ಗುರುವಾರ , ನವೆಂಬರ್ 14, 2019
18 °C

ರೈತರ ಕೈಬಿಡದ ಭೂಮಿ

Published:
Updated:

ಕೇಂದ್ರದ  ಯುಪಿಎ ಸರ್ಕಾರ ಅಡ್ಡಿಯೊಂದನ್ನು ನಿವಾರಿಸಿಕೊಂಡಿದೆ. ವಿವಾದಾತ್ಮಕ ಭೂಸ್ವಾಧೀನ ಮಸೂದೆ ಕರಡಿಗೆ ಸರ್ವಪಕ್ಷಗಳ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ಇಂದಿನಿಂದ ಮತ್ತೆ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಈ ಮಸೂದೆ ಮಂಡನೆಗೆ ಕೇಂದ್ರ ಸರ್ಕಾರದ ಹಾದಿ ಸುಗಮವಾದಂತಾಗಿದೆ.ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಭೂಸ್ವಾಧೀನ, ಪುನಶ್ಚೇತನ ಮತ್ತು ಪುನರ್ವಸತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದಾಗ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಸೇರಿದಂತೆ ಬಹುತೇಕ ಪಕ್ಷಗಳು ಅದನ್ನು ವಿರೋಧಿಸಿದ್ದವು. ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಬದಲು ಅದೇ ಭೂಮಿಯನ್ನು ಕಟ್ಟಡ ನಿರ್ಮಾಣಗಾರರಿಗೆ ಗುತ್ತಿಗೆ ಆಧಾರದ ಮೇಲೆ ನೀಡಬೇಕು. ಹೀಗೆ ಮಾಡುವುದರಿಂದ ಭೂಮಾಲೀಕತ್ವ ರೈತರ ಬಳಿಯೇ ಉಳಿದು ರೈತರಿಗೆ ವಾರ್ಷಿಕ ಆದಾಯ ಬರುವಂತಾಗುತ್ತದೆ ಎಂಬ ಬಿಜೆಪಿಯ ಪ್ರಮುಖ ಸಲಹೆಯನ್ನು ತಿದ್ದುಪಡಿ ಮಸೂದೆಯಲ್ಲಿ ಸೇರಿಸಲು ಕೇಂದ್ರ ಅಳೆದೂ ಸುರಿದೂ ಒಪ್ಪಿಕೊಂಡಿದೆ.ಭೂಮಿ ಗುತ್ತಿಗೆ ನೀಡುವ ಅಧಿಕಾರ ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಟ್ಟ ವಿಷಯವಾದ್ದರಿಂದ ಈ ಸಂಬಂಧ ರಾಜ್ಯಗಳಿಗೇ ಕಾನೂನು ರಚಿಸಲು ಅನುವು ಮಾಡಿಕೊಡುವುದಕ್ಕೂ ಸರ್ಕಾರ ಒಪ್ಪಿಕೊಂಡಿರುವುದರಿಂದ ಕಗ್ಗಂಟು ಸಡಿಲವಾಗಲು ಕಾರಣವಾಗಿದೆ. ಮಸೂದೆ ಮಂಡಿಸಿದ ನಂತರ ಸಾವಿರಾರು ಎಕರೆಯಷ್ಟು ಭೂಮಿ ಮಾರಾಟವಾಗಿದೆ. ಅಂತಹವರಿಗೆ ಮಸೂದೆ ಅಂಗೀಕಾರವಾದ ನಂತರ ಪರಿಹಾರ ನೀಡಬೇಕೆಂಬ ಪ್ರತಿಪಕ್ಷಗಳ ವಾದಕ್ಕೂ ಪುರಸ್ಕಾರ ಸಿಕ್ಕಿದೆ.ಆದರೆ ಪ್ರಶ್ನೆಗಳು ಉಳಿದುಕೊಂಡಿವೆ. ಇದರಿಂದಾಗಿ ರೈತರ ಭೂಮಿಯನ್ನು ಅನಾಯಾಸವಾದ ಬೆಲೆಗೆ ಖರೀದಿಸಿ, ರೈತರನ್ನು ಬರಿಗೈ ಮಾಡುವ ಭೂಮಾಫಿಯಾ ಮೇಲೆ ನಿಯಂತ್ರಣ ಸಾಧ್ಯತೆ ಹೆಚ್ಚುತ್ತದೆ. ಖಾಸಗಿ ಉದ್ಯಮಕ್ಕಾಗಿ ಭೂಖರೀದಿ ಮಾಡುವ ಸಂದರ್ಭದಲ್ಲಿ ಭೂಮಿಗೆ ಸಂಬಂಧಿಸಿದ ಶೇ 80ರಷ್ಟು ಸಂಬಂಧಿಸಿದವರ ಒಪ್ಪಿಗೆ ಇರಲೇಬೇಕು. ಭೂಸ್ವಾಧೀನದ ಸಮಯದಲ್ಲಿ ಭೂಮಾಲೀಕರಿಗೆ  ಗ್ರಾಮೀಣ ಪ್ರದೇಶದಲ್ಲಿ ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಹಾಗೂ ನಗರ ಪ್ರದೇಶಗಳಲ್ಲಿ ಮಾರುಕಟ್ಟೆ ದರಕ್ಕಿಂತ ಎರಡುಪಟ್ಟು ಅಧಿಕ ದರದಲ್ಲಿ ಪರಿಹಾರ ನೀಡಬೇಕೆಂಬ ಪ್ರಸ್ತಾವ ಮಸೂದೆಯಲ್ಲಿರುವುದು, ರೈತರ ಪಾಲಿಗೆ ವರದಾನವೆನ್ನಿಸಿದೆ.ಸುದೀರ್ಘಕಾಲದಿಂದ ತಿದ್ದುಪಡಿಯಾಗದ ಮಸೂದೆಯನ್ನು ತಿದ್ದುಪಡಿ ಮಾಡುವ ಮೂಲಕ ಸುಧಾರಣೆ ಪ್ರಕ್ರಿಯೆಯಲ್ಲಿ ದಿಟ್ಟಹೆಜ್ಜೆ ಇಡುವ ಈ ಪ್ರಯತ್ನ ಸಾಕಾರಗೊಂಡರೆ ಅದು ರೈತರ ಬಾಳಿಗೆ ಹೊಸಬೆಳಕಾಗಲಿದೆ. ಆದರೆ ಮೂಲ ಭೂಮಾಲೀಕನಿಗೂ ಮಾಲೀಕತ್ವದ ಹಕ್ಕು ಕೊಡುವ ವಿಷಯದಲ್ಲಿ ಉದ್ಯಮಿಗಳಲ್ಲೇ ಭಿನ್ನಾಭಿಪ್ರಾಯವಿರುವಂತಿದೆ.ಭೂಸ್ವಾಧೀನ ಮಸೂದೆಯಲ್ಲಿ ರಾಜ್ಯಸರ್ಕಾರಗಳಿಗೆ ನೀಡಿರುವ ಅಧಿಕಾರವು ಪರಿಹಾರ, ಪುನರ್ವಸತಿ, ಮರುಇತ್ಯರ್ಥ ಪ್ಯಾಕೇಜ್‌ಗಳ ಮೂಲ ಆಶಯಕ್ಕೆ ಧಕ್ಕೆ ತರದಂತೆ ಎಚ್ಚರವಹಿಸಬೇಕು ಎಂಬ ಪ್ರತಿಪಕ್ಷಗಳ ಒತ್ತಡವೂ ರೈತಪರ ಕಾಳಜಿಯನ್ನು ಮೆರೆಯುತ್ತವೆ. ಆದರೂ ಈ ಮಸೂದೆಯ ಕರಡು, ಗೇಣಿದಾರರು ಮತ್ತು ಕೃಷಿ ಕಾರ್ಮಿಕರನ್ನು ಒಳಗೊಂಡಿಲ್ಲ, ಮೂಲ ಮಸೂದೆಯನ್ನು ದುರ್ಬಲಗೊಳಿಸಲಾಗಿದೆ ಹಾಗೂ ಈಗಿನ ಸ್ವರೂಪವು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಎಡಪಕ್ಷಗಳು ಹಾಗೂ ಡಿಎಂಕೆ ಆಕ್ಷೇಪ ವ್ಯಕ್ತಪಡಿಸಿರುವುದನ್ನು ಗಮನಿಸಿದರೆ ಒಟ್ಟಾರೆ ಮಸೂದೆಯ ಸ್ವರೂಪ ಲೋಕಸಭೆಯಲ್ಲಿ ಸಮಗ್ರ ಚರ್ಚೆಗೆ ಒಳಪಡುವುದು ಅವಶ್ಯವೆನಿಸುತ್ತದೆ.

ಪ್ರತಿಕ್ರಿಯಿಸಿ (+)