ರೈತರ ಚಳುವಳಿ ಹತ್ತಿಕ್ಕದಿರಿ: ಸಂಸದ ಶೆಟ್ಟಿ

7

ರೈತರ ಚಳುವಳಿ ಹತ್ತಿಕ್ಕದಿರಿ: ಸಂಸದ ಶೆಟ್ಟಿ

Published:
Updated:

ಚಿಕ್ಕೋಡಿ: ಸರ್ಕಾರಗಳು ಸಕ್ಕರೆ ಲಾಬಿಗೆ ಮಣಿದು ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ರೈತ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದರೆ ಸರ್ಕಾರಗಳೇ ಸಂಕಷ್ಟಕ್ಕೆ ಸಿಲುಕಲಿವೆ~ ಎಂದು ಹಾತಕಣಗಲಾ ಸಂಸದ ರಾಜು ಶೆಟ್ಟಿ ಹೇಳಿದರು.ತಾಲ್ಲೂಕಿನ ಸದಲಗಾ ಪಟ್ಟಣದಲ್ಲಿ ಶುಕ್ರವಾರ ಸಂಜೆ ಜಾತ್ಯತೀತ ಜನತಾದಳ ಮತ್ತು ಸ್ವಾಭಿಮಾನಿ ರೈತ ಸಂಘಟನೆಗಳ ಸಹಯೋಗದಲ್ಲಿ ನಡೆದ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು. ಕಬ್ಬು ನುರಿಸುವ ಹಂಗಾಮು ಆರಂಭಿಸುವ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಉದ್ದೇಶಪೂರ್ವಕವಾಗಿಯೇ ಸಕ್ಕರೆ ದರ ಇಳಿಸಲಾಗುತ್ತದೆ.

ದರ ಕುಸಿತವನ್ನೇ ಮುಂದಿಟ್ಟುಕೊಂಡು ರೈತರ ದಿಕ್ಕು ತಪ್ಪಿಸಿ ಕಡಿಮೆ ದರಕ್ಕೆ ಕಬ್ಬು ಪಡೆದುಕೊಂಡು ಮತ್ತೆ ಡಿಸೆಂಬರ್ ವೇಳೆಗೆ ಸಕ್ಕರೆ ದರ ಏರಿಸಲಾಗುತ್ತದೆ. ಸಕ್ಕರೆ ಕಾರ್ಖಾನೆಗಳ ಈ ಕುತಂತ್ರಕ್ಕೆ ಬಲಿಯಾಗದೇ , ಕೃಷಿಕರು ಸ್ವಯಂ ಜಾಗೃತೆಯಿಂದ ಸಂಘಟಿತರಾಗಿ ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿ ಮೊತ್ತ ಮತ್ತು ಪ್ರಸಕ್ತ ಹಂಗಾಮಿನಲ್ಲಿ ನ್ಯಾಯೋಚಿತವಾದ ಬೆಲೆ ಘೋಷಣೆ ಮಾಡುವವರೆಗೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಬಾರದು ಎಂದು ಕರೆ ನೀಡಿದರು.ರಾಜ್ಯ ರೈತ ಸಂಘದ ಕಾರ್ಯದರ್ಶಿ ರಮೇಶ ಗಡದನ್ನವರ ಮಾತನಾಡಿ, ಕೃಷಿಕರಿಗೆ ಯಾವುದೇ ಜಾತಿ, ಮತ, ಪಕ್ಷವಿಲ್ಲ. ರೈತಕುಲದ ಅಭಿವೃದ್ದಿಯೇ ಎಲ್ಲ ಕೃಷಿಕರ ಮಂತ್ರವಾಗಬೇಕು.  ಮುಧೋಳ ಪಟ್ಟಣದಲ್ಲಿ ಇದೇ 18 ರಂದು  ಬೃಹತ್ ರೈತ ಸಮಾವೇಶ ಜರುಗಲಿದೆ ಎಂದು ತಿಳಿಸಿದರು. ಜೆಡಿ(ಎಸ್)ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಪೂಜಾರಿ ಮಾತನಾಡಿದರು.ಜೆಡಿಎಸ್ ಮುಖಂಡ ಅರವಿಂದ ದಳವಾಯಿ, ಸ್ವಾಭಿಮಾನಿ ರೈತ ಸಂಘಟನೆ ಮುಖಂಡ ಆದಿನಾಥ ಹೆಮ್ಮಗಿರೆ, ರಾಜು ಖಿಚಡೆ, ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆಣ್ಣವರ ಮಾತನಾಡಿದರು. ಮಾಜಿ ಶಾಸಕರಾದ ಬಾಳಾಸಾಹೇಬ ವಡ್ಡರ, ಮೋಹನ ಶಹಾ ಹಾಗೂ ಬಸವರಾಜ ಮಟಗಾರ, ಅಣ್ಣಾಸೋ ಪಾಟೀಲ, ಸುನೀತಾ ಹೊನಕಾಂಬಳೆ, ಸಾಹುಕಾರ್ ಮದನಾಯಿಕ, ಅಜೀತ ಪಾಟೀಲ, ಪ್ರಮೋದ ಪಾಟೀಲ, ಸುಭಾಷ ಶೆಟ್ಟಿ, ಕೆ.ಆರ್.ಚವ್ಹಾಣ, ಧೂಳಗೌಡ ಪಾಟೀಲ, ಪಂಕಜ ತಿಪ್ಪಣ್ಣವರ, ರಮೇಶ ಪಾಟೀಲ ಸೇರಿದಂತೆ ಸದಲಗಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಜನ ಕೃಷಿಕರು ಸಮಾವೇಶದಲ್ಲಿ ಪಾಲ್ಗೂಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry