ಸೋಮವಾರ, ನವೆಂಬರ್ 18, 2019
23 °C
ರಾಜ್ಯ ರೈತ ಸಂಘದ ಪ್ರತಿಭಟನಾ ರ‌್ಯಾಲಿಯಲ್ಲಿ ಕೆಂಚೆಳ್ಳೇರ ಒತ್ತಾಯ

`ರೈತರ ಎಲ್ಲ ಕೃಷಿಸಾಲ ಮನ್ನಾ ಮಾಡಿ'

Published:
Updated:
`ರೈತರ ಎಲ್ಲ ಕೃಷಿಸಾಲ ಮನ್ನಾ ಮಾಡಿ'

ಹಾವೇರಿ: ರೈತರ ಬೆಳೆ ವಿಮೆ ನೀಡುವಲ್ಲಿ ಆಗಿರುವ ಅನ್ಯಾಯ ಹಾಗೂ ರೈತರ ಕೃಷಿಸಾಲ ಸಂಪೂರ್ಣ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ರೈತರು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ನಗರದ ಮುರುಘಾಮಠದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ರೈತರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ರೈತ ವಿರೋಧಿ ನೀರಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ರೈತರ ಬೆಳೆವಿಮೆ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.ನಗರದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಕೆಲಕಾಲ ರಸ್ತೆತಡೆ ನಡೆಸಿ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, `ಸಾಲ ಮಾಡಿ ಕೃಷಿ ಕಾರ್ಯಗಳನ್ನು ಕೈಗೊಂಡ ರೈತರಿಗೆ ಸಕಾಲಕ್ಕೆ ಮಳೆ ಬಾರದೇ ಬೆಳೆಯು ಒಣಗಿ ಹಾಕಿದ ಬಂಡವಾಳವು ಬಾರದಾಗಿದೆ. ಸಾಲ ಮರುಪಾವತಿ ಸಾಧ್ಯವಾಗದೇ ರೈತರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಅದಕ್ಕಾಗಿ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಎಲ್ಲ ಕೃಷಿಸಾಲ ಮನ್ನಾ ಮಾಡಬೇಕು' ಎಂದು ಒತ್ತಾಯಿಸಿದರು.`ಜಿಲ್ಲೆಯಲ್ಲಿ ತುಂಗಭದ್ರ, ವರದಾ, ಕುಮಧ್ವತಿ ಹಾಗೂ ಧರ್ಮಾ ಎಂಬ ನಾಲ್ಕು ನದಿಗಳು ಹರಿದಿದ್ದರೂ ಶಾಶ್ವತ ಬರ ಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇದರಿಂದ ಹೊರ ಬರಲು ಜಿಲ್ಲೆಯ ಎಲ್ಲ ದೊಡ್ಡ ಕೆರೆಗಳಿಗೆ ವರದಾ ಮತ್ತು ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು' ಎಂದು ಮನವಿ ಮಾಡಿದರು.`ಬೇಸಿಗೆಯಲ್ಲಿ ಕೊಳವೆಬಾವಿಯಿಂದ ನೀರಾವರಿ ಮಾಡುತ್ತಿದ್ದ ಅನೇಕ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದೇ ತೊಂದರೆ ಅನುಭವಿಸುವಂತಾಗಿದೆ. ಕೆಲ ಕಡೆಗಳಲ್ಲಿ ಹೆಸ್ಕಾಂ ಸರಿಯಾಗಿ ಟಿ.ಸಿ.ಗಳನ್ನು ಪೂರೈಸುತ್ತಿಲ್ಲ. ಕೂಡಲೇ ಟಿ.ಸಿ.ಗಳನ್ನು ಪೂರೈಸಬೇಕು. ಬ್ಯಾಂಕ್‌ಗಳು ರೈತರ ಕೃಷಿ ಸಾಲ ಬಲವಂತವಾಗಿ ವಸೂಲಿ ನಿಲ್ಲಬೇಕು' ಎಂದು ಆಗ್ರಹಿಸಿದರು.`ನಬಾರ್ಡಿನಿಂದ ಹೈನುಗಾರಿಕೆ ಸಾಲ ಪಡೆದಿರುವ ರೈತರಿಗೆ ತಕ್ಷಣ ಸಹಾಯಧನ ಮಂಜೂರ ಮಾಡಬೇಕು. ಸರ್ವೆ ಇಲಾಖೆಯಲ್ಲಿ ನೂರಾರು ಭೂಮಾಪಕರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು. ಈ ಬಾರಿ ಮುಂಗಾರು ಹಂಗಾಮಿಗೆ ಉಚಿತವಾಗಿ ಬೀಜ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು.

ಪ್ರತಿ ತಾಲ್ಲೂಕಿನಲ್ಲಿ ನಾಲ್ಕು ಭಾಗಗಳಾಗಿ ವಿಂಗಡಿಸಿ ಭೂಮಿ ಕೇಂದ್ರ ಸ್ಥಾಪನೆ, ಐದು ರೂ.ಗಳಿಗೆ ಕಂಪ್ಯೂಟರ್ ಪಹಣಿಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು. ಸುವರ್ಣಭೂಮಿ ಯೋಜನೆಯ ರೈತ ಫಲಾನುಭವಿಗಳ ಎರಡನೇ ಕಂತಿನ ಹಣವನ್ನು ಮಂಜೂರು ಮಾಡಬೇಕು' ಎಂಬ ಬೇಡಿಕೆಗಳ ಮನವಿಯನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ತಮ್ಮ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ಪ್ರಧಾನ ಕಾರ್ಯದರ್ಶಿ ಜಿ.ಎ.ಹಿರೇಮಠ, ಹಿರೇಕೆರೂರ ತಾಲ್ಲೂಕು ಗೌರವಾಧ್ಯಕ್ಷ ಎಸ್.ವಿ. ಚಪ್ಪರದಹಳ್ಳಿ, ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಗಂಗಪ್ಪನವರ, ಹಾವೇರಿ ಶಹರ ಘಟಕದ ಅಧ್ಯಕ್ಷ ಸುರೇಶ ಚಲವಾದಿ, ರಾಣೆಬೆನ್ನೂರು ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಕಡೂರ, ಬ್ಯಾಡಗಿ ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಗೌಡ್ರ ಕಾಡನಗೌಡರ, ನಾಗರಾಜ ನೀರಲಗಿ, ಮಂಜು ತೋಟದ ಸೇರಿದಂತೆ ಜಿಲ್ಲೆಯ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)