ಸೋಮವಾರ, ಮೇ 17, 2021
25 °C

ರೈತರ ನೆರವಿಗೆ ವಿವಿ ಸಲಹಾ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರೈತರ ದಿನ ನಿತ್ಯದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಈ ಬಾರಿಯ ಕೃಷಿ ಮೇಳದಲ್ಲಿ ರೈತರಿಗೆ `ಆಪ್ತಸಮಾಲೋಚನಾ ಕೇಂದ್ರ~ ಆರಂಭಿಸಲಾಗಿದೆ.



ವಿಶೇಷವೆಂದರೆ `ಕೃಷಿ ತಂತ್ರಜ್ಞಾನ ಸಲಹಾ ಕೇಂದ್ರ~ದ ಹೆಸರಿನಲ್ಲಿ ಆರಂಭಿಸಲಾಗಿರುವ ಈ ಆಪ್ತಸಮಾಲೋಚನಾ ಕೇಂದ್ರದಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ 19ಕ್ಕೂ ಹೆಚ್ಚು ವಿಭಾಗಗಳ ತಜ್ಞರು ರೈತರೊಂದಿಗೆ ಮುಖಾಮುಖಿಯಾಗಲಿದ್ದಾರೆ.



ಕೃಷಿ ಚಟುವಟಿಕೆಯ ವೇಳೆ ತಾವು ಎದುರಿಸುತ್ತಿರುವ ಸಮಸ್ಯೆ ಹಾಗೂ ಸವಾಲುಗಳನ್ನು ಹೊತ್ತು ತರುವ ರೈತರು ಇಲ್ಲಿ ತಜ್ಞರಿಂದ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವುದರಿಂದ  ಈ  ಸಲಹಾ ಕೇಂದ್ರ ರೈತರ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ `ದವಾಖಾನೆ~ಯಾಗಿಯೇ ಮಾರ್ಪಟ್ಟಿದೆ.



ಸಲಹಾ ಕೇಂದ್ರದಲ್ಲಿ ಅಷ್ಟೂ ವಿಭಾಗಗಳಿಗೆ ಸಂಬಂಧಿಸಿದ ವಿಜ್ಞಾನಿಗಳು ಹಾಗೂ ತಂತ್ರಜ್ಞರನ್ನು ಒಂದೇ ವೇದಿಕೆಗೆ ಸೇರಿಸಲಾಗಿದ್ದು, ರೈತರು ಸ್ಥಳದಲ್ಲಿಯೇ ಪರಿಣಾಮಕಾರಿ ಪರಿಹಾರ ಪಡೆಯಲು ಸಾಧ್ಯವಾಗಿದೆ. ಕೇಂದ್ರಕ್ಕೆ ಬರುವ ರೈತರನ್ನು ಸ್ವಾಗತಿಸಿ ಅವರ ಸಮಸ್ಯೆ ತಿಳಿದು, ವಿಳಾಸ ಹಾಗೂ ದೂರವಾಣಿ ಸಂಖ್ಯೆ ದಾಖಲಿಸಿಕೊಂಡು ಸಂಬಂಧಿಸಿದ ವಿಷಯ ತಜ್ಞರು ಅಥವಾ ಕೃಷಿ ವಿಜ್ಞಾನಿಯ ಬಳಿಗೆ ಕಳುಹಿಸಲಾಗುತ್ತದೆ. ಅಲ್ಲಿ ವಿಜ್ಞಾನಿಗಳೊಂದಿಗೆ ಚರ್ಚಿಸಿ ರೈತರು ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಾರೆ.



ಇದರೊಟ್ಟಿಗೆ ರೈತರು ತರುವ ರೋಗಪೀಡಿತ ಬೆಳೆ, ಮಣ್ಣಿನ ಮಾದರಿಯನ್ನು ವಿಶ್ಲೇಷಿಸಿ ಅದಕ್ಕೆ ಪರಿಹಾರಕ್ಕೆ ಬೇಕಾದ ಮದ್ದು, ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ಮಾಹಿತಿಯನ್ನು ಕೇಂದ್ರದ ತಜ್ಞರು ಬರೆದುಕೊಡುತ್ತಾರೆ.



ಸಲಹಾ ಕೇಂದ್ರದಲ್ಲಿ ಸಸ್ಯರೋಗ ವಿಜ್ಞಾನ, ಸೂಕ್ಷ್ಮಾಣುಶಾಸ್ತ್ರ, ಮಣ್ಣಿನ ಆರೋಗ್ಯ, ಕೃಷಿಯಲ್ಲಿ ತಾಂತ್ರಿಕತೆಯ ಅಳವಡಿಕೆ, ಸಾವಯವ ಕೃಷಿ, ಕೀಟಶಾಸ್ತ್ರ, ಹೈನುಗಾರಿಕೆ, ಕೋಳಿ ಸಾಕಣೆ, ರೇಷ್ಮೆ ಕೃಷಿ, ತೋಟಗಾರಿಕೆ ಬೆಳೆಗಳು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತದೆ. ರೈತರು ತಂದ ಸಮಸ್ಯೆ ತೀರಾ ಹೊಸದಾಗಿದ್ದರೆ ತಜ್ಞರು ಅವರ ಹೊಲಗಳಿಗೆ ತೆರಳಿ ಪರಿಹಾರ ಹುಡುಕುತ್ತಾರೆ. ರೈತರು ತಂದ ಬೆಳೆ ಮಾದರಿಯಿಂದ ರೋಗದ ಮಾದರಿಯನ್ನು ಖಚಿತಪಡಿಸಿಕೊಳ್ಳುವ ವಿಜ್ಞಾನಿಗಳು ಕೃಷಿ ಇಲಾಖೆಗೆ ಮಾಹಿತಿ ನೀಡಿ ಹತೋಟಿಗೆ ಕ್ರಮ ಕೈಗೊಳ್ಳುತ್ತಾರೆ.



ತಮ್ಮ ಕುರಿ ಮಂದೆಯ ಇಳುವರಿ ಹೆಚ್ಚಿಳಕ್ಕೆ ಸಲಹೆ ಕೇಳಲು ಶುಕ್ರವಾರ ಕೇಂದ್ರಕ್ಕೆ ಬಂದಿದ್ದ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕು ಔದಾಲ ಗ್ರಾಮದ ಶೆಟ್ಟಪ್ಪ ಗಡದೆ, ವಿವಿಯ ಆಪ್ತಸಮಾಲೋಚನಾ ಮಳಿಗೆಯ ಕುರಿತು ಸಂತಸ ವ್ಯಕ್ತಪಡಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.