ರೈತರ ಚಿತ್ತ ಡಿಎಪಿಯ ಕಡೆಗೆ

ಗುರುವಾರ , ಜೂಲೈ 18, 2019
28 °C

ರೈತರ ಚಿತ್ತ ಡಿಎಪಿಯ ಕಡೆಗೆ

Published:
Updated:

ಹುಬ್ಬಳ್ಳಿ: ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಸಾವಯವ ಕೃಷಿ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಪದ್ಧತಿ ಕಾರ್ಯರೂಪಕ್ಕೂ ಬರುತ್ತಿದೆ. ಇದರಿಂದ ಸಾವಯವ  ಕೃಷಿಯತ್ತ ಹಲವರು ಹೊರಟಿದ್ದರೆ, ರಾಸಾಯನಿಕ ಗೊಬ್ಬರ ಬಳಸಿ ಬೇಸಾಯವನ್ನು ಮಾಡಬೇಕೆಂಬ ಉತ್ಕಟವಾದ ಅಭಿಲಾಷೆ ಇನ್ನೊಂದೆಡೆ ಕಾಣುತ್ತಿದೆ.ಉತ್ತಮ ಬೆಳೆಯ ಹಂಬಲದಿಂದ ರಾಸಾಯನಿಕ ಗೊಬ್ಬರಗಳ ಮೇಲೆ ರೈತರು ಅವಲಂಬಿತರಾಗಿದ್ದಾರೆ. ರಾಸಾಯನಿಕ ಗೊಬ್ಬರಗಳಲ್ಲಿಯೂ ವಿವಿಧ ಪ್ರಕಾರಗಳಿವೆ.  ಏತನ್ಮಧ್ಯೆ ಡಿಎಪಿ ಗೊಬ್ಬರದ ಅಭಾವದ ಕುರಿತು ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೊಡ್ಡ ಹಾಹಾಕಾರ ಉಂಟಾಗಿದೆ.ಈ ಅಭಾವ ಸಹಜವೋ ಅಥವಾ ಇಲಾಖೆ ಸಿಬ್ಬಂದಿ ಸೃಷ್ಟಿಸಿದ್ದಾರೋ ಎಂಬುದು ರೈತರಿಗೆ ತಿಳಿದಾಗಿದೆ. ರೈತರು ಮಾತ್ರ ಡಿಎಪಿ ಗೊಬ್ಬರದ ಗುಂಗಿನಲ್ಲಿಯೇ ಇದ್ದಾರೆ. ಒಂದಡೆ ಡಿಎಪಿ ಗೊಬ್ಬರಕ್ಕೆ ಸಂವಾದಿಯಾಗಿ ಕಾಂಪ್ಲೆಕ್ಸ್ ಗೊಬ್ಬರ ಬಳಸಲು ಕೃಷಿ ಅಧಿಕಾರಿಗಳು ಶಿಫಾರಸು ಮಾಡಿದರೆ ಕೃಷಿಕರು ಮಾತ್ರ ಡಿಎಪಿ ಗೊಬ್ಬರವೇ ಬೇಕು ಎಂದು ಹಠ ಹಿಡಿದಿದ್ದಾರೆ.ಕೃಷಿ ಅಧಿಕಾರಿಗಳು ಮಾತ್ರ ಡಿಎಪಿ ಗೊಬ್ಬರದಷ್ಟು ಕಾಂಪ್ಲೆಕ್ಸ್ ಗೊಬ್ಬರ ಕೂಡಾ ಫಲವತ್ತಾದದ್ದು ಎಂದು ಪ್ರಚಾರ ಮಾಡುತ್ತಿದ್ದಾರೆ. ಯಾವ ಬೆಳೆಗೆ ಯಾವ ಗೊಬ್ಬರ ಬಳಸಬೇಕು ಎಂದು ರೈತರಿಗೆ ಮಾತ್ರ ಗೊತ್ತಿರುವಂತಹದ್ದು.ಇದೆಲ್ಲದರ ನಡುವೆ ಡಿಎಪಿ ಗೊಬ್ಬರವೇ ಹೊಲಗಳಿಗೆ ಬೇಕು ಎಂದು ರೈತರು ದುಂಬಾಲು ಬಿದ್ದಿದ್ದು ಯಾಕೆ ಎಂಬುದು ಗೊತ್ತಾಗುತ್ತಿಲ್ಲ. ಡಿಎಪಿಯಲ್ಲಿ ಫಲವತ್ತತೆ ಅಂಶ ಜಾಸ್ತಿ ಇರಬಹುದು. ಆದರೆ ಕಾಂಪ್ಲೆಕ್ಸ್‌ನಲ್ಲಿ ಕೂಡಾ ಅಷ್ಟೇ ಫಲವತ್ತತೆಯಿದೆ ಎಂಬುದು ಕೃಷಿ ವಿಜ್ಞಾನಿಗಳ ಅನಿಸಿಕೆ.ಧಾರವಾಡ ಜಿಲ್ಲೆಯಲ್ಲಿ ಡಿಎಪಿ ಗೊಬ್ಬರದ್ದು ಕೃತಕ ಅಭಾವವೋ ಅಥವಾ ಇದ್ದು ಇಲ್ಲದಂತೆ ತೋರಿಸುವ ಅಧಿಕಾರಗಳ ಆಸೆಯೋ ಗೊತ್ತಿಲ್ಲ. ಅಂತೂ ಡಿಎಪಿ ಗೊಬ್ಬರದ ಅಭಾವ ಕಾಡುತ್ತಿರುವುದು ಸುಳ್ಳಲ್ಲ. ರೈತರು ಬಿತ್ತನೆ ಬೀಜದ ಜತೆ ಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ರೈತರ ನಂಬಿಕೆಗೆ ಅರ್ಹವಾದ ಡಿಎಪಿ ಗೊಬ್ಬರವನ್ನು ಪೂರೈಸುವುದು ಕೃಷಿ ಇಲಾಖೆ ಆದ್ಯ ಕರ್ತವ್ಯ ಎಂಬುದು ಕೃಷಿಕರ ಒತ್ತಾಯ.ಹಾಗೆಯೇ ರೈತರು ಕೂಡಾ ಅದಕ್ಕೆ ಬದಲಾಗಿ ಇರುವ ಗೊಬ್ಬರವನ್ನು ಸೂಕ್ತ ವಿವೇಚನೆಯಿಂದ ಬಳಸುವುದು ಮುಖ್ಯವಾಗುತ್ತದೆ ಎಂಬುದು ಕೃಷಿ ಇಲಾಖೆಯ ಅನಿಸಿಕೆ.`ಬೆಳಿ ಬೆಳ್ಯಾಕ್ ಡಿಎಪಿ ಗೊಬ್ಬರ ಬಾಳ ಚೊಲೋರ‌್ರೀ. ಮುಂಗಾರು ಬೆಳೆಗೆ ಡಿಎಪಿ ಹೇಳಿ ಮಾಡಿಸಿದಂತಿದೆ. ಅದಕ್ಕಾಗಿ ಇದ ಗೊಬ್ಬರ ಬಾಳ ಅವಶ್ಯರ‌್ರೀ~ ಎನ್ನುತ್ತಾರೆ ರೈತ ಮಂಜುನಾಥ ಪುಡಕಲಕಟ್ಟಿ.`ಈಗಾಗಲೇ 15ಸಾವಿರ ಟನ್ ಡಿಎಪಿ ಗೊಬ್ಬರ ಮಾರಾಟ ಮಾಡಲಾಗಿದೆ. ಈಗ ಕಾಂಪ್ಲೆಕ್ಸ್ ಗೊಬ್ಬರ ಇದೆ. ಆದರೆ ರೈತರು ಡಿಎಪಿ ಗೊಬ್ಬರವೇ ಬೇಕು ಎಂದು ಹಠ ಹಿಡಿದಿದ್ದಾರೆ. ಬೇರೆ ರಾಜ್ಯಗಳಿಂದ ಬರಬೇಕಾದ ಡಿಎಪಿ ಗೊಬ್ಬರ ಸ್ಪಲ್ಪ ವಿಳಂಬವಾಗಿದೆ. ಕಾಂಪ್ಲೆಕ್ಸ್ ಗೊಬ್ಬರ ಕೂಡಾ ಡಿಎಪಿ ತರಹವೇ ಉತ್ತಮವಾಗಿದೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು~ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಗಣೇಶ ನಾಯ್ಕ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry