎಂದು ಕೇಳುವ ಮುನ್ನ ಕೃಷಿ ಪ್ರವಾಸೋದ್ಯಮದ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ವ್ಯವಸಾಯ ಮಾಡುವ ಪ್ರದೇಶವೂ ಪ್ರವಾಸಿ ತಾಣ ಆಗಬಲ್ಲದು ಎನ್ನುವುದನ್ನು ನಮ್ಮ ನೆರೆಯ ಚೀನಾ ದೇಶವು ಜಗತ್ತಿಗೆ ತೋರಿಸಿದೆ.ಅಷ್ಟೇ ಅಲ್ಲ ಭಾರಿ ಪ್ರಮಾಣದಲ್ಲಿ ಯಶಸ್ವಿಯೂ ಆಗಿದೆ. ತಮ್ಮ ದೇಶದ ದೊಡ್ಡ ನಗರವಾಸಿಗಳನ್ನು ಮಾತ್ರವಲ್ಲ ವಿದೇಶಿ ಪ್ರವಾಸಿಗಳನ್ನು ಕೂಡ ಕೃಷಿ ಚಟುವಟಿಕೆಯ ಕೇಂದ್ರಗಳಿಗೆ ಸೆಳೆದು ತರುವಲ್ಲಿ ಯಶಸ್ವಿಯಾಗಿದೆ.ಅಂಥದೇ ಕ್ರಾಂತಿಕಾರಿ ಸಾಧನೆ ಮಾಡಿ ಮಾದರಿ ಎನಿಸಿದ `ಎಟಿಡಿಸಿ~ ನಮ್ಮ ದೇಶದಲ್ಲಿಯೇ ಸಾಕ್ಷಿಯಾಗಿ ನಿಂತಿದೆ. `ಎಟಿಡಿಸಿ~ (ಅಗ್ರಿ ಟೂರಿಸಂ ಡೆವಲಪ್‌ಮೆಂಟ್ ಕಾರ್ಪೊರೇಷನ್) ಮಹಾರಾಷ್ಟ್ರದಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಿದ ಕಂಪೆನಿ.

 

ಕೃಷಿ ಕುಟುಂಬದಿಂದ ಬಂದು ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಶಿಕ್ಷಣ ಪಡೆದ ಪಾಂಡುರಂಗ ತವಾರೆ ದೇಶದ ಪ್ರವಾಸೋದ್ಯಮದಲ್ಲಿ ಹೊಸದೊಂದು ಅಧ್ಯಾಯವನ್ನೇ ಬರೆದಿದ್ದಾರೆ. 2010ರಲ್ಲಿಯೇ ಮಹಾರಾಷ್ಟ್ರದ ವಿವಿಧ ತಾಲೂಕುಗಳಲ್ಲಿ 250ಕ್ಕೂ ಹೆಚ್ಚು `ಕೃಷಿ ಪ್ರವಾಸಿ ಕೇಂದ್ರ~ಗಳನ್ನು ಸ್ಥಾಪಿಸಿತು ಇವರ ಎಟಿಡಿಸಿ. ವ್ಯವಸಾಯವನ್ನು ಕೂಡ ಪ್ರವಾಸಿಗಳು ಬಂದು ನೋಡಲು ಸಾಧ್ಯ ಎನ್ನುವುದನ್ನು ಸಾಬೀತು ಮಾಡಿದ್ದೇ ಇವರ ಶ್ರೇಯ.

 

ಈ ಉದ್ಯಮವನ್ನು ಬೆಳೆಸುವ ಜೊತೆಗೆ ಗ್ರಾಮೀಣ ಪ್ರದೇಶದ ರೈತರಿಗೂ ಪ್ರಯೋಜನ ಆಗುವಂತೆ ಮಾಡುವಲ್ಲಿಯೂ ತವಾರೆ ಅವರ ಎಟಿಡಿಸಿ ಯಶಸ್ವಿಯಾಗಿದೆ.

ಹೀಗೆ ಕೃಷಿಕರಿಗೆ ನೆರವಾಗುವ ರೀತಿಯಲ್ಲಿ ಕರ್ನಾಟಕದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಕೃಷಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವುದು ಸಾಧ್ಯ.

 

ನಮ್ಮ ರಾಜ್ಯದಲ್ಲಿ ಉತ್ತಮ ವಿಮಾನ ಯಾನ ಸೌಲಭ್ಯವಿದೆ. ಅದರ ಪ್ರಯೋಜನ ಪಡೆದು ವಿದೇಶಿ ಪ್ರವಾಸಿಗರನ್ನು ಕೃಷಿ ಚಟುವಟಿಕೆ ನೋಡಲು ಆಗಮಿಸುವಂತೆಪ್ರೇರೇಪಿಸಬಹುದು. ಅದೆಲ್ಲವೂ ಸಾಧ್ಯವಾಗುವುದು ಮೂರನೇ ಹಂತದಲ್ಲಿ. ಮೊದಲು ಎರಡು ಹಂತಗಳನ್ನು ಯಶಸ್ವಿಯಾಗಿ ಕ್ರಮಿಸಬೇಕು.

 

ರೈತರಲ್ಲಿ ಕೃಷಿ ಪ್ರವಾಸೋದ್ಯಮದ ಸಾಧ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಮೊದಲ ಹೆಜ್ಜೆ. ಆನಂತರ ರೈತರ ಸಮೂಹಗಳನ್ನು ಕಟ್ಟಿ ವಿವಿಧ ಹೊಣೆಯನ್ನು ಹಂಚಿಕೊಳ್ಳುವುದಕ್ಕೆ ಹಾಗೂ ಸರಿಯಾದ ರೀತಿಯಲ್ಲಿ ಲಾಭ ಹಂಚಿಕೊಳ್ಳುವುದಕ್ಕೆ ಅಗತ್ಯವಾದ ವೇದಿಕೆ ನಿರ್ಮಾಣ ಆಗಬೇಕು.ಈಗಾಲೇ ಪ್ರವಾಸ ಯೋಜನೆ ಹಾಗೂ ನಿರ್ವಹಣೆ ಕ್ಷೇತ್ರದಲ್ಲಿ ಪರಿಣತಿ ಹೊಂದಿದವರು ಆಸಕ್ತಿ ತೋರಿಸಿ ಮುಂದಾಳತ್ವ ವಹಿಸಿದರಂತೂ ಕೆಲಸ ಸುಲಭ.

ಪ್ರಚಾರದ ಮೂಲಕ ಜನರನ್ನು ಸೆಳೆದು ತರುವುದು ಮಹತ್ವದ ಘಟ್ಟ.ಇದಕ್ಕಾಗಿ ಪತ್ರಿಕೆಗಳು, ಟೆಲಿವಿಷನ್ ಹಾಗೂ ಅಂತರ್ಜಾಲದ ನೆರವು ಪಡೆಯಬಹುದು. ಎಟಿಡಿಸಿ ಕೂಡ ಈ ಮೂರು ಮಾರ್ಗಗಳ ಮೂಲಕವೇ ಪ್ರವಾಸಿಗಳನ್ನು ಆಕರ್ಷಿಸಿದ್ದು. ಕೊಡಗು, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವರು ಅಂತರ್ಜಾಲ ಮೂಲಕ ಪ್ರವಾಸಿಗಳನ್ನು ತಮ್ಮ ತೋಟ ಹಾಗೂ ಫಾರ್ಮ್‌ಹೌಸ್‌ಗಳ ಅತಿಥಿಗಳನ್ನಾಗಿ ಸೆಳೆದು ಯಶಸ್ಸು ಕಂಡಿದ್ದಾರೆ.ಆದರೆ ಪಕ್ಕಾ ಕೃಷಿ ಚಟುವಟಿಕೆಯನ್ನು ಪ್ರವಾಸಿಗಳಿಗೆ ತೋರಿಸುವ ಹಾಗೂ ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡುವಂಥ ಪ್ರಯತ್ನ ಸಾಧ್ಯವಾಗಿದ್ದು ತೀರ ಕಡಿಮೆ. ಅನ್ಯ ಆಕರ್ಷಣೆಗಳನ್ನು ಬದಿಗಿಟ್ಟು ರೈತರ ಬದುಕನ್ನು ಅನುಭವಿಸುವುದಕ್ಕೆ ಮಾತ್ರ ಸೀಮಿತವಾದರೆ ಮಾತ್ರ ಅದು ನಿಜವಾದ ಕೃಷಿ ಪ್ರವಾಸೋದ್ಯಮ ಎನಿಸುತ್ತದೆ.ಕೃಷಿ ಎಂದಾಕ್ಷಣ ಕೇವಲ ನೇಗಿಲು ಹಿಡಿದು ಊಳುವುದು ಎಂದಲ್ಲ. ಅದಕ್ಕೆ ವಿಸ್ತಾರವಾದ ಅರ್ಥವನ್ನು ಕೃಷಿ ಪ್ರವಾಸೋದ್ಯಮ ಕಲ್ಪಿಸಿಕೊಟ್ಟಿದೆ. ಪ್ರವಾಸಿಗಳಿಗೆ ಊಳುವುದು, ನಟ್ಟು ಕಡಿಯುವುದು, ಬೀಜ ಬಿತ್ತುವುದು ಹೀಗೆ ಹಲವಾರು ಹಂತಗಳನ್ನು ಪರಿಚಯಿಸುವುದು ಮೊದಲ ಉದ್ದೇಶ. ಅದರ ಜೊತೆಗೆ ಉಪ ಕಸುಬುಗಳಾದ ಜಾನುವಾರು ಸಾಕಣೆಯನ್ನೂ ಸೇರಿಸಬಹುದು.ಅಷ್ಟೇ ಅಲ್ಲ. ಒಂದೇ ಗ್ರಾಮದಲ್ಲಿ ಹರಡಿಕೊಂಡಿರುವ ಕೃಷಿಗೆ ಪೂರಕವಾದ ಇತರ ಉದ್ಯೋಗಗಳ ಪ್ರಾತ್ಯಕ್ಷಿಕೆ ನೀಡುವ ಮೂಲಕ ಪ್ರವಾಸಿಗರಿಗೆ ಹೆಚ್ಚಿನ ಸಂತಸವನ್ನು ಕೊಡುವುದು ಸಾಧ್ಯ.ಕಮ್ಮಾರರು, ಬಡಗಿಗಳು ಹೇಗೆ ಕೃಷಿ ಸಾಧನಗಳನ್ನು ಸಿದ್ಧಪಡಿಸುತ್ತಾರೆಂದು ತೋರಿಸಬಹುದು. ಒಟ್ಟಿನಲ್ಲಿ ರೈತರ ಬದುಕಿನ ಜೊತೆಗೆ ಬೆಸೆದುಕೊಂಡಿರುವ ಎಲ್ಲ ಮಜಲು ಪರಿಚಯಿಸಿದರೆ ಅದು ಅರ್ಥಪೂರ್ಣ ಪ್ರವಾಸವಾಗುತ್ತದೆ.ಪ್ರವಾಸಿಗಳಿಗೆ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸ್ವಲ್ಪವಾದರೂ ಅವಕಾಶ ಇರಬೇಕು. ಅದಕ್ಕಾಗಿ ಹೊಲದಲ್ಲಿ ಕೆಲವು ಸುಲಭವಾದ ಕೆಲಸಗಳನ್ನು ಅವರಿಂದ ಮಾಡಿಸಬಹುದು. ಆಗ ಭಾರಿ ರಂಜನೆಯ ಅನುಭವ ಸಿಗುತ್ತದೆ.ಚಕ್ಕಡಿ ಓಡಿಸುವುದು, ಅದರಲ್ಲಿ ಸವಾರಿ ಪ್ರವಾಸಿಗಳ ಬದುಕಿನ ಸ್ಮರಣೀಯ ಕ್ಷಣವಾಗಿ ಉಳಿಯುತ್ತದೆ. ಇದೆಲ್ಲದರ ಜೊತೆಗೆ ಗ್ರಾಮೀಣ ಕ್ರೀಡೆಗಳನ್ನು ಆಡಿಸುವುದು ಇನ್ನೊಂದು ಪೂರಕ ಅಂಶ. ಜನಪದ ನೃತ್ಯ-ಸಂಗೀತದ ಕಾರ್ಯಕ್ರಮಗಳನ್ನು ಆಯೋಜಿಸಿದರಂತೂ ಇನ್ನೂ ವಿಶಿಷ್ಟವಾದ ಕಳೆ.ಇಷ್ಟನ್ನು ಸಾಧ್ಯವಾಗಿಸುವ ಜೊತೆಗೆ ಉತ್ತಮ ಗುಣಮಟ್ಟದ ಆಹಾರ ಹಾಗೂ ವಸತಿ ಸೌಲಭ್ಯ ಕೂಡ ಪ್ರವಾಸಿಗಳಿಗೆ ಸಿಗಬೇಕು. ಏಕೆಂದರೆ ನಗರ ಪ್ರದೇಶಗಳಿಂದ ಬರುವವರು ಒಳ್ಳೆಯ ನೀರು, ಊಟ ಹಾಗೂ ವಸತಿ ಬಯಸುತ್ತಾರೆ. ಒಟ್ಟಿನಲ್ಲಿ ಅವರು ತೆತ್ತ ಪ್ರವಾಸ ಶುಲ್ಕಕ್ಕೆ ತಕ್ಕ ವ್ಯವಸ್ಥೆ ಇದ್ದರೆ ಮತ್ತೆ ಮತ್ತೆ ಅತ್ತ ಆಕರ್ಷಿತರಾಗುತ್ತಾರೆ. ಹಾಗೆ ಆದರಷ್ಟೇ ಅಲ್ಲವೇ ಉದ್ಯಮವೊಂದು ಯಶಸ್ಸು ಸಾಧಿಸುವುದು?

 

ಕೃಷಿ ಪ್ರವಾಸೋದ್ಯಮದ ಕೆಲವು ಅಗತ್ಯಗಳು

* ಸಮೀಪದ ನಗರ ಪ್ರದೇಶದಿಂದ ಸುಗಮ ರಸ್ತೆ ಸಂಪರ್ಕ ಹಾಗೂ ವಸತಿ ಸೌಲಭ್ಯ.*ಪ್ರವಾಸಿಗಳ ವಸತಿ ಸ್ಥಳದಲ್ಲಿ ದೂರವಾಣಿ ವ್ಯವಸ್ಥೆ.* ತುರ್ತು ಸಂದರ್ಭದಲ್ಲಿ ಅಗತ್ಯ ವೈದ್ಯಕೀಯ ಸೇವೆಗೆ ಸಮೀಪದ ವೈದ್ಯರ ಮಾಹಿತಿ.* ಪ್ರವಾಸಿಗಳಿಗೆ ಹಾಗೂ ಅವರು ಜೊತೆಗೆ ತಂದ ವಸ್ತುಗಳಿಗೆ ಭದ್ರತೆ.* ಗುಣಮಟ್ಟದ ಆಹಾರ ಹಾಗೂ ನೀರು

.

* ಕೃಷಿ ಪ್ರವಾಸ ವ್ಯವಸ್ಥೆ ಮಾಡುವವರು ತಮ್ಮದೇ ವೆಬ್‌ಸೈಟ್ ಹಾಗೂ ಮಾಹಿತಿ ಕೈಪಿಡಿ ಹೊಂದಿರುವುದು ಒಳಿತು.* ವಿವಿಧ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರ ಸಂಪರ್ಕ ಜಾಲ.* ಕೃಷಿ ಪ್ರಾತ್ಯಕ್ಷಿಕೆ ನೀಡಲು ರೈತರ ಗುಂಪಿಗೆ ತರಬೇತಿ.*ವ್ಯವಸಾಯ ಮಾಡುವ ಅನುಭವ ಪ್ರವಾಸಿಗಳಿಗೆ ಸಿಗುವಂತೆ ಮಾಡುವುದು.*ಪ್ರವಾಸಿಗಳ ರಂಜನೆಗೆ ಸ್ಥಳೀಯ ಕಲಾವಿದರಿಂದ ಜನಪದ ಕಲೆಯ ಪ್ರದರ್ಶನ.* ಗ್ರಾಮೀಣ ಕ್ರೀಡೆಗಳನ್ನು ಆಡುವುದಕ್ಕೆ ಅನುಕೂಲ ಕಲ್ಪಿಸುವುದು.* ಕೃಷಿ ಉಪಯೋಗಿ ಸಾಕು ಪ್ರಾಣಿಗಳನ್ನು ನೋಡುವುದಕ್ಕೆ ಅವಕಾಶ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry