ಶುಕ್ರವಾರ, ಜನವರಿ 24, 2020
20 °C

ರೈತರ ಕಿಸೆಯಲ್ಲಿ ಮಧ್ಯವರ್ತಿಗಳ ಕೈ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಸತಿ ಸಚಿವರಾಗಿದ್ದ  ಕೃಷ್ಣಯ್ಯ ಶೆಟ್ಟಿ ಅವರು ತಮ್ಮ ಸಹೋದರನ ಭೂಮಿಯನ್ನೇ ಕರ್ನಾಟಕ ಗೃಹ ಮಂಡಳಿಗೆ ಎಕರೆಗೆ ₨ 40 ಲಕ್ಷ­ದಂತೆ ಖರೀದಿ ಮಾಡಿ ಸಚಿವ ಸ್ಥಾನ ಕಳೆದು­ಕೊಂಡಿದ್ದರೂ ಮಂಡಳಿ ಪಾಠ ಕಲಿತಂತಿಲ್ಲ. ದುಬಾರಿ ಬೆಲೆಗೆ ಭೂಮಿಯನ್ನು ಕೊಳ್ಳುವ ಪರಿಪಾಠವನ್ನು ಮುಂದುವರಿಸಿದೆ.ಮೈಸೂರು ಸೇರಿ ಅನೇಕ ಕಡೆ ಎಕರೆಗೆ ಮಾರ್ಗ­ಸೂಚಿ ದರ ₨ 3 ರಿಂದ 4 ಲಕ್ಷ  ಇದ್ದ ಭೂಮಿಯನ್ನು ₨ 30 ರಿಂದ 40 ಲಕ್ಷದಷ್ಟು ದುಬಾರಿ ದರಕ್ಕೆ ಖರೀದಿ ಮಾಡಿದೆ. ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಗುಂಗ್ರಾಲ್‌ ಛತ್ರ, ಕಲ್ಲೂರು ನಾಗನಹಳ್ಳಿ ಕಾವಲ್‌ ಮತ್ತು ಯಲಚಹಳ್ಳಿ ಗ್ರಾಮಗಳ ಒಟ್ಟು 385.11 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಗೃಹ­ಮಂಡಳಿ ಪ್ರಕ್ರಿಯೆ ಆರಂಭಿಸಿ ಈಗಾಗಲೇ ಬಹುತೇಕ ಜಮೀನು ಸ್ವಾಧೀನ ಪಡಿಸಿಕೊಂಡಿದೆ. 40 ಎಕರೆ ಸ್ವಾಧೀನಪಡಿ ಸಿಕೊಳ್ಳುವುದು ಮಾತ್ರ ಬಾಕಿ ಇದೆ.ವಿಶೇಷ ಎಂದರೆ ಗುಂಗ್ರಾಲಛತ್ರ ಗ್ರಾಮ ಮೈಸೂರು ನಗರದಿಂದ ಸುಮಾರು 22 ಕಿ.ಮೀ ದೂರ ದಲ್ಲಿದೆ. ಇದು ಗೃಹ ಮಂಡಳಿಯ ಆಗಿನ ಅಧ್ಯಕ್ಷ  ಜಿ.ಟಿ.ದೇವೇಗೌಡ ಅವರ ಸ್ವಗ್ರಾಮ. ಈ ಭೂಮಿಯ ಬೆಲೆ ನಿರ್ಧರಿಸಲು 28–7–2011ರಲ್ಲಿ ಮೈಸೂರು ಜಿಲ್ಲಾಧಿಕಾರಿ ಅಧ್ಯಕ್ಷತೆ­ಯಲ್ಲಿ ಸಭೆ ನಡೆದಿತ್ತು. ಆಗ ಈ ಪ್ರದೇಶದಲ್ಲಿ ಒಂದು ಎಕರೆ ಮಾರ್ಗಸೂಚಿ ದರ ₨ 5.50 ಲಕ್ಷದಿಂದ 7 ಲಕ್ಷ ಎಂದು ಉಪ ನೋಂದಣಾ­ಧಿಕಾರಿ­ಗಳು ತಿಳಿಸಿದ್ದರೂ ‘ರೈತರ ಹಿತ’ದ ಹೆಸರಿನಲ್ಲಿ ಒಂದು ಎಕರೆಗೆ ₨ 36.50 ಲಕ್ಷ ಬೆಲೆ ನೀಡಲು ತೀರ್ಮಾನಿಸಲಾಯಿತು. ಇದೇ ಬೆಲೆಯಲ್ಲಿ ಈಗ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ.2008ರಲ್ಲಿಯೂ ಈ ಪ್ರದೇಶದಲ್ಲಿ ಎಕರೆಗೆ ₨ 36.50 ಲಕ್ಷ ರೂಪಾಯಿಗಳಂತೆ 81 ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆಗ  ಮಾರ್ಗ­ಸೂಚಿ ದರ ಎಕರೆಗೆ ₨ 1 ರಿಂದ 2 ಲಕ್ಷ ಮಾತ್ರ ಇತ್ತು. ಆಗ ರೈತರ ಹೆಸರಿನಲ್ಲಿ ಬೇರೆಯವರು ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಗೃಹ ಮಂಡಳಿ ಭೂಮಿ ಸ್ವಾಧೀನ ಮಾಡಿ­ಕೊಳ್ಳುತ್ತದೆ ಎಂದು ಗೊತ್ತಾದ ತಕ್ಷಣವೇ ಕೆಲವು ‘ಚಾಲಾಕಿ­ಗಳು’  ಜಿಪಿಎ ಮೂಲಕ ಖರೀದಿ ಒಪ್ಪಂದ ಮಾಡಿಕೊಂಡು  ರೈತರಿಗೆ ಎಕರೆಗೆ ₨ 10ರಿಂದ 15 ಲಕ್ಷ  ಮಾತ್ರ ನೀಡಿದ್ದಾರೆ ಎಂಬ ದೂರುಗಳು ಕೇಳಿ ಬಂದಿದ್ದವು.ಇದೇ ಸಂದರ್ಭದಲ್ಲಿಯೇ ಆಗಿನ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ಹಗರಣವೂ ಬಯಲಾಗಿದ್ದ­ರಿಂದ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡ­ಲಾಗಿತ್ತು. ಜೊತೆಗೆ ಜಿಪಿಎ ಮೂಲಕ ಒಪ್ಪಂದವಾದ ಭೂಮಿಯನ್ನು ಖರೀದಿಸಬಾರದು ಮತ್ತು ರೈತ­ರಿಂದ ನೇರವಾಗಿಯೇ ಖರೀದಿ ಮಾಡ­ಬೇಕು ಎಂಬ ಆದೇಶವನ್ನೂ ಸರ್ಕಾರ ಹೊರಡಿಸಿತ್ತು.

5ನೇ ಪುಟ ನೋಡಿ

ಲೋಕಾಯುಕ್ತರಿಗೆ ದೂರು: 2008ರ ಹಗರಣಕ್ಕೆ ಸಂಬಂಧಿಸಿದಂತೆ  ಗುಲ್ಬರ್ಗದ ರೈತ ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ ಅವರು ಲೋಕಾಯುಕ್ತಕ್ಕೆ ದೂರು (lok/BCD287/ARE-2) ಸಲ್ಲಿಸಿದರು. ಈ ಸಂಬಂಧ ಸ್ಪಷ್ಟನೆ ನೀಡುವಂತೆ ಲೋಕಾಯುಕ್ತ 22–7–2011ರಂದು ಗೃಹ ಮಂಡಳಿಗೆ ನೋಟಿಸ್‌ ಜಾರಿಗೊಳಿಸಿತು. ಆಗ ಲೋಕಾಯುಕ್ತ ಹುದ್ದೆ ಖಾಲಿ ಇತ್ತು. ಇದರಿಂದಾಗಿ ತನಿಖೆ ನಡೆಯಲಿಲ್ಲ.  ಈವರೆಗೂ ತನಿಖೆ ಆರಂಭವಾಗಿಯೇ ಇಲ್ಲ. ಈ ನಡುವೆ ಇಲವಾಲ ಹೋಬಳಿಯ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಕ್ರಿಯೆ ಆರಂಭವಾಯಿತು. 2011ರಿಂದ ರೈತರಿಂದ ನೇರವಾಗಿಯೇ ಖರೀದಿ ಮಾಡಲು ಗೃಹ ಮಂಡಳಿ ಮುಂದಾಗಿದ್ದರೂ ಪೂರ್ಣ ಹಣ ರೈತರ ಕೈಗೆ ಸಿಗುತ್ತಿಲ್ಲ. ಕೆಲವು ಪ್ರಭಾವಿಗಳು ರೈತರಿಗೆ ಎಕರೆಗೆ ₨ 10 ರಿಂದ 15 ಲಕ್ಷ  ಮಾತ್ರ ನೀಡಿ ಉಳಿದ ಹಣವನ್ನು ತಾವೇ ಲಪಟಾಯಿಸುತ್ತಿದ್ದಾರೆ ಎಂಬ ಆರೋಪ ಮತ್ತೆ ಕೇಳಿ ಬರತೊಡಗಿದೆ.

ಬೆಂಗಳೂರಿನಲ್ಲಿ ಬ್ಯಾಂಕ್‌ ಖಾತೆ: ರೈತರ ಜಮೀನು ಇರುವುದು ಮೈಸೂರು ತಾಲ್ಲೂಕು ಇಲವಾಲ ಹೋಬಳಿಯ ವಿವಿಧ ಗ್ರಾಮಗಳಲ್ಲಿ. ಆದರೆ ಈ ರೈತರ ಬ್ಯಾಂಕ್‌ ಖಾತೆ ಇರುವುದು ಮೈಸೂರಿನ ವಿಜಯನಗರದ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಹಾಗೂ ಬೆಂಗಳೂರಿನ ಮೈಸೂರು ರಸ್ತೆಯ ಕಾರ್ಪೊರೇಷನ್‌ ಬ್ಯಾಂಕ್‌ನಲ್ಲಿ. ಈ ಶಾಖೆಯೊಂದರಲ್ಲೇ ನೂರಾರು ರೈತರ ಖಾತೆಗಳಿವೆ. ರೈತರ  ಈ ಖಾತೆಗಳಿಗೆ ಗೃಹ ಮಂಡಳಿ ಚೆಕ್‌ ಮತ್ತು ಆರ್‌.ಟಿ.ಜಿ.ಎಸ್‌. ಮೂಲಕ ಹಣ ವರ್ಗಾವಣೆ ಮಾಡಿದೆ.ಆನಂದೂರು ಗ್ರಾಮದ ರೈತ ಪುಟ್ಟೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯ ಕಾರ್ಯದರ್ಶಿ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿಯೊಂದನ್ನು ಸಲ್ಲಿಸಿ, ರೈತರಿಗೆ ಹೇಗೆ ಮೋಸ ಮಾಡಲಾಗಿದೆ ಎನ್ನುವುದನ್ನು ವಿವರಿಸಿದ್ದಾರೆ. ಅವರ ಪ್ರಕಾರ, ‘ಕೆಲವು ಮಧ್ಯವರ್ತಿಗಳು ಮೈಸೂರಿನ ವಿಜಯನಗರದ  ಕಾರ್ಪೊರೇಷನ್‌ ಬ್ಯಾಂಕ್‌, ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ ಹಾಗೂ ಬೆಂಗಳೂರಿನ ಮೈಸೂರು ರಸ್ತೆ ಕಾರ್ಪೊರೇಷನ್‌ ಬ್ಯಾಂಕ್‌ನಲ್ಲಿ ರೈತರ ಖಾತೆ ತೆರೆಸಿದರು. ರೈತರ ಪಾಸ್‌ ಬುಕ್‌ ಮತ್ತು ಚೆಕ್‌ ಬುಕ್‌ಗಳನ್ನು ತಮ್ಮ ಹತ್ತಿರವೇ ಇಟ್ಟುಕೊಂಡರು. ಚೆಕ್‌ಗಳಿಗೆ ಮೊದಲೇ ರೈತರಿಂದ ಸಹಿ ಮಾಡಿಸಿಕೊಂಡರು. ಗೃಹ ಮಂಡಳಿಯಿಂದ ರೈತರ ಖಾತೆಗೆ ಹಣ ಬಂದ ನಂತರ ತಮ್ಮ ಪಾಲಿನ ಹಣವನ್ನು ಪಡೆದುಕೊಂಡ ನಂತರವೇ  ರೈತರಿಗೆ ಪಾಸ್‌

ಬುಕ್‌ ವಾಪಸ್‌ ಕೊಟ್ಟರು’. 2008 ಮತ್ತು 2011ರಲ್ಲಿ ಇಲವಾಲ ಹೋಬಳಿ ಭೂಸ್ವಾಧೀನ ಪ್ರಕರಣ ಭುಗಿಲೆದ್ದಾಗ ದೊಡ್ಡ ದನಿಯಲ್ಲಿ ಅದನ್ನು ಖಂಡಿಸಿದ್ದ ಸಿದ್ದರಾಮಯ್ಯ ಅವರೇ ಈಗ ಮುಖ್ಯಮಂತ್ರಿಯಾಗಿದ್ದಾರೆ. ರೈತರಿಗೆ ಆಗಿರುವ ಮೋಸದ ಬಗ್ಗೆ ತನಿಖೆ ನಡೆಸಿ ನ್ಯಾಯ ದೊರಕಿಸಬೇಕು ಎಂಬುದು ಪುಟ್ಟೇಗೌಡರ ಮನವಿ.

ಕೃಷ್ಣಯ್ಯ ಶೆಟ್ಟಿ ಪ್ರಕರಣ

ವಸತಿ ಸಚಿವರಾಗಿದ್ದ ಕೃಷ್ಣಯ್ಯ ಶೆಟ್ಟಿ ಅವರ ಸಹೋದರ ಶ್ರೀನಿವಾಸ ಶೆಟ್ಟಿ ಅವರಿಗೆ ಸೇರಿದ ಶಿಡ್ಲಘಟ್ಟದಲ್ಲಿರುವ 959 ಎಕರೆ ಭೂಮಿಯನ್ನು ಎಕರೆಗೆ 50 ಲಕ್ಷ ರೂಪಾಯಿಯಂತೆ ಗೃಹ ಮಂಡಳಿ ಖರೀದಿ ಮಾಡಿತ್ತು. ಈ ಹಗರಣದಲ್ಲಿ ಕೃಷ್ಣಯ್ಯ ಶೆಟ್ಟಿ ಅವರು ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು.  ಹಗರಣದ ತನಿಖೆ ಮಾಡುವಂತೆ ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಂದಿನ ಮುಖ್ಯಕಾರ್ಯದರ್ಶಿಗೆ  ಆದೇಶಿಸಿದ್ದರು. ಶ್ರೀನಿವಾಸ ಶೆಟ್ಟಿ  ಹಣವನ್ನು ವಾಪಸು ನೀಡಿದ ನಂತರ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನೇ ಗೃಹ ಮಂಡಳಿ ಕೈಬಿಟ್ಟಿತ್ತು.

ಪ್ರತಿಕ್ರಿಯಿಸಿ (+)