ಸೋಮವಾರ, ಮೇ 10, 2021
25 °C

ರೈತರ ಕೈ ಹಿಡಿದ ಎನ್‌ಜಿಒ

ಪ್ರಜಾವಾಣಿ ವಾರ್ತೆ ಮಹದೇವ್ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

ಸಂತೇಮರಹಳ್ಳಿ: ರೈತರು ಬೆಳೆದ ರೇಷ್ಮೆ ಗೂಡಿಗೆ ಬೆಂಬಲ ಬೆಲೆ ಇಲ್ಲದೆ ಹಿನ್ನೆಡೆ ಅನುಭವಿಸುತ್ತಿರುವ ದಿನಗಳಲ್ಲಿ ಪುನಶ್ಚೇತನ ಗೊಳಿಸಲು ಸ್ವಯಂ ಸೇವಾ ಸಂಸ್ಥೆಯೊಂದು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಹಾಯ ಮಾಡುತ್ತಿದೆ.ಸಂತೇಮರಹಳ್ಳಿಯಲ್ಲಿ ಎಸ್‌ಜಿಎಸ್‌ವೈ ಎಂಬ ಸ್ವಯಂ ಸೇವಾ ಸಂಸ್ಥೆಯು ರೇಷ್ಮೆಹುಳು ಸಾಕಾಣಿಕೆ ಕೇಂದ್ರ ಆರಂಭಿಸಿ ರೈತರಿಗೆ 2ನೇ ಜ್ವರದಿಂದ ಮೇಲೆ ಬಂದ ರೇಷ್ಮೆಹುಳು ಮರಿಯನ್ನು ನೀಡುತ್ತಿದೆ. 30 ದಿನದಲ್ಲಿ ಬೆಳೆಯಬಹುದಾದ ರೇಷ್ಮೆ ಬೆಳೆಯನ್ನು 20 ದಿನದಲ್ಲಿ ಬೆಳೆಯುವಂತೆ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಮತ್ತು ಕುದೇರು ಗ್ರಾಮದಲ್ಲಿ ಮಾತ್ರ ಚಾಕಿ ಸಾಕಾಣಿಕೆ ಕೇಂದ್ರ ನಡೆಯುತ್ತಿದೆ.ಮೈಸೂರಿನ ಕೇಂದ್ರ ರೇಷ್ಮೆ ಮಂಡಳಿ ಇವರಿಂದ ಪಿ.ಎಂ.ಸಿ.ಎಸ್.ಆರ್.2 ತಳಿ ಬಿತ್ತನೆ ಮೊಟ್ಟೆಯನ್ನು, ಪ್ರತಿ ತಿಂಗಳು 100 ಮೊಟ್ಟೆಗೆ 300 ರೂ.ನಂತೆ 9 ಸಾವಿರ ಮೊಟ್ಟೆಯನ್ನು ತಂದು ಚಾಕಿ ಮಾಡಿ, 1ಮತ್ತು 2ನೇ ಜ್ವರದ ವರೆಗೆ ಸಾಕಿ ರೈತರಿಗೆ ನೀಡಲಾಗುತ್ತಿದೆ. ರೈತರಿಗೆ ಪ್ರತಿ 100 ಮೊಟ್ಟೆಯನ್ನು ಮರಿ ಮಾಡಿ 300 ರೂ. ನಂತೆ, 400 ರೂ. ಹೆಚ್ಚುವರಿಯಾಗಿ ಪಡೆದು ರೇಷ್ಮೆಹುಳು ಮರಿಯನ್ನು ನೀಡಲಾಗುತ್ತಿದೆ. ರೈತರು 100 ಮೊಟ್ಟೆಗೆ 60 ಕೇಜಿ ರೇಷ್ಮೆ ಗೂಡು ಬೆಳೆದು ಪ್ರತಿ ಕೇಜಿಗೆ 150ರಿಂದ 200 ರವರೆಗೂ ಧಾರಣೆಯಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿದೆ.ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಯ ರೈತರುಗಳಿಂದ, ಚಾಕಿ ಸಾಕಾಣಿಕೆ ಕೇಂದ್ರದಲ್ಲಿ ಉತ್ಪಾದಿಸುವ ರೇಷ್ಮೆ ಹುಳು ಮರಿಗೆ ಬೇಡಿಕೆ ಇದೆ.ಚಾಕಿ ಸಾಕಾಣಿಕೆ ಕೇಂದ್ರದಲ್ಲಿ 8 ಜನ ರೈತರಿದ್ದಾರೆ. ತಮ್ಮ ಜಮೀನುಗಳಿಂದಲೇ ಹಿಪ್ಪು ನೇರಳೆ ಸೊಪ್ಪು ತಂದು ಮರಿ ಸಾಕುತ್ತಾರೆ. ಇಬ್ಬರು ಮೇಲ್ವಿಚಾರಕರಿದ್ದಾರೆ. ಜಿ.ಪಂ. ವತಿಯಿಂದ ಸೊಪ್ಪು ಕತ್ತರಿಸುವ ಯಂತ್ರ ಪಡೆದುಕೊಳ್ಳಲಾಗಿದೆ.ರೇಷ್ಮೆಬೆಳೆ 30 ದಿನದ ಬೆಳೆ 10 ದಿನ ಚಾಕಿಯ ಜತೆಗೆ 2ನೇ ಜ್ವರದ ಮರಿಯನ್ನು ರೈತರಿಗೆ ಕೊಡುವುದರಿಂದ, 10 ದಿನ ರೈತರಿಗೆ ಉಳಿತಾಯವಾಗಿ ದಿನಕ್ಕೆ ಕೂಲಿ 200ರೂ. ನಂತೆ 2 ಸಾವಿರ ರೂ. ಉಳಿತಾಯ ಮಾಡಬಹುದು. ರೈತರಿಗೆ ಒಳ್ಳೆಯ ಅವಕಾಶ ನೀಡುತ್ತಾ ಬಂದಿದ್ದೇವೆ. ರೇಷ್ಮೆ ಬೆಳೆಯಲು ಆಸಕ್ತಿ ಹೊಂದುವ ರೈತರು ಚಾಕಿ ಸಾಕಾಣಿಕೆ ಕೇಂದ್ರದಲ್ಲಿ ಬಂದು ಸಲಹೆ ಪಡೆಯ ಬಹುದು ಎಂದು ಮೇಲ್ವಿಚಾರಕ ಜಿ.ರವಿಕುಮಾರ್ ಹೇಳುತ್ತಾರೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.