ರೈತರ ಕಂಡು ಕಂಪೆನಿ ಅಧಿಕಾರಿಗಳು ಪರಾರಿ

7
ಕಳಪೆ ಬೀಜಕ್ಕೆ ಪರಿಹಾರ ನೀಡುವ ಸಂಧಾನ ಸಭೆ ಮತ್ತೆ ವಿಫಲ

ರೈತರ ಕಂಡು ಕಂಪೆನಿ ಅಧಿಕಾರಿಗಳು ಪರಾರಿ

Published:
Updated:

ಹಾವೇರಿ: ಜಿಯೋ ಬೀಜೋತ್ಪಾದನೆ ಕಂಪೆನಿ ಅಧಿಕಾರಿಗಳ ಹಾಗೂ ಬ್ಯಾಡಗಿ ತಾಲ್ಲೂಕು ರೈತರ ನಡುವಿನ ಸಂಧಾನ ಸಭೆಗೆ ಆಗಮಿಸಿದ ಕಂಪೆನಿ ಅಧಿಕಾರಿಗಳು ರೈತರ ಪ್ರತಿಭಟನೆ ಎದುರಿಸಲಾರದೇ ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಶಿಧರ ಕುರೇರ ಅವರ ಅಧ್ಯಕ್ಷತೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ನಡೆದ ರೈತರ ಹಾಗೂ ಕಂಪೆನಿ ಅಧಿಕಾರಿಗಳ ಸಭೆ ಸಂಧಾನ ವಿಫಲವಾಗಿತ್ತು.ಹೆಚ್ಚುವರಿ ಜಿಲ್ಲಾಧಿಕಾರಿಗಳು ಸಭೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದರಲ್ಲದೇ, ಕಂಪೆನಿ ವ್ಯವಸ್ಥಾಪಕ ನಿರ್ದೇಶಕರನ್ನು ಸಭೆಗೆ ಕರೆ ತರುವಂತೆ ಕಂಪೆನಿ ಅಧಿಕಾರಿಗಳಿಗೆ ಸೂಚಿಸಿದ್ದರು.ಅದರಂತೆ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜನೆ ಗೊಂಡ ಸಭೆಗೆ ಜಿಯೋ ಕಂಪೆನಿ ಅಧಿಕಾರಿಗಳು ಆಗಮಿಸಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ರೈತರನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದಾರೆ.ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರು ಸಭೆಯಲ್ಲಿ ಭಾಗವಹಿಸಿದ್ದರೂ ಕಂಪೆನಿಯ ಒಬ್ಬ ಪ್ರತಿನಿಧಿಯೂ ಪಾಲ್ಗೊಳ್ಳದೇ ಇದ್ದುದರಿಂದ ಯಾವುದೇ ಮಾತುಕತೆ ನಡೆಯದೇ ಸಭೆ ಮೊಟುಕು ಗೊಂಡಿತು.ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ರಾಮಣ್ಣ ಕಂಚಳ್ಳೇರ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿ, ಕೃಷಿ ಇಲಾಖೆಯ ಅಧಿಕಾರಿಗಳು ಕಂಪೆನಿಯ ಅಧಿಕಾರಿಗಳ ಜೊತೆ ಒಳಒಪ್ಪಂದ ಮಾಡಿಕೊಂಡು ರೈತರಿಗೆ ಪರಿಹಾರ ನೀಡದೇ ಮೋಸ ಮಾಡಿದ್ದಾರೆ. ಅದು ಅಲ್ಲದೇ, ಸಭೆಗೆ ಬಂದ ಕಂಪೆನಿ ಅಧಿಕಾರಿ ಗಳನ್ನು ಕೃಷಿ ಅಧಿಕಾರಿಗಳೇ ವಾಪಸ್ಸು ಕಳುಹಿಸಿದ್ದಾರೆ ಎಂದು ಆರೋಪಿಸಿದರು.ಬ್ಯಾಡಗಿಯ ತಹಶೀಲ್ದಾರ್ ಕಚೇರಿಗೆ ಬೀಗ ಜಡೆದು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ತಹಶೀಲ್ದಾರ್ ಸುಭಾಷ್ ಅವರು ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ, ನ್ಯಾಯ ಒದಗಿಸುವ ಭರವಸೆ ನೀಡಿದ್ದರಿಂದ ಚಳುವಳಿಯಿಂದ ಹಿಂದೆ ಸರಿದ್ದ್ದಿದೇವು. ಆದರೆ, ಅಧಿಕಾರಿಗಳು ಸುಳ್ಳು ಭರವಸೆಯ ಮೂಲಕ ರೈತರನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು.ಇದೇ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುರೇರ ಅವರು, ಮೊಬೈಲ್‌ಮೂಲಕ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಿದರು. ಆದರೆ, ಅವರು ಮೊಬೈಲ್‌ನಲ್ಲಿಯೇ ಎಕರೆಗೆ ಒಂದರಿಂದ ಎರಡು ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ.ಈ ವಿಷಯವನ್ನು ಕುರೇರ ಅವರು ರೈತರ ಗಮನಕ್ಕೆ ತಂದಾಗ, ಎಕರೆ ಬಿತ್ತನೆಗೆ ಸುಮಾರು 15 ರಿಂದ 20 ಸಾವಿರ ಖರ್ಚಾಗುತ್ತದೆ. ಆದ್ದರಿಂದ ಕಂಪೆನಿ ಅಧಿಕಾರಿಗಳು ಎಕರೆಗೆ 25 ರಿಂದ 30 ಸಾವಿರ ಪರಿಹಾರ ನೀಡಬೇಕು ರೈತರು ಎಂದು ಒತ್ತಾಯಿಸಿದರು.ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, ಕೃಷಿ ವಿ.ವಿ.ಯ ವಿಜ್ಞಾನಿಗಳು ರೈತರ ಸಮ್ಮುಖದಲ್ಲಿ ಬೀಜವನ್ನು ಮರು ಪರಿಶೀಲನೆ ಮಾಡಬೇಕು. ರೈತರಿಗೆ ಮೋಸ ಮಾಡಿದ ಜಿಯೋ ಬೀಜೋತ್ಪಾದನೆ ಕಂಪೆನಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಇದೇ 12 ರಂದು ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾ ಗುವುದು. ಒಂದು ವೇಳೆ ಸಚಿವರಿಂದಲೂ ನ್ಯಾಯ ಸಿಗದಿದ್ದರೇ, ಹಾನಿ ಗೊಳಗಾದ ರೈತರು ಜಿಲ್ಲಾಧಿಕಾರಿ ಕಚೇರಿಯ ಎದುರು  ವಿಷಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಗಣೇಶ ನಾಯಕ, ಬ್ಯಾಡಗಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಟಿ.   ಎಚ್.ನಟರಾಜ್, ಹಸಿರು ಸೇನೆ ಅಧ್ಯಕ್ಷ ಗಂಗಣ್ಣ ಎಲಿ, ರೈತ ಮುಖಂಡರಾದ ಸೋಮಣ್ಣ ಚಪ್ಪರದಹಳ್ಳಿ, ವೀರಣ್ಣ ಸೂರಿ, ಮಹೇಶ ಕರ್ಜಗಿ, ಇಸ್ಮಾಯಿಲ್ ದೊಡ್ಡಮನಿ, ಶಶಿಧರ ದೊಡ್ಡಮನಿ, ರೇವಣಪ್ಪ ಮತ್ತೂರ, ಬಸನಗೌಡ ಪಾಟೀಲ ಸೇರಿದಂತೆ ಬ್ಯಾಡಗಿ ತಾಲ್ಲೂಕಿನ ಕಲ್ಲೇದೇವರು ಹಾಗೂ ಕೆರೂಡಿ ಗ್ರಾಮದ ರೈತರು ಹಾಜರಿದ್ದರು.ರಾತ್ರಿ ಪ್ರತಿಭಟನೆ ಅಂತ್ಯ

ಹೆಚ್ಚುವರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆ ವಿಫಲವಾಗಲು ಜಿಲ್ಲೆಯ ಕೃಷಿ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ, ಹಾನಿಗೀಡಾದ ಬೆಳೆಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರು ನಡೆಸಿದ ಪ್ರತಿಭಟನೆ ಶುಕ್ರವಾರ ರಾತ್ರಿ ಅಂತ್ಯಗೊಂಡಿತು.ಸಭೆ ಮುಗಿಯುತ್ತಿದ್ದಂತೆ ಪ್ರತಿಭಟನೆ ಆರಂಭಿಸಿದ ರೈತರ ಮನವೊಲಿಕೆ ಅಧಿಕಾರಿಗಳು ಪ್ರಯತ್ನಿಸಿದರೂ ಯಾವುದೇ ಪ್ರಯೋ ಜನಕ್ಕೆ ಬರಲಿಲ್ಲ. ತಮ್ಮ ಬೇಡಿಕೆ ಈಡೇರುವ ತನಕ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.ಮುಂದಿನ 15 ದಿನಗಳ ಒಳಗಾಗಿ ಸಮಸ್ಯೆ ಪರಿಹರಿಸುವ ಹಾಗೂ ತೊಂದರೆಗೀಡಾದ ರೈತರಿಗೆ ನೆರವಾಗುವ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಂದ ಭರವಸೆ ಸಿಕ್ಕ ಕಾರಣ ರೈತರು ರಾತ್ರಿ 9 ಗಂಟೆ ವೇಳೆಗೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry