ರೈತರ ಚಟುವಟಿಕೆಗೆ ಅಡ್ಡಿ-ಆರೋಪ

7
ಡಿಆರ್‌ಡಿಒ ಕ್ರಮಕ್ಕೆ ಆಕ್ಷೇಪ

ರೈತರ ಚಟುವಟಿಕೆಗೆ ಅಡ್ಡಿ-ಆರೋಪ

Published:
Updated:

ವಿಜಯಪುರ: `ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮದ ಸುತ್ತಮುತ್ತಲಿನಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಘಟನೆಯ (ಡಿಆರ್‌ಡಿಒ) ವ್ಯಾಪ್ತಿಗೆ ಸೇರಿದ ಪ್ರದೇಶವಿದ್ದು ಇಲ್ಲಿ ಸ್ಥಳೀಯರ ಅವಶ್ಯಕ ಚಟುವಟಿಕೆಗಳಿಗೆ ಅಡ್ಡಿ ಎದುರಾಗುತ್ತಿದೆ' ಎಂದು ರೈತ ಭೂ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಶೃಂಗಾರಪುರ ನಾರಾಯಣರೆಡ್ಡಿ ಆರೋಪಿಸಿದರು.ಸಮೀಪದ ತಿರುಮೇನಹಳ್ಳಿಯಲ್ಲಿ ರೈತರು ನಡೆಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, `ಈ ಪ್ರದೇಶದಲ್ಲಿನ ಡಿಆರ್‌ಡಿಒ ಇಲಾಖೆಯ ಸಂರಕ್ಷಣಾ ಗೋಡೆಯಿಂದ ಸುಮಾರು 1500 ಅಡಿಗಳವರೆಗೂ ರೈತರು ತಮ್ಮ ಭೂಮಿಯನ್ನು ಅಭಿವೃದ್ಧಿ ಪಡಿಸುವಂತಿಲ್ಲ' ಎಂಬ ನಿಯಮವು ರೈತರಿಗೆ ಸಾಕಷ್ಟು ತೊಂದರೆ ಉಂಟುಮಾಡುತ್ತಿದೆ' ಎಂದು ದೂರಿದರು.`ಬೂದಿಗೆರೆ, ಹಂದರಹಳ್ಳಿ, ಬೆಂಗಳೂರು ಪೂರ್ವ ತಾಲ್ಲೂಕಿನ ತಿರುಮೇನಹಳ್ಳಿ, ಜ್ಯೋತಿಪುರ, ಶೃಂಗಾರಪುರ ಸೇರಿದಂತೆ ಮತ್ತಿತರೆ ಗ್ರಾಮಗಳ ರೈತರ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿರುವ ರಕ್ಷಣಾ ಇಲಾಖೆಯ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಏತನ್ಮಧ್ಯೆ ರೈತರು ಈ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡುವಂತಿಲ್ಲ ಎಂಬ ಕಠಿಣ ನಿರ್ಬಂಧ ವಿಧಿಸಲಾಗಿದೆ. ಕೊಳವೆ ಬಾವಿ ತೋಡಿಸಲು ಸರ್ಕಾರದ ಅನುಮತಿ ಪಡೆಯಬೇಕಿದೆ. ಶವಸಂಸ್ಕಾರಕ್ಕೆ ಗುಂಡಿ ತೋಡಲೂ ಅಡ್ಡಿಪಡಿಸಲಾಗುತ್ತಿದೆ' ಎಂದು ಆಕ್ಷೇಪಿಸಿದರು.ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಹಿತ್ತರಹಳ್ಳಿ ರಮೇಶ್ ಮಾತನಾಡಿ, `ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲಾಧಿಕಾರಿಗಳು ರಕ್ಷಣಾ ಇಲಾಖೆ ವಶಪಡಿಸಿಕೊಂಡಿರುವ ಭೂಮಿಯ ಸುತ್ತ ಸುಮಾರು 500 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಆದೇಶ ಹೊರಡಿಸಿರುವುದನ್ನು ಖಂಡಿಸಿ ಹೋರಾಟ  ಮಾಡಲಾಗುವುದು' ಎಂದು ತಿಳಿಸಿದರು.ರೈತ ಮುಖಂಡ ದೊಡ್ಡ ಎಲ್ಲಪ್ಪ ಮಾತನಾಡಿ, `ರಕ್ಷಣಾ ಇಲಾಖೆಯ ಇಂತಹ ಶೋಷಣೆಗಳಿಂದ ಈ ಭಾಗದ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಇದರಿಂದ ರೈತರಿಗೆ ಉಳಿಗಾಲ ಇಲ್ಲದಂತಾಗುತ್ತದೆ. ರೈತರ ಕೂಗನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸಲು ಹಂತ ಹಂತದ ಹೋರಾಟ ಮುಂದುವರೆಯಲಿದೆ' ಎಂದು ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry