ರೈತರ ಜಮೀನು ಕಂಪೆನಿ ಪಾಲು: ಆತಂಕ

7
ಭೂಸುಧಾರಣೆ ವಿಧೇಯಕ ತಿದ್ದುಪಡಿಗೆ ವಿರೋಧ

ರೈತರ ಜಮೀನು ಕಂಪೆನಿ ಪಾಲು: ಆತಂಕ

Published:
Updated:

ಗುಲ್ಬರ್ಗ: ಬಹುರಾಷ್ಟ್ರೀಯ ಕಂಪೆನಿಗಳ ಕೈಗೆ ಕೃಷಿ ಭೂಮಿಯನ್ನು ಒಪ್ಪಿಸುವ ಕರ್ನಾಟಕ ಭೂಸುಧಾರೆಗಳ (ತಿದ್ದುಪಡಿ) ವಿಧೇಯಕ ಮಂಡಿಸುವುದನ್ನು ಕೈಬಿಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.“ಕೃಷಿಕರು ಹಾಗೂ ಕೃಷಿ ಕೂಲಿಕಾರರಿಗೆ ಧಕ್ಕೆ ತಂದೊಡ್ಡುವ ಈ ವಿಧೇಯಕದಿಂದ ಲಕ್ಷಾಂತರ ಎಕರೆ ಜಮೀನು ಕಂಪೆನಿಗಳ ವಶವಾಗಲಿದೆ. ರಾಜ್ಯ ಸರ್ಕಾರ ಈ ವಿಧೇಯಕವನ್ನು ಯಾವುದೇ ಕಾರಣಕ್ಕೂ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಬಾರದು” ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ಪ್ರಸ್ತುತ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಂಡನೆಯಾಗುವ ವಿಧೇಯಕಗಳಲ್ಲಿ `ಕರ್ನಾಟಕ ಭೂಸುಧಾರಣೆಗಳ (ತಿದ್ದುಪಡಿ) ವಿಧೇಯಕ'ವೂ ಒಂದು. ಇದರಲ್ಲಿ ಈವರೆಗೆ `ರೈತ' ಎಂದರೆ ರೈತ ಹಾಗೂ ರೈತ ಕೂಲಿಕಾರ ಎಂದಷ್ಟೇ ವ್ಯಾಖ್ಯಾನವಿತ್ತು. ಆದರೆ ತಿದ್ದುಪಡಿ ವಿಧೇಯಕದಲ್ಲಿ `ರೈತ' ಎಂಬ ಪದಕ್ಕೆ ತಿದ್ದುಪಡಿ ಮಾಡಲಾಗುತ್ತಿದೆ.ಬೀಜ, ಗೊಬ್ಬರ ಹಾಗೂ ಕೀಟನಾಶಕ ಉತ್ಪಾದಕರೂ `ರೈತ'ನಾಗಬಹುದು; ಕೊಯ್ಲೋತ್ತರ ಕೆಲಸಗಳಲ್ಲಿ ತೊಡಗಿದವರೂ `ರೈತರು' ಎಂಬ ವ್ಯಾಖ್ಯಾನವನ್ನು ಅದರಲ್ಲಿ ನೀಡಲಾಗಿದೆ. ಇದರ ಜತೆಗೆ ಒಪ್ಪಂದ ಕೃಷಿಗೆ ಸಹ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಇದು ರೈತ ವಿರೋಧಿ ನೀತಿ ಎಂದು ಅವರು ಕಿಡಿ ಕಾರಿದರು.“ಈ ಬಗ್ಗೆ ನಮ್ಮ ಕಳವಳವನ್ನು ವ್ಯಕ್ತಪಡಿಸಿದಾಗ ಸ್ಪಂದಿಸಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಿದ್ದಾರೆ. ಆದರೆ ಈ ಸಮಿತಿ ಸರ್ಕಾರದ ಭಾಗವೇ ಆಗಿರುವುದರಿಂದ ಬೇರೆ ಧ್ವನಿಗೆ ಅಲ್ಲಿ ಅವಕಾಶ ಇರುವುದಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ ಮಾನ್ಪಡೆ, ಬೆಳಗಾವಿಯಲ್ಲಿ ನಡೆಯುವ ಅಧೀವೇಶನದಲ್ಲಿ ಈ ವಿಧೇಯಕ ಅಂಗೀಕರಿಸಬಾರದು ಎಂದು ಆಗ್ರಹಿಸಿದರು.2011ರ ಫೆಬ್ರುವರಿಯಲ್ಲಿ ಜಾರಿಗೆ ಬಂದ `ಕೃಷಿ ವಾಣಿಜ್ಯ ಅಭಿವೃದ್ಧಿ ನೀತಿ'ಗೆ ಅನುಗುಣವಾಗಿ ಕಂಪೆನಿಗಳಿಗೆ ಭೂಮಿ ಕೊಡಲು ಇರುವ ಅಡ್ಡಿ-ಆತಂಕ ನಿವಾರಿಸಲು ಈ ವಿಧೇಯಕ ಜಾರಿಗೊಳಿಸಲಾಗುತ್ತಿದೆ. ವಿದೇಶಿ ಕಂಪೆನಿಗಳಿಗೆ ಭೂಮಿ ಪರಭಾರೆ ಮಾಡಿಕೊಟ್ಟು, ಅವರನ್ನು `ರೈತರು' ಎಂದು ಕರೆಯುವ ಈ ವಿಧೇಯಕದಿಂದ ನಮ್ಮ ರೈತರ ಬದುಕಿಗೆ ಕೊಡಲಿಯೇಟು ಬೀಳಲಿದೆ ಎಂದು ಮಾನ್ಪಡೆ ಟೀಕಿಸಿದರು.ಎಂಎನ್‌ಸಿ ಪಾಲು: ರಾಜ್ಯ ಸಮಿತಿ ಉಪಾಧ್ಯಕ್ಷ ಯು. ಬಸವರಾಜ, “ವಾರ್ಷಿಕ ಎರಡು ಲಕ್ಷ ರೂಪಾಯಿಯೊಳಗೆ ಆದಾಯ ಇದ್ದವರು ಮಾತ್ರ ಭೂಮಿ ಖರೀದಿಸಲು ವಿಧೇಯಕದ ಎರಡನೇ ಪ್ರಕರಣದಲ್ಲಿ ಅವಕಾಶವಿದೆ. ಈಗ ಇದಕ್ಕೆ ತಿದ್ದುಪಡಿ ತರುವುದರಿಂದ ಲಕ್ಷಾಂತರ ಎಕರೆ ಜಮೀನು ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.ನಗದು ರೂಪದಲ್ಲಿ ಸಹಾಯಧನ  ನೀಡುವ ಸರ್ಕಾರದ ಯೋಜನೆಯಿಂದ ನ್ಯಾಯಬೆಲೆ ಅಂಗಡಿ ಮುಚ್ಚಿಕೊಳ್ಳಲಿವೆ; ಪಡಿತರ ವ್ಯವಸ್ಥೆ ಅಂತ್ಯ ಕಾಣಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಹಾಯಧನವನ್ನು ನೇರವಾಗಿ ಫಲಾನುಭವಿಗಳಿಗೆ ಕೊಡುವುದಾಗಿ ಸರ್ಕಾರವೇನೋ ಹೇಳುತ್ತಿದೆ. ಆದರೆ ಬಡವರು 40 ರೂಪಾಯಿ ಕೊಟ್ಟು ಅಕ್ಕಿ ತೆಗೆದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಸಂಘದ ಮುಖಂಡರಾದ ಗೌರಮ್ಮ ಪಾಟೀಲ ಹಾಗೂ ಶರಣಬಸಪ್ಪ ಮಮಶೆಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry