ರೈತರ ನಿದ್ದೆಗೆಡಿಸಿದ ದೈತ್ಯ ಕಳೆ

7

ರೈತರ ನಿದ್ದೆಗೆಡಿಸಿದ ದೈತ್ಯ ಕಳೆ

Published:
Updated:

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ವ್ಯಾಪಕವಾಗಿ ಹರಡಿರುವ ದೈತ್ಯ ಕಳೆ ಗಿಡಗಳು ತೆನೆ ಬಿಟ್ಟಿದ್ದು, ಬೀಜ ಕೃಷಿ ಭೂಮಿಗೆ ಹರಡುವ ಭೀತಿ ರೈತರನ್ನು ಕಾಡುತ್ತಿದೆ.ತಾಲ್ಲೂಕಿನ ರಸ್ತೆ ಬದಿ, ಬೀಡುಬಿಟ್ಟ ಹೊಲ ಗದ್ದೆಗಳಲ್ಲಿ ಪೊದೆಗಳಂತೆ ಬೆಳೆದು ನಿಂತಿರುವ ಹೊಸ ಕಳೆ ಗಿಡಗಳು ಜಮೀನಿನ ಸತ್ವವನ್ನು ಹೀರಿ ಹಿಪ್ಪೆ ಮಾಡುತ್ತಿವೆ. ವಿಶಾಲವಾದ ಮಾವಿನ ತೋಟಗಳ ಬೇಲಿ ಮತ್ತು ತೋಟಗಳನ್ನೂ ಆವರಿಸಿವೆ. ಇದು ಕೃಷಿಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.ಸಾಮಾನ್ಯ ಕಳೆ ಗಿಡಗಳಂತೆ ಈ ಗಿಡಗಳನ್ನು ಕಿತ್ತು ನಾಶಪಡಿಸಲು ಆಗುತ್ತಿಲ್ಲ. ಏಕೆಂದರೆ ಇವು ಭಾರಿ ಪೊದೆಗಳಾಗಿ ಬೆಳೆದಿದ್ದು, ಕೈಯಿಂದ ಕೀಳುವುದು ಕಷ್ಟ. ಉಪಕರಣಗಳ ನೆರವಿನಿಂದ ಕೀಳಬೇಕಾದ ಅನಿವಾರ್ಯತೆ ಉಂಟಾಗಿದೆ.ಕೃಷಿ ಕ್ಷೇತ್ರದಲ್ಲಿ ಬೆಳೆದಿರುವ ಈ ಕಳೆ ಗಿಡಗಳನ್ನು ರೈತರು ಕಿತ್ತು ನಾಶಪಡಿಸಿದರೂ; ಮುಳ್ಳು ಬೇಲಿಗಳ ನಡುವೆ ಮತ್ತು ಸರ್ಕಾರಿ ಜಮೀನುಗಳಲ್ಲಿ ದಟ್ಟವಾಗಿ ಬೆಳೆದಿರುವ ಗಿಡಗಳಿಂದ ಉಂಟಾಗುವ ಬೀಜ ಪ್ರಸಾರದಿಂದ ಕೃಷಿ ಭೂಮಿಯ ಸತ್ವ ಹಾಳಾಗುವ ಭಯ ರೈತರನ್ನು ಕಾಡುತ್ತಿದೆ. ಅದು ಸಾಲದೆಂಬಂತೆ ಲಂಟಾನಾವನ್ನು ಹೋಲುವ ಮುಳ್ಳು ರಹಿತವಾದ ದೈತ್ಯ ಪೊದೆಗಳು ಎಲ್ಲೆಲ್ಲೂ ಕಾಣಿಸಿಕೊಂಡಿವೆ.ಈ ಹಾಳು ಕಳೆಯನ್ನು ಈ ಹಿಂದೆ ನೋಡಿಯೇ ಇಲ್ಲ. ಇದು ಎಲ್ಲಿಂದ ಒಕ್ಕರಿಸಿತೋ ಗೊತ್ತಿಲ್ಲ. ಜಮೀನುಗಳು ಹಾಳಾಗಿ ಹೋದವು. ಈಗ ತೆಗೆ ಬರುತ್ತಿದೆ. ತೆನೆಯಲ್ಲಿನ ಅತಿ ಸಣ್ಣ ಬೀಜಗಳು ಹೊಲ ಗದ್ದೆ ಸೇರಿದರೆ ಬೇಸಾಯ ಮುಗಿದಂತೆಯೇ ಸರಿ. ಎಷ್ಟು  ಬಾರಿಯಂತ ಅವುಗಳನ್ನು ಕೀಳೋಕಾಗುತ್ತೆ. ನಾವು ಕಿತ್ತರೂ, ಈ ರಸ್ತೆ ಬದಿಗಳಲ್ಲಿ ಇರುವ ಗಿಡಗಳನ್ನು ಯಾರೂ ಕಿತ್ತು ಸುಡುವುದಿಲ್ಲ. ಹಾಗಾಗಿ ಅದು ಬಲಗೊಳ್ಳುತ್ತಿದೆ ಎಂದು ಪನಸಮಾಕನಹಳ್ಳಿ ಗ್ರಾಮದ ರೈತ ಮುನಿಯಪ್ಪ `ಪ್ರಜಾವಾಣಿ'ಗೆ ತಿಳಿಸಿದರು.ಇಷ್ಟು ದಿನ ಪಾರ್ಥೇನಿಯಂ ಮಾತ್ರ ರೈತರಿಗೆ ಸಮಸ್ಯೆಯಾಗಿತ್ತು. ಈಗ ಇನ್ನೆರಡು ದೈತ್ಯ ಕಳೆಗಳು ಮನೆಮಾಡಿಕೊಂಡಿವೆ. ಅವುಗಳ ನಿವಾರಣೆಗೆ ಹೆಚ್ಚು ಸಮಯ ಹಾಗೂ ಹಣವನ್ನು ವ್ಯಯಮಾಡಬೇಕಾಗಿ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry